ದಿನಕ್ಕೊಂದು ಕಥೆ 983

ದಿನಕ್ಕೊಂದು ಕಥೆ
*ಸುಂದರ ಮನಸುಗಳು*
🌿🌿🌿🌿🌿🌿🌿🌿

ಒಂದು ಕ್ಲಾಸ್ ರೂಮ್ ನಲ್ಲಿ ಸುಮಾರು ವಿದ್ಯಾರ್ಥಿಗಳಿದ್ದರು. ಅವರಲ್ಲಿ ಒಬ್ಬ ಎದ್ದು ನಿಂತು ಪ್ರಾಧ್ಯಾಪಕರಿಗೆ ಹೇಳಿದ "ಸರ್ ನನ್ನ ತಂದೆ ನನ್ನ ಜನ್ಮ ದಿನಕ್ಕೆ ಒಂದು ದುಬಾರಿ ಗಡಿಯಾರವನ್ನು ಉಡುಗೊರೆಯಾಗಿ ಕೊಟ್ಟಿದ್ದರು. ಈ  5 ನಿಮಿಷದ ಬ್ರೇಕ್ ನಲ್ಲಿ ಅದನ್ನು ಇಲ್ಲಿಯೇ ಬಿಟ್ಟು ಹೊರಗೆ ಹೋಗಿದ್ದೆ, ಬಂದು ನೋಡಿದರೆ ಕಾಣುತ್ತಿಲ್ಲ." ಆಗ ಪ್ರಾಧ್ಯಾಪಕರು ವಿಚಾರ ಮಾಡಲಾಗಿ ಈ ಹುಡುಗ ಹೊರಗೆ ಹೋಗಿ ಒಳಗೆ ಬರುವವರೆಗೆ ಕ್ಲಾಸ್ ರೂಮ್ ಒಳಗಿರುವ ಯಾವನೋ ಒಬ್ಬ ಕದ್ದಿರುತ್ತಾನೆ ಎಂದು ಊಹಿಸಿದರು.

ಎಲ್ಲಾ ವಿದ್ಯಾರ್ಥಿಗಳಿಗೆ ಎದ್ದು ನಿಲ್ಲಿಸಿ ತಮ್ಮ ತಮ್ಮ ಕರ್ಚೀಫಿನಿಂದ ತಮ್ಮ ಕಣ್ಣುಗಳನ್ನು ಕಟ್ಟಿಕೊಳ್ಳಲು ತಿಳಿಸಿದರು. ಒಬ್ಬೊಬ್ಬರನ್ನು  ಮೈಮುಟ್ಟಿ ಹುಡುಕುತ್ತಾ ಬಂದಾಗ ಒಬ್ಬನ ಜೇಬಿನಲ್ಲಿ ಅದು ಸಿಕ್ಕಿತು. ಅದನ್ನು ಕಳೆದುಕೊಂಡ ವಿದ್ಯಾರ್ಥಿಗೆ ಒಪ್ಪಿಸಿ, ಎಲ್ಲರಿಗೂ ಕಣ್ಣಿನ ಬಟ್ಟೆ  ತೆಗೆಯಲು ತಿಳಿಸಿದರು. ಎಂದಿನಂತೆ ಪಾಠ ಮುಂದುವರೆಯಿತು.

ಆದರೆ ಗಡಿಯಾರ ಕದ್ದ ವಿದ್ಯಾರ್ಥಿಯ ಮನದಲ್ಲಿ ಭಯ, ಆತಂಕ ಶುರುವಾಗಿತ್ತು. ಇಂದೋ ನಾಳೆಯೋ ನಾನು ಕಳ್ಳ ಎಂದು ಎಲ್ಲರ ಮುಂದೆ ಬಹಿರಂಗವಾಗಿ ವಿಷಯ ತಿಳಿಸುತ್ತಾರೆ. ಆಗ ನನ್ನ ಗತಿ ಏನಾಗಬೇಕು ಎಂದು ಆತಂಕದಿಂದಲೇ ಕ್ಲಾಸಿಗೆ ಬರುತ್ತಿದ್ದ. ಹೀಗೆ ದಿನಗಳು ಕಳೆದು, ತಿಂಗಳುಗಳು ಕಳೆದು, ವರ್ಷವೇ ಕಳೆದು ಹೋಯಿತು. ಆ ವಿಷಯ ಯಾರಿಗೂ ಗೊತ್ತಾಗಲಿಲ್ಲ. ಎಲ್ಲಾ ವಿದ್ಯಾರ್ಥಿಗಳು ಪರೀಕ್ಷೆ ಮುಗಿಸಿ ಕಾಲೇಜಿನಿಂದ ನಿರ್ಗಮಿಸಿ ಹೋದರು. 

