ದಿನಕ್ಕೊಂದು ಕಥೆ 999

ದಿನಕ್ಕೊಂದು ಕಥೆ
ಆಶ್ಚರ್ಯವಾಗುತ್ತದಲ್ಲವೇ.!?

ದೇವರ ಅಸ್ತಿತ್ವವನ್ನೇ ನಂಬದ ನಾಸ್ತಿಕರು ದೇವರಿಗೆ ಕೈಮುಗಿದರು ಎಂದರೆ ಆಶ್ಚರ್ಯವಾಗುತ್ತದಲ್ಲವೇ?*

 ಹಾಗಿದ್ದರೆ ಇಲ್ಲಿರುವ ಪುಟ್ಟ ಪ್ರಸಂಗವನ್ನು ನೋಡಬ ಹುದು. ಇಬ್ಬರು ನಾವಿಕರಿದ್ದರು. ಒಬ್ಬ ಆಸ್ತಿಕ, ಮತ್ತೊಬ್ಬ ನಾಸ್ತಿಕ. ದೇವರು ಮಾಡುವುದೆಲ್ಲ ನನ್ನ ಒಳ್ಳೆಯದಕ್ಕೇ ಎಂಬ ನಂಬಿಕೆ. ನಾಸ್ತಿಕನಿಗೆ ಇದೆಲ್ಲಾ ಅಸಂಬದ್ಧ ಎನ್ನುವ ನಂಬಿಕೆ.

ಒಮ್ಮೆ ಅವರು ಯಾನ ಮಾಡುತ್ತಿದ್ದ ಹಡಗು ಅಪಘಾತಕ್ಕೀಡಾಗಿ ನುಚ್ಚುನೂರಾಯಿತು. ಒಂದು ಮರದ ಹಲಗೆಯ ಮೇಲೆ ಆಸರೆ ಪಡೆದ ಇವರಿಬ್ಬರು ತೇಲುತ್ತ ಒಂದು ನಿರ್ಜನ ದ್ವೀಪವನ್ನು ಸೇರಿಕೊಂಡರು. ಆಸ್ತಿಕ ನಾವು ದೇವರ ದಯೆಯಿಂದ ಬದುಕಿದ್ದೇವೆ. ನಾವು ದೇವರಿಗೆ ಕೃತಜ್ಞರಾಗಿರಬೇಕು ಎಂದರು. ನಾಸ್ತಿಕ ಸಿಟ್ಟಿನಿಂದ ಕಾಣದ ದೇವರನ್ನು ಬಾಯಿಗೆ ಬಂದಂತೆ ಬೈದರು.

ಅವರು ಆ ದ್ವೀಪದಲ್ಲಿ ಸಿಕ್ಕ ಹಣ್ಣು-ಹಂಪಲುಗಳನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು. ಇಡೀ ದಿನ ಸಮುದ್ರದಲ್ಲಿ ಹಾದು ಹೋಗುವ ಹಡಗುಗಳ ಗಮನ ಸೆಳೆಯಲು ’ಹೋ’ ಎಂದು ಕಿರುಚುತ್ತಾ ಕೈಬೀಸುತ್ತಿದ್ದರು. ಆದರೆ ಯಾರೂ ಇವರನ್ನು ಗಮನಿಸಲಿಲ್ಲ. ಸಮುದ್ರ ತೀರದಲ್ಲಿ ಕುಳಿತು ಯಾವುದಾದರೂ ಹಡಗು ಬಂದು ನಮ್ಮನ್ನು ಕಾಪಾಡಬಾರದೇ ಎಂದು ಕಾಯುತ್ತಿದ್ದರು.

