ದಿನಕ್ಕೊಂದು ಕಥೆ 963
ಶಿವಾಜಿಯನ್ನೇ ಅಳಿಸಿಬಿಟ್ಟ ಮಹಾತಾಯಿಯ ಕಥೆ. !
ಅವು ಮರಾಠ ಸಾಮ್ರಾಜ್ಯ ಕುಲತಿಲಕ ಶಿವಾಜಿಯ ಆಡಳಿತದ ದಿನಗಳು.. ಅಂದಮೇಲೆ ಕೇಳಬೇಕೆ ಅರಮನೆಯಂದಣ ಬಾಗಿಲಿನಿಂದ ಹಿಡಿದು ಗಡಿಯವರೆಗಿನ ಸರಹದ್ದಿನ ವರೆಗೂ ಕಾವಲಿನ ಪಹರೆಯಿತ್ತು..
ಸಂಜೆ ಆರರ ನಂತರ ಎಲ್ಲಾ ಕಾವಲು ಗೋಪುರಗಳ ಹಾಗೂ ಕಾವಲು ಬಾಗಿಲುಗಳನ್ನು ಹಾಕಿಬಿಡಬೇಕೆಂಬ ರಾಜಾಜ್ಞೆ ಇತ್ತು.
ಆವತ್ತು ಅಂಥದೇ ದಿನವಾಗಿತ್ತು ಮೊಸರು ಮಾರುವವಳಿಗೆ. ವ್ಯಾಪಾರದಲ್ಲಿ ಮುಳುಗಿ ಹೋದವಳಿಗೆ ಸಂಜೆ ಆರು ಮುಗಿದಿದ್ದೇ ತಿಳಿಯಲಿಲ್ಲ. ಅಷ್ಟರಲ್ಲಿ ಕಾವಲಿನವರು ಇಲ್ಲೇ ಇದ್ದು ಮುಂಜಾನೇ ನೀನು ದಿಡ್ಡಿ ಬಾಗಿಲು ತೆಗೆದ ನಂತರ ಹೋಗಬಹುದೆಂದು ಅಲ್ಲೇ ಕುಳ್ಳಿರಿಸಿ ಪಹರೆ ಕಾಯಲು ಹೋದರು..
ಮೊಸರಿನವಳು ವಿಲವಿಲನೇ ಸಂಕಟಪಡತೊಡಗಿದಳು.. ಮನೆಯಲ್ಲಿ ಒಂಬತ್ತು ತಿಂಗಳ ಹಸುಕಂದ.. ! ಊಟ ಹಾಳಾಗಿ ಹೋಗಲಿ ಎದೆಯಲ್ಲಿ ತುಂಬಿ ಸಾಯುವ ಯಾತನೇ ತರುವ ಹಾಲು! ಮಗುವಿನ ನೆನಪಾದೊಡನೆ ಸಣ್ಣದಾಗಿ ಜಿನುಗತೊಡಗಿ ಕುಪ್ಪಸವೆಲ್ಲಾ ತೊಯ್ದ ಹೊತ್ತದು...!
ಸರಿ. ಬೆಳಕರಿಯಿತು ಸೈನಿಕರು ಬಂದು ನೋಡಲಾಗಿ ಮೊಸರು ಮಾರುವವಳು ಎಲ್ಲಿ?
ಹೆದರಿಕೊಂಡ ಸೈನಿಕರು ಈ ವಿಷಯವನ್ನು ಶಿವಾಜಿಗೆ ತಿಳಿಸಿದರು. ತಕ್ಷಣ ಮೊಸರಿನವಳನ್ನು ಕರೆತರಬೇಕೆಂದು ಆಜ್ಞೆ ಹೋಯಿತು. ಸ್ವಲ್ಪ ಹೊತ್ತಿನಲ್ಲಿಯೇ ಮೊಸರಿನವಳು ಕಾವಲಿನವರು ಸೈನಿಕರು ಎಲ್ಲಾರೂ ' ರಾತ್ರಿ ಇಲ್ಲೇ ಇರಬೇಕೆಂದು ನಿಯಮ ದಾಟಿ ಅದೇಗೆ ನೀನು ಈ ಸದೃಢ ಕೋಟೆ ದಾಟಿ ಹೋದೆ ' ಎಂದು ಕೇಳಿದರು..
ಶಿವಾಜಿ ' ನೀನೂ ಬೇಹುಗಾರಿಕೆಯವಳಾ.. ಅಥವಾ ಯಾರಾದರೂ ನಿನ್ನ ಕಳಿಸಿದ್ದಾರಾ ಹೆದರಿಕೊಳ್ಳಬೇಡ ಹೇಳು ' ಎಂದ.
