ದಿನಕ್ಕೊಂದು ಕಥೆ 950
ದಿನಕ್ಕೊಂದು ಕಥೆ
ಲೇಖಕರು:ಡಾ.ಗವಿಸ್ವಾಮಿ.
ಗಂಗಮ್ಮ ತಾಯಿ ಮೂರು ಅವಕಾಶಗಳನ್ನು ಕೊಡುತ್ತಾಳಂತೆ. ಮುಳುಗುತ್ತಿರುವವನನ್ನು ಬದುಕಿಕೋ ಹೋಗೆಂದು ಮೂರು ಸಲ ಮೇಲಕ್ಕೆ ಚಿಮ್ಮಿಸಿ ತೇಲಿಸುತ್ತಾಳಂತೆ.
ಆದರೆ ಮುಳುಗಲೆಂದೇ ಹಾರಿದವನಿಗೆ ಎಷ್ಟು ಅವಕಾಶ ಕೊಟ್ಟರೇನು ಬಂತು?
ಒಬ್ಬ ಆಗ ತಾನೇ ಧುಮುಕಿ , ಗಂಗೆಯ ಒಡಲಾಳಕ್ಕೆ ಇಳಿದು ಹೋಗುತ್ತಿದ್ದ . ಆತನನ್ನು ಕಂಡು ಮರುಗಿದ ಗಂಗೆಗೆ ಅವನೊಂದಿಗೆ ಮೂರು ಮಾತನ್ನಾದರೂ ಆಡಿ ಬೀಳ್ಕೊಡುವ ಬಯಕೆಯಾಯಿತು.
"ಹುಟ್ಟುಬಟ್ಟೆಯಲ್ಲಿ ಜಿಗಿಯುತ್ತಿದ್ದ ವಯಸ್ಸಿನಿಂದಲೂ ನಿನ್ನನ್ನು ನೋಡುತ್ತಿದ್ದೇನೆ. ನೀನು ಮುಳುಗುವ ಆಸಾಮಿಯಲ್ಲ. ಏನಾಯಿತು ಹೇಳು?"
"ನಿಜ ತಾಯಿ, ಬದುಕಿನುದ್ದಕ್ಕೂ ಘೋರ ಸುಳಿಗಳನ್ನು ಹಾದು ಬಂದಿದ್ದೇನೆ ..ಅಪ್ಪನ ಮೊಣಕಾಲು ಹಿಡಿದು ತಿರುಗುತ್ತಿದ್ದ ವಯಸ್ಸಿನಲ್ಲಿ ಪ್ಲೇಗು ಮಾರಿ ಅವನನ್ನು ಹೊತ್ತೊಯ್ದಾದಾಗಲೂ ನಾನು ಮುಳುಗಲಿಲ್ಲ.ಅವರಿವರ ಮನೆಯ ಕಸ ಹೊತ್ತು ಸುರಿದೆ,ಜೀತ ಮಾಡಿದೆ.ಹೆತ್ತವಳನ್ನು ಕಾಪಾಡಿಕೊಂಡೆ..ಎದೆ ಮಟ್ಟಕ್ಕೆ ಬೆಳೆದ ಮಗ ಕಾಡಾನೆಯ ಕಾಲಿಗೆ ತುತ್ತಾದಾಗಲೂ ನಾನು ಮುಳುಗಲಿಲ್ಲ..ಕೆಂಡದ ಉಂಡೆಗಳನ್ನು ಎದೆ ಗೂಡಿನಲ್ಲಿ ಬಚ್ಚಿಟ್ಟುಕೊಂಡು ಮರುದಿನವೇ ಆರಂಭಕ್ಕೆ ಕಟ್ಟಿದೆ..ಬರಗಾಲ ಬಂದು ಬಾಯಿ ತೆರೆದುಕೊಂಡಿದ್ದ ಭೂಮ್ತಾಯಿಯೊಡಲಲ್ಲಿ ನನ್ನೆರಡು ಎತ್ತುಗಳನ್ನು ಹುಗಿದು ಮುಚ್ಚಿದ ದಿನದಂದೂ ನಾನು ಮುಳುಗಲಿಲ್ಲ.. ಇಂದು ಮಾತಿಗೆ ಅಂಜಿ, ಮಾನಕ್ಕೆ ಅಂಜಿ ಮುಳುಗುತ್ತಿದ್ದೇನೆ ತಾಯಿ "
"ಅಯ್ಯೋ! ಇನ್ನು ಎಷ್ಟು ಜನರ ನೋವಿನ ನಿಟ್ಟುಸಿರನ್ನು ಒಡಲಿಗೆ ಹಾಕಿಕೊಳ್ಳಬೇಕೋ ನಾನು, ಇನ್ನೂ ಎಷ್ಟು ನಿಷ್ಪಾಪಿ ಜೀವಗಳು ಕಮರಿ ಹೋಗಲಿವೆಯೋ ಈ ಪಾಪಿಯೊಡಲಿನಲ್ಲಿ..ಮಗೂ, ಈ ಸಮಾಜಕ್ಕೆ ಏನಾದರೂ ಹೇಳಬೇಕೆಂದಿದ್ದೀಯಾ ,ಏನಾದರೂ ಬರೆದಿಟ್ಟು ಹೋಗುತ್ತಿದ್ದೀಯಾ ?