ಕೆಲವು ದಿನಗಳ ನಂತರ ಬಿಸಿಲು, ಚಳಿಗಾಳಿಯನ್ನು ತಡೆಯಲಾಗದೆ ಕಾಡಿನಲ್ಲಿ ಸಿಗುವ ತೆಂಗಿನ ಗರಿಗಳಿಂದ ಒಂದು ಸಣ್ಣ ಗುಡಿಸಲು ಕಟ್ಟಿಕೊಂಡರು. ಆಸ್ತಿಕ ನಮಗೆ ತಿನ್ನುವುದಕ್ಕೆ ಹಣ್ಣು-ಹಂಪಲನ್ನು ದೇವರು ಕರುಣಿಸಿದ್ದರಿಂದ ಬದುಕಿದ್ದೇವೆ. ದೇವರಿಗೆ ನಾವು ಕೃತಜ್ಞರಾಗಬೇಕು ಎನ್ನುತ್ತಿದ್ದರು. ಇದನ್ನು ಕೇಳಿ ನಾಸ್ತಿಕನಿಗೆ ಮೈ ಉರಿಯುತ್ತಿತ್ತು. ಆದರೆ ಅಲ್ಲಿದ್ದವರು ಅವರಿಬ್ಬರೇ ಆದ್ದರಿಂದ ಜಗಳವಾಡಲಿಲ್ಲ.

ಹೀಗೆಯೇ ಎರಡು ಮೂರು ವಾರಗಳು ಕಳೆದವು. ಒಂದು ದಿನ ಇಬ್ಬರೂ ಕಾಡಿನಲ್ಲಿ ಆಹಾರಕ್ಕಾಗಿ ಸುತ್ತಾಡಿ ಸಂಜೆಯ ಹೊತ್ತಿಗೆ ಗುಡಿಸಿಲಿನ ಕಡೆ ಬಂದಾಗ ಅವರಿಗೊಂದು ಆಘಾತ ಕಾದಿತ್ತು. ಬಿಸಿಲಿನ ಶಾಖಕ್ಕೆ ಅವರ ಗುಡಿಸಿಲಿಗೆ ಬೆಂಕಿ ಬಿದ್ದಿತ್ತು. ದಗದಗನೆ ಉರಿಯುತ್ತಿತ್ತು. ಅದರ ಹೊಗೆ ಎತ್ತರಕ್ಕೆ ಚಾಚುತ್ತಿತ್ತು. ಅದನ್ನು ಕಂಡು ಇಬ್ಬರಿಗೂ ನಿರಾಶೆಯುಂಟಾಯಿತು. ಏಕೆಂದರೆ ಕಷ್ಟಪಟ್ಟು ಕಟ್ಟಿದ್ದ ಗುಡಿಸಲು ಸುಟ್ಟು ಬೂದಿಯಾಗಿತ್ತು.

ಸಂಜೆ ಸಮುದ್ರತೀರಕ್ಕೆ ಪುಟ್ಟ ಯಾಂತ್ರಿಕ ದೋಣಿಯೊಂದು ಬಂದಿತು. ಇವರನ್ನು ಅದರೊಳಕ್ಕೆ ಹತ್ತಿಸಿಕೊಳ್ಳಲಾಯಿತು. ಇವರಿಬ್ಬರು ಆ ದೋಣಿಯವರಿಗೆ ಧನ್ಯವಾದ ಹೇಳಿ ನಾವಿಲ್ಲಿದ್ದೇವೆಂದು ನಿಮಗೆ ಹೇಗೆ ಗೊತ್ತಾಯಿತೆಂದು ಕೇಳಿದರು. ಆಗ ದೋಣಿಯವರು ನಮ್ಮ ಹಡಗು ಇಲ್ಲಿ ಹಾದು ಹೋಗುತ್ತಿದ್ದಾಗ ನಿರ್ಜನ ದ್ವೀಪದಲ್ಲಿ ಬೆಂಕಿ ಹೊಗೆ ಕಾಣಿಸಿಕೊಂಡಿತು. ನಾವು ಇಲ್ಲಿರುವ ಯಾರೋ ತೊಂದರೆಯಲ್ಲಿ ಇರಬೇಕು, ಅವರು ಯಾರೋ ಧೂಮ ಸಂಕೇತ ನೀಡುತ್ತಿರಬೇಕೆಂದು ಭಾವಿಸಿ ಬಂದೆವು. ನಿಮ್ಮನ್ನು ಕಂಡೆವು ಎಂದರು.

