ದಿನಕ್ಕೊಂದು ಕಥೆ 1033

*🌻ದಿನಕ್ಕೊಂದು ಕಥೆ🌻*
*ಬಡತನ ಸತ್ತು ಹೋದಾಗ*

ಒಂದು ಬಡ ಸಂಸಾರವಿತ್ತು. ಆ ಸಂಸಾರದ ಯಜಮಾನ ಒಂದು ಖಾಸಗಿ ಕಂಪನಿಯ ಉದ್ಯೋಗಿಯಾದರೆ ಪತ್ನಿ ಗೃಹಿಣಿ. ಅವರಿಗೆ ಇಬ್ಬರು ಮುದ್ದು ಮಕ್ಕಳು. ಆದರೆ ಯಜಮಾನನಿಗೆ ಮಾತ್ರ ಕುಡಿತದ ಚಟ. ಸರಿಯಾಗಿ ಕೆಲಸಕ್ಕೆ ಹೋಗದೆ, ದಿನಾ ಕುಡಿದು ಮನೆಗೆ ಬಂದು ಲೇ ಲೇ ಹಾಕುತಿದ್ದ. ಆತನ ತಿಂಗಳ ಸಂಬಳ ಅವನ ಕುಡಿತಕ್ಕೆ ಸಾಕಾಗುತ್ತಿರಲಿಲ್ಲ. ಮನೆ ಗೃಹಿಣಿ ಕೆಲಸಕ್ಕೆ ಸೇರಿದಾಗ, ಅದಕ್ಕೂ ಅನುಮಾನ ಪಟ್ಟು ಬೈದು ನಿಂದನೆ ಮಾಡಿ ಕೆಲಸ ಬಿಡಿಸಿದ. ಮನೆ ಬಾಡಿಗೆ, ಮಕ್ಕಳ ವಿದ್ಯಬ್ಯಾಸ, ಮನೆ ಖರ್ಚು ಎಂಬಂತೆ, ಯಾವುದನ್ನೂ ನಿಭಾಯಿಸಲು ಸಾಧ್ಯವಾಗದೆ ಕೈ ತುಂಬಾ ಸಾಲ ಮಾಡಿಕೊಂಡಿದ್ದ. ಅದರ ಪರಿಣಾಮ, ಅತೀವವಾದ ಬಡತನ ಅವನ ಸಂಸಾರವನ್ನು ಕಾಡುತ್ತಿತ್ತು. ಕೈಯಲ್ಲಿ ಹಣವಿಲ್ಲ. ಒಂದು ಹೊತ್ತಿನ ಊಟಕ್ಕೂ ಗತಿಯಿಲ್ಲದೆ ಪರದಾಡುವ ಪರಿಸ್ಥಿತಿ ಅವರದ್ದು. ಅಂದರೆ, ಆತನ ಈ ಕುಡಿತದ ಚಟದಿಂದಾಗಿ ಬಡತನ ಅವರ ಬೆನ್ನು ಹತ್ತಿ ಕಾಡುತ್ತಿತ್ತು.
ಒಂದು ಕಡೆ ಬಾಡಿಗೆಗಾಗಿ ಮನೆ ಮಾಲೀಕರ ಕಿರುಕುಳವಾದರೆ ಇನ್ನೊಂದು ಕಡೆ ಸಾಲಗಾರರ ಕಿರುಕುಳ. ಈ ಎಲ್ಲಾ ಕಷ್ಟಗಳಿಂದ ಪಾರಾಗುದು ತುಂಬಾ ಕಷ್ಟ ಎಂದು ಭಾವಿಸಿದ ಆತನ ಹೆಂಡತಿ ' ಮರಿಯಾದೆಗೆ ಅಂಜಿದಳು. ಬದುಕಲು ಇಷ್ಟವಿಲ್ಲದೆ, ಮಕ್ಕಳ ಜೊತೆ ಆತ್ಮಹತ್ಯೆ ಮಾಡಿಕೊಳ್ಳುವ ತೀರ್ಮಾನಕ್ಕೆ ಬಂದು ಬಿಟ್ಟಳು .
