ದಿನಕ್ಕೊಂದು ಕಥೆ 978
ದಿನಕ್ಕೊಂದು ಕಥೆ
*"ನಮ್ಮನ್ನು ವಿನಾಕಾರಣ ದ್ವೇಷಿಸುವವರನ್ನು, ಹಲ್ಲೆ ಮಾಡುವವರನ್ನು ಉದಾಸೀನ ಮಾಡಿದಷ್ಟು ಅವರ ಶಕ್ತಿ ಕಡಿಮೆಯಾಗುತ್ತದೆ. ಮಹತ್ವ ಕೊಟ್ಟಷ್ಟು ದೊಡ್ಡವರಾಗುತ್ತಾರೆ"*
_ಕೃಷ್ಣ, ಬಲರಾಮ ಮತ್ತು ಸಾತ್ಯಕಿ ಒಮ್ಮೆ ಕಾಡಿನಲ್ಲಿ ನಡೆದು ಹೋಗುತ್ತಿದ್ದರು. ಕತ್ತಲು ಆವರಿಸಿದ್ದರಿಂದ ಒಂದು ಮರದ ಕೆಳಗೆ ವಿರಮಿಸಿದರು. ಅವರಲ್ಲಿಯೇ ಒಂದು ವ್ಯವಸ್ಥೆ ರೂಪಿಸಿಕೊಂಡರು. ಒಂದೊಂದು ಜಾವ ಒಬ್ಬೊಬ್ಬರು ಎದ್ದು ಕಾವಲು ಕಾಯುವುದು ಎಂದು._
_ಮೊದಲು ಬಲರಾಮನ ಸರದಿ. ಇನ್ನಿಬ್ಬರು ಮಲಗಿದರು. ಸ್ವಲ್ಪ ಹೊತ್ತಾದ ಮೇಲೆ ಓರ್ವ ಬ್ರಹ್ಮರಾಕ್ಷಸ ಮರದ ಮೇಲಿಂದ ಜಿಗಿದ. ಬಲರಾಮನಿಗೋ ತನ್ನ ಭುಜಬಲದ ಬಗ್ಗೆ ಅತೀವ ವಿಶ್ವಾಸ. ಸರಿ. ಕಾಳಗ ಪ್ರಾರಂಭವಾಯಿತು. ಬಲರಾಮ ಬ್ರಹ್ಮರಾಕ್ಷಸನಿಗೆ ಹೊಡೆಯಲು ಪ್ರಾರಂಭಿಸಿದ. ಊಹೂ. ಬ್ರಹ್ಮರಾಕ್ಷಸನಿಗೆ ಏನೂ ಆಗಲಿಲ್ಲ. ಬದಲಿಗೆ ಬಲರಾಮನ ಒಂದೊಂದು ಹೊಡೆತಕ್ಕೆ ಆ ಬ್ರಹ್ಮರಾಕ್ಷಸ ಬೆಳೆಯುತ್ತಾ ಹೋದ. ಕೊನೆಗೆ ಬಲರಾಮ ಹಣ್ಣುಗಾಯಿ-ನೀರುಗಾಯಿಯಾಗಿ ಸುಸ್ತಾಗಿ ಕೆಳಗೆ ಬಿದ್ದ._
_ಮುಂದಿನದು ಸಾತ್ಯಕಿಯ ಸರದಿ. ಇವನಿಗೂ ತನ್ನ ಪರಾಕ್ರಮದ ಬಗ್ಗೆ ಅತೀವ ವಿಶ್ವಾಸ. ಸರಿ. ಬಲರಾಮ ಮಾಡಿದ್ದನ್ನೇ ಈ ಸಾತ್ಯಕಿಯೂ ಮಾಡಿದ. ಮತ್ತೆ ಬ್ರಹ್ಮರಾಕ್ಷಸ ಬೆಳೆಯುತ್ತಾ ಹೋದ. ಬಲರಾಮನಿಗೆ ಆದದ್ದೇ ಸಾತ್ಯಕಿಗೂ ಆಗಿ ಅವನೂ ಸುಸ್ತಾಗಿ ಬಿದ್ದ._
_ಮುಂದಿನದು ಕೃಷ್ಣನ ಸರದಿ..._
_ಕೃಷ್ಣ ಆ ಬ್ರಹ್ಮರಾಕ್ಷಸನನ್ನು ಎದುರಿಸಿದ ರೀತಿಯೇ ವಿಭಿನ್ನ. ಆ ಬ್ರಹ್ಮರಾಕ್ಷಸನನ್ನು ಸಂಪೂರ್ಣ ನಿರ್ಲಕ್ಷಿಸಿಬಿಟ್ಟ ಕೃಷ್ಣ. ಉದಾಸೀನಮಾಡಿದ. ಆಗ ಅಗಾಧವಾಗಿ ಬೆಳೆದಿದ್ದ ಆ ಬ್ರಹ್ಮರಾಕ್ಷಸ ನಿಧಾನವಾಗಿ ಇಳಿಯತೊಡಗಿದ. ಕ್ರಮೇಣ ತೀರಾ ಚಿಕ್ಕವನಾಗಿಬಿಟ್ಟ. ಆ ಚಿಕ್ಕ ಬ್ರಹ್ಮರಾಕ್ಷಸನನ್ನು ತನ್ನ ಉತ್ತರೀಯದಲ್ಲಿ / ಶಲ್ಯದ ತುದಿಯಲ್ಲಿ ಕಟ್ಟಿ ಆರಾಮಾಗಿ, ನಸುನಗುತ್ತಾ ವಿರಮಿಸಿದ, ಕೃಷ್ಣ._
_ಸಾತ್ಯಕಿ, ಬಲರಾಮ.... ಮೈ ನೋವಿನಿಂದ ಕೂಡಿ ಎದ್ದು ನೋಡುತ್ತಾರೆ. ಕೃಷ್ಣ ಏನೂ ಆಗದಂತೆ ನಗುತ್ತಾ ಕುಳಿತಿರುವುದನ್ನು ಕಂಡು ಅಚ್ಚರಿಗೊಳ್ಳುತ್ತಾರೆ. ಇಬ್ಬರೂ ಕಾರಣ ಕೇಳುತ್ತಾರೆ._
*_ಕೃಷ್ಣ ಹೇಳುತ್ತಾನೆ: "ನಮ್ಮನ್ನು ವಿನಾಕಾರಣ ದ್ವೇಷಿಸುವವರನ್ನು, ಹಲ್ಲೆ ಮಾಡುವವರನ್ನು ಉದಾಸೀನ ಮಾಡಿದಷ್ಟು ಅವರ ಶಕ್ತಿ ಕಡಿಮೆಯಾಗುತ್ತದೆ. ಮಹತ್ವ ಕೊಟ್ಟಷ್ಟು ದೊಡ್ಡವರಾಗುತ್ತಾರೆ" ಎಂದು._*
Comments
Post a Comment