ದಿನಕ್ಕೊಂದು ಕಥೆ 926

*🌻ದಿನಕ್ಕೊಂದು ಕಥೆ🌻*
ಪಾರಿವಾಳ ಮತ್ತು ಜಮೀನ್ದಾರ.

    ಒಬ್ಬ ಜಮೀನ್ದಾರನು ತನ್ನ ಸಣ್ಣ ಮಕ್ಕಳೊಂದಿಗೆ ತೋಟದಲ್ಲಿ ಸುತ್ತುತ್ತಿರುವಾಗ ಅಲ್ಲಿ ಅವರಿಗೆ ಎರಡು ಪುಟ್ಟ ಪಾರಿವಾಳದ ಮರಿಗಳು ಸಿಕ್ಕಿದವು. ಜಮೀನ್ದಾರನ ಮಕ್ಕಳು ಅವುಗಳನ್ನು ತಂದು ತಮ್ಮ ಮನೆಯಲ್ಲಿ  ಸಾಕ ತೊಡಗಿದರು.

          ಜಮೀನ್ದಾರನು ಆ ಪಾರಿವಾಳಗಳಿಗಾಗಿ  ಒಂದು ಸುಂದರವಾದ ಗೂಡನ್ನು ನಿರ್ಮಿಸಿದನು, ಮತ್ತು ಅದಕ್ಕೆ ತಿನ್ನಲು ತರ, ತರದ ದಾನ್ಯಗಳನ್ನು ತರಿಸಿಟ್ಟನು, ಜಮೀನ್ದಾರನ ಮಕ್ಕಳು ದಿನವಿಡೀ ಆ ಪಾರಿವಾಳಗಳೊಂದಿಗೆ ಆಟವಾಡುತ್ತಾ, ಅವುಗಳಿಗೆ ತಿನ್ನಿಸುತ್ತಾ ಬಹಳ ಮುದ್ದಿನಿಂದ ಅವುಗಳನ್ನು ಸಾಕುತ್ತಿದ್ದರು, ನೋಡು, ನೋಡುತ್ತಿದ್ದಂತೆ ಪಾರಿವಾಳವು ಬೆಳೆದು ದೊಡ್ಡದಾಯಿತು.

          ಆದರೆ ಎಷ್ಟೇ ದೊಡ್ಡದಾದರೂ ಪಾರಿವಾಳವು ಹಾರುತ್ತಿಲ್ಲ, ಇದರಿಂದಾಗಿ  ಜಮೀನ್ದಾರ ಮತ್ತು ಅವನ ಮಕ್ಕಳು ಚಿಂತೆಗೀಡಾದರು, ಅದಕ್ಕಾಗಿ ಅವರು ಬಹಳಷ್ಟು ಹರಕೆಗಳನ್ನು ಮಾಡಿದರು ಯಾವೂದೂ ಫಲಕಾರಿಯಾಗಲಿಲ್ಲ.

           ಕೊನೆಗೆ ಜಮೀನ್ದಾರನು ಪಾರಿವಾಳವನ್ನು ಬಾಬಾ, ಮಂತ್ರವಾದಿ, ಜೋತಿಷ್ಯ ರ ಬಳಿಗೆ ಕೊಂಡು ಹೋಗಿ ಹೇಗಾದರೂ ಪಾರಿವಾಳವನ್ನು ಹಾರುವಂತೆ ಮಾಡಲು ಕೇಳಿಕೊಂಡನು ಅವರ ಯಾವ ಮಂತ್ರ, ತಂತ್ರಗಳು ಪರಿಣಾಮ ಬೀರಲಿಲ್ಲ.

             ಇದೇ ಚಿಂತೆಯಲ್ಲಿ ಜಮೀನ್ದಾರನು ತನ್ನ ಮನೆಯ ಮುಂದೆ ಕುಳಿತಿರುವಾಗ ಆ ದಾರಿಯಿಂದ ಓರ್ವ ಫಕೀರನು ನಡೆದುಕೊಂಡು ಹೋಗುತ್ತಿದ್ದನು, ಜಮೀನ್ದಾರನು ಓಡಿಕೊಂಡು ಹೋಗಿ ಅವನ ಚಿಂತೆಯನ್ನು ಆ ಫಕೀರನ ಬಳಿ ಹೇಳಿಕೊಂಡನು.

