ದಿನಕ್ಕೊಂದು ಕಥೆ 1018

*🌻ದಿನಕ್ಕೊಂದು ಕಥೆ🌻*
*ವೃದ್ಧೆಯ ಜಾಣತನ.*

ನ್ಯಾಯ, ನೀತಿ, ದಾನ,ಧರ್ಮಗಳನ್ನು ತಿಳಿದು  ಪಾಲಿಸುತ್ತಿದ್ದ  ಒಬ್ಬ ಮಹಾರಾಜನಿದ್ದನು. ಒಂದು ಸಲ ಒಂದು ದೊಡ್ಡ ಪ್ರದರ್ಶನವನ್ನು ಏರ್ಪಾಟು ಮಾಡಿದ.ಆ  ಪ್ರದರ್ಶನದಲ್ಲಿ ಹಲವಾರು ವಸ್ತುಗಳು ಇದ್ದವು. ಬೆಲೆಬಾಳುವ  ಬಟ್ಟೆಗಳು ಅಪರೂಪದ ಒಡವೆ,ವಸ್ತುಗಳು ಇದ್ದವು. ಪ್ರದರ್ಶನದಲ್ಲಿಟ್ಟ ವಸ್ತುಗಳನ್ನು ನೋಡಲು ಬಂದವರು, ತಮಗೆ ಯಾವ ವಸ್ತು ಬೇಕೋ ಅದನ್ನು  ತೆಗೆದುಕೊಂಡು ಹೋಗಬಹುದಿತ್ತು. ಇದರಿಂದ ಸುತ್ತಮುತ್ತಲ ಹಳ್ಳಿ, ಪಟ್ಟಣ ಹಾಗೂ ನಗರದ ಜನರು ಬಂದರು. ಪ್ರದರ್ಶನ ನೋಡಲು ಬಂದವರೆಲ್ಲ ನೋಡು ನೋಡುತ್ತಾ ತಮಗೆ ಬೇಕಾದ ಬೆಲೆಬಾಳುವ ಬಟ್ಟೆಗಳನ್ನು, ಇನ್ನು ಕೆಲವರು ಒಡವೆಗಳನ್ನು, ಮತ್ತೆ ಕೆಲವರು ಅದ್ಭುತವಾದ ಪುಸ್ತಕಗಳನ್ನು, ಇನ್ನಷ್ಟು ಜನ ಹಣ್ಣುಹಂಪಲುಗಳನ್ನು, ಹೇಗೆ ತಮಗೆ ಬೇಕು ಬೇಕಾದಂತಹ ವಸ್ತುಗಳನ್ನು ತೆಗೆದುಕೊಂಡು ಹೋದರು 

ಅಲ್ಲಿಗೆ ಬಂದವರೆಲ್ಲಾ ತಮಗೆ ಏನು ಬೇಕೋ ಅದನ್ನು ತೆಗೆದುಕೊಂಡು ಹೋದರು. ಆದರೆ ಅಲ್ಲಿಗೆ ಬಂದವರಲ್ಲಿ , ವೃದ್ಧಳಾದ ಮಹಿಳೆಯೂಬ್ಬಳು
ಅಲ್ಲಿರುವ ಯಾವ ವಸ್ತುವನ್ನು ಮುಟ್ಟಲಿಲ್ಲ. ಅವಳಿಗೆ ಯಾವುದೂ ತೃಪ್ತಿ ಕಂಡಂತೆ ಅನಿಸಲಿಲ್ಲ. ಇದನ್ನೇ ಗಮನಿಸುತ್ತಿದ್ದ ದಿವಾನನು, ರಾಜನ್,
"ಈ ಪಟ್ಟಣದ ಜನರೆಲ್ಲರೂ ಈ ಪ್ರದರ್ಶನವನ್ನು ನೋಡಿ ಆನಂದಿಸಿ ಅದರಲ್ಲಿನ ಎಲ್ಲಾ ವಸ್ತುಗಳನ್ನು ನೋಡಿ ಕಣ್ತುಂಬಿಕೊಂಡು ತಮಗೆ ಬೇಕಾದುದನ್ನು ತೆಗೆದುಕೊಂಡು ಸಂತೋಷಗೊಂಡರು. ಆದರೆ ಒಬ್ಬ ಮಹಿಳೆ ಇದ್ಯಾವುದರಿಂದಲೂ ಅವಳಿಗೆ ತೃಪ್ತಿಯಾಗಿಲ್ಲ. ಇಲ್ಲಿರುವ ಯಾವ ವಸ್ತುಗಳು  ಅವಳಿಗೆ ಬೇಡವಂತೆ. ಆಕೆಗೆ ರಾಜನೊಡನೆ ಮಾತನಾಡುವುದು ಇದೆಯಂತೆ" ಎಂದನು. 

