ದಿನಕ್ಕೊಂದು ಕಥೆ 1016
*🌻ದಿನಕ್ಕೊಂದು ಕಥೆ🌻*
*ಬುದ್ಧಿವಂತ ತಾತ*
ಒಮ್ಮೆ ವಯಸ್ಸಾದ ವೃದ್ದರು, ಕೆಲಸದಿಂದ ನಿವೃತ್ತರಾದ ಮೇಲೆ, ಒಂದು ಒಳ್ಳೆಯ ಜಾಗದಲ್ಲಿ ಮನೆ ಕೊಂಡುಕೊಂಡರೂ. ಇವರ ಮನೆಯ ಹತ್ತಿರದಲ್ಲೇ ಒಂದು ಶಾಲೆ ಇತ್ತು. ಬೇಸಿಗೆ ಕಳೆದು ಶಾಲೆ ಪುನರಾರಂಭವಾಯಿತು. ಶಾಲೆಯ ಮೂರು ತುಂಟ ಹುಡುಗರು, ಊಟವಾದ ಮೇಲೆ, ಪಕ್ಕದಲ್ಲಿದ್ದ ತಾತನ ಮನೆಯ ಮುಂದೆ ಇದ್ದ ಕಸದ ಡಬ್ಬವನ್ನು ಒದೆಯುವುದು, ಬಡಿಯುವುದು ಮಾಡುತಿದ್ದರು. ಕಸದ ಡಬ್ಬ ತುಂಟ ಹುಡುಗರ ತಬಲವಾಗಿತ್ತು.
ಗಲಾಟೆಯಿಂದ ಬೇಸತ್ತ ತಾತ, ಇವರಿಗೆ ಪಾಠ ಕಲಿಸಬೇಕೆಂದು ನಿರ್ಧರಿಸಿ, ಮಾರನೆ ದಿನ ಹುಡುಗರು ಬರುವುದನ್ನೇ ಕಾಯುತಿದ್ದರು. ಹುಡುಗರು ಬಂದು ಎಂದಿನಂತೆ ತಬಲಾ ಬಾರಿಸಲಾರಂಬಿಸಿದಾಗ, ತಾತ ಹೊರಗಡೆ ಬಂದು, ಹುಡುಗರೊಡನೆ ಪರಿಚಯ ಮಾಡಿಕೊಂಡರು. ನಿಮ್ಮ ವಯಸ್ಸಿನವನಾಗಿದ್ದಾಗ ನಾನು ಹೀಗೆ ಮಾಡುತಿದ್ದೆ, ನೀವು ತಬಲಾ ಬಾರಿಸುವುದನ್ನು ಕೇಳುವುದೇ ಆನಂದ ಎಂದು ಹೇಳಿದರು. ಇನ್ನೂ ಮುಂದುವರೆದು, ಇನ್ನೂ ಮುಂದೆ ನೀವು ದಿನಾ ಇಲ್ಲಿ ಬಂದು ತಬಲಾ ಬಾರಿಸುವುದಾದರೆ ನಿಮಗೆ ದಿನಕ್ಕೆ ಒಬ್ಬೊಬ್ಬರಿಗೆ ಒಂದು ರೂಪಾಯಿ ಕೊಡುತ್ತೇನೆ ಎಂದರು. ಹುಡುಗರಿಗೋ ಆನಂದವೋ ಆನಂದ, ತಾತನ ಮಾತಿಗೆ ಒಪ್ಪಿ. ಪ್ರತಿದಿನ ಬಂದು ತಬಲಬಾರಿಸಿ, ಹಣ ಪಡೆದು ಹೋಗುತಿದ್ದರು.
ಒಂದು ವಾರವಾಯಿತು, ಆ ದಿನ ಹುಡುಗರು ಹಣ ಪಡೆಯಲು ಹೋದಾಗ, ತಾತ “ಮಕ್ಕಳೇ ನನಗೆ ಬರುತಿದ್ದ ಕಾಸು ಕಡಿಮೆಯಾಗಿದೆ. ಇನ್ನೂ ಮುಂದೆ ನಿಮಗೆ ಪ್ರತಿಯೊಬ್ಬರಿಗೂ ಐವತ್ತು ಪೈಸೆ ಮಾತ್ರ ಕೊಡಬಲ್ಲೆ” ಎಂದರು. ಮಕ್ಕಳ ಮುಖ ಸಪ್ಪಗಾಯಿತು, ಆದರೂ ಸಿಕ್ಕಷ್ಟೇ ಲಾಭ ಎಂದು ಒಪ್ಪಿಕೊಂಡರು.
ಮತ್ತೊಂದುವಾರ ಕಳೆಯಿತು, ಹುಡುಗರು ಹಣ ಪಡೆಯಲು ಹೋದಾಗ, ತಾತ, ಮಕ್ಕಳೇ ನಿಮಗೆ ಕಡಿಮೆ ಕಾಸು ಕೊಡಲು ನನಗೂ ಇಷ್ಟವಿಲ್ಲ ಆದರೂ ನನಗೆ ಬರುತಿದ್ದ ಕಾಸು ಮತ್ತೂ ಕಡಿಮೆಯಾಗಿದೆ, ಆದ್ದರಿಂದ ಇನ್ನೂ ಮುಂದೆ ನಿಮಗೆ ಪ್ರತಿಯೊಬ್ಬರಿಗೂ ಇಪ್ಪತ್ತೈದು ಪೈಸೆ ಮಾತ್ರ ಕೊಡಬಲ್ಲೆ ಎಂದರು.
ಆಗ ಮಕ್ಕಳ ಗುಂಪಿನ ನಾಯಕ ಹೇಳಿದ, “ಇಪ್ಪತ್ತೈದು ಪೈಸಾನ, ಅದಕ್ಕೆ ಕಳ್ಳೇಕಾಯಿ ಮಿಠಾಯಿನು ಬರಲ್ಲ, ಹೋಗು ತಾತ, ನಿನ್ನ ಇಪ್ಪತ್ತೈದು ಪೈಸೆಗೋಸ್ಕರ ನಾವು ನಮ್ಮ ಅಮೂಲ್ಯವಾದ ಸಮಯವನ್ನು ವ್ಯರ್ಥ ಮಾಡೋಕ್ಕಾಗಲ್ಲ. ಇವತ್ತಿನಿಂದ ನಾವು ಇನ್ನೂ ಮುಂದೆ ತಬಲಾ ಬಾರಿಸುವುದಿಲ್ಲ.”
ಮಕ್ಕಳು ಹೊರಡುವಾಗ, ತಾತ ಹೊರಗಡೆ ತುಂಬಾ ಬೇಜಾರಾದಂತೆ ತೋರಿಸಿಕೊಂಡರೂ, ಒಳಗೊಳಗೆ ನಗುತ್ತಿದ್ದರು.
ಕೃಪೆ:ಅಂತರ್ಜಾಲ.
ಸಂಗ್ರಹ:ವೀರೇಶ್ ಅರಸಿಕೆರೆ.
Comments
Post a Comment