ದಿನಕ್ಕೊಂದು ಕಥೆ 922
*🌻ದಿನಕ್ಕೊಂದು ಕಥೆ🌻*
ಬೆರಗಿನ ಬೆಳಕು
ಡಾ.ಗುರುರಾಜ ಕರ್ಜಗಿ
ಸಂಗ್ರಹ : ಪ್ರಜಾವಾಣಿ ಪತ್ರಿಕೆ
ರಾಕ್ಷಸ ಶಕ್ತಿಗಿಂತ ಬಲಶಾಲಿ ಯುಕ್ತಿ
ಒಂದಾನೊಂದು ಕಾಲದಲ್ಲಿ ಬೋಧಿಸತ್ವ ಒಂದು ವಾನರನಾಗಿ ಹುಟ್ಟಿದ್ದ. ಆ ಕಪಿ ನೋಡಲು ದೊಡ್ಡದಾಗಿ ಬಲಿಷ್ಠವಾಗಿತ್ತು. ಎಂಭತ್ತು ಸಾವಿರ ಕಪಿ ಸಮೂಹಕ್ಕೆ ನಾಯಕನಾಗಿತ್ತು. ಎಲ್ಲ ಕಪಿಗಳ ರಕ್ಷಣೆ ನಾಯಕನದಾಗಿತ್ತು. ಒಮ್ಮೆ ಎಲ್ಲರನ್ನೂ ಕೂಡ್ರಿಸಿ ಹೇಳಿತು, ‘ಮಕ್ಕಳೇ ಈ ಕಾಡಿನಲ್ಲಿ ಅನೇಕ ವಿಷವೃಕ್ಷಗಳಿವೆ, ವಿಷ ತುಂಬಿದ ಕೊಳಗಳಿವೆ. ಅವುಗಳನ್ನು ಬಳಸಬೇಡಿ. ಮನುಷ್ಯರು ಬಳಸುವ ವೃಕ್ಷಗಳಲ್ಲಿ, ಸರೋವರಗಳಲ್ಲಿ ಯಾವ ಆಪತ್ತೂ ಇಲ್ಲ. ಒಂದು ವೇಳೆ ನಿಮಗೆ ಯಾವುದೇ ಸಂಶಯ ಬಂದರೆ, ಫಲಗಳನ್ನು ತಿನ್ನುವ ಮೊದಲು ಅಥವಾ ನೀರನ್ನು ಕುಡಿಯುವ ಮೊದಲು ನನ್ನನ್ನು ಕೇಳಿ’. ಅವು ಒಪ್ಪಿದವು.
ಒಂದು ದಿನ ಅವು ಯಾವ ಮನುಷ್ಯರೂ ಹೋಗದಿದ್ದ ಕಾಡನ್ನು ಸೇರಿದವು. ನೀರಡಿಕೆಯಾದಾಗ ಅಲ್ಲೊಂದು ಸುಂದರ ಕೊಳವನ್ನು ಕಂಡು ನೀರನ್ನು ಕುಡಿಯುವುದೋ, ಬೇಡವೋ ಎಂದು ಚಿಂತಿಸುತ್ತಾ ಕುಳಿತಾಗ ಬೋಧಿಸತ್ವ ಹೋದ, ವಿಷಯ ತಿಳಿದು ಸರೋವರವನ್ನು ಸುತ್ತು ಹಾಕಿದ. ಸುತ್ತಲೂ ಪುಷ್ಕರಿಣಿಯನ್ನು ಒಳಹೊಕ್ಕ ಪಾದಗಳ ಗುರುತುಗಳು ಇದ್ದುವೇ ವಿನಃ ಹೊರಗೆ ಬಂದ ಪಾದಗಳ ಚಿನ್ಹೆಗಳು ಇರಲಿಲ್ಲ. ಹಾಗಾದರೆ ಇದು ಜಲರಾಕ್ಷಸನ ಕೊಳ ಎಂಬುದು ತಿಳಿಯಿತು. ‘ಎಲ್ಲರೂ ನೀರು ಕುಡಿಯೋಣ, ಆದರೆ ಯಾರೂ ತಪ್ಪಿ ಕೂಡ ಕೊಳದಲ್ಲಿ ಕಾಲಿರಿಸಬಾರದು’ ಎಂದು ತಾಕೀತು ಮಾಡಿದ ನಾಯಕ ಕಪಿ.