ಮರುದಿನ ಅವಳ ಯಜಮಾನ ಕೆಲಸಕ್ಕೆಂದು ಹೊರಟು ಹೋದ. ಮಕ್ಕಳೂ ಶಾಲೆಗೆ ಹೊರಟು ಹೋದರು. ಆ ವೇಳೆಗೆ ಮನೆಯಲ್ಲಿ ಯಾರೂ ಇಲ್ಲ. ಗೃಹಿಣಿ ಒಬ್ಬಳೆ. ಏಕಾಂಗಿಯಾಗಿ ಮಾರ್ಕೆಟಿಗೆ ಹೋದಳು. ವಿಷದ ಬಾಟಲಿ ಖರೀದಿ ಮಾಡಿ ಮನೆಗೆ ಬಂದವಳು' ಶ್ರೀ ಕೃಷ್ಣ ಪರಮಾತ್ಮನ ಫೋಟೋದ ಮುಂದೆ ನಿಂತು, ದೇವ ಶ್ರೀ ಕೃಷ್ಣ ಪರಮಾತ್ಮ ಇಲ್ಲಿ ಕೇಳು. ಇಂದು ನಾನು" ನಿನಗೆ ಕೊನೆಯ ದೀಪ ಹಚ್ಚುವೆನು. ಇನ್ನು ಮುಂದೆ ನೀನು, ನನ್ನ ಮತ್ತು ನನ್ನ ಮಕ್ಕಳ ಮುಖ ನೋಡಲಾರೆ. ಕ್ಷಮಿಸು ಎಂದು ಹೇಳಿ ದೀಪ ಹಚ್ಚಿ ಕೈ ಮುಗಿದು ನಮಸ್ಕಾರ ಮಾಡಿದಳು. ಅಲ್ಲಿಯೆ ಒಂದು ಮೂಲೆಯಲ್ಲಿ ಕುಳಿತು ಕಣ್ಣೀರು ಹಾಕಿದಳು. ಒಂದು ಖಾಲಿ ಪೇಪರ್ ತೆಗೆದು, ಅದರಲ್ಲಿ ಡೆತ್ ನೋಟ್ ಬರೆಯಲು ಸುರುಮಾಡುವ ಹೊತ್ತಿಗೆ ಒಂದು ಆಘಾತಕಾರಿ ಘಟನೆ ನಡೆದು ಹೋಯಿತು. ಅಂದರೆ, ಅವಳ ಯಜಮಾನ ರಸ್ತೆ ಅಪಘಾತದಲ್ಲಿ ಮೃತಪಟ್ಟ  ಎಂಬ ಸುದ್ದಿ ಬಂತು. ಗಾಬರಿಗೊಂಡ ಅವಳು ಎಲ್ಲವನ್ನೂ ಅಲ್ಲೇ ಬಿಟ್ಟು ಆಸ್ಪತ್ರೆ ಕಡೆಗೆ ಹೊರಟು ಹೋದಳು. ಅಲ್ಲಿ ನೋಡಿದರೆ, ಯಜಮಾನ ಸತ್ತು ಹೋಗಿದ್ದ. ನೋಡು ನೋಡುತಿದ್ದಂತೆ ಅವಳಿಗೆ ತಡೆಯಲಾಗದಷ್ಟು ಅಳುಬಂತು. ಭಯ ಸಂಕಟ ಮತ್ತಷ್ಟು ಹೆಚ್ಚಾಯಿತು. ಒಮ್ಮೆ ಜೋರಾಗಿ ಅತ್ತು ಬಿಟ್ಟಳು. Death body ಪಡೆದು  ಮಕ್ಕಳ ಜೊತೆ ಸೇರಿ ಸ್ಮಶಾನ ಭೂಮಿಯಲ್ಲಿ ಗಂಡನ ಅಂತ್ಯ ಸಂಸ್ಕಾರ ಕೂಡ ಮಾಡಿ ಮುಗಿಸಿದಳು. ಇನ್ನು ಮಕ್ಕಳ ಜೊತೆಗೆ ಆತ್ಮಹತ್ಯೆ ಮಾಡಿಕೊಳ್ಳಲು ಮನೆ ಕಡೆಗೆ ಹೆಜ್ಜೆ ಹಾಕಿದಳು. ಮುಂದೆ ಹೋಗುತ್ತಿದ್ದಂತೆ ರಸ್ತೆ ಪಕ್ಕದ ಬಟ್ಟೆ ಅಂಗಡಿಯಲ್ಲಿ ಕೆಲಸಕ್ಕೆ ಸೇಲ್ಸ್‌ ಗರ್ಲ್ಸ್ ಬೇಕು ಎಂದು ಬೋರ್ಡ್ ಹಾಕಲಾಗಿತ್ತು. ಅದು ಅವಳ ಗಮನಕ್ಕೆ ಬಂತಾದರು, ಅದನ್ನು ಲೆಕ್ಕಿಸದೆ, ಮಕ್ಕಳ ಜೊತೆ ಸೀದಾ ಮನೆ ಸೇರಿಕೊಂಡಳು. ಮಕ್ಕಳು ಹಸಿವುನಿಂದ ಬಳಲುತ್ತಿದ್ದರು. ತಾನೂ ಕೂಡ ಹೊಟ್ಟೆಗೆ ಏನೂ ತಿಂದಿಲ್ಲ. ದುಃಖ ತಡೆಯುತ್ತಿಲ್ಲ. ಬದುಕು ಅಂತ್ಯವಾಗುವ ಸಮಯ ಬಂದೇ ಬಿಟ್ಟಿತು. ಆದರೂ ಮಕ್ಕಳ ಮುಖ ನೋಡಿ ಗಂಜಿ ಬೇಯಿಸಲು ಇಟ್ಟಳು. ಗಂಜಿ ತಯಾರಾಯಿತು. ಇನ್ನು ಗಂಜಿಗೆ ವಿಷ ಬೆರೆಸಬೇಕು. ತಂದಿಟ್ಟ ವಿಷದ ಬಾಟಲಿಯ ಮುಚ್ಚಲ ತೆರೆದಳು . ಗಂಜಿಗೆ ವಿಷ ಬೆರೆಸಬೇಕು ಅನ್ನುವಷ್ಟರಲ್ಲಿ' ತಕ್ಷಣ ಅವಳಿಗೆ ಗೋಚರಿಸಿದ್ದು ಬಟ್ಟೆ ಅಂಗಡಿಯ ಬೋರ್ಡ್. ಆಗ ಯಾಕೋ ಏನೋ " ವಿಷ ಬೆರೆಸುವ ಮನಸ್ಸು ಹಿಂದೆ ಸರಿಯಿತು. ಬಾಟಲಿಗೆ ಮತ್ತೆ ಮುಚ್ಚಲ ಹಾಕಿ, ಯಾರಿಗೂ ಕಾಣದಂತೆ ಮುಚ್ಚಿಟ್ಟಳು. ಮಕ್ಕಳಿಗೆ ಬಿಸಿ ಬಿಸಿ ಗಂಜಿ ಹೊಟ್ಟೆ ತುಂಬ ಬಡಿಸಿ, ನೇರವಾಗಿ ಬಟ್ಟೆ ಅಂಗಡಿಯತ್ತ ಹೊರಟು ಹೋದಳು. ಬಟ್ಟೆ ಅಂಗಡಿಯ ಮಾಲೀಕರ ಬಳಿ ಕೆಲಸ ಕೇಳಿಕೊಂಡಳು. ಮಾಲಿಕರು ತಿಂಗಳಿಗೆ ನಾಲ್ಕು ಸಾವಿರ ರೂಪಾಯಿ ಸಂಬಳ ಮತ್ತು ಬಟ್ಟೆ ಸೇಲ್ಸ್‌ ಮೇಲೆ 10% ಕಮಿಶನ್ ಕೊಡುವುದಾಗಿ ಹೇಳಿ, ಮರುದಿನ ಬೆಳಿಗ್ಗೆ ಕೆಲಸಕ್ಕೆ ಬರುವಂತೆ ಸೂಚಿಸಿದರು. ಆಗ ಕಣ್ಣೀರಲ್ಲಿ ಮುಳುಗಿ ಹೋಗಿರುವ ಗೃಹಿಣಿ ಸ್ವಲ್ಪ ನೆಮ್ಮದಿಯ ನಿಟ್ಟುಸಿರು ಬಿಟ್ಟಳು. ಅಲ್ಲಿಂದ ಮನೆಗೆ ಬಂದವಳು ಗಂಡನ ಫೋಟೋದ ಮುಂದೆ ಕುಳಿತು, ದುಃಖದಿಂದ ತನ್ನ ಮನದಾಳದ ಮಾತುಗಳನ್ನು ಆಡಲು ಶುರು ಮಾಡಿದಳು. 
ನೋಡಿ, ನಾನು ಇನ್ನು ನಮ್ಮ ಅಮಾಯಕ ಮಕ್ಕಳನ್ನು ಕೊಂದು ನಿಮ್ಮ ಬಳಿಗೆ ಬರುವುದಿಲ್ಲ. ನನಗೆ ಬಟ್ಟೆ ಅಂಗಡಿಯಲ್ಲಿ ಸೇಲ್ಸ್‌ ಗರ್ಲ್ ಕೆಲಸ ಸಿಕ್ಕಿದೆ. ನಾಳೆಯಿಂದ ನಾನು ಕೆಲಸಕ್ಕೆ ಹೋಗುವೆ. ಇನ್ನು ನೀವು ನನ್ನ ಮೇಲೆ ಅನುಮಾನ ಪಟ್ಟು ಬೈದು ಕೆಲಸ ಬಿಡಿಸಲು ಸಾಧ್ಯವಿಲ್ಲ. ಯಾಕೆಂದರೆ, ನೀವು ನನ್ನ ಜೊತೆ ಇಲ್ಲ. ನಿಮ್ಮಾಣೆ, ನಾನು ಎಂದೂ ಸಂಶಯಕ್ಕೆ ಎಡೆಮಾಡಿ ಕೊಡುವುದಿಲ್ಲ. ಇಲ್ಲಿ ನೋಡಿ, ನನ್ನ ಹಣೆ ಮೇಲೆ ನೀವು ಇಟ್ಟ ಕುಂಕುಮ ಇನ್ನೂ ಭದ್ರವಾಗಿದೆ. ನೀವು ಪ್ರೀತಿಯಿಂದ ಕಟ್ಟಿದ ಮಾಂಗಲ್ಯ ಸರ ಕೂಡ ಹಾಗೆಯೇ ಉಳಿದಿದೆ ನೋಡಿ. ಇವು ಎರಡೂ ನನ್ನ ಬಳಿ ಇರುವ ವರೆಗೂ.. ಯಾರು ಕೂಡ ನನ್ನನ್ನು ಅನುಮಾನದಿಂದ ನೋಡಲು ಸಾಧ್ಯವಿಲ್ಲ. ಈ ಎರಡನ್ನೂ ನಾನು ಜೀವಂತ ಇರುವ ವರೆಗೂ ಉಳಿಸಿಕೊಳ್ಳುವೆ. ನಿಮ್ಮ ನಂಬಿಕೆಗೆ ಎಂದೂ ದ್ರೋಹ ಮಾಡಿಲ್ಲ. ಮುಂದೆಯೂ ಮಾಡಲ್ಲ ಎಂದು ಹೇಳುತ್ತಾ ಅಲ್ಲಿಯೇ ನಿದ್ದೆಗೆ ಜಾರಿದಳು.
