ದಿನಕ್ಕೊಂದು ಕಥೆ 976
*🌻ದಿನಕ್ಕೊಂದು ಕಥೆ🌻*
*ಹಣ ಏನೇನೆಲ್ಲಾ ಮಾಡಿಸುತ್ತದೆ.. ಅಲ್ಲವಾ..?*
ಒಂದೂರಲ್ಲಿ ಮಾಂಸದ ವ್ಯಾಪಾರಿಯಿದ್ದ..ದಿನವೂ ಕುರಿಯನ್ನೋ ಕೋಳಿಯನ್ನೋ ಕೊಯ್ದು.. ಮಾರಾಟ ಮಾಡಿ ಜೀವನ ಮಾಡುತ್ತಿದ್ದ.. ಆ ಮಾಂಸ ವ್ಯಾಪಾರಿಯ ಒಂದೇ ಒಂದು ವೀಕ್ನೆಸ್ ಎಂದರೆ ಕೋಪ.. ! ಊರವರ ಎಲ್ಲರೊಂದಿಗೂ ಕೋಪ ಮಾಡಿಕೊಳ್ಳುತ್ತಿದ್ದ.. ಕಟ್ಟಿಕೊಂಡ ಹೆಂಡತಿಯನ್ನು ಕಣ್ಣಳತೆಯಲ್ಲೇ ಇಟ್ಟಿದ್ದ..
ಇವನ ಈ ವರ್ತನೆಯಿಂದ ಜನ ಇವನ ಜೋಡಿ ಅಷ್ಟಕಷ್ಟೆ ಇದ್ದರು..
ಅದೇ ಊರಲ್ಲಿ ಇನ್ನೊಬ್ಬನಿದ್ದ.. ಕಾಳುಗಳ ವ್ಯಾಪಾರಿ.. ಭಲೇ ಮಾತುಗಾರ.. ತನ್ನ ಬಣ್ಣ ಬಣ್ಣದ ಮಾತುಗಳಿಂದ ಮುಂದಿರುವವರನ್ನು ಹೌದೆಂದೂ ತಲೆಯಾಡಿಸುವಂತೆ ಮಾಡುವ ಚಾತುರ್ಯ್ಯ ಉಳ್ಳವನು..
ಆವತ್ತು ಎಂದಿನಂತೆ ಭಾನುವಾರ.. ಮಾಂಸದ ವ್ಯಾಪಾರಿ ತುಸು ಗಡಿಬಿಡಿಯಲ್ಲಿದ್ದ.. ಆ ದಿನ ವ್ಯಾಪಾರ ಜೋರಿತ್ತು.. ಮಧ್ಯಾಹ್ನವಾದ್ದರಿಂದ ಆಳುಗಳಿಬ್ಬರೂ ಊಟಕ್ಕೆಂದು ಹೋಗಿದ್ದರು..
ಇತ್ತ ಮಾಂಸದ ವ್ಯಾಪಾರಿ ಅಂಗಡಿಯನ್ನು ಸ್ವಚ್ಛಗೊಳಿಸಿ.. ಒಂದು ವಾರದಿಂದ ಬಾಕಿ ಇರುವ ಹಣದ ಬಟವಾಡೆ ಮಾಡುವ ಸಲುವಾಗಿ ಹಣದ ಥೈಲಿಯನ್ನು ( ಥೈಲಿ -ಚೀಲ) ಕೈಯಲ್ಲಿಡಿದುಕೊಂಡಿದ್ದ.. ವಾರದಿಂದ ಕುರಿ ಕೋಳಿ ಸಾಲದಿಂದ ತಂದವರಿಗೆ.. ಆಳುಗಳಿಗೆ ದುಡ್ಡನ್ನು ಕೊಟ್ಟರೆ ತಲೆ ಬಿಸಿ ಮುಗಿಯುತೆಂದು.. ಹುಫ್ ಎಂದು ಉಸಿರೆಳೆದುಕೊಂಡ..
ಅದೇ ಹೊತ್ತಿಗೆ ಅವನ ಹತ್ತಿರವೇ ಕಾಳುಗಳ ವ್ಯಾಪಾರಿ ಬಂದ.. ಮಾಂಸದ ವ್ಯಾಪಾರಿ ನಗುತ್ತಾ ಬಾ ಎಂದು ಕರೆದ.. ಇವನು ನಗುತ್ತಾ ಅವನ ಹತ್ತಿರವೇ ಹೋದ.. ಅದು ಇದು ಮಾತಾಡುತ್ತಾ ಮಾಂಸದ ವ್ಯಾಪಾರಿ ಏನೋ ನೆನಪು ಮಾಡಿಕೊಂಡು ಅಂಗಡಿಯ ಒಳಗೋದ..
