ದಿನಕ್ಕೊಂದು ಕಥೆ 927
*🌻ದಿನಕ್ಕೊಂದು ಕಥೆ🌻*
ಬರ್ಬರಿಕ
ಇದ್ಯಾರಪ್ಪ ಇವನು ಬರ್ಬರಿಕ?
ಯೂರೋಪ್ ಪ್ರದೇಶದ ಯಾವುದೋ ಪ್ರಭಾವಿ ಮಹಿಳೆಯ ಹೆಸರು ಇದ್ದಹಾಗಿದೆ.!
ಇಷ್ಟು ದಿನ, ಏನೋ ರಾಮಾಯಣ, ಮಹಾಭಾರತದ ಪಾತ್ರಗಳ ಪರಿಚಯದ ಬಗ್ಗೆ ಲೇಖನಗಳು ಬರುತ್ತಿದ್ದವು. ಈಗ ಪಾತ್ರಗಳ ಪರಿಚಯ ಎಲ್ಲಿಂದ ಎಲ್ಲಿಗೋ ಹೋಗುವ ಹಾದಿ ಹಿಡಿದಿದೆ ಎಂಬ ಅನುಮಾನ ಮೂಡಬಹುದು.
ಆದರೆ ವಾಸ್ತವವಾಗಿ "ಬರ್ಬರಿಕ" ಮಹಾಭಾರತದಲ್ಲಿ ಹೆಚ್ಚು ಪ್ರಚಲಿತವಲ್ಲದ ಪಾತ್ರಧಾರಿ ಎಂಬುದು ನಿಜ.
ಯಾರು ಈ ಬರ್ಬರಿಕ...?
ಇವನ ತಂದೆ ಘಟೋತ್ಕಚ, ತಾಯಿ ಅಹಿಲವತಿ (ಮೌರ್ವಿ) ಅಂದರೆ, ಬರ್ಬರಿಕನ ತಾತ ಭೀಮಸೇನ.
ಬರ್ಬರಿಕ ಪಾಂಡವರು ಮತ್ತು ಕೌರವರಲ್ಲಿ ಅತ್ಯಂತ ಬಲಶಾಲಿ. ಧನುರ್ವಿದ್ಯೆಯಲ್ಲಿ ಅರ್ಜುನ, ಕರ್ಣರನ್ನೂ ಮೀರಿಸುವಂತಹ ಬಿಲ್ಲುಗಾರ. ಇವನ ಸರಿಸಮನಾದವರು ಯಾರೂ ಇಲ್ಲವೇನೋ ಎನ್ನುವಷ್ಟರಮಟ್ಟಿಗೆ ಇವನ ಪರಾಕ್ರಮ.
ಕುರುಕ್ಷೇತ್ರದ ಯುದ್ಧಕ್ಕೆ ಮೊದಲು ಶ್ರೀಕೃಷ್ಣ ಪಾಂಡವರು ಹಾಗೂ ಕೌರವರನ್ನು ಕುರಿತು ಕೇಳಿದ ಒಂದು ಪ್ರಶ್ನೆ....?
ಭೀಷ್ಮ, ದ್ರೋಣ, ದುರ್ಯೋಧನ, ಧರ್ಮರಾಯ ಭೀಮಸೇನ, ಅರ್ಜುನ ಮುಂತಾದವರಲ್ಲಿ ಕುರುಕ್ಷೇತ್ರ ಯುದ್ಧ ಮುಗಿಯಲು ಸುಮಾರು ಎಷ್ಟು ದಿನಗಳು ಬೇಕಾಗಬಹುದು? ಎಂಬ ಪ್ರಶ್ನೆ ಕೇಳುತ್ತಾನೆ.
ಎಲ್ಲ ಮಹಾರಥಿಗಳಿಂದ ಬಂದ ಉತ್ತರ 20, 24, 26, 28 ದಿನಗಳು ಹೀಗೆ ವಿಧವಿಧವಾದ ಉತ್ತರಗಳು ಬಂದವು.
