ದಿನಕ್ಕೊಂದು ಕಥೆ 1025

*🌻ದಿನಕ್ಕೊಂದು ಕಥೆ🌻*
*ಕಂಠಿಹಾರದ  ಕಳ್ಳ*

ಒಮ್ಮೆ ಅಕ್ಬರ್ ತನ್ನ ಪ್ರೀತಿಯ ರಾಣಿಗೆ  ಬೆಲೆಬಾಳುವ ಕಂಠೀಹಾರವನ್ನು ಉಡುಗರೆಯಾಗಿ ತಂದುಕೊಟ್ಟನು. ರಾಣಿಗೆ ಆ ಕಂಠೀ ಹಾರವನ್ನು ನೋಡಿ ಬಹಳ  ಸಂತೋಷವಾಯಿತು. ಪ್ರಭು ನೀವು ಪ್ರೀತಿಯಿಂದ ತಂದುಕೊಟ್ಟ  ಈ ಬೆಲೆಬಾಳುವ ಹಾರವನ್ನು ನಾನು ಬಹಳ ಜೋಪಾನವಾಗಿ ನೋಡಿಕೊಳ್ಳುವೆ. ನಾನು ತುಂಬಾ ಅದೃಷ್ಟವಂತೆ ಎಂದು  ಹೇಳಿದಳು. ರಾಜನು "ನಿನಗೆ ಸಂತೋಷವಾಗುತ್ತದೆ  ಎಂದು  ರಾಜ್ಯದ ಕುಶಲಕರ್ಮಿಗಳಿಂದ  ಈ ಬೆಲೆಬಾಳುವ ಕಂಠಿ ಹಾರವನ್ನು ಮಾಡಿಸಿದೆ.  ನಿನಗೆ ಇಷ್ಟವಾದರೆ ನನಗೆ ಸಂತೋಷ "ಎಂದನು. ಆಗ ರಾಣಿಯು, ಈ ಹಾರ ನನಗೆ ತುಂಬಾ ಇಷ್ಟವಾಗಿದೆ. ನನ್ನ ಜೀವಮಾನ ಪರ್ಯಂತ ಜೋಪಾನವಾಗಿ ಕಾಪಾಡುವೆ ಎಂದಳು.