ಅವನು ಒಳ ಹೋದದ್ದೇ ಸನ್ನೆಯಷ್ಟೇ.. ಮಾಂಸ ಮಾರುವವನ ಹಣದ ಥೈಲಿ ಕಾಳು ಮಾರುವವನ ಕೈಯಲ್ಲಿ..!
ಇತ್ತ ಅಂಗಡಿಯಿಂದ ಹೊರ ಬಂದ ಮಾಂಸ ಮಾರುವವನಿಗೆ ಶಾಕ್! ಹಣದ ಚೀಲವೆಲ್ಲಿ ಇಲ್ಲೇ ಇಟ್ಟಿದ್ದೆನ್ನೆಲ್ಲಾ... ಕೈ ಕಾಲು ನಡುಗತೊಡಗಿದವು..ಎದೆ ಜೋರಾಗಿ ಹೊಡೆದುಕೊಳ್ಳತೊಡಗಿತು... ಹಣ ವೆಲ್ಲಿ??!
ಸೂಕ್ಷ್ಮವಾಗಿ ನೋಡಿದ ಕಾಳುಮಾರುವವನ ಕೈಯಲ್ಲಿ.. ಮಾಂಸ ಮಾರುವವನಿಗೆ ಮೊದಲೇ ಕೋಪವಿತ್ತು.. ಜೋರಾಗಿ ಹಣ ನೀಡೆಂದ.. ಇವನು ಈ ಹಣ ನನ್ನದು ಎಂದ..
ಮಾತಿಗೆ ಮಾತು ಬೆಳೆಯಿತು.. ಜೋರಾಗಿ ಒದರಾಡತೊಡಗಿದರು.. ಅತ್ತ ಇತ್ತ ಸುತ್ತ ಮುತ್ತ ಜನರು ಬಂದರು.. ಏನಾಯಿತೆಂದರು.. ನಡೆದ ವರ್ತಮಾನ ಇಬ್ಬರೂ ಹೇಳಿದರು..
ಜನ ಗೊಂದಲಗೊಂಡರು..ಇಬ್ಬರೂ ವ್ಯಾಪಾರಿಗಳು.. ಇಬ್ಬರ ಹತ್ತಿರವೂ ಹಣವಿರಬಹುದು.. ಎಂದು ತಲೆಗೊಂದು ಮಾತಾಡತೊಡಗಿದರು..
ಈ ವಿಷಯ ಊರ ಪಂಚಾಯತಿಯ ಹತ್ತಿರ ಹೋಯಿತು.. ಆ ಊರಲ್ಲಿ ಎಂಬತ್ತರ ಹರೆಯದ ತಾತನಿದ್ದ ಬಹಳ ಬುದ್ಧಿವಂತ.. ಆದರೇನೂ ಮಾಡುವದು ಆ ತಾತನಿಗೂ ಈ ಮಾಂಸ ಮಾರುವವನಿಗೂ ಸ್ವಲ್ಪ ದಿನಗಳ ಹಿಂದೆ ಮನಸ್ತಾಪವೊಂದಾಗಿತ್ತು..
ಹೀಗಾಗಿ ಊರ ಜನ ತೀರ್ಪಿಗಾಗಿ ಕಾದು ನಿಂತರು!
ಹಣ ಯಾರದು..!?
ಆ ತಾತ ಇಬ್ಬರಿಗೂ ಕೇಳಿದ.. ಇಬ್ಬರೂ ಹಣ ತಮ್ಮದೆಂದರು.. ತಾತ ಮೆಲ್ಲಗೆ ತಲೆಯಾಡಿಸಿ ಆ ಹಣದ ಚೀಲ ಕೈಯಲ್ಲಿ ಕೊಡಿ ಎಂದ..
ಕಾಳು ಮಾರುವವ ನಗುತ್ತಾ ನೀಡಿದ.. .