ಹಲವು ವರ್ಷಗಳ ನಂತರ ಗಡಿಯಾರ ಕದ್ದ ವಿದ್ಯಾರ್ಥಿ ದೊಡ್ಡ ಬಿಸಿನೆಸ್ ಮ್ಯಾನ್ ಆಗಿ ಒಳ್ಳೆಯ ಹೆಸರು ಮಾಡಿದ್ದ. ಮುಂದೆ ಒಂದು ದಿನ ಆ ಕಾಲೇಜಿನ ವಿದ್ಯಾರ್ಥಿಗಳ ರಿಯೂನಿಯನ್ ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾಗಿ ಅದೇ ಹುಡುಗ ಕಾಲೇಜಿಗೆ ಬಂದ. ಆತ ನೇರವಾಗಿ ಅದೇ ಪ್ರೊಫೆಸರ್ ಹತ್ತಿರ ಬಂದು ಕಾಲಿಗೆ ನಮಸ್ಕರಿಸಿ ಚಿಕ್ಕ ದನಿಯಲ್ಲಿ ಹೇಳಿದ ಸರ್ ಇಂದು ನಾನು ಜೀವಂತವಾಗಿರಲು ನೀವೇ ಕಾರಣ. ನನ್ನ ಇವತ್ತಿನ ಈ ಸಾಧನೆಗೆ ನೀವು ಮಾತ್ರ ಕಾರಣ. ಆಗ ಆ ಪ್ರೊಫೆಸರ್ ಆಶ್ಚರ್ಯಚಕಿತರಾಗಿ ನಾನು ಹೇಗೆ ಕಾರಣ ಮಗು ಎಂದರು. 

ಸರ್ ಅಂದು ನಾನು ಆ ಗಡಿಯಾರವನ್ನು ಕದ್ದ ವಿಷಯ ನೀವು ಯಾರಿಗೂ ಹೇಳಲಿಲ್ಲ ಬಹಿರಂಗಪಡಿಸಲಿಲ್ಲ. ನನ್ನ ಹೆಸರು ಬಹಿರಂಗವಾದ ದಿನ ನಾನು ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ನಿರ್ಧಾರ ಮಾಡಿದ್ದೆ. ಅದೆಷ್ಟು ದಿನ ಕಳೆದರೂ ನೀವು ಈ ವಿಷಯವನ್ನು ಬಹಿರಂಗಪಡಿಸಲಿಲ್ಲ. ಆದ್ದರಿಂದ ನಾನು ಅಂದೇ ನಿರ್ಧರಿಸಿದೆ. ಇನ್ನು ಜೀವನದಲ್ಲಿ ನಿಯತ್ತಾಗಿ ಬದುಕಬೇಕೆಂದು. ಈ ನನ್ನ ಬದಲಾವಣೆಗೆ ಅವಕಾಶ ಕಲ್ಪಿಸಿಕೊಟ್ಟಿದ್ದು ನೀವೇ. ಆದ್ದರಿಂದ ನೀವೇ ನನ್ನ ದೇವರು ಎಂದ.

ಪ್ರೊಫೆಸರ್ ಆಶ್ಚರ್ಯಚಕಿತರಾಗಿ ಹೌದೇ! ಆ ವಿದ್ಯಾರ್ಥಿ ನೀನೆಯೋ?  ನನಗೂ ಗೊತ್ತಿರಲಿಲ್ಲ ಎಂದರು. ಆ ದಿನ ನಾನು ಎಲ್ಲಾ ವಿದ್ಯಾರ್ಥಿಗಳ ಕಣ್ಣನ್ನು ಕಟ್ಟಿಸಿ, ನಾನು ಕೂಡ ನನ್ನ ಕಣ್ಣುಗಳನ್ನು ಕಟ್ಟಿಕೊಂಡಿದ್ದೆ. ಏಕೆಂದರೆ ಕದ್ದಿರುವ ವಿದ್ಯಾರ್ಥಿ ಯಾರೇ ಆಗಿರಲಿ, ಅವನು ನನ್ನ ವಿದ್ಯಾರ್ಥಿಯೇ. ನನ್ನ ದೃಷ್ಟಿಕೋನದಲ್ಲಿ ನನ್ನ ಯಾವ ವಿದ್ಯಾರ್ಥಿಯೂ ಕೆಳಮಟ್ಟದಲ್ಲಿ ಗುರುತಿಸಿಕೊಳ್ಳಬಾರದು. ಹೀಗಾಗಿ ನನಗೂ ಇವತ್ತೇ ತಿಳಿಯಿತು ಆ ವಿದ್ಯಾರ್ಥಿ ನೀನೇ ಎಂದು. 

