ದಿನಕ್ಕೊಂದು ಕಥೆ 907

*🌻ದಿನಕ್ಕೊಂದು ಕಥೆ🌻*
*ಆಸ್ಪತ್ರೆಯಲ್ಲಿ ನಿತ್ಯ ಅನ್ನದಾನ... ಚಾಮರಾಜನಗರದಲ್ಲೊಬ್ಬ ಅಪರೂಪದ ವೈದ್ಯ*
    
ಚಾಮರಾಜನಗರ: ಸರ್ಕಾರಿ ಆಸ್ಪತ್ರೆಗಳಲ್ಲಿ ಕೇವಲ ಒಳ ರೋಗಿಗಳಿಗೆ ಮಾತ್ರ ಸರ್ಕಾರ ಆಹಾರ ವಿತರಣೆ ಮಾಡುತ್ತದೆ. ಆದರೆ ಇಲ್ಲೊಬ್ಬ ನಿವೃತ್ತ ವೈದ್ಯ ರೋಗಿಗಳ ಸಂಬಂಧಿಗಳಿಗೆ ಹಾಗೂ ತಾಂತ್ರಿಕೇತರ ಸಿಬ್ಬಂದಿಗೆ ಆಹಾರ ವಿತರಣೆ ಮಾಡಿ ಅನ್ನದಾತ ಎನಿಸಿಕೊಂಡಿದ್ದಾರೆ.

ಜಿಲ್ಲಾಸ್ಪತ್ರೆಯ ನಿವೃತ್ತ ನೇತ್ರ ತಜ್ಞ ಡಾ. ಚಂದ್ರಶೇಖರ್ ಯಾವುದೇ ಫಲಾಪೇಕ್ಷೆ ಇಲ್ಲದೇ ರೋಗಿಗಳ ಸಂಬಂಧಿಗಳು ಹಾಗೂ ತಾಂತ್ರಿಕೇತರ ನೌಕರರಿಗೆ ನಿತ್ಯ ಊಟ ನೀಡುತ್ತಿದ್ದಾರೆ. ಬೆಳಿಗ್ಗೆ 4 ಗಂಟೆಗೆ ಎದ್ದು 30ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ, ಬಟ್ಟೆ ಒಗೆಯುವವರು, ಆ್ಯಂಬುಲೆನ್ಸ್ ಚಾಲಕರು, ಒಳರೋಗಿಗಳ ಸಂಬಂಧಿಕರಿಗೆ ಶುಚಿಯಾದ ಆಹಾರ ತಯಾರಿಸುತ್ತಾರೆ. ಮತ್ತೆ ಸಂಜೆ ಅಡುಗೆ, ಆಹಾರ ವಿತರಣೆಯಲ್ಲಿ ನಿರತರಾಗುತ್ತಾರೆ. ಕಳೆದ 4-5 ವರ್ಷಗಳಿಂದ ಈ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ವೈದ್ಯರು, ಅನ್ನ-ಸಾಂಬಾರ್​ ಜೊತೆ ಚಕ್ಕುಲಿ, ಕೋಡುಬಳೆ, ಮದ್ದೂರು ವಡೆಯನ್ನೂ ನೀಡುವ ಮೂಲಕ ಅನ್ನದಾನದಲ್ಲಿ ಸಂತೋಷ ಕಾಣುತ್ತಿದ್ದಾರೆ.
ಹೋಟೆಲ್​, ಊಟದ ಮೆಸ್​ನವರಿಂದ ಊಟ ತರಿಸಿಕೊಳ್ಳುವುಕ್ಕೆ ಹೆಚ್ಚು ಖರ್ಚಾಗುತ್ತದೆ. ಜೊತೆಗೆ ಸಂಜೆ 7 ಗಂಟೆಯ ನಂತರ ಹತ್ತಿರದ ಹೋಟೆಲ್​ಗಳು ಬಂದ್​ ಆಗುವುದರಿಂದ ಆಹಾರಕ್ಕೆ ಪರದಾಡಬೇಕಾಗುತ್ತದೆ. ಅದಕ್ಕೆ ನಾನೇ ಆಹಾರ ತಯಾರಿಸಿ ವಿತರಿಸುತ್ತೇನೆ ಎಂದು ಡಾ. ಚಂದ್ರಶೇಖರ್​ ಪ್ರತಿಕ್ರಿಯೆ ನೀಡಿದ್ದಾರೆ.

