ದಿನಕ್ಕೊಂದು ಕಥೆ 989
ದಿನಕ್ಕೊಂದು ಕಥೆ
ಆಧುನಿಕ ಭಾರತದ ಶಿಲ್ಪಿ ಮೋಕ್ಷಗುಂಡಂ ವಿಶ್ವೇಶ್ವರಯ್ಯ.
ಭಾರತರತ್ನ ಪ್ರಶಸ್ತಿಯನ್ನು ಹೆಮ್ಮೆಯಿಂದ ಪಡೆದ ಕನ್ನಡಿಗ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರ ಸಾಧನೆಗಳನ್ನು ಕೆಲವೇ ಶಬ್ದಗಳಲ್ಲಿ ಕಟ್ಟಿ ಕೊಡುವುದು ತುಂಬಾ ಕಷ್ಟ. ಮೈಸೂರು ಸಂಸ್ಥಾನದ ದಿವಾನರಾಗಿ ಹಾಗೂ ಮುಖ್ಯ ಇಂಜಿನಿಯರ್ ಆಗಿ ಅವರು ಹುಟ್ಟು ಹಾಕಿದ ಸಂಸ್ಥೆಗಳು ಅಸಂಖ್ಯ! ಅವರ ಬದುಕೇ ಒಂದು ಅದ್ಭುತ ಯಶೋಗಾಥೆ.
ಅವರು ಮೊದಲು ಓದಿದ್ದು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಿಎ ಪದವಿಯನ್ನು. ಅದರ ನಂತರ ಪೂನಾ ಇಂಜಿನಿಯರಿಂಗ್ ಕಾಲೇಜಿನಿಂದ BE ( civil) ಪದವಿ. ಮೊದಲು ಸೇವೆ ಸಲ್ಲಿಸಿದ್ದು ಮಹಾರಾಷ್ಟ್ರ ಸರಕಾರದ PWD ಇಲಾಖೆಯಲ್ಲಿ. ಈ ಅವಧಿಯಲ್ಲಿ ಮುಂಬೈ ಮಹಾನಗರದ ನೀರು ಸರಬರಾಜು, ಒಳಚರಂಡಿ, ನೀರಾವರಿ ಯೋಜನೆಗಳನ್ನು ಜಾರಿಗೆ ತಂದರು. ಮುಂದೆ ಹೈದರಾಬಾದ ಸರಕಾರವು ಅವರ ಸೇವೆಯನ್ನು ಪಡೆಯುವಲ್ಲಿ ಯಶಸ್ವಿ ಆಯಿತು. ಅಲ್ಲಿ ಪ್ರವಾಹದಿಂದ ನಗರದ ಕೆರೆಗಳು ತುಂಬಿ ಹರಿದು ಇಡೀ ನಗರವೇ ಕೊಚ್ಚಿಕೊಂಡು ಹೋಗುವ ಸಮಸ್ಯೆ ಇತ್ತು. ಅಲ್ಲಿನ ಕೆರೆಗಳ ಸಂರಕ್ಷಣೆ, ಒಳಚರಂಡಿ ಯೋಜನೆಯ ಯಶಸ್ವೀ ನಿರೂಪಣೆಯಿಂದ ಮತ್ತೆ ಹೈದರಾಬಾದ ನಗರದಲ್ಲಿ ನೆರೆ ಬರಲಿಲ್ಲ!
ಅವರ ಕೀರ್ತಿ ಎಲ್ಲೆಡೆ ಹರಡಿದಂತೆ ಮೈಸೂರಿನ ಮಹಾರಾಜರು ಅವರನ್ನು ತುಂಬು ಗೌರವದಿಂದ ಮೈಸೂರು ಸಂಸ್ಥಾನದ ಸೇವೆಗೆ
1909ರಲ್ಲೀ ಆಮಂತ್ರಿಸಿದರು. ಸರ್ ಎಂವಿ ಅವರು ಸಂತೋಷದಿಂದ ಒಪ್ಪಿಕೊಂಡು ಮೈಸೂರಿಗೆ ಬಂದು ಅಧಿಕಾರ ಸ್ವೀಕರಿಸಿದರು. 1912ರಲ್ಲೀ ಮಹಾರಾಜರು ಅವರನ್ನು ಒತ್ತಾಯದಿಂದ ಮೈಸೂರು ಸಂಸ್ಥಾನದ ದಿವಾನರಾಗಿ ನೇಮಿಸಿದರು. ಅಲ್ಲಿಂದ ಮುಂದೆ ಆರು ವರ್ಷ ಅಭಿವೃದ್ಧಿ ಪರ್ವ! ಮೈಸೂರಿನ ಇತಿಹಾಸದಲ್ಲಿ ಒಂದು ಸುವರ್ಣ ಯುಗ!
