ದಿನಕ್ಕೊಂದು ಕಥೆ 961

*🌻ದಿನಕ್ಕೊಂದು ಕಥೆ🌻*
*ಕಲಿಕೆಗೆ ಬೇಕು ವಿನಮ್ರತೆ*

ಶೂರಸೇನನೆಂಬ ರಾಜ. ಬಹಳ ಚಾಣಾಕ್ಷ ಹಾಗೂ ಪರಾಕ್ರಮಿ. ತನ್ನ ರಾಜ್ಯ, ಕೋಶ, ನ್ಯಾಯನಿಷ್ಠುರತೆ ಬಗ್ಗೆ ಅವನಿಗೇ ಹೆಮ್ಮೆಯಿತ್ತು, ಅಭಿಮಾನವಿತ್ತು. ಒಮ್ಮೆ ಅಧ್ಯಾತ್ಮದ ಬಗ್ಗೆ ಒಲವು ಮೂಡಿಸಿಕೊಂಡ ಅವನು ಅದನ್ನೂ ಕಲಿಯುವ, ಆಳವಾಗಿ ತಿಳಿದುಕೊಳ್ಳುವ ತೀರ್ಮಾನ ಮಾಡಿದ. ಮಂತ್ರಿಗಳನ್ನು ಕರೆದು-‘ಮಂತ್ರಿಗಳೇ ನನಗೆ ಅಧ್ಯಾತ್ಮವನ್ನು ಕಲಿಯಬೇಕೆಂಬ, ಹೆಚ್ಚೆಚ್ಚು ಅರ್ಥಮಾಡಿಕೊಳ್ಳಬೇಕೆಂಬ ಆಸೆಯಾಗಿದೆ. ನನಗಾಗಿ ಸರ್ವಶ್ರೇಷ್ಠ ಗುರುಗಳನ್ನು ಕಂಡು ಅವರನ್ನು ಸತ್ಕರಿಸಿ ನಮ್ಮ ಅರಮನೆಗೆ ಕರೆತನ್ನಿ’ ಎಂದನು. ಮಂತ್ರಿಗಳು ಗುರುಗಳನ್ನು ಹುಡುಕಿ ಕರೆತರುವುದಾಗಿ ಹೇಳಿ ಹೊರಟರು. ಗುರುಗಳನ್ನು ಭೇಟಿಯಾಗಿ ಆಹ್ವಾನಿಸಿದರೆ ಅವರು ‘ಪಾಠ ಹೇಳುವ ಸಲುವಾಗಿ ಅರಮನೆಗೆ ಬರುವುದಿಲ್ಲ’ ಎಂದುಬಿಟ್ಟರು. ಆ ಗುರುಗಳೇ ಸ್ವಾಮಿ ಆತ್ಮಾನಂದರು.

ಇನ್ನೊಮ್ಮೆ ಮಂತ್ರಿಗಳು ಸ್ವಾಮಿ ಆತ್ಮಾನಂದರನ್ನು ಭೇಟಿಯಾಗಿ-‘ಶೂರಸೇನ ಮಹಾರಾಜರಿಗೋಸ್ಕರ ಬನ್ನಿ ಗುರುಗಳೇ’ ಎಂದು ಹೇಳಿದರೆ, ‘ನನಗೆ ಅರಮನೆಯ ಅವಶ್ಯಕತೆಯಿಲ್ಲ. ಅಧ್ಯಾತ್ಮದ ಪಾಠ ಬೇಕಾಗಿರುವುದು ನಿಮ್ಮ ಮಹಾರಾಜರಿಗೆ. ಅವರನ್ನೇ ಬರ ಹೇಳಿರಿ’ ಎಂದರು. ವಿಚಾರ ಗೊತ್ತಾದಾಗ ಶೂರಸೇನನು, ‘ವಿದ್ಯೆ ನನ್ನ ಬಯಕೆ. ಹಾಗಾಗಿ ಗುರುಗಳು ಇರುವಲ್ಲಿ ನಾನೇ ಹೋಗುವೆ’ ಎಂದು ತೀರ್ವನಿಸಿ ಆಶ್ರಮಕ್ಕೆ ಹೋದ. ‘ನಾನು ಎಷ್ಟೇ ಆದರೂ ಈ ನಾಡಿನ ಮಹಾರಾಜ! ಸ್ವಾಗತಿಸಲು ಗುರುಗಳು ಬಂದೇ ಬರುತ್ತಾರೆ’ ಎಂದು ಭಾವಿಸಿದರೆ ಅವರು ಎದ್ದೇ ಬರಲಿಲ್ಲ. ಆತ್ಮಾನಂದರು-‘ಒಳಗೆ ಬನ್ನಿ’ ಎಂದು ರಾಜನಿಗೆ ಕುಳಿತಲ್ಲಿಂದಲೇ ಹೇಳಿದರು. ಆ ಆಶ್ರಮದ ಬಾಗಿಲು ತುಂಬ ಚಿಕ್ಕದು. ಕೇವಲ ನಾಲ್ಕೇ ಅಡಿಯದ್ದು. ಮಂತ್ರಿಗಳನ್ನು ಒಳಗೊಂಡಂತೆ ಶೂರಸೇನ ಮಹಾರಾಜ ಗುರುವಿನ ಆಶ್ರಮವನ್ನು ಪ್ರವೇಶಿಸಿದ. ಅಲ್ಲಿ ನೋಡಿದರೆ ಗುರುಗಳೇ ಎದ್ದು ರಾಜನಿಗೆ ಸತ್ಕರಿಸಲು ಪ್ರಾರಂಭಿಸಿದರು. ಶೂರಸೇನ ಮಹಾರಾಜ-‘ನನ್ನನ್ನು ನಿಮ್ಮ ಶಿಷ್ಯನನ್ನಾಗಿ ಸ್ವೀಕರಿಸಿ’ ಎಂದರೆ ‘ಆಗಲೇ ಸ್ವೀಕರಿಸಿದ್ದೇನೆ. ನಮ್ಮಾಶ್ರಮಕ್ಕೆ ಬಂದಾಗಲೇ ಮೊದಲ ಹಂತದ ಪರೀಕ್ಷೆಯನ್ನು, ಚಿಕ್ಕ ಬಾಗಿಲನ್ನು ದಾಟಿ ಬಂದಾಗಲೇ ಎರಡನೆ ಹಂತದ ಪರೀಕ್ಷೆ ಪಾಸು ಮಾಡಿದಿರಿ. ನನಗೆ ನಮ್ರ ಶಿಷ್ಯರ ಅವಶ್ಯಕತೆಯಿದೆ. ಅದು ನಿಮ್ಮಲ್ಲಿದೆ’ ಎಂದರು.

ಬದುಕಿಗೆ ಬೇಕಾಗಿರುವುದು ಇಷ್ಟೇ! ಜೀವನದಲ್ಲಿ ನಮ್ರತೆಯನ್ನು ಅಳವಡಿಸಿಕೊಳ್ಳಬೇಕು. ‘ವಿದ್ಯೆಗೆ ವಿನಯವೇ ಭೂಷಣ’ ಎಂಬಂತೆ ಯಾವುದೇ ವಿಷಯ ಕಲಿಯಲು ನಮಗೆ ಮುಖ್ಯವಾಗಿ ವಿನಯತೆ ಇರಬೇಕು, ಆಸಕ್ತಿ ಇರಬೇಕು. ಅಹಂಕಾರಿ ಮನುಷ್ಯನಿಗೆ ಯಾವುದೂ ಸಿದ್ಧಿಸುವುದಿಲ್ಲ. ಕಲಿಕೆಗಾಗಿ ಎಲ್ಲ ಹಮ್ಮು ಬಿಮ್ಮುಗಳನ್ನು ಬಿಡಬೇಕು. ಆಗಲೇ, ಹೊಸದನ್ನು ಉತ್ಸಾಹದಿಂದ, ಆಸಕ್ತಿಯಿಂದ ಕಲಿಯಲು ಸಾಧ್ಯ. ಜೀವನದಲ್ಲಿ ಉತ್ಕರ್ಷದ ಪಥದಲ್ಲಿ ಸಾಗಲು ಸಾಧ್ಯ.


ಕೃಪೆ:ಸುಮಾವೀಣಾ
ಸಂಗ್ರಹ:ವೀರೇಶ್ ಅರಸಿಕೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1092

ದಿನಕ್ಕೊಂದು ಕಥೆ 1097