ಶ್ರೀಕೃಷ್ಣ ಅದೇ ಪ್ರಶ್ನೆಯನ್ನು 'ಬರ್ಬರಿಕ'ನಲ್ಲಿ ಕೇಳಿದಾಗ ಬಂದ ಉತ್ತರ.? ಕುರುಕ್ಷೇತ್ರ ಯುದ್ಧ ಮುಗಿಸಲು ಕೆಲವು ನಿಮಿಷಗಳು ಸಾಕು ಎಂದ. ಶ್ರೀಕೃಷ್ಣ ಕೆಲ ನಿಮಿಷ ಆಶ್ಚರ್ಯದಿಂದ ಅವಕ್ಕಾಗಿ, ಏನೂ ಅರ್ಥವಾಗದೆ, ಮಾತನಾಡದೆ ಮೌನಕ್ಕೆ ತೆರೆಳಿದ.
|ಬರ್ಬರಿಕ ಹಾಗೂ ಶ್ರೀಕೃಷ್ಣನ ನಡುವಿನ ಸಂಭಾಷಣೆ|
ಶ್ರೀಕೃಷ್ಣ:- ನಿನಗೆ ಕುರುಕ್ಷೇತ್ರ ಯುದ್ಧದಲ್ಲಿ ಕೌರವರು ಹಾಗೂ ಪಾಂಡವರ ಜೊತೆಯಲ್ಲಿ ಎಷ್ಟು ಅಕ್ಷೋಹಿಣಿ ಸೈನ್ಯಗಳು ಪಾಲ್ಗೊಳ್ಳುತ್ತವೆ, ಅವುಗಳು ಎಷ್ಟು ಬಲವಾದದ್ದು ಎಂಬ ಬಗ್ಗೆ ತಿಳಿದಿದೆಯೇ? ಅಷ್ಟೊಂದು ಸೈನ್ಯವನ್ನು ಕೆಲವು ನಿಮಿಷಗಳಲ್ಲಿ ಹೇಗೆ ಧ್ವಂಸ ಮಾಡಲು ಸಾಧ್ಯ ಎಂಬ ಅರಿವಿದಿದೆಯೇ.?
ಬರ್ಬರಿಕ:- ಎಲೈ ಶ್ರೀಕೃಷ್ಣ ಪರಮಾತ್ಮನೇ, ನನಗೆ ಪರಶಿವನ ಅನುಗ್ರಹದಿಂದ ಕೇವಲ ಮೂರು ಬಾಣಗಳು ಪ್ರಾಪ್ತಿಯಾಗಿದೆ. ಅವುಗಳ ಸಾಮರ್ಥ್ಯಗಳ ಬಗ್ಗೆ ವಿವರಿಸುತ್ತೇನೆ, ಕೇಳು.
ಪರಶಿವನಿಂದ ಪ್ರಾಪ್ತಿಯಾದ ಮೂರು ಬಾಣಗಳನ್ನು ಎಷ್ಟು ಬಾರಿಯಾದರೂ ಉಪಯೋಗಿಸಬಹುದು. ಒಮ್ಮೆ ಬಿಟ್ಟ ಬಾಣ, ತನ್ನ ಗುರಿಯನ್ನು ತಲುಪಿ, ಕರ್ತವ್ಯವನ್ನು ಮುಗಿಸಿ ಮತ್ತೆ ಅಗ್ನಿ ದೇವತೆಯಿಂದ ಪ್ರಾಪ್ತವಾದ ನನ್ನ ಬತ್ತಳಿಕೆಗೆ ಬಂದು ಸೇರುತ್ತವೆ. ಹಾಗಾಗಿ ಅವುಗಳ ಕಾರ್ಯಾಚರಣೆಗೆ ಅಂತ್ಯವಿಲ್ಲ, ನಿರಂತರ.