ಮಾಂಸ ಮಾರುವವನಿಗೆ ಎದೆ ಡವ ಡವ.. ದುಡಿದ ಹಣ..ಅಷ್ಟಕ್ಕೂ.. ಆ ಕಾಳು ವ್ಯಾಪಾರಿ ಆ ತಾತಾ ಒಂದೇ ಜಾತಿಯವರು.. ಹೆಚ್ಚಾಗಿ ಆ ತಾತ ನೊಂದಿಗೆ ಮನಸ್ತಾಪ ಬೇರೆ.. ಯಾಕೋ ಉಗುಳು ನುಂಗಿಕೊಂಡ.. ದೇವರನ್ನು ಸ್ಮರಿಸಿದ. ಮನೆಯಲ್ಲಿದ್ದ ಗರ್ಭಿಣಿ ಹೆಂಡತಿ ನೆನಪಾದಳು.. ಕಣ್ಣಂಚಲ್ಲಿ ಸಣ್ಣದಾಗಿ ಜಿನುಗಿದ ನೀರನ್ನು ಒರೆಸಿಕೊಂಡು ಸಪ್ಪಗೆ ನಿಂತ..
ತಾತ ಆ ಹಣದ ಥೈಲಿಯನ್ನು ಕೈಯಲ್ಲಿಡಿದುಕೊಂಡ ಸೂಕ್ಷ್ಮವಾಗಿ ನೋಡಿ ಮನದಲ್ಲೇನೋ ಲೆಕ್ಕ ಹಾಕಿಕೊಂಡ..!
ಹ್ಮ... ಈ ಹಣದ ಚೀಲದ ನಿಜವಾದ ಮಾಲೀಕ ಮಾಂಸ ಮಾರುವವ!
ಊರಿನ ಜನ ಶಾಕಾದರು..! ಸ್ವತಃ ಮಾಂಸ ಮಾರುವವನೇ ಆಶ್ಚರ್ಯಗೊಂಡ..! ಈ ಮಾತು ಕೇಳುತ್ತಲೇ ಕಾಳು ಮಾರುವವ ಇದು ಮೋಸ ಎಂದ..
ತಾತ ಮೆಲ್ಲಗೆ ನಕ್ಕ.. ಮಗೂ ಈ ಹಣ ನಿನ್ನದಲ್ಲಪ್ಪ..ಅವನದು ಬಾ ಇಲ್ಲಿ ನೋಡು ಎಂದು ..ಹಣದ ಮೇಲೆಲ್ಲಾ ಸಣ್ಣದಾಗಿ ಕಾಣುತ್ತಿದ್ದ ರಕ್ತದ ಕಲೆಗಳನ್ನು ತೋರಿಸಿದ..
ಕಾಳಿನ ವ್ಯಾಪಾರಿ ತಲೆ ತಗ್ಗಿಸಿದ!
ಊರಿನ ಜನ ಜೋರಾಗಿ ಖುಷಿಯಿಂದ ಚಪ್ಪಾಳೆ ತಟ್ಟಿದರು.. ಮಾಂಸ ಮಾರುವವ ಹಗುರಾದ..!
ಊರಿನ ಜನ ತಾತನ ಬುದ್ಧಿವಂತಿಕೆಗೆ ಬೆರಗಾದರು.. ಕಾಳಿನ ವ್ಯಾಪಾರಿಯ ಸಣ್ಣತನಕ್ಕೆ ಛಿಮಾರಿ ಹಾಕಿದರು.. ಮಾಂಸ ಮಾರುವವ ಕೋಪಿಷ್ಠನಾದರೇನಾಯಿತು.. ಕಳ್ಳನಲ್ಲ ಅಲ್ಲವಾ ಎಂದು ಶಭಾಷ್ ಎಂದರು..
ಹಣದ ಚೀಲ ಮಾಂಸ ಮಾರುವವನಿಗೆ ರವಾನೆಯಾಯಿತು.. ಆ ತಾತನಿಗೆ ಕಾಲಿಗೆ ನಮಸ್ಕರಿಸಿ ತಪ್ಪಾಯಿತೆಂದು ಮಾಂಸ ಮಾರುವವ ತಲೆಬಾಗಿದ..
ನಾವೂ ಹಾಗೇ ಅಲ್ಲವಾ ... ಹಣದ ಹಿಂದೆ ಹೋಗುತ್ತೇವೆ..
ಸ್ನೇಹ
ಗೆಳೆತನ
ಪ್ರೀತಿ
ವಾತ್ಸಲ್ಯ
ಮಮಕಾರ
ಮರೆತು ಹಣದ ಹಿಂದೆ ಹೋಗಿ ಗುಣ ಕಳೆದುಕೊಳ್ಳುತ್ತೇವೆ..!
ಕೃಪೆ: ಮೈನುದ್ದೀನ್ ಜಮಾದಾರ್.. ಇತಿಹಾಸ ಶಿಕ್ಷಕರು.
ಸಂಗ್ರಹ :ವೀರೇಶ್ ಅರಸಿಕೆರೆ.
Comments
Post a Comment