ದಿನಕ್ಕೊಂದು ಕಥೆ 916
*🌻ದಿನಕ್ಕೊಂದು ಕಥೆ🌻*
ಟೌನಿನಲ್ಲಿ ತನ್ನ ಮಗ ಕೆಲಸ ಮಾಡುತ್ತಿದ್ದ ಹೋಟೆಲಿಗೆ ಆಕಸ್ಮಿಕವಾಗಿ ಬಂದುಬಿಟ್ಟಿದ್ದಳು ಆಕೆ.
ತಟ್ಟೆ ಎತ್ತುತ್ತಿರುವಾಗ ಎದುರಿನ ಮೇಜಿನಲ್ಲಿ ತನ್ನ ತಾಯಿಯನ್ನು ನೋಡಿ ಆತನ ಎದೆ ಕಂಪಿಸಿತು.
ಉಂಡ ಹರಿವಾಣಕ್ಕೆ ಒಮ್ಮೆಯೂ ಕೈ ಹಾಕದೇ ಸಾಕಿಸಿಕೊಂಡವನೀಗ ಎಲ್ಲರ ಎಂಜಲು ಬಳಿಯುತ್ತಿರುವುದನ್ನು ಕಣ್ಣಾರೆ ನೋಡಿ ತಾಯಿಯ ಅಂತಃಕರಣ ಮರುಗಿ ನೀರಾಯಿತು.
ಬಡಪಾಯಿಗಳಿಬ್ಬರ ಕಣ್ಣುಗಳೂ ಸಂಧಿಸಿದಾಗ ತುಟಿಗಳು ಸ್ಥಬ್ಧವಾದವು..ಅವರ ಹೃದಯಗಳು ಒಂದನ್ನೊಂದು ಅಪ್ಪಿ ಮರುಗಿದ್ದು ಯಾರಿಗೂ ಕಾಣಲಿಲ್ಲ..
ಸಾವಿರಾರು ಮಂದಿಯ ಎಂಜಲು ಬಳಿದಿದ್ದವನು ತನ್ನ ತಾಯಿ ಉಂಡ ತಟ್ಟೆಯನ್ನು ಮೊಟ್ಟಮೊದಲ ಬಾರಿಗೆ ಎತ್ತಿ ಜೀವಮಾನದ ಸಂತಸ ಅನುಭವಿಸಿದ. ಅದೂ ಕೂಡಾ ಯಾರಿಗೂ ಕಾಣಿಸಲಿಲ್ಲ, ಅವಳ ಹೊರತು.
*************************
ಮಗ ಸೊಸೆ ಹಬ್ಬ ಮುಗಿಸಿ ನಗರಕ್ಕೆ ಹೊರಡಲು ಅನುವಾಗುತ್ತಿದ್ದರು.
ಅವ್ವ ರಾಗಿ ಹಿಟ್ಟಿನ ಡಬ್ಬ, ಖಾರದಪುಡಿ ಡಬ್ಬ,ಉಪ್ಪಿನಕಾಯಿ ಜರಡಿ, ಹಪ್ಪಳ ಸಂಡಿಗೆ ,ಹುಣಸೆಹಣ್ಣು ಎಲ್ಲವನ್ನೂ ತಂದು ಕಾರಿನ ಡಿಕ್ಕಿಗೆ ತುಂಬಿದಳು .
ಇನ್ನೇನು ಕಾರು ಹೊರಡಬೇಕು ಅನ್ನುವಷ್ಟರಲ್ಲಿ ಸೊಸೆಗೆ ಅದೇನೋ ನೆನಪಾಗಿ , "ತೆಂಗಿನ ಕಾಯಿ ಮರ್ತು ಬಿಟ್ರಲ್ಲಾ ಅತ್ತೆ " ಎಂದು ಕೂಗಿಕೊಂಡಳು.
ಆಕೆ, "ಬಂದೆ ತಡಿಯವ್ವ " ಎನ್ನುತ್ತಾ ಒಂದೇ ಉಸುರಿನಲ್ಲಿ ತೆಂಗಿನ ಕಾಯಿ ಚೀಲ ಹೊತ್ತು ಓಡಿ ಬರುವಾಗ ಪಿನ್ನು ಹಾಕಿದ್ದ ಚಪ್ಪಲಿಯ ಅಂಗುಷ್ಟ ಕಿತ್ತು ಬಂತು.
ತನ್ನ ತಾಯಿ ಒಂದು ಜೊತೆ ಚಪ್ಪಲಿ ತರಲು ಹೇಳಿದ್ದು ಆಗ ಅವನಿಗೆ ನೆನಪಾಯಿತು..
ಕಾರು ಹೊರಟಿತು. ಚಕ್ರಗಳು ಎದೆಯ ಮೇಲೆ ಹರಿದಂತೆ ಭಾಸವಾಯಿತು ಅವನಿಗೆ.
*************************
ಅಪ್ಪನನ್ನು ಮಣ್ಣು ಮಾಡಿ ವಾರವೂ ತುಂಬಿರಲಿಲ್ಲ.
ಕೊನೆಯ ದಿನಗಳಲ್ಲೂ ಸಹಾ ಅಪ್ಪನಿಗೆ ಸುಖ ನೆಮ್ಮದಿ ನೀಡಲಾಗಲಿಲ್ಲವಲ್ಲಾ ಎಂಬ ಕೊರಗು ಮೂವರು ಮಕ್ಕಳನ್ನೂ ಕಾಡತೊಡಗಿತು.
ಅಪ್ಪನ ಸಮಾಧಿಗೆ ಮಾರ್ಬಲ್ಸ್ ಹಾಕಿಸಿ ಕೊರಗು ನಿವಾರಿಸಿಕೊಳ್ಳಲು ಒಬ್ಬ ನಿರ್ಧರಿಸಿದ.
ಇನ್ನೊಬ್ಬ ಅದರ ಮೇಲೆ ಗೋಪುರ ಕಟ್ಟಿಸುವ ಜವಾಬ್ದಾರಿ ವಹಿಸಿಕೊಂಡ.
ಮಗದೊಬ್ಬ ಅದರ ಸುತ್ತಾ ತಡೆಗೋಡೆ ಕಟ್ಟಿಸುವ ತೀರ್ಮಾನಕ್ಕೆ ಬಂದ.
ಮೂವರೂ ತಮ್ಮ ಯೋಜನೆಗಳನ್ನು ಕಾರ್ಯಗತಗೊಳಿಸಲು ಸಮಾಧಿಯ ಬಳಿ ಬಂದಾಗ ಮನೆಯ ಆಳು ಸಮಾಧಿಯ ಮೇಲೆ ತಾನು ನೆಟ್ಟಿದ್ದ ಸಂಪಿಗೆ ಸಸಿಗೆ ನೀರುಣಿಸುತ್ತಿದ್ದ.
ಮೂವರ ಕಾಲುಗಳೂ ನೆಲಕ್ಕೆ ಬೇರುಬಿಟ್ಟಂತೆ ನಿಂತುಬಿಟ್ಟವು. ಎದೆಯೊಳಕ್ಕೆ ಪಂಜು ನಾಟಿಸಿ ತಿರುಚಿದಂತಾಯಿತು.
ಕೃಪೆ:ಗವಿ ಸ್ವಾಮಿ.
ಸಂಗ್ರಹ :ವೀರೇಶ್ ಅರಸಿಕೆರೆ.
Comments
Post a Comment