ರಾತ್ರಿ ಸರವನ್ನು ತೆಗೆದು ಮೇಜಿನ ಮೇಲೆ ಇಟ್ಟು ಮಲಗಿದಳು. ಮರುದಿನ ಬೆಳಗ್ಗೆ ರಾಣಿಯು ಕಂಠಿ ಹಾರವನ್ನು ಮತ್ತೊಮ್ಮೆ ನೋಡಬೇಕೆಂದು ತೆಗೆದುಕೊಳ್ಳಲು ಹೋದಳು. ಆದರೆ ಅವಳಿಟ್ಟ ಜಾಗದಲ್ಲಿ ಆ ಕಂಠಿಹಾರ ಇರಲಿಲ್ಲ. ರಾತ್ರಿ ಮಲಗುವಾಗ ಅದನ್ನು ತೆಗೆದು ಟೇಬಲ್ಲಿನ ಮೇಲೆ ಇಟ್ಟಿದ್ದಳು. ಅವಳಿಗೆ ಅದು ಚೆನ್ನಾಗಿ ನೆನಪಿದೆ. ಆದರೆ ಈಗ ಹಾರ ಕಾಣುತ್ತಿಲ್ಲ ಎಲ್ಲಾ ಕಡೆ ಹುಡುಕಿದರೂ ಅದು ಸಿಗಲಿಲ್ಲ. ಆಗ ಅವಳು ತನ್ನ ದಾಸಿಯನ್ನು ಕರೆದು
ನಿನ್ನೆ ನನಗೆ ಮಹಾರಾಜರು ತಂದುಕೊಟ್ಟ ಕಂಠಿಹಾರ ಇಲ್ಲೇ ಇಟ್ಟಿದ್ದೆ. ಅದು ಕಳೆದುಹೋಗಿದೆ ನನಗೆ ಹುಡುಕಿಕೊಡು  ಎಂದಳು. ದಾಸಿಯು ಮಹಾರಾಣಿ ನೀವು ಚಿಂತಿಸಬೇಡಿ ನಾನು ಹುಡುಕಿ ಕೊಡವೆ ಆದರೆ ನಿಮ್ಮ ಹತ್ತಿರ ಬೇಕಾದಷ್ಟು ಬೆಲೆಬಾಳುವ ಹಾರಗಳು ಇದೆ ಅವುಗಳಲ್ಲಿ ಒಂದನ್ನು ಈ ದಿನ  ಧರಿಸಿ  ಎಂದಳು. ಅದಕ್ಕೆ ರಾಣಿ ಇಲ್ಲ ಹಾಗೆ ಆಗಲ್ಲ. ಮಹಾರಾಜರು ಬೆಲೆಬಾಳುವ ಹಾರವನ್ನು ಪ್ರೀತಿಯಿಂದ ತಂದುಕೊಟ್ಟಿದ್ದಾರೆ. ಅದೇ ನನಗೆ ಬೇಕು ಎಂದಾಗ, ದಾಸಿಯು ಎಲ್ಲಾ ಕಡೆ ಹುಡುಕಿದರೂ ಅವಳಿಗೆ ಸಿಗಲಿಲ್ಲ. ಆ ವೇಳೆಗೆ ರಾಜನು ರಾಣಿಯ  ಅಂತಃಪುರಕ್ಕೆ ಬಂದನು. ರಾಣಿ ಚಿಂತೆಯಿಂದ ಇರುವುದನ್ನು ನೋಡಿ ಏನಾಯಿತೆಂದು ಕೇಳಿದನು. 

ಅವಳು, ನನಗೆ ನನ್ನ ಬಗ್ಗೆ ತುಂಬಾ ನಾಚಿಕೆ ಯಾಗಿದೆ. ನೀವು ಪ್ರೀತಿಯಿಂದ ತಂದುಕೊಟ್ಟ ಹಾರವನ್ನು ಉಳಿಸಿಕೊಳ್ಳಲು ಆಗಲಿಲ್ಲ. ಬೆಲೆಬಾಳುವ ಕಂಠಿಹಾರ ಕಳೆದುಹೋಗಿದೆ ಎಂದು ಅಳುತ್ತಾ ಕುಳಿತಳು. ಕಳೆದು ಹೋಗಿರುವುದಕ್ಕೆ ನೀನು  ಹೊರಗೆ ಎಲ್ಲೂ ಹೋಗಿಲ್ಲ ,ಹಾಗಾದರೆ ಎಲ್ಲಿ ಹೋಗಿದೆ. ನೀನು ಚೆನ್ನಾಗಿ ಹುಡುಕಿದೆಯಾ? ಎಂದು ಕೇಳಿದನು. ಹೌದು ಎಲ್ಲಾ ಕಡೆಯೂ ಹುಡುಕಿದೆ. ನಿನ್ನೆ ರಾತ್ರಿ ಆ ಕಂಠಿ ಹಾರವನ್ನು ತೆಗೆದು ಮೇಜಿನ ಮೇಲೆ ಇಟ್ಟಿದ್ದೆ. ಆದರೆ ಬೆಳಿಗ್ಗೆ ಎದ್ದು ನೋಡುವಾಗ ಇಲ್ಲ ಎಂದಳು. ಆಗ ಮಹಾರಾಜನು, ರಾಣಿ, ಒಂದು ಕಂಠಿಹಾರಕ್ಕಾಗಿ ಇಷ್ಟು ಕೊರಗಬೇಡ. ನಾನು ಇದಕ್ಕಿಂತ ಉತ್ತಮವಾದದ್ದನ್ನು ಮಾಡಿಸಿ ಕೊಡುವೆ. ಹಾಗೆಯೇ ಕಳೆದುಹೋದ ಕಂಠಹಾರವನ್ನು ನಾಳೆ ಬೆಳಿಗ್ಗೆ ಒಳಗೆ ಹುಡುಗಿಸದೇ ಬಿಡುವುದಿಲ್ಲ ಎಂದನು. 