ಕೆಲವೇ ದಿನಗಳಲ್ಲಿ ಅವರನ್ನು ಅವರ ಸ್ವಂತ ಊರಿಗೆ ತಲುಪಿಸಲಾಯಿತು. ತಕ್ಷಣ ಆಸ್ತಿಕ ನೆಲದ ಮೇಲೆ ಮಂಡಿಯೂರಿ ಕುಳಿತು ದೇವರಿಗೆ ಧನ್ಯವಾದ ಪ್ರಾರ್ಥನೆಯನ್ನು ಹೇಳಿದರು. ಪ್ರಾರ್ಥನೆ ಮಾಡುತ್ತ ಪಕ್ಕಕ್ಕೆ ತಿರುಗಿ ನೋಡಿದಾಗ ನಾಸ್ತಿಕನೂ ಮೈ ಬಗ್ಗಿಸಿ ಕುಳಿತು ಕೈಮುಗಿದು ಪ್ರಾರ್ಥನೆ ಸಲ್ಲಿಸುತ್ತಿದ್ದರು.

ಆಶ್ಚರ್ಯದಿಂದ ಅವನನ್ನು ಏಕೆಂದು ಪ್ರಶ್ನಿಸಿದಾಗ, ಆತ ನಿನ್ನ ದೇವರು ನಮ್ಮ ಗುಡಿಸಿಲನ್ನು ಸುಡದಿದ್ದರೆ ಹಡಗಿನವರಿಗೆ ನಾವಿಲ್ಲಿರುವುದು ಗೊತ್ತಾಗುತ್ತಿರಲಿಲ್ಲ. ನಾವು ಪಾರಾಗುತ್ತಿರಲಿಲ್ಲ. ಆದ್ದರಿಂದ ದೇವರಿಗೆ ನಾನೂ ಧನ್ಯವಾದ ಹೇಳುತ್ತಿದ್ದೇನೆ ಎಂದರಂತೆ!

ನಾಸ್ತಿಕರೊಬ್ಬರು ಕಾಣದ ದೇವರಿಗೆ ಕೈ ಮುಗಿದ ಕತೆಯನ್ನು ಓದಿದೆವಲ್ಲವೇ? ಬದುಕಿನಲ್ಲಿ ಕಷ್ಟ-ಕೋಟಲೆಗಳು ಎಲ್ಲರಿಗೂ ಬಂದೇ ಬರುತ್ತವೆ. ಆದರೆ ಅವುಗಳ ಒಳಗೆ ಒಳ್ಳೆಯದೇನೋ ಅಡಗಿರಬಹುದಲ್ಲವೇ? ಆ ಕ್ಷಣಕ್ಕೆ ಅದು ನಮಗೆ ಕಾಣದೇ ಹೋಗಿರಬಹುದಲ್ಲವೇ? ಅದಕ್ಕಾಗಿ ನಾವು ನಮ್ಮ ಸ್ವಪ್ರಯತ್ನವನ್ನೂ ಮಾಡಬೇಕು. ಕಾಣದ ಕೈಯ್ಯಿನ ಕರಾವಲಂಬನಕ್ಕೂ ಕಾಯಬೇಕು ಅಲ್ಲವೇ?....
ಕೃಪೆ ವಾಟ್ಸ್ ಆ್ಯಪ್ ಗ್ರೂಪ್
ಸಂಗ್ರಹ ವೀರೇಶ್ ಅರಸಿಕೆರೆ

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1055

ದಿನಕ್ಕೊಂದು ಕಥೆ 1059