ದಿನಕ್ಕೊಂದು ಕಥೆ 1017

*🌻ದಿನಕ್ಕೊಂದು ಕಥೆ🌻*
 *ಮಣ್ಣಿನ ಗಣಪ*

*ಕೃಪೆ: ಡಾ.ಗವಿಸ್ವಾಮಿ.ಚಾಮರಾಜನಗರ.*
ಆತ ಕಾಲೇಜು ಅಧ್ಯಾಪಕ. ಆತನ ಮಗ ನಾಲ್ಕನೇ ತರಗತಿಯಲ್ಲಿ‌ ಕಲಿಯುತ್ತಿದ್ದ.‌ ಅಪ್ಪ-ಮಗ ಆವತ್ತು ಗೌರಿ ಹಬ್ಬಕ್ಕೆ ಹುಟ್ಟೂರಿಗೆ ಬಂದಿದ್ದರು.  

ಇಬ್ಬರೂ ಸಂಜೆ ಹೊತ್ತು ಕೆರೆ ಬಯಲಿನಲ್ಲಿ ತಿರುಗಾಡುತ್ತಿದ್ದಾಗ ಹುಡುಗರಿಬ್ರು ಹಸಿ ಮಣ್ಣಿನೊಂದಿಗೆ ಆಟವಾಡುತ್ತಿದ್ದುದು ಕಾಣಿಸಿತು. 

ಮಗನಿಗೆ ಅವರೊಂದಿಗೆ ಬೆರೆತು ಆಟವಾಡಲು‌ ಆಸೆಯಾಯಿತು. ಅಪ್ಪನನ್ನು ಬಲವಂತದಿಂದ ಅವರ ಬಳಿಗೆ ಕರೆದುಕೊಂಡು ಹೋದ.

ಆ ಹುಡುಗರು ಕೆರೆಯ ಅಂಟು ಮಣ್ಣಿನಲ್ಲಿ ಗಣಪನ ಮೂರ್ತಿಗಳನ್ನು ಮಾಡುವಲ್ಲಿ ತಲ್ಲೀನರಾಗಿದ್ದರು . 

ಒಬ್ಬ ಹುಡುಗ ಅಂಗೈ ಮೇಲೆ ಇಲಿ ಬಾಲದಂತಹ ಸೊಂಡಿಲನ್ನು ಹೊಸೆಯುತ್ತಿದ್ದ . ಇನ್ನೊಬ್ಬ ತನ್ನ ಗಣಪನ ಮುಖಕ್ಕೆ ಸಕ್ಕರೆ ಗಾತ್ರದ ಕಲ್ಲುಗಳನ್ನು ಅಂಟಿಸಿ  ಕಣ್ಣು ಗುಡ್ಡೆಗಳನ್ನು ರೂಪಿಸುತ್ತಿದ್ದ .

ಆ ಹುಡುಗನಿಗೆ ಅವರಿಬ್ಬರ ಕೈಚಳಕವನ್ನು ಕಂಡು ಅಸೂಯೆಯಾಯಿತು . ಮಣ್ಣಿನುಂಡೆಯಲ್ಲಿ ತಾನೂ ಒಂದು ಗಣಪತಿಯನ್ನು ಮಾಡುವ ಆಸೆಯಾಯಿತು . ಮಣ್ಣಿಗೆ ಕೈ ಹಾಕಿದರೆ ಅಪ್ಪ ಗದರಬಹುದು ಎಂಬ ಭಯವೂ ಇತ್ತು . ಹಾಗಾಗಿ ಆಸೆಗಣ್ಣಿನಿಂದ ಆ ಹುಡುಗರ ಕೈಗಳನ್ನೇ  ಗಮನಿಸತೊಡಗಿದ ‌.

ಏತನ್ಮಧ್ಯೆ, ದಾರಿಯಲ್ಲಿ ಹೊಲಕ್ಕೆ ಹೊರಟಿದ್ದವನೊಬ್ಬ ಅಧ್ಯಾಪಕನನ್ನು ಗುರುತಿಸಿ ಮಾತನಾಡಿಸಲು ಬಂದ. ಆತ ಅಧ್ಯಾಪಕನ ಸಹಪಾಠಿಯಾಗಿದ್ದ . ಏಳನೇ ಕ್ಲಾಸ್ ಫೇಲಾದ ಮೇಲೆ ದನಕರು, ತೆವರುತಿಟ್ಟುಗಳಲ್ಲಿ ಕಳೆದುಹೋಗಿದ್ದ. 

ಅಲ್ಲಿ ಗಣಪತಿಯನ್ನು ತಿದ್ದುತ್ತಾ ಕುಳಿತಿದ್ದ ಇಬ್ಬರು ಮಕ್ಕಳಲ್ಲಿ ಅವನ ಮಗನೂ ಒಬ್ಬನಿದ್ದ. ಇನ್ನೊಬ್ಬ ಪಕ್ಕದ ಮನೆಯ ಹುಡುಗ. ಅವರಿಬ್ಬರೂ ಆತ್ಮೀಯ ಸ್ನೇಹಿತರು.

 "ಹೊತ್ತಾಯ್ತು ಊರಿಗೆ ಹೋಗ್ರೋ, " ಎಂದು  ಅಧ್ಯಾಪಕನೆದುರು ಇಬ್ಬರನ್ನೂ 'ಮೆಲ್ಲಗೆ' ಗದರಿದ .

ಪಕ್ಕದಲ್ಲೇ ನಿಂತಿದ್ದ ಅಧ್ಯಾಪಕನ ಮಗನ ಗಲ್ಲ ಹಿಡಿದು ಮುದ್ದಿಸಿ ಹಳೆಯ ಸ್ನೇಹಿತನನ್ನು ಮುದ್ದಿಸಿದ . ಆಗ ಆ ಹುಡುಗ ಸ್ವಲ್ಪ ಧೈರ್ಯ ತಂದುಕೊಂಡು 'ನಾನೂ ಗಣೇಶನ್ನ ಮಾಡ್ಬೇಕು' ಅಂತು.

