ದಿನಕ್ಕೊಂದು ಕಥೆ 1034

*🌻ದಿನಕ್ಕೊಂದು ಕಥೆ🌻*

*ಹವ್ಯಾಸ ಬದಲಿಸಿದರೆ ಹಣೆಬರಹ ಬದಲಾದೀತು!*

ಇದು ಎರಡು ಓಟೆಗಳ ಕಥೆ.
ಒಮ್ಮೆ ಒಬ್ಬ ಗೃಹಿಣಿ ಎರಡು ಮಾವಿನ ಹಣ್ಣಿನ ಓಟೆಗಳನ್ನು ತಿಪ್ಪೆಯ ಮೇಲೆ ಬಿಸಾಡಿದಳು.
ಒಂದು ಓಟೆ ಯೋಚನೆ ಮಾಡಿತು ನನ್ನ ಬೇರುಗಳು ಭೂಮಿಯೊಳಕ್ಕೆ ಹೋಗುತ್ತವೆ, ಅಂತರ್ಜಲವನ್ನು ಹೀರಿಕೊಳ್ಳುತ್ತವೆ, ತಿಪ್ಪೆಯ ಗೊಬ್ಬರ ಪೌಷ್ಟಿಕಾಂಶ ಕೊಡುತ್ತದೆ, ಸಸಿಯಾಗುತ್ತೇನೆ, ನಂತರ ಸಣ್ಣ ಗಿಡವಾಗುತ್ತೇನೆ, ಕಾಲಂತರದಲ್ಲಿ ದೊಡ್ಡ ಮರವಾಗಿ ಬೆಳೆಯುತ್ತೇನೆ. ಮಾವಿನ ಸೊಪ್ಪು, ರುಚಿಕರ ಮಾವಿನ ಹಣ್ಣನ್ನು ಕೋಡುತ್ತೇನೆ. ನೂರಾರು ವರ್ಷಗಳು ಬದುಕುತ್ತೇನೆ ಎಂದು ಯೋಚಿಸಿ ಅದರಂತೆಯೇ ಬೆಳೆಯಿತು, ಬದುಕಿತು.

ಅದರ ಪಕ್ಕದಲ್ಲೇ ಇದ್ದ ಮತ್ತೊಂದು ಓಟೆ ನನ್ನ ಬೇರುಗಳಿಗೆ ಅಂತರ್ಜಲ ಸಿಕ್ಕದಿದ್ದರೇ? ಪೌಷ್ಟಿಕಾಂಶ ಸಿಗದಿದ್ದರೇ? ಗಿಡವಾದಾಗ ಕುರಿ ಮೇಕೆಗಳು ಬಂದು ತಿಂದುಬಿಟ್ಟರೇ? ಮರವಾಗಿ ಹಣ್ಣು ಬಿಡುವಾಗ, ಜನ ಹಣ್ಣು ಉದುರಿಸಲು ಕಲ್ಲು ಹೊಡೆದರೆ ನನಗೆ ನೋವಾಗುದಿಲ್ಲವೇ? ಎಂದೆಲ್ಲ ಯೋಚಿಸಿ ಬೇರನ್ನು ಕೆಳಗೆ ಬಿಡದೆ, ಮೇಲೆ ಸಸಿಯಾಗಿ ಬೆಳೆಯದೆ ಹಾಗೆಯೇ ಉಳಿಯಿತು. ಕೆಲವೇ ದಿನಗಳಲ್ಲಿ ತಿಪ್ಪೆಯಲ್ಲಿನ ಗೊಬ್ಬರದೊಂದಿಗೆ ಗೊಬ್ಬರವಾಗಿ ಬೆರೆತು ಹಾಳಾಗಿ ಹೋಯಿತು.