ಮಗ್ಗಿ ಪುಸ್ತಕವನ್ನೂ ನೀಡುತ್ತಾರೆ:
ಕೇವಲ ಹಸಿದವರಿಗೆ ಅನ್ನದಾನವನ್ನಷ್ಟೆ ಅಲ್ಲದೇ ಗರ್ಭಿಣಿ, ಬಾಣಂತಿಯರಿಗೆ ಮಗ್ಗಿ ಪುಸ್ತಕಗಳನ್ನು ಕಳೆದ 30 ವರ್ಷದಿಂದ ವಿತರಿಸುತ್ತಾ ಬಂದಿದ್ದಾರೆ. ಅಂಗನವಾಡಿಗೆ ತೆರಳುವ ಮುನ್ನ ಮಗು ಮಗ್ಗಿ, ವರ್ಣಮಾಲೆ ಕಲಿತಾಗ ಹೆಚ್ಚಿನ ಕಲಿಕೆ ಮತ್ತು ಗ್ರಹಣ ಶಕ್ತಿ ಹೆಚ್ಚಲಿದೆ ಎಂಬುದು ಡಾ. ಚಂದ್ರಶೇಖರ್ ಅಭಿಮತ.

ಮಹಿಳಾ ಸಾಕ್ಷರತೆ ಹೆಚ್ಚಾದಾಗ ಮಾತ್ರ ದೇಶ ಪ್ರಗತಿ ಕಾಣುತ್ತದೆ. ಮಗುವಿಗೂ ತಾಯಿಯೇ ಮೊದಲು ಅಕ್ಷರಾಭ್ಯಾಸ ಮಾಡಿಸಬೇಕು ಎಂಬ ಆಶಯ ಹೊತ್ತು ಮಗ್ಗಿ ಪುಸ್ತಕ, ಮಕ್ಕಳ ಆರೋಗ್ಯ ಪುಸ್ತಕಗಳನ್ನು ಕಳೆದ 30 ವರ್ಷದಿಂದ ವಿತರಿಸುತ್ತ ಬಂದಿದ್ದಾರೆ. ಒಟ್ಟಿನಲ್ಲಿ ಅನ್ನದಾನ, ಮಹಿಳಾ ಸಾಕ್ಷರತೆಗೆ ತಮ್ಮ ಅಳಿಲು ಸೇವೆ ಸಲ್ಲಿಸುತ್ತಾ ಬಂದಿರುವ ಚಂದ್ರಶೇಖರ್ ಅವರು ನಿಜಾರ್ಥದಲ್ಲಿ ವೈದ್ಯೋ ನಾರಾಯಣ ಹರಿ ಆಗಿದ್ದಾರೆ.

ಕೃಪೆ:enadu India
ಸಂಗ್ರಹ:ವೀರೇಶ್ ಅರಸಿಕೆರೆ.
******************************
*ಮಗುವಾದ ಬೀರಬಲ*