ಅರಮನೆಯ ಸೇವಕರನನ್ನು ಕರೆದು, ಎಲ್ಲಾ ಸೇವಕರನ್ನು ಹಾಗೂ ರಾಣಿಯ ಅಂತಪುರದ ಸೇವಕೀಯರನ್ನು ಕರೆದುಕೊಂಡು ಬನ್ನಿ, ಹಾಗೆ ಇಡೀ ಅಂತಃಪುರವನ್ನೆ ಜಾಲಾಡಿ  ರಾಣಿಯ ಕಂಠಹಾರವನ್ನು ಹುಡುಕಿರಿ ಎಂದನು. ಅರಮನೆಯ ಸೇವಕ, ಸೇವಕೀಯರೆಲ್ಲ ಸೇರಿ ಇಡೀ ಅಂತಃಪುರವನ್ನು ಹುಡುಕಿದರೂ  ಸಿಗಲಿಲ್ಲ. ಮಹಾರಾಜನಿಗೆ ಆತಂಕ ಹೆಚ್ಚಾಗಿ ಹಾಗಾದರೆ ಎಲ್ಲಿ ಹೋಯಿತು ಎಂದು ಸೇವಕನನ್ನು ಕೇಳಿದಾಗ,  ಮಹಾರಾಜ ಅದು ಕಳ್ಳತನ ವಾಗಿರಬೇಕು ಎಂದನು. ರಾಜನು ಸಿಟ್ಟಿನಿಂದ ಅರಮನೆಯ ಅಂತಃಪುರದಲ್ಲಿ ಕಳ್ಳತನವೇ ಎಂದಾಗ, ಹೌದು ಪ್ರಭು ಇತ್ತೀಚೆಗೆ ಅರಮನೆಯ ಬೇರೆ ಬೇರೆ ಭಾಗಗಳಲ್ಲಿ  ಕಳ್ಳತನಗಳು ಆಗುತ್ತಿದೆ. ರಾಜಭಟರು ಇದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಆದರೆ ಕಳ್ಳನ ಸುಳಿವು ಸಿಕ್ಕಿಲ್ಲ ಎಂದನು. ಅರಮನೆಯಲ್ಲಿ ಕಳ್ಳತನವೇ ? ಹಾಗಾದರೆ ಇದಕ್ಕೆ ಈ ದಿನ ರಾತ್ರಿಯೇ ಮುಕ್ತಾಯ ಹಾಡುತ್ತೇನೆ. ನಾಳೆ ಬೆಳಿಗ್ಗೆ ಹೊತ್ತಿಗೆ ರಾಣಿಯ ಮುಖದಲ್ಲಿ ನಗು ಇರಬೇಕು. ಈ ಕೂಡಲೇ ಬೀರಬಲ್ಲ ಗೆ ಹೇಳಿ ಕಳುಹಿಸಿ ಅವನೊಬ್ಬನೇ ಈ ರಹಸ್ಯವನ್ನು ಭೇದಿಸಲು ಸಾಧ್ಯವಾಗುತ್ತದೆ. 