ಈ ಮಾತುಗಳನ್ನು ಆಲಿಸಿದ ರಾಜನು ಆಕೆಯನ್ನು ಕಾಣಲು  ಸ್ವತಹ  ಆನೆಯ ಮೇಲೆ ಕುಳಿತು  ಹೊರಟನು. ವೃದ್ಧ ಮಹಿಳೆಯನ್ನು ಕಂಡೊಡನೆ ಆಕೆಯು, "ಪೂಜ್ಯನಾದ ದೊರೆಯೇ, ಆನೆಯಿಂದ ಕೆಳಗಿಳಿದು ಬಾ ನಾನು ನಿನ್ನೊಡನೆ ಒಂದು ಬಹು ಮುಖ್ಯವಾದ ವಿಷಯವನ್ನು ಮಾತನಾಡಬೇಕಾಗಿದೆ" ಆಕೆಯ ಮಾತಿನಂತೆ ರಾಜನು ಕೆಳಗಿಳಿದನು. ಆಕೆಯು ರಾಜನ ಬಲಗೈಯ್ಯನ್ನು ತನ್ನ ಕೈಯಲ್ಲಿ ಹಿಡಿದುಕೊಂಡು," ಓ ರಾಜನೆ, ಈಗ ನೀನು ನನ್ನವನು. ರಾಜ ಭಂಡಾರದಲ್ಲಿರುವ ಸಣ್ಣಪುಟ್ಟ ವಸ್ತುಗಳು, ಬೆಲೆಬಾಳುವ ವಸ್ತುಗಳು, ಒಡವೆ, ಆಭರಣಗಳು, ವಸ್ತ್ರಗಳು,ಆಟದ ಸಾಮಾನುಗಳು ನನಗೆ ಇವಾವುದು ಬೇಡ. ಈ ದಿನ ನೀನು ನನ್ನ  ವಶದಲ್ಲಿರುವೆ, ನೀನು ನನ್ನವನಾದುದರಿಂದ  ಇಡೀ ರಾಜ್ಯದ ಸಂಪತ್ತೆಲ್ಲ ನನ್ನದಾಯಿತು". ವೃದ್ಧಯ ಜಾಣತನದ ಮಾತುಗಳನ್ನು ಕೇಳಿ ರಾಜನು ದಂಗುಬಡಿದನು. ರಾಜನು, ಆಕೆಯ ಮಾತುಗಳನ್ನು ಮೆಚ್ಚಿ ಆಕೆಯನ್ನು ತನ್ನ ಅರಮನೆಗೆ ಕರೆದುಕೊಂಡು ಹೋದನು. ಆಕೆಯ ಯೋಗಕ್ಷೇಮವನ್ನು ತಾನೇ ನೋಡಿಕೊಂಡು,ಅವನ ಜೀವಿತಾವಧಿಯವರೆಗೂ ರಾಜನು ತನ್ನ ಜೊತೆಗೆ ಅವಳನ್ನು ಇರಿಸಿಕೊಂಡು ತಾಯಿಯನ್ನು ನೋಡಿಕೊಳ್ಳುವಂತೆ ಪ್ರೀತಿಯಿಂದ ನೋಡಿಕೊಂಡನು. 

ಪ್ರಾಪಂಚಿಕ ಇಚ್ಛೆಗಳನ್ನು ಬಯಸಿದಷ್ಟು ಅವುಗಳ ಗುಲಾಮರಾಗುತ್ತೇವೆ.
ಮನದ  ಕಾಮನೆಗಳನ್ನೆಲ್ಲಾ ದೂರ ಮಾಡಿ, ಜಗದ್ರಕ್ಷಕನಾದ ಪರಮಾತ್ಮನಲ್ಲೇ
ನಮ್ಮನ್ನು ಕಂಡುಕೊಂಡರೆ, ಯಾವ ಅಪೇಕ್ಷೆಗಳು ನಮ್ಮನ್ನು ಕಾಡುವುದಿಲ್ಲ.
ವೃದ್ಧ ಮಹಿಳೆಯು, ರಾಜನನ್ನು ತನ್ನ ಒಡೆಯನೆಂದು ಪಡೆದು, ಇಡೀ ರಾಜ್ಯಕ್ಕೆ ತಾನೆ ಒಡೆಯಳಾದಳು. ಈ ರೀತಿಯಾಗಿ ಧ್ಯಾನ ಭಕ್ತಿ , ಭಜನೆ ಮಾಡುವುದರ
ಮೂಲಕ ಭಗವಂತನನ್ನು ಪಡೆದರೆ, ಪ್ರಪಂಚದಲ್ಲಿರುವ ಸಕಲಕ್ಕೂ ನಾವೇ ಒಡೆಯರು ಆಗುತ್ತೇವೆ. 

"ಸ ಏವಾಯಂ ಮಯಾ ತೇದ್ಯ, ಯೋಗ ಹ. ಪ್ರೋಕ್ತಹ ಪುರಾತನಹ!
ಭಕ್ತೋಸಿ. ಮೇ ಸಖಾ ಚೇತಿ ರಹಸ್ಯಂ ಹ್ಯೇತದುತತ್ತಮಂ " 


ಬರಹ:- ಆಶಾ ನಾಗಭೂಷಣ.
ಕೃಪೆ: ನಿತ್ಯ ಸತ್ಯ ಪೇಸ್ ಬುಕ್ ಪೇಜ್.
ಸಂಗ್ರಹ:ವೀರೇಶ್ ಅರಸಿಕೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1092

ದಿನಕ್ಕೊಂದು ಕಥೆ 1097