೧. ಮೊದಲನೆಯ ಬಾಣವು, ನಾನು ನನ್ನ ಸಂಕಲ್ಪದಂತೆ, ಯಾವ ವಸ್ತು, ಅಥವಾ ಯಾವ ಯಾವ ವ್ಯಕ್ತಿಗಳನ್ನು ಗುರಿಯಾಗಿಸಿ ಬಾಣ ಪ್ರಯೋಗ ಮಾಡಬೇಕೆಂಬುದನ್ನು ಗುರುತಿಸುತ್ತದೆ.
೨. ಎರಡನೆಯ ಬಾಣವು, ನಾನು ನನ್ನ ಇಚ್ಛೆಯಂತೆ ಗುಂಪಿನಲ್ಲಿ ಇರುವ ಯಾವ ವಸ್ತುವೇ ಆಗಲಿ, ಯಾವ ವ್ಯಕ್ತಿಯೇ ಆಗಲಿ ನಾಶ ಪಡಿಸಲು ಅಥವ ಧ್ವಂಸ ಮಾಡಲು ಇಚ್ಛಿಸುವುದಿಲ್ಲವೋ ಅವುಗಳನ್ನು ತಾನು ಗುರುತು ಮಾಡುತ್ತದೆ.
೩. ಇನ್ನು ಮೂರನೆಯ ಬಾಣವನ್ನು ಪ್ರಯೋಗಿಸಿದಾಗ, ಅದು ಮೊದಲನೆಯ ಬಾಣ ಗುರುತು ಮಾಡಿದ ವಸ್ತು, ವ್ಯಕ್ತಿಗಳನ್ನು ಒಟ್ಟಾಗಿ ಕ್ಷಣಾರ್ಧದಲ್ಲಿ ನಾಶಮಾಡುತ್ತದೆ. ಜೊತೆಗೆ ಎರಡನೆಯ ಬಾಣ ಗುರುತು ಮಾಡಿದ ವಸ್ತು, ವ್ಯಕ್ತಿಗಳಿಗೆ ಯಾವುದೇ ತೊಂದರೆ, ನೋವು ಅನುಭವಿಸು ಸಂಧರ್ಭ ಬರಲಾರದಂತೆ ಕಾಪಾಡುತ್ತದೆ.
ಈ ಎಲ್ಲ ಕ್ರಿಯೆಯಗಳು ಕೇವಲ ಹಲವು ನಿಮಿಷಗಳಲ್ಲಿ ನಡೆದುಹೋಗುವುದು. ಹಾಗಾಗಿ, ನಾನು ಕುರುಕ್ಷೇತ್ರ ಯುದ್ಧದಲ್ಲಿ ಯಾವ ಯಾವ ವಸ್ತುಗಳನ್ನು ಮತ್ತು ವ್ಯಕ್ತಿಗಳನ್ನು ಧ್ವಂಸ ಮಾಡಬೇಕು, ಯಾರೆಲ್ಲರನ್ನು ಉಳಿಸಬೇಕು ಎಂಬ ಸಂಕಲ್ಪ ಮಾಡಿ ಬಾಣಗಳನ್ನು ಪ್ರಯೋಗ ಮಾಡಿದಲ್ಲಿ, ಉಳಿದ ಕೆಲಸಗಳನ್ನು ಆಯಾ ಬಾಣಗಳು ಕ್ಷಣಾರ್ಧದಲ್ಲಿ ಮಾಡಿ ಮುಗಿಸುತ್ತವೆ. ನಂತರ ಬಾಣಗಳು ನನ್ನ ಬತ್ತಳಿಕೆಗೆ ಬಂದು ಸೇರುತ್ತವೆ.
ಶ್ರೀಕೃಷ್ಣ :- ಹಾಗಾದಲ್ಲಿ ಇಲ್ಲಿರುವ ಆಲದ ಮರದಲ್ಲಿ ಲಕ್ಷಾಂತರ ಎಲೆಗಳಿವೆ, ಈ ಎಲ್ಲ ಎಲೆಗಳನ್ನು ನಿನ್ನ ಮೊದಲನೆಯ ಬಾಣ ಗುರುತಿಸಿ, ಎರಡನೆಯ ಬಾಣ ಅವುಗಳನ್ನು ಒಟ್ಟುಗೂಡಿಸಿ ನಾಶಪಡಿಸಲು ಸಾಧ್ಯವೇ..?