ಬೀರಬಲ್ ಬಂದನು. ಜಹಾಂಪರಗೆ ನನ್ನ ಸಲಾಮುಗಳು ನನ್ನಿಂದ ಏನಾಗಬೇಕು. ನೀನು ಒಂದು ವಿಷಯವನ್ನು ಗಂಭೀರವಾಗಿ ತೆಗೆದುಕೊಂಡು ಈ ರಾತ್ರಿ ಅದನ್ನು ಸರಿಪಡಿಸಲೇಬೇಕು ಎಂದು ನಡೆದುದೆಲ್ಲಾ ತಿಳಿಸಿದನು.
ಈ ವಿಷಯವನ್ನೆಲ್ಲಾ ಕೇಳಿ, ಮಹಾಪ್ರಭು ಈ ಕಂಠಿಹಾರ ಕಳವು ಆಗಿರುವುದು ನಿಜ. ಇದನ್ನು ಅರಮನೆಯ ಸೇವಕ ಅಥವಾ ಸೇವಕಿಯರಲ್ಲಿ ಯಾರೋ ಒಬ್ಬರು  ಕಳ್ಳತನ ಮಾಡಿದ್ದಾರೆ. ಆಗ ರಾಜನು ರಾಣಿಯ ಅಂತಃಪುರದಲ್ಲಿ ರಾತ್ರಿಯವರೆಗೂ ಸಖಿ ಇದ್ದಳು ಎಂದನು. ಆಗ ಬೀರಬಲ್ಲನು ಪ್ರಭು ಅರಮನೆಯ ಸೇವಕರನ್ನೆಲ್ಲ ಒಂದೆಡೆ ಸೇರಿಸಿ, ನಾನು ನನ್ನ  ಚತುರನಾದ ಗೆಳೆಯನನ್ನು ಕರೆದುಕೊಂಡು ಬರುತ್ತೇನೆ ಎಂದಾಗ, ರಾಜನು ಯಾರು ನಿನ್ನ ಗೆಳೆಯ ತಿಳಿಸಿದರೆ ನಾವೇ ಕರೆಸುತ್ತೇವೆ ಎಂದನು. ಇಲ್ಲ ಪ್ರಭು ನನ್ನ ಗೆಳೆಯನನ್ನು ನಾನೇ ಹೋಗಿ ಕರೆದುಕೊಂಡು ಬರಬೇಕು. ಅವನು ಅನೇಕ ಸಿದ್ಧಿಗಳನ್ನು ಪಡೆದಿದ್ದಾನೆ ಅವನಿಂದಲೇ ಕೆಲಸ ಬೇಗ ಸಾಧ್ಯವಾಗುತ್ತದೆ ಎಂದನು. ನನಗೂ ನಿನ್ನ ಬುದ್ಧಿವಂತ ಸ್ನೇಹಿತನನ್ನು ನೋಡಬೇಕೆಂದು ಆಸೆಯಾಗಿದೆ ಬೇಗನೆ ಹೋಗಿ ಕರೆದುಕೊಂಡು ಬಾ ಎಂದನು. 

ಸ್ವಲ್ಪ ಸಮಯದಲ್ಲಿ ಬೀರಲ್ಲನು  ಒಂದು 'ಕತ್ತೆ'ಯೊಂದಿಗೆ ಬಂದನು. ರಾಜನು ಇದನ್ನು ನೋಡಿ, ಬೀರಬಲ್ ನೀನು ಇದೇನು  ಮಾಡುತ್ತಿರುವೆ? ನಿನ್ನ ಗೆಳೆಯನನ್ನು ಕರೆದುಕೊಂಡು ಬರುವೆ ಎಂದುಕೊಂಡಿದ್ದರೆ, ಈ ಕತ್ತೆ ಯನ್ನು ಕರೆ ತಂದಿದೆಯಲ್ಲ ನೀನು ಏನು ಮಾಡಲು ಹೊರಟಿರುವೆ ಎಂದನು. ಬೀರಬಲ್ಲನು  ಪ್ರಭು ಇವನೆ ನನ್ನ ಗೆಳೆಯ, ಇವನು ಅಷ್ಟ ಸಿದ್ಧಿಗಳನ್ನು ಪಡೆದಿದ್ದಾನೆ. ಇದು ಬಹಳ ಬೇಗ  ಕಳ್ಳನನ್ನು ಹಿಡಿಯಲು ಸಹಾಯ ಮಾಡುತ್ತದೆ. ನನಗೆ ಸ್ವಲ್ಪ ಸಮಯ ಕೊಡಬೇಕೆಂದು ಮಹಾರಾಜನನ್ನು ಕೇಳಿದನು. ಮಹಾರಾಜನ ಒಪ್ಪಿಗೆ ಪಡೆದು  ಒಂದು ಕಡೆ ಕತ್ತೆಯನ್ನು ಬಿಟ್ಟು, ಮಹಾರಾಜ ಈ ನನ್ನ ಗೆಳೆಯ ಅನೇಕ ಸಿದ್ಧಿಗಳನ್ನು ಪಡೆದಿದ್ದಾನೆ ಎಂದು ಆಗಲೇ ಹೇಳಿದೆ. ಆದುದರಿಂದ ಅರಮನೆಯ ಸೇವಕ ಸೇವಕೀಯರೆಲ್ಲ ಒಬ್ಬೊಬ್ಬರಾಗಿ ಒಳಗೆ ಹೋಗಿ ಕತ್ತೆಯ ಬಾಲವನ್ನು ಹಿಡಿದುಕೊಂಡು ನಾನು ಕಂಠೀ ಹಾರವನ್ನು ಕದ್ದಿಲ್ಲ ಎಂದು ಹೇಳಿಬರಬೇಕು ಎಂದನು. 