ಈ ಮಾತನ್ನು ಕೇಳಿ ಕೋಪದಿಂದ ಜಲರಾಕ್ಷಸ ಭಯಂಕರ ರೂಪದಿಂದ ಹೊರಬಂದಿತು. ‘ನೀರು ಬೇಕೇ? ಬನ್ನಿ ಕೊಳದೊಳಗೆ ಇಳಿದು ಕುಡಿಯಿರಿ’ ಎಂದಿತು. ‘ಓಹೋ, ನೀರಲ್ಲಿಳಿದರೆ ನಮ್ಮನ್ನು ತಿಂದು ಬಿಡುತ್ತೀಯಲ್ಲವೇ?’ ಕೇಳಿದ ಬೋಧಿಸತ್ವ. ‘ಹೌದು, ಅದು ನನ್ನ ಧರ್ಮ. ಪ್ರಾಣಿ, ಪಕ್ಷಿ ಯಾರೇ ಆಗಲಿ ಕೊಳದೊಳಗೆ ಕಾಲಿಟ್ಟರೆ ತಿಂದುಬಿಡುತ್ತೇನೆ. ಇದು ನನ್ನ ಕೊಳ’ ಎಂದಿತು ಜಲರಾಕ್ಷಸ. ‘ಹಾಗಾದರೆ ನೋಡುತ್ತಿರು. ನಾವು ಎಂಭತ್ತು ಸಾವಿರ ವಾನರರೂ ಈ ಕೊಳದ ನೀರು ಕುಡಿಯುತ್ತೇವೆ. ಆದರೂ ನಿನ್ನ ಬಾಯಿಗೆ ಬೀಳುವುದಿಲ್ಲ’ ಎಂದು ಸವಾಲು ಹಾಕಿದ ಬೋಧಿಸತ್ವ. ಜಲರಾಕ್ಷಸ ಕುತೂಹಲದಿಂದ ನೋಡುತ್ತಿದ್ದ. ವಾನರ ನಾಯಕ ಶಿಷ್ಯರಿಗೆ ಹೇಳಿದ, ‘ಎಲ್ಲರೂ ನಿಧಾನವಾಗಿ ಕೊಳದ ಸುತ್ತಮುತ್ತ ಇದ್ದ ಕಮಲದ ಬಳ್ಳಿಗಳನ್ನು ಕತ್ತರಿಸಿಕೊಂಡು ಬನ್ನಿ. ಜಾಗ್ರತೆ, ನೀರಿನಲ್ಲಿ ಕಾಲಿಡಬೇಡಿ’. ಹತ್ತು ನಿಮಿಷದಲ್ಲಿ ಕೋತಿಗಳು ಸಾವಿರಾರು ಉದ್ದವಾದ ಬಳ್ಳಿಗಳನ್ನು ತಂದವು. ನಾಯಕ ಬೋಧಿಸತ್ವ ಹುಷಾರಾಗಿ ಎಲೆಗಳನ್ನು ತೆಗೆದು ಬಳ್ಳಿಯ ದಂಟಿನ ಕಡ್ಡಿಯ ಒಂದು ತುದಿಯನ್ನು ಬಾಯಲ್ಲಿಟ್ಟುಕೊಂಡು ಜೋರಾಗಿ ಊದಿತು. ಆಗ ಕೊಳವೆ ಭಾಗದಲ್ಲಿ ಒಂದು ಗಂಟೂ ಇಲ್ಲದಂತೆ ಆಗಿ ಏಕರಂಧ್ರವಾಯಿತು. ಪ್ರತಿಯೊಂದು ಕಪಿಗೂ ಒಂದು ಉದ್ದ ಕೊಳವೆಯನ್ನು ಕೊಟ್ಟು, ಒಂದು ತುದಿಯನ್ನು ನೀರಿನಲ್ಲಿ ಅದ್ದಿ, ದಂಡೆಯ ಮೇಲೆ ಕುಳಿತು ಇನ್ನೊಂದು ತುದಿಯಿಂದ ನೀರನ್ನು ಎಳೆದುಕೊಳ್ಳುತ್ತ ನೀರು ಕುಡಿಯಲು ಹೇಳಿದ. ಕಪಿಗಳು ಅಂತೆಯೇ ಮಾಡಿ ತೃಪ್ತಿಯಾಗುವಷ್ಟು ನೀರು ಕುಡಿದವು.
ಕೆಲವೊಮ್ಮೆ ಬಲಾಢ್ಯರನ್ನು ಕಂಡಾಗ ಅವರ ಶಕ್ತಿ, ಅಧಿಕಾರ, ಹಣ ಇವುಗಳನ್ನು ಕಂಡು ಅವರನ್ನು ಎದುರು ಹಾಕಿಕೊಳ್ಳಲು ಬಹಳ ಜನ ಹೆದರುತ್ತಾರೆ. ಅಂಥವರನ್ನು ಪ್ರತಿಭಟಿಸಲು ಮತ್ತು ಗೆಲ್ಲಲು ಶಕ್ತಿ ಬೇಕಿಲ್ಲ. ಸರಿಯಾದ ಯುಕ್ತಿ ಇದ್ದರೆ ಎಂಥ ಪ್ರಬಲ ಶಕ್ತಿಯನ್ನಾದರೂ ಎದುರಿಸಬಹುದೆಂಬುದು ಈ ಜಾತಕಕಥೆಯ ಸಂದೇಶ.
ಕೃಪೆ:ವಾಟ್ಸಾಪ್ ಗ್ರೂಪ್.
ಸಂಗ್ರಹ:ವೀರೇಶ್ ಅರಸೀಕೆರೆ.
Comments
Post a Comment