ಮರುದಿನ ಬೆಳಿಗ್ಗೆ ಬೇಗನೆ ಎದ್ದು ಮಕ್ಕಳಿಗೆ ಕಾಫಿ ತಿಂಡಿ ಕೊಟ್ಟು, ತಾನೂ ಸ್ವಲ್ಪ ತಿಂದು ಹೊರಟವಳು ಬಟ್ಟೆ ಅಂಗಡಿಯ ಕೆಲಸಕ್ಕೆ ಸೇರಿಕೊಂಡಳು. ಬಟ್ಟೆ ವ್ಯಾಪಾರದಲ್ಲಿ ತುಂಬಾ ಜಾಣೆ. ದಿನ ಹೋದಂತೆ ನಂಬರ್ ಒನ್ ಸೇಲ್ಸ್‌ ಗರ್ಲ್ ಪಟ್ಟಕ್ಕೆ ಏರಿದಳು. ದಿನಕ್ಕೆ ಲಕ್ಷ ರೂಪಾಯಿ ಮೌಲ್ಯದ ವರೆಗೂ ಬಟ್ಟೆ ಮಾರಾಟ ಮಾಡಲು ಸುರುಮಾಡಿದಳು. ಪ್ರತಿ ದಿನ ಮೂರರಿಂದ ನಾಲ್ಕು ಸಾವಿರ ರೂಪಾಯಿ ವರೆಗೂ ಕಮಿಶನ್ ಬರಲು ಸುರುವಾಯಿತು. ಆ ಹಣದಿಂದ ಅವಳ ಯಜಮಾನ ಮಾಡಿಟ್ಟ ಸಾಲವನ್ನೆಲ್ಲ ತೀರಿಸಿದಳು. ಮಕ್ಕಳ ವಿದ್ಯಬ್ಯಾಸದ ಖರ್ಚನ್ನೂ ಸ್ವತಃ ತಾವೇ ನೋಡಿಕೊಂಡಳು. ನೆಮ್ಮದಿಯಿಂದ ಸ್ವಂತ ಗಾಡಿ, ಸ್ವಂತ ಮನೆ ಮಾಡಿಕೊಂಡ ಅವಳು " ಒಮ್ಮೆ ತನ್ನ ಹಿಂದಿನ ಬದುಕಿನ ಬಗ್ಗೆ ಹಿಂತಿರುಗಿ ನೋಡಿದಳು.
ಆಗ ಅವಳಿಗೆ ಗೊತ್ತಾಗಿದ್ದು, ರಸ್ತೆ ಅಪಘಾತದಲ್ಲಿ ಸತ್ತು ಹೋಗಿದ್ದು ಬಡತನ. ತನ್ನ ಗಂಡ ಅಲ್ಲ. 

ಈ ಕಥೆಯ ಮೂಲ ಉದ್ದೇಶ "

*ಬಡತನವನ್ನು ನಾವೇ ಸೃಷ್ಟಿಸುವುದು ಹೊರತು, ನಮ್ಮ ಪರಿಶ್ರಮ ಅಲ್ಲ.* 

ರಚನೆ : ಎನ್. ಎಸ್ ಶೆಟ್ಟಿ
ಸಂಗ್ರಹ:ವೀರೇಶ್ ಅರಸಿಕೆರೆ ವಿಜಯನಗರ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1092

ದಿನಕ್ಕೊಂದು ಕಥೆ 1097