ಆ ಪ್ರಕಾರ ಒಬ್ಬೊಬ್ಬರೇ ಒಳಗೆ ಹೋಗಿ ಕತ್ತೆಯ ಬಾಲವನ್ನು ಹಿಡಿದುಕೊಂಡು ನಾನು ಕಂಠೀ ಹಾರವನ್ನು ಕದ್ದಿಲ್ಲ ಎಂದು ಹೇಳುತ್ತಿದ್ದರು.  ಎಲ್ಲ ಮುಗಿದ ಮೇಲೆ ಬೀರಬಲ್ಲನು  ಮಹಾಪ್ರಭು ಅವರೆಲ್ಲ ಹೊರಗೆ ಬಂದು ಒಂದು ಕಡೆ ನಿಲ್ಲಲಿ. ನಾನು ಒಳಗೆ ಹೋಗಿ ನನ್ನ ಗೆಳೆಯನ ಹತ್ತಿರ ಕಳ್ಳರು ಯಾರೆಂದು ತಿಳಿದುಕೊಂಡು ಬರುತ್ತೇನೆ ಎಂದನು. ಬೀರ್ಬಲ್ ಒಳಗೆ ಹೋಗಿ ಸ್ವಲ್ಪ ಹೊತ್ತಿಗೆ ಹೊರಗೆ ಬಂದನು. ಮಹಾಪ್ರಭು ನಾನು ಎಲ್ಲರನ್ನೂ ಪರೀಕ್ಷಿಸಬೇಕು ಎಂದು ಅನುಮತಿ ಪಡೆದು,  ಎಲ್ಲರೂ ತಮ್ಮ ಕೈಗಳನ್ನು ಬೀರಬಲ್ಲನಿಗೆ ಹತ್ತಿರ ಹಿಡಿದು ತೋರಿಸಿದರು. ಬೀರಬಲ್ಲನು ಒಬ್ಬನ ಹತ್ತಿರ ನಿಂತು ಇವನೇ ಆ ಕಳ್ಳ ಎಂದನು. ಅಕ್ಬರ್, ಅದು ಹೇಗೆ ಅವನನ್ನು ಕಳ್ಳ ಎಂದು ಹೇಳುವೆ? ಕಳ್ಳತನ ಮಾಡಿದ ಒಂದೇ ಒಂದು ಸುಳಿವು ಅವನಲ್ಲಿ ಕಾಣುವುದಿಲ್ಲ ಎಂದನು.  ಕಳ್ಳನು ಸಹ  ಪ್ರಭು ನಾನು ನಿಮ್ಮ ಸೇವಕನಾಗಿ ಎಷ್ಟೋ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಈ ಬೀರಬಲ್ ಸುಳ್ಳು ಹೇಳುತ್ತಾನೆ. ಇವನಿಗೆ ಕತ್ತೆ ಭಾಷೆ ಹೇಗೆ ಅರ್ಥವಾಗುತ್ತದೆ. ಕತ್ತೆ ಪುರಾವೆ  ಸಾಕ್ಷಿ ಯಾಗುವುದಿಲ್ಲ. ಇದನ್ನು ಕೇಳಿದ ಅಕ್ಬರ್ ಹೌದು ಅದು ಹೇಗೆ ಸಾಧ್ಯ? ಆಗ ಬೀರಬಲ್ ಹೇಳಿದ ಪ್ರಭು ನಾನು ಕತ್ತೆಯ ಬಾಲಕ್ಕೆ ಸ್ವಲ್ಪ ಸುಗಂಧವನ್ನು ಸವರಿದ್ದೆ, ಹೀಗಾಗಿ ನಾನು ಎಲ್ಲರಿಗೂ ಕತ್ತೆಯ ಬಾಲವನ್ನು ಹಿಡಿದುಕೊಂಡು ನಾನು ಕಂಠಿಹಾರ ವನ್ನು ಕದ್ದಿಲ್ಲ ಎಂದು ಹೇಳುವಂತೆ ಹೇಳಿದ್ದು, ತಪ್ಪಿತಸ್ಥ ಮಾತ್ರ ಕತ್ತೆಯ ಭಾಲವನ್ನು ಹಿಡಿಯಲು ಹಿಂಜರಿಯುತ್ತಾನೆ, ಇಲ್ಲೂ ಸಹ ಹಾಗೆ ಆಯಿತು. ಕಳ್ಳತನ ಮಾಡದೇ ಇರುವವರು ಕತ್ತೆಯ ಬಾಲ ಮುಟ್ಟಲು ಹಿಂಜರಿಕೆ ಇರುವುದಿಲ್ಲ. ಇಲ್ಲಿ ಬಂದ ಎಲ್ಲರೂ  ಕತ್ತೆಯ ಭಾಲವನ್ನು ಮುಟ್ಟಿ ಹೇಳಿದ್ದರಿಂದ ಅವರ ಕೈಗಳಿಂದ ಸುಗಂಧದ ವಾಸನೆ ಬರುತ್ತಿತ್ತು, ಈತನ ಕೈಯಲ್ಲಿ ಮಾತ್ರ ಸುಗಂಧದ ಪರಿಮಳ ಇರಲಿಲ್ಲ. ತಾನು ಸಿಕ್ಕಿಹಾಕಿಕೊಳ್ಳಬಹುದು ಎಂಬ ಅನುಮಾನದಿಂದ ಕತ್ತೆಯ ಭಾಗವನ್ನು ಈತ ಮುಟ್ಟಲಿಲ್ಲ. 

