ದಿನಕ್ಕೊಂದು ಕಥೆ 972
*🌻ದಿನಕ್ಕೊಂದು ಕಥೆ🌻*
*ಭರವಸೆಯೇ ಬದುಕಿನ ಬೆಳಕು*
ಅವನೊಬ್ಬ ಚಿಕ್ಕಂದಿನಿಂದಲೂ ಸಮಸ್ಯೆಗಳನ್ನು ಕಂಡಿರದೆ ತುಂಬ ಸುಖದಲ್ಲಿಯೇ ಬೆಳೆದು ಬಂದ ಹುಡುಗ. ಒಬ್ಬನೇ ಮಗನೆಂಬ ಕಾರಣದಿಂದ ತಂದೆ-ತಾಯಿ ಯಾವ ಸಮಸ್ಯೆಯನ್ನೂ ಕಾಣಗೊಡದೆ, ಕಷ್ಟಗಳ ಕಲ್ಪನೆಯೂ ಇಲ್ಲದಂತೆ, ಮುದ್ದಿನಿಂದ ಬೆಳೆಸಿದ್ದರು. ಮುಂದೊಂದು ದಿನ ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡ ಹುಡುಗನಿಗೆ ಎಲ್ಲ ಜವಾಬ್ದಾರಿಗಳು ಒಂದೇ ಬಾರಿಗೆ ಹೆಗಲೇರಿದವು. ಒಂದೊಂದೇ ಸಮಸ್ಯೆಗಳು ಎದುರಾಗಿ ಬದುಕು ಕಷ್ಟ ಎನಿಸತೊಡಗಿತು. ಇದುವರೆಗೂ ಬರೀ ಸುಖವನ್ನಷ್ಟೇ ಕಂಡು ಬೆಳೆದ ಹುಡುಗನಿಗೆ ಜವಾಬ್ದಾರಿಯನ್ನೆಲ್ಲ ನಿಭಾಯಿಸಿ ಜೀವನ ಸಾಗಿಸುವುದು ಅಸಾಧ್ಯವೆಂದೆನಿಸತೊಡಗಿತು.
ಹೀಗೆ ಒಂದು ದಿನ ಬದುಕಿನ ಬಗ್ಗೆ ಎಲ್ಲ ವಿಶ್ವಾಸ, ನಂಬಿಕೆಗಳನ್ನು ಕಳೆದುಕೊಂಡು ಜೀವನೋತ್ಸಾಹವೇ ಇಲ್ಲದೆ ಕೈಚೆಲ್ಲಿ, ಊರಾಚೆಯ ಕೆರೆಯ ದಡದಲ್ಲಿ ಹೋಗಿ ಕುಳಿತ. ಶೂನ್ಯಭಾವದಿಂದ ನೀರನ್ನೇ ದೃಷ್ಟಿಸಿ ನೋಡುತ್ತಿದ್ದ ಅವನಿಗೆ ನೀರಿನಲ್ಲಿ ಬಿದ್ದು ಒದ್ದಾಡುತ್ತಿರುವ ಇರುವೆಯೊಂದು ಕಣ್ಣಿಗೆ ಕಂಡಿತು. ಈಜು ಪಾದಗಳಿಲ್ಲದಿದ್ದರೂ ನೀರಿನಲ್ಲಿ ಚಲಿಸುವ ಸಾಮರ್ಥ್ಯವಿಲ್ಲದಿದ್ದರೂ ಆ ಇರುವೆ ತನ್ನ ಉಳಿವಿಗಾಗಿ ಹೋರಾಡುತ್ತಿತ್ತು. ಬೀಸುತ್ತಿರುವ ಗಾಳಿಗೆ ಅಂಜದೆ, ನೀರಿನ ರಭಸಕ್ಕೆ ಹೆದರದೆ ತುಂಬ ಕಷ್ಟಪಟ್ಟು ದಡ ಸೇರಲು ಹವಣಿಸುತ್ತಿತ್ತು. ಕೊನೆಗೂ ನಿರಂತರ ಹೋರಾಟದ ಫಲವಾಗಿ ಇರುವೆ ದಡವನ್ನು ಸೇರಿತು. ಇರುವೆಯನ್ನು ನೋಡಿದ ಹುಡುಗನಿಗೆ ಆಶ್ಚರ್ಯವಾಯಿತು.