ಎದುರಿಗೆ ನಿಂತ ವಿದ್ಯಾರ್ಥಿಯ ಕಣ್ಣಾಲೆಗಳು ತುಂಬಿ ಹರಿಯತೊಡಗಿತ್ತು. ಮತ್ತೊಮ್ಮೆ ಗುರುಗಳ ಪಾದಕ್ಕೆ ಹಣೆ ಮುಟ್ಟಿ ನಮಸ್ಕರಿಸಿ ಈ ನಿಮ್ಮ ಕ್ಷಮಾ ಗುಣದಿಂದ ನಾನು ಮತ್ತೆ ಮನುಷ್ಯನಾಗಿರುವೆ ಎಂದ.

_*ಸ್ನೇಹಿತ ಒಳ್ಳೆಯವನಾಗಲಿ ಕೆಟ್ಟವನಾಗಲಿ ಸ್ನೇಹಿತ ಸ್ನೇಹಿತನೇ.. ಆಗೇಯೇ ಗುರುವಿಗೆ ವಿದ್ಯಾರ್ಥಿ ವಿದ್ಯಾರ್ಥಿನೇ ಆಗಿರುತ್ತಾನೆ*_
                    *********

ಇಂದಿನ ಯುಗದಲ್ಲಿ ಪ್ರತಿ ವ್ಯಕ್ತಿಯೂ ಇನ್ನೊಬ್ಬರ ತಪ್ಪುಗಳನ್ನು ಹುಡುಕಿ ಎತ್ತಿತೋರಿಸುವ ಕಾರ್ಯದಲ್ಲಿಯೇ ಮಗ್ನನಾಗಿರುತ್ತಾನೆ.

1) ಪರಿವಾರದಲ್ಲಿ ಅಣ್ಣ-ತಮ್ಮಂದಿರ, ಅಪ್ಪ-ಅಮ್ಮಂದಿರ, ಮಕ್ಕಳ, ಹೆಂಡತಿಯ ತಪ್ಪುಗಳು.
2) ಕೆಲಸದಲ್ಲಿ ಹಿರಿಯ ಅಧಿಕಾರಿಯ, ಸಹೋದ್ಯೋಗಿಯ ತಪ್ಪುಗಳು.
3) ಸಮಾಜದ, ಸರಕಾರಗಳ ತಪ್ಪುಗಳು.
4) ಮುಖ ಪುಸ್ತಕದಲ್ಲಂತೂ ಹಗಲು ರಾತ್ರಿ ಕೆಲವರ ಕೆಲಸವೇ ಇದು.

-- ಯಾರೋ ಒಬ್ಬ ತಿಳಿದೋ ತಿಳಿಯದೆಯೋ ತಪ್ಪು ಮಾಡಿದ್ದು ಗೊತ್ತಾದಲ್ಲಿ ಅವರನ್ನು ಕ್ಷಮಿಸಿಬಿಡಿ. ಅವನಿಗೆ ಅಥವಾ ಅವಳಿಗೆ ತನ್ನ ಆತ್ಮ ಗೌರವ (self-respect) ಉಳಿಸಿಕೊಳ್ಳಲು ಒಂದು ಅವಕಾಶ ಮಾಡಿಕೊಡಿ.

-- ತಪ್ಪಿತಸ್ಥ ಎಂದು ತಿಳಿದ ಮೇಲೂ ತನ್ನನ್ನು ತಾನು ಸುಧಾರಿಸಿಕೊಳ್ಳಲು ಒಂದು ಅವಕಾಶ ಕೊಟ್ಟು ಸುಮ್ಮನಾಗಿ ಬಿಡಿ. ಅವನು ಅಥವಾ ಅವಳು ಮುಖ ಮೇಲೆತ್ತಿ ಬದುಕಲು ಒಂದು ಅವಕಾಶ ಕಲ್ಪಿಸಿಕೊಟ್ಟಂತಾಗುತ್ತದೆ.

ಇಂದಿನ ಯುಗದ ತಪ್ಪು ಹುಡುಕುವವರ ಮಧ್ಯೆ "ಕ್ಷಮಿಸುವ ಸುಂದರ ಮನಸುಗಳು" ನಾವಾಗೋಣ. "ಕ್ಷಮಿಸುವುದು ಮತ್ತು ಕ್ಷಮೆ ಕೇಳುವುದು ಶಕ್ತಿಶಾಲಿಗಳ ಸಾಮರ್ಥ್ಯವೇ ಹೊರತು ಹೇಡಿಗಳದ್ದಲ್ಲ."

*ಶಿವಾರ್ಪಣಮಸ್ತು*
ಸದ್ವಿಚಾರ ತರಂಗಿಣಿ

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1055

ದಿನಕ್ಕೊಂದು ಕಥೆ 1059