ಈ ಕತ್ತೆ ನನ್ನ ಅಗಸನದ್ದು, ಇದಕ್ಕೆ ಯಾವ ಅಷ್ಟಸಿದ್ಧಿಗಳು ಇಲ್ಲ, ನಾನು ಕಳ್ಳನನ್ನು ಕಂಡುಹಿಡಿಯಲು ಮಾಡಿದ ಉಪಾಯ ಅಷ್ಟೇ ಎಂದನು. ಕೂಡಲೇ ರಾಜನು, ಕಂಠಿ ಹಾರ ಕದ್ದ ಕಳ್ಳನಿಗೆ, "ಅರಮನೆಯಲ್ಲಿ ಕಳ್ಳತನ ಮಾಡಲು ನಿನಗೆ ಎಷ್ಟು ಧೈರ್ಯ, ನನ್ನ ನಂಬಿಕೆಗೆ ದ್ರೋಹ ಮಾಡಿದಿ, ನಿನ್ನ ಮನೆತನಕ್ಕೆ ಮಸಿ ಬಳಿದಿ" ಎಂದು ಸಿಟ್ಟಿನಿಂದ ಹೇಳಿದಾಗ ಆತನು ಕ್ಷಮಿಸಿ ಎಂದು ಇನ್ನಿಲ್ಲದಂತೆ ಬೇಡಿಕೊಂಡ. ಅದಕ್ಕೆ ರಾಜನು "ಒಂದು ಸಾರಿ ನಂಬಿಕೆಗೆ ದ್ರೋಹ ಬಗೆದ ಮೇಲೆ ನೀನು ಮತ್ತೆ ಇಂಥ ಕೆಲಸ ಮಾಡುವುದಿಲ್ಲವೆಂದು ಯಾವ ನಿರೀಕ್ಷೆಯೂ ನನಗಿಲ್ಲ.  ನಾನು ನಿನಗೆ ಕ್ಷಮೆ ನೀಡುವುದಿಲ್ಲ" ಎಂದು ನುಡಿದು, ಕಳ್ಳತನ  ಮಾಡಿದ ವಸ್ತುಗಳನ್ನೆಲ್ಲ ಇವನಿಂದ ಪಡೆದು ಇವನನ್ನು ಕಾರಾಗೃಹಕ್ಕೆ ತಳ್ಳಿ ಎಂದು ಸೇವಕರಿಗೆ ಆಜ್ಞೆ ಮಾಡಿದನು. ಉಳಿದ ಸೇವಕರಿಗೆ, ನಿಮ್ಮನ್ನೆಲ್ಲ ಅನುಮಾನಿಸಿದಕ್ಕೆ ಕ್ಷಮೆಯಾಚಿಸುತ್ತೇನೆ ಎಂದು ಹೇಳಿ, ನಿಮ್ಮ ನಿಮ್ಮ ಕೆಲಸ ನೋಡಿಕೊಳ್ಳಿ ಎಂದು ವಾಪಸ್ಸು ಕಳಿಸಿದನು. 