         ಪಾರಿವಾಳವನ್ನು ಬಂದು ನೋಡಿದ ಫಕೀರನು ಜಮೀನ್ದಾರನೊಂದಿಗೆ ಹೇಳಿದನು ‘ಪಾರಿವಾಳದೊಂದಿಗಿನ ನಿಮ್ಮ ಅಂಧ ಪ್ರೇಮವು ಅದಕ್ಕೆ ಅದರ ಗುರಿಯನ್ನು ತಲುಪಲು ತಡೆಯಾಯಿತು, ಅದಕ್ಕೆ ವಾಸಿಸಲು ಬೇಕಾದ ಗೂಡು, ತಿನ್ನಲು ಬೇಕಾದ ಆಹಾರವನ್ನೆಲ್ಲ ಅದರ ಕಾಲಡಿಯಲ್ಲೇ ನೀವು ಮಾಡಿಟ್ಟಿರುವಾಗ ಅದಕ್ಕೆ ಹಾರುವ ಅವಶ್ಯಕತೆ ಯಾದರು ಏನಿದೆ ? ನಿಮ್ಮಿಂದಾಗಿ ಈ ಪಾರಿವಾಳವು ಸೋಮಾರಿಯಾಗಿದೆ  ನೀವು ಮೊದಲು ಇದರ ಗೂಡು ಮತ್ತು ಇದರ ಆಹಾರವನ್ನೆಲ್ಲ ತೆಗೆದು ಸುಟ್ಟು ಹಾಕಿ ಆಗ ಅದು ಹಾರಲೇ ಬೇಕಾಗುತ್ತದೆ’  ಎಂದು ಹೇಳಿ ಅಲ್ಲಿಂದ ಹೊರಟು ಹೋದನು.

          ಫಕೀರನ ಮಾತಿನಂತೆ ಜಮೀನ್ದಾರನು ಪಾರಿವಾಳದ ಗೂಡು, ಮತ್ತು ಆಹಾರವನ್ನೆಲ್ಲ ಸುಟ್ಟು ಹಾಕಿದನು ಕೂಡಲೇ ಪಾರಿವಾಳವು ಹಾರತೊಡಗಿತು.

ಕಥೆಯ ನೀತಿ...

         ಕೆಲವು ತಂದೆ ತಾಯಿಗಳ ತಮ್ಮ  ಮಕ್ಕಳೊಂದಿಗಿನ ಅಂಧ ಪ್ರೇಮವು ಆ ಮಕ್ಕಳನ್ನು ಈ ಪಾರಿವಾಳದಂತೆ ಸೋಮಾರಿಗಳನ್ನಾಗಿ ಮಾಡುತ್ತದೆ. ಮುಂದೆ ಆ ಮಕ್ಕಳು ತಂದೆ ತಾಯಿಗೂ ಮತ್ತು ಸಮೂದಾಯಕ್ಕೂ, ಊರಿಗೂ ಹೊರೆಯಾಗಿ ಮಾರ್ಪಡುತ್ತಾರೆ.

        ಬಾಲ್ಯದಲ್ಲೇ ತಮ್ಮ ಮಕ್ಕಳಿಗೆ ಸರಿಯಾದ ಶಿಕ್ಷಣ ಮತ್ತು ಉತ್ತಮ ತರಬೇತಿಯನ್ನು  ನೀಡದೆ ಕೇವಲ ಅವರ ಹೊಟ್ಟೆ ತುಂಬಿಸುವುದು ಮತ್ತು ಅವರಿಗಾಗಿ ಸಂಪತ್ತನ್ನು ಮಾಡಿ ಇಡುವುದೇ ತಮ್ಮ ಜೀವನದ ಉದ್ದೇಶವನ್ನಾಗಿ ಮಾಡಿಟ್ಟ ತಂದೆ ತಾಯಿಗಳು ಕೊನೆಗೆ  ತಮ್ಮ ಮಕ್ಕಳು ದಾರಿ ತಪ್ಪಿದಾಗ ಬಾಬಾ, ಜೋತಿಷ್ಯ, ಮಂತ್ರವಾದಿಗಳ ಬಳಿಗೆ ಹೋಗಿ ಅವರಿಂದಲೂ ಮೋಸಕ್ಕೆ ಒಳಗಾಗುತ್ತಾರೆ.
ಕೃಪೆ:ವಾಟ್ಸಾಪ್ ಗ್ರೂಪ್.
ಸಂಗ್ರಹ:ವೀರೇಶ್ ಅರಸಿಕೆರೆ

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1055

ದಿನಕ್ಕೊಂದು ಕಥೆ 1059