ಮೊದಲನೆಯ ಓಟೆಯ ಮನೋಭಾವ ಸಕಾರಾತ್ಮಕ.
ಎರಡನೆಯ ಓಟೆಯ ಮನೋಭಾವ ನಕಾರಾತ್ಮಕ.
ಸಕಾರಾತ್ಮಕ ವಾಗಿದ್ದ ಓಟೆ ಬೆಳೆದು ದಶಕಗಳ ಕಾಲ ಉಳಿಯಿತು. ಆದರೆ ನಕಾರಾತ್ಮಕವಾಗಿದ್ದ ಓಟೆ ಒಂದೆರಡು ವಾರಗಳಲ್ಲೇ ಮರೆಯಾಗಿ ಹೋಯಿತು.

ನೀಜ ಜೀವನದಲ್ಲೂ ಸಹ ನಮ್ಮ ಬಳಿ ಬುದ್ದಿವಂತಿಕೆ, ಜ್ಞಾನ, ಪ್ರತಿಭೆ, ಅವಕಾಶಗಳು ಎಲ್ಲವೂ ಇರಬಹುದು, ಆದರೆ ಸಕಾರಾತ್ಮಕ ಮನೋಭಾವ ಇಲ್ಲದಿದ್ದರೆ, ಇವೆಲ್ಲವೂ ವ್ಯರ್ಥ ವಾಗುತ್ತವೆ.

ಒಳ್ಳೆಯ ಹವಾಮಾನವಿದ್ದರೇನು, ಮೇಲೇರುವ ಮನೋಭಾವವಿಲ್ಲದಿದ್ದರೆ ಗಾಳಿಪಟ ಸಹ ಮೇಲೇರುವುದಿಲ್ಲ. ಅವಕಾಶಗಳು ಎಲ್ಲರಿಗೂ ಒದಗುತ್ತವೆ. ಸಕಾರಾತ್ಮಕವಾಗಿರುವವರು ಅವಕಾಶಗಳನ್ನು ಹುಡುಕುತ್ತಾರೆ. ನಕಾರಾತ್ಮಕ ವಾಗಿರುವವರು ಸಂಶಯಿಸುತ್ತಾರೆ. ಸಮಸ್ಯೆಗಳು ಎಲ್ಲರಿಗು ಬರುತ್ತವೆ, ಸೋಲುಗಳು ಎದುರಾಗುತ್ತವೆ ಸಕಾರಾತ್ಮಕವಾಗಿ ಯೋಚಿಸುವವರು ಬಿದ್ದರು ಮತ್ತೆ ಎದ್ದು ಮುಂದುವರೆಯುತ್ತಾರೆ.

ಕನ್ನಡದ ಹೆಸರಾಂತ  ಕವಿ ಶಾಯಿರಿಯ ಸರದಾರ ಶ್ರೀ ಅಸಾದುಲ್ಲಾ ಬೇಗ್ ರವರು ಒಂದು ಕವನ ದಲ್ಲಿ ಹೇಳುತ್ತಾರೆ 
ಹವ್ಯಾಸ ಬದಲಿಸು - ಹಣೆಬರಹ ಬದಲಾದೀತು! 

ದೃಷ್ಟಿ ಬದಲಿಸು - ದೃಶ್ಯ ಬದಲಾದೀತು!

ದೋಣಿ ಬದಲಿಸಬೇಕಿಲ್ಲ -  ದಿಕ್ಕು ಬದಲಿಸಿದರೆ ಸಾಕು ದಡ ಸಿಕ್ಕೀತು!

ನಾವುಗಳು ಸಹ ನಮ್ಮ ವೃತ್ತಿಯಲ್ಲಿ ಸಕಾರಾತ್ಮಕವಾಗಿ ಯೋಚಿಸಿ ಕೆಲಸ ಮಾಡಿದರೆ ನಮ್ಮ ಫಲಿತಾಂಶವು ಸಹ ಪ್ರಗತಿಯ ಉತ್ತುಂಗದಲ್ಲಿರುತ್ತದೆ.

ಕೃಪೆ:ವಾಟ್ಸಾಪ್ ಗ್ರೂಪ್
ಸಂಗ್ರಹ: ವೀರೇಶ್ ಅರಸಿಕೆರೆ ವಿಜಯನಗರ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1092

ದಿನಕ್ಕೊಂದು ಕಥೆ 1097