ಸರ್ ಎಂವಿಯವರು ಸ್ಥಾಪನೆ ಮಾಡಿದ ಯೋಜನೆ, ಸಂಸ್ಥೆಗಳು ನೂರಾರು. ಅವರು ಕಟ್ಟಿದ ವಾಣಿಜ್ಯ ಬ್ಯಾಂಕುಗಳು, ಕೈಗಾರಿಕಾ ಸಂಸ್ಥೆಗಳು, ಶೈಕ್ಷಣಿಕ ಸಂಸ್ಥೆಗಳು ಅಸಂಖ್ಯ! ಅವುಗಳಲ್ಲಿ ಕೆಲವನ್ನು ಮಾತ್ರ ಇಲ್ಲಿ ಪಟ್ಟಿ ಮಾಡಲು ನನಗೆ ಸಾಧ್ಯವಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಸ್ಥಾಪನೆ, ಬೆಂಗಳೂರಿನಲ್ಲಿ ಸರಕಾರಿ ಇಂಜಿನಿಯರಿಂಗ್ ಕಾಲೇಜು ಸ್ಥಾಪನೆ, ಮೈಸೂರು ಸ್ಯಾಂಡಲ್ ಸೋಪ್ ಕಾರ್ಖಾನೆ, ಮೈಸೂರು ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ, ಭದ್ರಾವತಿ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ, ಮೈಸೂರು ಯುನಿವರ್ಸಿಟಿ, ಜಯಚಾಮರಾಜೇಂದ್ರ ಪಾಲಿಟೆಕ್ನಿಕ್, ಬೆಂಗಳೂರು ಹೆಬ್ಬಾಳದ ಕೃಷಿ ವಿವಿ, ಮೈಸೂರು ಚೇಂಬರ್ ಆಫ್ ಕಾಮರ್ಸ್, ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಕಟ್ಟಡ, ಬೆಂಗಳೂರಿನ ಜಯನಗರ ಲೇಔಟ್, ಕೃಷ್ಣರಾಜ ಸಾಗರ ಅಣೆಕಟ್ಟು, ಮಹಾರಾಣಿ ಕಾಲೇಜಿನ ಉನ್ನತೀಕರಣ, ಮಹಿಳಾ ಹಾಸ್ಟೆಲ್ ಸ್ಥಾಪನೆ, ಶ್ರೀಗಂಧದ ಎಣ್ಣೆ ಕಾರ್ಖಾನೆ, ರೇಷ್ಮೆ ಉದ್ಯಮದ ಅಭಿವೃದ್ಧಿ, ಚರ್ಮ ಹದಗೊಳಿಸುವ ಕಾರ್ಖಾನೆ, ಮೈಸೂರು ಪ್ರಿಂಟಿಂಗ್ ಪ್ರೆಸ್, ರೈಲ್ವೆ ವಿಸ್ತರಣಾ ಕಾರ್ಯ, ಪ್ರಾಥಮಿಕ ಶಿಕ್ಷಣದ ವಿಸ್ತರಣೆ, ಮೈಷುಗರ್ ಸಕ್ಕರೆ ಕಾರ್ಖಾನೆ....ಹೀಗೆ ಒಂದು ರಾಜ್ಯವು ಅಭಿವೃದ್ಧಿಯಾಗಲು ಏನೇನು ಬೇಕೋ ಅದೆಲ್ಲವನ್ನೂ ಪೂರ್ತಿ ಮಾಡಿದರು. ಸರ್ ಎಂವಿ ಅವರ ದೂರದರ್ಷಿತ್ವ, ನಿರಂತರ ದುಡಿಮೆ ಮತ್ತು ನಾಯಕತ್ವ ಇವುಗಳಿಂದ ಮೈಸೂರು ರಾಜ್ಯವು ಅತ್ಯಂತ ಶ್ರೀಮಂತವಾಯಿತು.
ಇಂದು ಅವರ ಹುಟ್ಟಿದ ಹಬ್ಬ. ಈ ದಿನವನ್ನು 'ಎಂಜಿನಿಯರ್ಸ್ ಡೇ' ಎಂದು ದೇಶದಲ್ಲಿ ಆಚರಿಸಿಕೊಂಡು ಬರಲಾಗುತ್ತಿದೆ. ಅವರಿಗೆ ಭಾರತ ಸರಕಾರವು 1955ರಲ್ಲೀ
ಭಾರತರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿತು. 102 ವರ್ಷ ಬದುಕಿದ ಧೀಮಂತ ಕರ್ಮಯೋಗಿ ಎಂವಿ ಸರ್ ಅವರಿಗೆ ನಮ್ಮ ಪ್ರಣಾಮಗಳು.
ಬರಹ - ರಾಜೇಂದ್ರ ಭಟ್ ಕೆ.
Comments
Post a Comment