ದಿನಕ್ಕೊಂದು ಕಥೆ 990

ದಿನಕ್ಕೊಂದು ಕಥೆ

😷😷ಮಾನಸಿಕ ಒತ್ತಡ😷😷

 
 ಮತಾಜುರ ಎನ್ನುವ ಯುವಕನು ಕತ್ತಿವರಸೆಯಲ್ಲಿ ನೈಪುಣ್ಯವನ್ನು ಸಂಪಾದಿಸಬೇಕೆಂದುಕೊಂಡನು. ಬಂಜೋ ಎನ್ನುವ ಗುರುಗಳ ಬಳಿಗೆ ಅವನು ಹೋದ. "ನಾನು ನಿಮ್ಮ ಬಳಿ ಶಿಷ್ಯತ್ವವನ್ನು ಸ್ವೀಕರಿಸಿ ಕತ್ತಿಯುದ್ಧವನ್ನು ಕಲಿತುಕೊಳ್ಳಬೇಕೆಂದುಕೊಂಡಿದ್ದೇನೆ. ಇದಕ್ಕೆ ಎಷ್ಟು ಸಮಯ ಹಿಡಿಯಬಹುದು" ಎಂದು ಕೇಳಿದ. "ಹತ್ತು ವರ್ಷಗಳು" ಎಂದು ಗುರುಗಳು ಹೇಳಿದರು. "ಹೋಗಲಿ ನಿಮ್ಮ ಬಳಿ ಎರಡರಷ್ಟು ಸಮಯ ವಿದ್ಯೆಯನ್ನು ಕಲಿತರೆ ಎಷ್ಟು ಕಾಲದಲ್ಲಿ ಕಲಿತುಕೊಳ್ಳಬಹುದೋ ಹೇಳಿ ಗುರುಗಳೇ" ಎಂದು ಕೇಳಿದ ಮತಾಜುರ. ಗುರುಗಳು ಸಣ್ಣದಾಗಿ ತಲೆಯಾಡಿಸಿ, "ಇಪ್ಪತ್ತು ವರ್ಷ ಹಿಡಿಯಬಹುದು" ಎಂದು ಹೇಳಿದರು. ಆಶ್ಚರ್ಯಗೊಂಡ ಮತಾಜುರ, "ಅನ್ನಪಾನಾದಿಗಳನ್ನು ಕೈಬಿಟ್ಟು ನಿಮ್ಮ ಹತ್ತಿರ ಹಗಲಿರುಳೂ ಕಲಿತುಕೊಂಡರೆ ನಾನು ಎಷ್ಟು ವರ್ಷಗಳಲ್ಲಿ ಕತ್ತಿವರಸೆಯಲ್ಲಿ ನಿಪುಣನಾಗಬಹುದು" ಎಂದು ಕೇಳಿದ. ಗುರುಗಳು ಮತ್ತಷ್ಟು ದೊಡ್ಡದಾಗಿ ನಕ್ಕು, "ಎಪ್ಪತ್ತು ವರ್ಷ" ಎಂದು ಹೇಳಿದರು. ಮತಾಜುರನಿಗೆ ಇದರಿಂದ ಸಿಟ್ಟು ಬಂತು, "ಏನು? ನೀವು ನನ್ನೊಂದಿಗೆ ಆಟವಾಡುತ್ತಿದ್ದೀರಾ? ನಾನು ಎಷ್ಟು ಹೆಚ್ಚು ಕಾಲ ಕಲಿತುಕೊಳ್ಳುತ್ತೇನೆಂದರೆ ಅಷ್ಟು ಹೆಚ್ಚು ಸಮಯ ಹಿಡಿಯುತ್ತದೆ ಎಂದು ನೀವು ಹೇಳುತ್ತಿದ್ದೀರಿ" ಎಂದು ಗಟ್ಟಿಯಾಗಿ ಹೇಳಿದ. 
 ಗುರುಗಳಾದ ಬಂಜೋ ಶಿಷ್ಯನಾದ ಮತಾಜರನ ತಲೆಯನ್ನು ಪ್ರೀತಿಯಿಂದ ನೇವರಿಸಿ, "ನೋಡು ಮಗೂ! ನಿನ್ನ ಕಾತುರತೆ ನನಗೆ ಅರ್ಥವಾಗಿದೆ. ಆದರೆ ಕಲಿತುಕೊಳ್ಳಲು ಆಸಕ್ತಿಯಿರುವ ವಿದ್ಯಾರ್ಥಿ ಎಷ್ಟು ಮಾನಸಿದ ಒತ್ತಡ, ಆಂದೋಲನಕ್ಕೆ ಗುರಿಯಾಗುತ್ತಾನೆಯೋ ಅಷ್ಟು ಸಮಯ ಕಲಿತುಕೊಳ್ಳುವುದು ನಿಧಾನವಾಗುತ್ತದೆ. ಎಷ್ಟು ಪ್ರಶಾಂತವಾಗಿ ಕಲಿತುಕೊಳ್ಳಲು ವಿದ್ಯಾರ್ಥಿ ಸಿದ್ಧನಾಗುತ್ತಾನೆಯೋ ಅಷ್ಟು ಶೀಘ್ರವಾಗಿ ಅವನ ಶಿಕ್ಷಣ ಪೂರ್ಣಗೊಳ್ಳುತ್ತದೆ" ಎಂದು ವಿವರಿಸಿದರು. 
 ಉದ್ದೇಶಿತ ಲಕ್ಷ್ಯವನ್ನು ಸಾಧಿಸಲು ಶಿಸ್ತುಬದ್ಧರಾಗಿ ಕಷ್ಟಪಡಬೇಕು. ಅನವಶ್ಯಕವಾದ ಅವಸರ ಕೆಲಸಕ್ಕೆ ಬಾರದು. ಹೌದಲ್ವಾ ಸ್ನೇಹಿತರೆ

(ಆಧಾರ: "ಹೈಂದವಿಯರು ತೆಲುಗಿನಲ್ಲಿ ಸಂಗ್ರಹಿಸಿದ ಚಿರು ದೀಪಾಲು - ಪುಟ್ಟ ಹಣತೆಗಳು ಎನ್ನುವ ಕಥಾ ಸಂಕಲನದಿಂದ ಆಯ್ದ ಕಥೆ") 

ಕೃಪೆ: ಶಾರದ ನಾಗೇಶ್ ಶಿಕ್ಷಕರು.
ಸಂಗ್ರಹ: ವೀರೇಶ್ ಅರಸಿಕೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1055

ದಿನಕ್ಕೊಂದು ಕಥೆ 1059