"ಹೆಬ್ಬೆಟ್ಟಿನವ ನಾನು. ಹಾಳೆಯ ಮೇಲೆ ಬರೆಯಲು ಗೊತ್ತಿಲ್ಲ, ನೆಲದ ಮೇಲೆ ಬರೆಯುವುದಷ್ಟೇ ಗೊತ್ತು . ಸಾವಿರಾರು ಕಂಡುಗ ಜೋಳ ರಾಗಿ ಬೆಳೆದದ್ದಷ್ಟೇ ತೃಪ್ತಿ. ಅದಕ್ಕೆ ಪ್ರತಿಯಾಗಿ ಲಕ್ಷ ಲಕ್ಷ ಸಾಲ ಹೊತ್ತು ಹೋಗುತ್ತಿದ್ದೇನೆ. ಹಿಂದೆ ನನ್ನ ಸಾವಿರಾರು ಬಂಧುಗಳು ಹೋದರಲ್ಲ, ಅವರೇನು ಬರೆದಿಟ್ಟು ಹೋದರು? ಸದ್ದುಗದ್ದಲ ಮಾಡದೇ ತಣ್ಣಗೆ ಎದ್ದು ಹೋಗಲಿಲ್ಲವೇ ತಾಯಿ? "
"ನಿನ್ನ ಮಡದಿಗೆ, ನಿನ್ನ ಮಗಳಿಗೆ ಏನಾದರೂ ಬಿಟ್ಟು ಹೋಗುತ್ತಿದ್ದೀಯಾ ಕಂದಾ? "
"ಈ ಪಾಪಿಗೆ ಏನನ್ನು ತಾನೆ ಬಿಟ್ಟು ಹೋಗಲಿಕ್ಕೆ ಸಾಧ್ಯ,ಬ್ಯಾಂಕಿನ ನೋಟಿಸುಗಳು, ಅಡಮಾನದ ಪತ್ರಗಳನ್ನು ಬಿಟ್ಟು ..ಗಿರವಿ ಅಂಗಡಿಯಲ್ಲಿ ವಜಾ ಆಗಿರುವ ಅವಳ ತಾಳಿ ಗುಂಡುಗಳ ಚೀಟಿಯನ್ನು ಬಿಟ್ಟು ಹೋಗುತ್ತಿದ್ದೇನೆ ..ನಿನ್ನೆ ರಾತ್ರಿ ಕೆತ್ತಿದ ಬುಗುರಿಯನ್ನು ದೇವರ ಗೂಡಿನಲ್ಲಿ ಬಚ್ಚಿಟ್ಟು ಬಂದಿದ್ದೇನೆ, ನನ್ನ ಮಗಳಿಗಾಗಿ, ಅವಳ ಪುಟ್ಟ ಕಂದನಿಗಾಗಿ "
ಗಂಗೆಗೆ ನಾಲ್ಕನೇ ಮಾತು ಹೊರಡಲಿಲ್ಲ..
Comments
Post a Comment