ಬೀರಬಲನು ದಿಲ್ಲಿಯ ಚಕ್ರವರ್ತಿ ಅಕ್ಬರನ ಮಂತ್ರಿ.
ಒಂದು ದಿನ ಅಕ್ಬರನು ಆಸ್ಥಾನಕ್ಕೆ ಬಂದಾಗ ಬೀರಬಲ ಇನ್ನೂ ಬಂದಿರಲಿಲ್ಲ. “ಬೀರಬಲನನ್ನು ಕರೆದು ತನ್ನಿ” ಎಂದು ಅಕ್ಬರ ಭಟರಿಗೆ ಆಜ್ಞಾಪಿಸಿದ.
ಬೀರಬಲನಲ್ಲಿಗೆ ಹೋದ ಭಟರು ಹಿಂತಿರುಗಿ ಬಂದು “ಬರ್‍ತೀನಿ ಎಂದರು ಮಹಾಪ್ರಭೂ” ಎಂದು ಬಿನ್ನವಿಸಿಕೊಂಡರು.
ಒಂದು ಗಂಟೆ ಕಳೆಯಿತು. ಆದರೂ ಬೀರಬಲ ಬರಲಿಲ್ಲ. ಅಕ್ಬರ ಪುನಃ ಹೇಳಿಕಳುಹಿಸಿದ. ಮತ್ತೆ ಒಂದು ಗಂಟೆ ಕಳೆಯಿತು. ಬೀರಬಲನ ಸುಳಿವೇ ಇಲ್ಲ. ಅಕ್ಬರ ಸಿಟ್ಟಿಗೆದ್ದು ಮತ್ತೆ ಭಟರನ್ನು ಕಳಿಸ ಬೇಕೆಂದಿರುವಾಗ ಬೀರಬಲನ ಆಗಮನ ಆಯಿತು.
“ಯಾಕಿಷ್ಟು ತಡಮಾಡಿದೆ ಬೀರಬಲ?” ಎಂದು ಅಕ್ಬರ ಕೋಪದಿಂದಲೇ ಕೇಳಿದ.
“ನನ್ನ ಮಗು ಅಳ್ತಿತ್ತು, ಅದನ್ನು ಸಮಾಧಾನಪಡಿಸಿ ಬರೋಕೆ ಇಷ್ಟು ಹೊತ್ತಾಯ್ತು ಪ್ರಭು” ಎಂದು ನುಡಿದ ಬೀರಬಲ.
“ಮಗುವನ್ನು ಸಮಾಧಾನಪಡಿಸೋದೊಂದು ದೊಡ್ಡ ಕೆಲಸವೇ?”
“ಹೌದು ಮಹಾ ಪ್ರಭೂ”
“ನಾನಾಗಿದ್ದರೆ ಮಗುವನ್ನು ಒಂದು ಕ್ಷಣದಲ್ಲಿ ಸಮಾಧಾನ ಪಡಿಸ್ತಿದ್ದೆ. ಬೇಕಾದರೆ ತೋರಿಸಲೇನು? ಬೀರಬಲ! ನೀನು ಮಗುವಿನಂತೆ ಅಭಿನಯಿಸು. ನಾನು ತಂದೆಯಂತೆ ನಟಿಸ್ತೇನೆ” ಎಂದ ಅಕ್ಬರ.
ತಕ್ಷಣ ಬೀರಬಲ ಉರುಳಾಡಿ ಅಳತೊಡಗಿದ.
“ಯಾಕೆ ಮಗು ಅಳ್ತಿದ್ದೀ? ನಿನಗೇನು ಬೇಕು?” ಎಂದು ಕೇಳಿದ ಅಕ್ಬರ.
“ನನಗೆ ಕಬ್ಬು ಬೇಕು ಅಪ್ಪ.”
ಅಕ್ಬರ ಕಬ್ಬು ತರಿಸಿದ. ಆದರೆ ಬೀರಬಲನ ಅಳು ನಿಲ್ಲಲಿಲ್ಲ.
“ಕಬ್ಬಿನ ಸಿಪ್ಪೆ ತೆಗೆದುಕೊಡು ಅಪ್ಪ.”
ಭಟರಿಗೆ ಅಜ್ಞೆ ಮಾಡಿ ಕಬ್ಬಿನ ಸಿಪ್ಪೆ ತೆಗೆಸಿದ ಅಕ್ಬರ.
“ಇನ್ನಾದರೂ ಸುಮ್ಮನಿರು ಮಗು” ಎಂದ.
“ಊಹೂ ನನಗೆ ಕಬ್ಬನ್ನು ಹೋಳು ಮಾಡಿಕೊಡು ಅಪ್ಪ.”
“ಆಗಲಿ ಅದಕ್ಕೇನು?”
ಅಕ್ಬರನ ಆಜ್ಞೆಯಂತೆ ಭಟರು ಕಬ್ಬನ್ನು ತುಂಡು ಮಾಡಿ ಕೊಟ್ಟರು. ಬೀರಬಲ ಅದನ್ನು ತಿನ್ನುತ್ತ ಮತ್ತೆ ಅಳತೊಡಗಿದ.
ಅಕ್ಬರನಿಗೆ ಸಿಟ್ಟು ಬಂದು “ಮತ್ಯಾಕೆ ಅಳ್ತಿಯೋ ಮಗನೇ?” ಎಂದು ಕೂಗಿದ.
“ತುಂಡು ಮಾಡಿದ ಕಬ್ಬುನ್ನು ಮತ್ತೆ ಕೂಡಿಸು ಅಪ್ಪ.”
“ತುಂಡು ಮಾಡಿದ ಮೇಲೆ ಮತ್ತೆ ಒಂದು ಮಾಡೋಕೆ ಸಾಧ್ಯವೇ? ನಿನಗೆ ಬಿದ್ಧಿ ಇಲ್ವೇನು?”
“ನೀನು ಒಂದು ಮಾಡಿದಿದ್ದರೆ ನಾನು ಅಳೋದು ನಿಲ್ಲಿಸೋದಿಲ್ಲ!” ಎಂದು ಬೀರಬಲ.
ಅಕ್ಬರನಿಗೆ ತುಂಬಾ ಕೋಪ ಬಂದು ಬೀರಬಲನ ಕೆನ್ನೆಗೆ ಬಲವಾಗಿ ಹೊಡೆದ. ಬೀರಬಲನ ಅಳು ಮತ್ತೂ ಜಾಸ್ತಿ ಆಯಿತು. ಆಗ ಅಕ್ಬರ: “ನಿನ್ನ ದಮ್ಮಯ್ಯ! ಅಳೋದು ನಿಲ್ಲಿಸಪ್ಪ. ನಾನು ಸೋತೆ ಅಂತ ಒಪ್ಪಿಕೊಂಡಿದೇನೆ. ಮಕ್ಕಳನ್ನು ಸಮಾಧಾನ ಪಡಿಸೋದು ನಿಜವಾಗಿಯೂ ಕಷ್ಟ ಅಂತ ಇವತ್ತು ನನಗೆ ತಿಳೀತು” ಎಂದು ನುಡಿದ.
ಸಂಗ್ರಹ:ವೀರೇಶ್ ಅರಸಿಕೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1092

ದಿನಕ್ಕೊಂದು ಕಥೆ 1097