ಬರ್ಬರಿಕ:- ನಿನ್ನ ಇಚ್ಛೆಯಂತೆ ನಾನು ಕಣ್ಣು ಮುಚ್ಚಿ ಮಂತ್ರೋಪದೇಶ ಮಾಡಿ ಮೊದಲ ಬಾಣ ಪ್ರಯೋಗ ಮಾಡುತ್ತೇನೆ. ಆ ಬಾಣವು ಎಲ್ಲ ಎಲೆಗಳನ್ನೂ ಗುರುತು ಮಾಡುತ್ತದೆ. ನಂತರದ ಬಾಣ, ಎಲ್ಲ ಎಲೆಗಳನ್ನು ಒಟ್ಟುಮಾಡಿ ಕ್ಷಣಾರ್ಧದಲ್ಲಿ ಭಸ್ಮ ಮಾಡುತ್ತದೆ ಎಂದು ಹೇಳಿ ಕಣ್ಣು ಮುಚ್ಚಿ ಮಂತ್ರ ಉಪದೇಶಕ್ಕೆ ಮೊದಲಾದ.
ಅಷ್ಟರಲ್ಲಿ, ಬರ್ಬರಿಕನಿಗೆ ತಿಳಿಯದಂತೆ ಶ್ರೀಕೃಷ್ಣ ಮರದಿಂದ ಒಂದು ಎಲೆಯನ್ನು ಕಿತ್ತು ತನ್ನ ಪಾದದ ಅಡಿಯಲ್ಲಿ ಇಟ್ಟು ಮರೆಮಾಚುತ್ತಾನೆ.
ಬಾಣವು ಮರದಲ್ಲಿನ ಎಲ್ಲ ಎಲೆಗಳನ್ನು ಕ್ಷಣಾರ್ಧದಲ್ಲಿ ಗುರುತು ಮಾಡಿ, ಶ್ರೀಕೃಷ್ಣನ ಪಾದದ ಅಡಿಯಲ್ಲಿ ಬಚ್ಚಿಟ್ಟಿದ್ದ ಎಲೆಯನ್ನು ಗುರುತು ಮಾಡಲು ಮುಂದಾದಾಗ ಶ್ರೀಕೃಷ್ಣ ದಂಗು ಬಡಿದವನಂತೆ ತನ್ನ ಪಾದವನ್ನು ಮೇಲೆ ಎತ್ತಿದ. ಬರ್ಬರಿಕ ಇದನ್ನು ನೋಡಿ ಮುಗುಳ್ನಕ್ಕು ಸುಮ್ಮನಾದ. ಶ್ರೀಕೃಷ್ಣನು ಆ ಬಾಣಗಳ ಶಕ್ತಿಯನ್ನು ನೋಡಿ ಬೆರಗಾದ.
ಎಲೈ ಬರ್ಬರಿಕನೇ ನಿನಗೆ ಪರಶಿವನ ಅನುಗ್ರಹ, ತಪಸ್ಸಿನ ಶಕ್ತಿ, ಬಾಣಗಳ ತೀಕ್ಷಣತೆ ನನ್ನನ್ನು ಬೆರಗಾಗಿಸಿದೆ.
ಹಾಗಿದ್ದಲ್ಲಿ ನೀನು ಕುರುಕ್ಷೇತ್ರ ಯುದ್ಧದಲ್ಲಿ ಯಾರ ಪರವಾಗಿ ಯುದ್ಧ ಮಾಡಲು ಸಂಕಲ್ಪ ಮಾಡಿದ್ದೀಯ ಎಂದ.!