ನಮ್ಮೆಲ್ಲರ ಬದುಕೂ ಹೀಗೆ ಅಲ್ಲವೇ? ‘ಅಯ್ಯೋ, ಈ ಕೆಲಸ ನನ್ನಿಂದಾಗದು’ ಎಂದು ಕೈಚೆಲ್ಲಿ ಕುಳಿತರೆ ಸಣ್ಣ-ಸಣ್ಣ ಸಮಸ್ಯೆಗಳು ನಮ್ಮನ್ನು ವಿನಾಶಕ್ಕೆ ತಳ್ಳಿಬಿಡಬಲ್ಲವು. ನಮ್ಮಲ್ಲಿ ನಿರಂತರ ಹೋರಾಟ, ಆತ್ಮವಿಶ್ವಾಸ, ಜೀವನೋತ್ಸಾಹ, ಬದುಕಿನ ಬಗ್ಗೆ ಪ್ರೀತಿ, ಹಿರಿಯರು ತೋರಿದ ಜೀವನಾದರ್ಶದ ಪ್ರೋತ್ಸಾಹ, ಅನಾಲಸ್ಯ ಇವಿಷ್ಟಿದ್ದರೆ ಎಲ್ಲ ಸವಾಲುಗಳನ್ನು ಸಮರ್ಥವಾಗಿ ಎದುರಿಸಬಹುದು ಎಂಬ ಅರಿವು ಎಲ್ಲರಿಗೂ ಆಗಬೇಕಾಗಿದೆ. ನಾವು ಸಾಮಾನ್ಯ ಪ್ರಾಣಿಗಳಿಗಿಂತ ಶ್ರೇಷ್ಠವಾದ ಬದುಕನ್ನು ಕಟ್ಟಿಕೊಳ್ಳಲು ಸಮರ್ಥರಾದವರು. ಅಷ್ಟೇ ಅಲ್ಲ ಇತರರ ಬದುಕನ್ನು ಸರಿಯಾಗಿಸಲು ಸಾಮರ್ಥ್ಯವಿರುವವರು. ಆದರೇನು ಮಾಡುವುದು ಮನುಷ್ಯರಾದ ನಾವು ನಮ್ಮ ದೌರ್ಬಲ್ಯ, ತಪ್ಪುಗಳನ್ನು ಗುರುತಿಸಿಕೊಳ್ಳುವುದು ಬಹಳ ನಿಧಾನ. ಅಷ್ಟು ಹೊತ್ತಿಗಾಗಲೇ ಜೀವನದ ಅಮೂಲ್ಯವಾದ ಸಮಯ ಜಾರಿ ಹೋಗಿರುತ್ತದೆ. ಅವುಗಳು ನಮಗೆ ಅರಿವಾಗುವವರೆಗೆ ಅವುಗಳಿಗಾಗಿ ನಮ್ಮ ಅದೃಷ್ಟವನ್ನೋ, ಹಣೆಬರಹವನ್ನೋ ಜರಿಯುತ್ತೇವೆ. ನಮಗೆ ಭಗವಂತ ಅದನ್ನು ಕೊಡಲಿಲ್ಲ, ಇದನ್ನು ಕೊಡಲಿಲ್ಲ ಎಂದು ಕಣ್ಣೀರು ಸುರಿಸುತ್ತ ಕುಳಿತುಬಿಡುತ್ತೇವೆ. ನಮ್ಮ ಭವಿಷ್ಯದ ರೂವಾರಿಗಳು ನಾವೇ ಎಂದು ಅರ್ಥ ಮಾಡಿಕೊಂಡು ನಮ್ಮಲ್ಲಿಯೇ ಸುಪ್ತವಾಗಿರುವ ಶಕ್ತಿಯನ್ನು ಪ್ರಕಟಗೊಳಿಸಿದರೆ ಎಲ್ಲ ಸಮಸ್ಯೆಗಳಿಗೂ ಪರಿಹಾರ ತಾನೇ ತಾನಾಗಿ ದೊರಕುತ್ತದೆ. ಎಲ್ಲೆಲ್ಲಿಯೂ ಇರುವ, ಒಳಿತನ್ನೇ ನೋಡುವ ಆಶಾದಾಯಕ ಮನಸ್ಥಿತಿಯನ್ನು ಪ್ರಯತ್ನಶೀಲತೆಯನ್ನು ಬೆಳೆಸಿಕೊಂಡರೆ ಎಲ್ಲ ದೌರ್ಬಲ್ಯಗಳನ್ನು ಮೆಟ್ಟಿ ನಿಲ್ಲಬಹುದು. ನಮ್ಮ ಭವಿಷ್ಯದ ರೂವಾರಿಗಳು ನಾವೇ ಎಂಬುದನ್ನು ಅರಿತು ಹೆಜ್ಜೆ ಇಡೋಣ.
ಕೃಪೆ:ದಿವ್ಯಾ ಹೆಗಡೆ, ಕಬ್ಬಿನಗದ್ದೆ.
ಸಂಗ್ರಹ:ವೀರೇಶ್ ಅರಸಿಕೆರೆ.
Comments
Post a Comment