ಆಗ ಆ ಮೊಸರಿನವಳು ಹೆದರುತ್ತಾ ' ಮಹಾಪ್ರಭು ನಾನೊಬ್ಬಳು ಸಾಮಾನ್ಯ ಮೊಸರು ಮಾರುವವಳು, ನನ್ನನ್ನಾರು ಬೇಹುಗಾರಿಕೆಗೆ ಕಳಿಸಿಲ್ಲ.. ದುರ್ವಿಧಿ ನೋಡಿ ನನ್ನ ಗಂಡ ಸ್ವಲ್ಪ ದಿನದ ಹಿಂದೆಯೇ ಸತ್ತು ಹೋದ. ಮನೆಯಲ್ಲಿ ಹಸುಕಂದನಿರುವನು.. ನಿನ್ನೆ ವ್ಯಾಪಾರದ ಲಗುಬಗೆಯಲ್ಲಿ ತಡವಾಗಿ ಹೋಯಿತು.. ಸೈನಿಕರು ಕೋಟೆಯ ಹೊರ ಬಿಡಲು ಸುತಾರಾಂ ಬಿಡಲಿಲ್ಲ.. ಆದರೆ ಹಡೆದ ಹೊಟ್ಟೆ ಕೇಳಬೇಕಲ್ಲಾ.. ಮಗುವಿನ ನೆನಪಾಗಿ ಎದೆಹಾಲು ಜಿನುಗತೊಡಗಿದಾಗ ನನಗೆ ಏನು ಮಾಡಬೇಕೆಂಬುದೇ ತೋಚಲಿಲ್ಲ.. ನಂತರ ಸೈನಿಕರ ಕಣ್ತಪ್ಪಿಸಿ ಕೋಟೆಯ ಸರಹದ್ದಿನ ಮುಳ್ಳು ಕಂಟಿಯ ಸುರಂಗದಿಂದ ತಪ್ಪಿಸಿಕೊಂಡು ಹೋಗಿ ಮಗುವಿಗೆ ಹಾಲೂಡಿಸಿದೆ , ನೀವು ಕೊಡುವ ಶಿಕ್ಷೆಗೆ ತಯಾರು ಪ್ರಭು ' ಎಂದು ಸಣ್ಣಗೆ ಅಳತೊಡಗಿದಳು..
ಇದನ್ನು ಕೇಳುತ್ತಿದ್ದಂತೆಯೇ..
ಶಿವಾಜಿಯ ಜೊತೆ ಅಲ್ಲಿರುವ ಎಲ್ಲರ ಕಣ್ಣಾಲೆಗಳು ಮಂಜು ಮಂಜಾಗಿದ್ದವು..
ಶಿವಾಜಿಗೆ ತನ್ನ ತಾಯಿ ಜೀಜಾಬಾಯಿಯ ನೆನಪು ಉಕ್ಕುಕ್ಕಿ ಬಂದು ಗಧ್ಗದಿತನಾಗಿ ' ತಾಯಿ ನೀನಾರೋ ಕಾಣೇ.. ಆದರೆ ತಾಯಿಯಾದವಳು ತನ್ನ ಕಂದನಿಗಾಗಿ ಏನೂ ಬೇಕಾದರೂ ಮಾಡುತ್ತಾಳೆ, ನನ್ನ ತಾಯಿಯೂ ಅಷ್ಟೆ ಕತ್ತಿಯಿಂದ ಹಿಡಿದು ಬಿಲ್ಲು ಬಾಣ ಅಷ್ಟೇಕೆ ಕುದುರೆ ಸವಾರಿಯವರೆಗೂ ನನ್ನ ಗುರುವಾಗಿದ್ದವಳು... ನೀನು ನನ್ನ ತಾಯಿಯ ನೆನೆಸಿದೆ. ಇಗೋ ನಿನಗಾವ ಶಿಕ್ಷೆಯೂ ಇಲ್ಲ.. ' ಎಂದು ಅವಳ ತಾಯ್ತನದ ಪ್ರೀತಿಗೆ ಶೌರ್ಯಕ್ಕೆ ಬಹುಮಾನವಿತ್ತು ಕಳಿಸಿದನಂತೆ.
ಶಿವಾಜಿ ಜಯಂತಿಯ ಶುಭಾಷಯಗಳು... !
ಜೈ ಭವಾನಿ..! ಜೈ ಶಿವಾಜಿ..!!
ಮಾಹಿತಿ ಕೃಪೆ : ಎ ಆರ್ ಮಣಿಕಾಂತ.
ಸಂಗ್ರಹ:ವೀರೇಶ್ ಅರಸಿಕೆರೆ.
Comments
Post a Comment