''ಮಣ್ಣು ಮೆತ್ಕೊಳ್ಳುತ್ತೆ, ಸುಮ್ನೆ ಕೂತ್ಕೊಂಡು ಅವರಿಬ್ರನ್ನು ನೋಡು'' ಎಂದು ಅಪ್ಪ  ಕಣ್ಣು ಮೆಡರಿಸಿದ.  ಮಗನ ಮುಖ ಮುದುರಿತು. 

"ಅವರು ಸ್ವಲ್ಪ ಹೊತ್ತು ಆಡಿಕೊಂಡಿರಲಿ, ನಾವು ಬೇರೆ ಕಡೆಗೆ ಹೋಗಿ ಮಾತಾಡೋಣ " ಎಂದು ಹಳ್ಳಿಯ ಸ್ನೇಹಿತ ಅಧ್ಯಾಪಕನನ್ನು ಏರಿಯ ಕೆಳಗಿನ ತೆಂಗಿನ ಮರದತ್ತ  ಕರೆದೊಯ್ದ.

ಇಬ್ಬರೂ ಮಳೆಬೆಳೆ, ಊರಿನ ರಾಜಕೀಯ, ಜಗಳಕಲಹಗಳ ಬಗ್ಗೆ ದೇಶಾವರಿ ಮಾತುಗಳನ್ನಾಡತೊಡಗಿದರು. 

ಮಾತಿನ ಮಧ್ಯೆ , ಹಳ್ಳಿಗ ಸ್ನೇಹಿತನಿಗೆ ಏನೋ‌ ನೆನಪಾಗಿ,    ''ಅವನೊಂದಿಗೆ ಒರಟಾಟ ಆಡ್ಬೇಡ್ರೋ , ಮೃದು ಹುಡ್ಗ ಅವ್ನು ''  ಎಂದು ಇಬ್ಬರನ್ನೂ ಕೂಗಿ ಎಚ್ಚರಿಸಿದ .

"ಯಾಕೆ ಹಾಗೆ ಹೇಳ್ದೆ" ಎಂದು  ಅಧ್ಯಾಪಕ ಚಕಿತನಾಗಿ  ಕೇಳಿದ .

"ನನ್ನ ಮಗ ಚೂರು ಕೀಟ್ಲೆ ಸ್ವಭಾವ್ದವ್ನು , ಅವನು ತಂಟೆ ಮಾಡಿ ನಿನ್ ಮಗನ್ನ ನೋಯಿಸ್ದೇ ಇರ್ಲಿ ಅಂತ ಹಾಗೆ ಹೇಳ್ದೆ" ಎಂದು ಮುಗುಳ್ನಕ್ಕ . 

ತಾವಿಬ್ಬರೂ ಪ್ರೈಮರಿಯಲ್ಲಿ ಓದುತ್ತಿದ್ದಾಗ, "ಅವನು ಪೆದ್ದ, ಅವನೊಂದಿಗೆ ಸೇರಬೇಡ . ನೀನೂ ಹೆಡ್ಡನಾಗೋಗ್ತೀಯಾ"  ಎಂದು ತನ್ನ ತಂದೆತಾಯಿಗಳು ಪದೇಪದೇ ಎಚ್ಚರಿಕೆ ನೀಡುತ್ತಿದ್ದುದು ಅಧ್ಯಾಪಕನಿಗೆ ನೆನಪಾಯಿತು.. 

ತನ್ನ ಹೆತ್ತವರು ಆಗ ಎಷ್ಟು ಕ್ಷುಲ್ಲಕವಾಗಿ ಯೋಚಿಸಿದ್ದರು ಅನ್ನಿಸಿತು . ಒಳಗಿನ ವಿಷಾದವನ್ನು ತೋರಗೊಡದೆ ಅವನ ಹೆಗಲ ಮೇಲೆ ಮೆಲ್ಲಗೆ ಕೈಯಿಟ್ಟು ಮಾತು ಮುಂದುವರಿಸಿದ.

ಏತನ್ಮಧ್ಯೆ ಇಬ್ಬರು ಪುಟ್ಟ ಸ್ನೇಹಿತರು ಒಂದು ಪುಟಾಣಿ ಗಣಪನನ್ನು ಮಾಡಿ ಅಧ್ಯಾಪಕನ ಮಗನ ಕೈಗಿತ್ತರು.‌

ಹಳ್ಳಿಗ ಸ್ನೇಹಿತ ಮಾತುಮಾತಾಡುತ್ತಲೇ  ತೆಂಗಿನ ಗರಿಗಳಿಂದ ಅಧ್ಯಾಪಕನ ಮಗನಿಗಾಗಿ  ಹಸಿರು ವಾಚು , ರೌಂಡು ಕನ್ನಡಕ , ಪೀಪಿ , ಗಿರಗಿಟ್ಲೆಗಳನ್ನು ತಯಾರು ಮಾಡಿದ.

ಅಧ್ಯಾಪಕ ಮತ್ತವನ ಮಗ ಅಮೂಲ್ಯವಾದ ಪ್ರೀತಿ ಮತ್ತು ಉಡುಗೊರೆಗಳನ್ನು ಪಡೆದು ಊರಿನತ್ತ ಹೆಜ್ಜೆ ಹಾಕಿದರು.

ಸಂಗ್ರಹ:ವೀರೇಶ್ ಅರಸಿಕೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1092

ದಿನಕ್ಕೊಂದು ಕಥೆ 1097