ಬರ್ಬರಿಕ:- ನಾನು ನನ್ನ ತಾಯಿ, ಹಾಗೂ ನನ್ನ ಗುರುಗಳಿಗೆ ನೀಡಿದ ವಾಗ್ದಾನದಂತೆ, ಯುದ್ಧದಲ್ಲಿ ಯಾವ ಸೈನ್ಯವು ದುರ್ಬಲವೋ ಅವರೊಡನೆ ಜೊತೆಗೂಡಿ ಯುದ್ಧ ಮಾಡುತ್ತೇನೆ. ಬಲಿಷ್ಠವಾದ ಸೈನ್ಯದ ಜೋತೆ ಎಂದಿಗೂ ಹೋಗುವುದಿಲ್ಲ.! ಎಂದ.
ಶ್ರೀಕೃಷ್ಣ ವಿಚಲಿತನಾದ, ಇವನೇನಾದರೂ ದುರ್ಬಲರಾದ ಕೌರವರ ಜೊತೆಗೂಡಿದರೆ, ಅಲ್ಲಿಗೆ ಪಾಂಡವರ ಕಥೆ ಮುಗಿದಂತೆಯೇ, ಒಂದು ವೇಳೆ ಪಾಂಡವರು ಎಲ್ಲೇ ಅಡಗಿದ್ದರೂ ಅವರನ್ನು ಬಾಣವು ಹಿಂಬಾಲಿಸುವುದು ಸತ್ಯ, ಹಾಗಾಗಿ ಪಾಂಡವರು ಬದುಕುಳಿಯಲು ಸಾಧ್ಯವಿಲ್ಲ ಎಂಬ ತೀರ್ಮಾನಕ್ಕೆ ಬಂದ.
ನಂತರ......
ಶ್ರೀಕೃಷ್ಣ:- ಎಲೈ ಬರ್ಬರಿಕನೇ, ನಿನ್ನ ಮಾತೃ ಭಕ್ತಿ, ಗುರು ಭಕ್ತಿ, ಶೌರ್ಯ, ಪರಾಕ್ರಮಗಳನ್ನು ಮೆಚ್ಚಿದ್ದೇನೆ. ನೀನು ಸಮಾಜದ ಉದ್ಧಾರಕ್ಕಾಗಿ ಯಾವುದಾದರೂ ವರವನ್ನು ಕೇಳು, ಅನುಗ್ರಹಿಸುತ್ತೇನೆ.
ಬರ್ಬರಿಕ :- ಮಾಹಾ ಮೂರ್ತಿಯಾದ ಶ್ರೀಕೃಷ್ಣನೇ, ನನಗೆ ಯಾವುದೇ ಅಪೇಕ್ಷೆಗಳಿಲ್ಲ. ನನ್ನಿಂದ ಸಮಾಜಕ್ಕೆ ಉಪಕಾರ ಮತ್ತು ಧರ್ಮವನ್ನು ಕಾಪಾಡುವ ಯಾವ ಕೆಲಸವಾದರೂ ನಿನ್ನ ಆಜ್ಞೆಯಂತೆ ನೆರವೇರಿಸುತ್ತೇನೆ. ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತೇನೆ.
ಶ್ರೀಕೃಷ್ಣ:- ನಾನು ಏನೇ ಹೇಳಿದರೂ, ಮಾಡಲು ಸಿದ್ದನಾದ ನೀನು ನಿನ್ನ ಶಿರಸ್ಸನ್ನು ಕತ್ತರಿಸಿ ಕೊಡಬಲ್ಲೆಯಾ?
ಬರ್ಬರಿಕ:- ನನ್ನ ಶಿರಚ್ಛೇದನದಿಂದ ಧರ್ಮಕ್ಕೆ ಜಯ ಸಿಗುವುದೇ ಆದಲ್ಲಿ ನಾನು ಸಿದ್ಧ. ಆದರೆ ನನ್ನದೊಂದು ಕೊನೆಯ ಕೋರಿಕೆ. ನಾನು, ಕೌರವರು ಹಾಗೂ ಪಾಂಡವರ ನಡುವಿನ ಕುರುಕ್ಷೇತ್ರ ಯುದ್ಧವನ್ನು ಮೊದಲಿಂದ, ಅಂತ್ಯದವರೆಗೂ ನೋಡಲು ಅವಕಾಶ ಕಲ್ಪಿಸುವಂತೆ ನನ್ನ ಕೊರಿಕೆ.