ಬೀರಬಲ್ ಕಡೆ ತಿರುಗಿ, ನೀನು ಕಳ್ಳನನ್ನು ಹಿಡಿಯಲು, ನನ್ನ ಪ್ರೀತಿ ಪಾತ್ರ ರಾಣಿಯ ಅಮೂಲ್ಯ ಕಂಠೀಹಾರವನ್ನು  ಹಿಂತಿರುಗಿ ಪಡೆಯಲು, ಮತ್ತೊಮ್ಮೆ ನಿನ್ನ ಚಾಣಾಕ್ಷತನದಿಂದ ಸಹಾಯ ಮಾಡಿದೆ. ನಿನ್ನ ಗೆಳೆಯ ಕತ್ತೆಯೂ ನಮಗೆ  ಸಹಾಯ ಮಾಡಿತುಷಎಂದು ಜೋರಾಗಿ ನಕ್ಕು ಧನ್ಯತೆಗಳನ್ನು ಅರ್ಪಿಸಿದನು. ಮಹಾರಾಜ ನಿಮಗೂ ಧನ್ಯವಾದಗಳು ಎಂದು ಬೀರಬಲ್ ಮಹಾರಾಜನಿಗೆ ನಮಸ್ಕರಿಸಿದನು. 

"ಕಳಬೇಡ, ಕೊಲಬೇಡ, ಹುಸಿಯ ನುಡಿಯಲುಬೇಡ
ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ,
ತನ್ನ ಬಣ್ಣಿಸಬೇಡ, ಇದಿರು ಹಳಿಯಲುಬೇಡ,
ಇದೇ ಅಂತರಂಗಶುದ್ಧಿ, ಇದೇ ಬಹಿರಂಗಶುದ್ಧಿ,
ಇದೇ ನಮ್ಮ ಕೂಡಲ ಸಂಗಮದೇವನೊಲಿಸುವ ಪರಿ" 


ಬರಹ:- ಆಶಾ ನಾಗಭೂಷಣ.
ಸಂಗ್ರಹ:ವೀರೇಶ್ ಅರಸಿಕೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1092

ದಿನಕ್ಕೊಂದು ಕಥೆ 1097