ಶ್ರೀಕೃಷ್ಣ :- ತಥಾಸ್ತು, ನಿನ್ನ ಕೋರಿಕೆ ಈಡೇರುವಂತಾಗಲಿ.
ಮರು ಕ್ಷಣವೇ ಶ್ರೀಕೃಷ್ಣನ ಚಕ್ರವು ಬರ್ಬರಿಕನ ಶಿರವನ್ನು ಕತ್ತರಿಸಿ, ಕುರುಕ್ಷೇತ್ರ ಯುದ್ಧ ನಡೆಯುವ ಸ್ಥಳ ಹತ್ತಿರವಿದ್ದ ಎತ್ತರದ ಗುಡ್ಡುಮೇಲೆ ಬಂದು ಬೀಳುತ್ತದೆ.
|ಕುರುಕ್ಷೇತ್ರ ಯುದ್ಧ|
ಯುದ್ಧದ ಹದಿನೆಂಟು ದಿನವೂ ಬರ್ಬರಿಕ ಯುದ್ಧದ ಆಗುಹೋಗುಗಳನ್ನು ಕಣ್ಣಾರೆ ನೋಡಿದ.
ಶ್ರೀಕೃಷ್ಣ:- ಬರ್ಬರಿಕನೇ, ಕುರುಕ್ಷೇತ್ರ ಯುದ್ಧದಲ್ಲಿ ಕೌರವರು ಸರ್ವ ಪತನ ಕಂಡು ಮೃತ್ಯು ಹೊಂದಿದರು. ನಿನ್ನ ಪ್ರಕಾರ ಪಾಂಡವರು ಯುದ್ಧದಲ್ಲಿ ಜಯಗಳಿಸಲು ಪ್ರಮುಖ ಕಾರಣ, ಹಾಗೂ ಜಯದ ಪ್ರಮುಖ ಪಾತ್ರ ವಹಿಸಿದವರು ಯಾರು.?
ಬರ್ಬರಿಕ:- ಪರಮಾತ್ಮನೇ, ಇಲ್ಲಿ ಯಾರ ಶಕ್ತಿ, ಪರಾಕ್ರಮ ಎಂಬುದು ಏನೂ ಇಲ್ಲ. ಪಾಂಡವರು ಜಯಗಳಿಸಲು ಕೇವಲ ನಿನ್ನ ಅನುಗ್ರಹ ಮಾತ್ರ. ಇನ್ನು ಕೌರವರ ದಾಯಾದಿ ಮತ್ಸರ, ಅಸೂಯೆ, ದ್ವೇಷಗಳೇ ಅವರ ಅವನತಿಗೆ ಕಾರಣವಾಯಿತು.
ಶ್ರೀಕೃಷ್ಣ :- ನಿನ್ನ ಜನ್ಮವು ಸಾರ್ಥಕವಾಯಿತು. ನಿನಗೆ ಮೋಕ್ಷವನ್ನು ನೀಡಿ, ಸದ್ಗತಿ ಪ್ರಾಪ್ತಿಯಾಗುವಂತೆ ಅನುಗ್ರಹಿಸುತ್ತೇನೆ ಎಂಬುದಾಗಿ ಅಭಯ ನೀಡಿ ಶ್ರೀಕೃಷ್ಣ ಅದೃಶ್ಯನಾದ.
ಕೃಪೆ:ವಿ.ಎಸ್.ಮಣಿ.
ಸಂಗ್ರಹ :ವೀರೇಶ್ ಅರಸಿಕೆರೆ.
Comments
Post a Comment