ದಿನಕ್ಕೊಂದು ಕಥೆ 1035

*🌻ದಿನಕ್ಕೊಂದು ಕಥೆ🌻*
*ವಿದ್ಯಾ ದದಾತಿ ವಿನಯಂ*

ಚಂದ್ರಗುಪ್ತ ನೆಂಬ ರಾಜನು ವಿದ್ಯಾಕಾಶಿಯನ್ನು ಆಳುತ್ತಿದ್ದನು. ಚತುರನು, ವಿದ್ಯಾವಂತನು, ಬುದ್ಧಿವಂತನು, ಸಮರ್ಥ ಆಡಳಿತಗಾರನಾಗಿದ್ದನು. ರಾಜ್ಯವು ಸುಭಿಕ್ಷವಾಗಿತ್ತು. ರಾಜನಿಗೆ ಅಧ್ಯಾತ್ಮದತ್ತ ಒಲವು ಮೂಡಿತು. ಆಧ್ಯಾತ್ಮವನ್ನು ಕಲಿತು ತಿಳಿದುಕೊಳ್ಳಬೇಕೆಂಬ ಹಂಬಲದಿಂದ, ಆತನು ತನ್ನ ಮಂತ್ರಿಯನ್ನು ಕರೆದು ಮಹಾಮಂತ್ರಿಗಳೆ ನಾನು ಆಧ್ಯಾತ್ಮವನ್ನು ಕಲಿತುಕೊಳ್ಳಬೇಕು ನಮ್ಮ ರಾಜ್ಯದಲ್ಲಿರುವ ಎಲ್ಲಾ ಗುರುಕುಲಗಳನ್ನು ವಿಚಾರಿಸಿ, ಶ್ರೇಷ್ಠವಾದ ಆಧ್ಯಾತ್ಮ ಅನುಭವವಿರುವ ಗುರುವನ್ನು ಗುರುತಿಸಿ, ಪ್ರತಿದಿನ ಅರಮನೆಗೆ ಬಂದು ನನಗೆ ಆಧ್ಯಾತ್ಮ ಕಲಿಸಿಕೊಡುವಂತೆ ತಿಳಿಸಿ ಎಂದನು . 

ಸ್ವಲ್ಪ ದೂರದ ಕಾಡಿನಲ್ಲಿ 'ಸುಗುಣಾನಂದ' ಎಂಬ ಅನುಭವಿ ಆಧ್ಯಾತ್ಮ ಗುರುಗಳು ವಾಸಿಸುತ್ತಿದ್ದಾರೆ. ಅವರಿಗೆ ದೈವ ಸಾಕ್ಷಾತ್ಕಾರವಾಗಿದೆ ಎಂದು ಎಲ್ಲರೂ ಹೇಳುತ್ತಾರೆ. ಆದರೆ ಅವರು ಅರಮನೆಗೆ ಬರಲು ಒಪ್ಪುವರೇ ಎಂಬ ಅನುಮಾನ ನನಗೆ ಇದೆ ಎಂದು ಮಂತ್ರಿಯು ಹೇಳಿದನು. ಅದಕ್ಕೆ ರಾಜನು ಮಂತ್ರಿಗಳೆ, ನೀವು ರಥವನ್ನು ತೆಗೆದುಕೊಂಡು ಹೋಗಿ ಗೌರವಾದರದಿಂದ ಮಾತನಾಡಿಸಿ ಅವರನ್ನು ಹೇಗಾದರೂ ಮಾಡಿ ಅರಮನೆಗೆ ಕರೆತನ್ನಿ ಎಂದನು. 

ರಾಜನ ಮಾತಿನಂತೆ ಮಂತ್ರಿ ರಥದಲ್ಲಿ ಹೊರಟು ಗುರುಗಳ ಆಶ್ರಮಕ್ಕೆ ಬಂದನು. ಗುರುಗಳನ್ನು ಕಂಡು ವಿನಯದಿಂದ ನಮಸ್ಕರಿಸಿ, ಸ್ವಾಮಿ ನಾನು ಅರಮನೆಯಿಂದ ಬಂದಿದ್ದೇನೆ. ನಮ್ಮ ರಾಜರಿಗೆ ಆಧ್ಯಾತ್ಮವನ್ನು ಕಲಿಯಬೇಕೆಂಬ ಆಸೆಯಾಗಿದೆ ಆದ್ದರಿಂದ ತಾವು ಅರಮನೆಗೆ ಬಂದು ಮಹಾರಾಜರಿಗೆ ಆಧ್ಯಾತ್ಮ ಙ್ಞಾನವನ್ನು ಬೋಧಿಸಬೇಕು ಎಂದು ನಮ್ರತೆಯಿಂದ ಕೇಳಿದನು. ಆಗ ಸುಗುಣಾನಂದ ಗುರುಗಳು, ಮಂತ್ರಿಗಳೇ ನಮಗೆ ಅರಮನೆಯ ಅವಶ್ಯಕತೆಯಿಲ್ಲ. ಆಧ್ಯಾತ್ಮ ಬೇಕಾಗಿರುವುದು ರಾಜನಿಗೆ. ಅವನಿಗೆ ಕಲಿಯಲೇಬೇಕೆಂಬ ಇಚ್ಛೆ ಇದ್ದರೆ ಅವನೇ ನನ್ನ ಗುಡಿಸಲಿಗೆ ಬರಲಿ. ಇದನ್ನು ನಿಮ್ಮ ರಾಜನಿಗೆ ತಿಳಿಸಬಹುದು ಎಂದರು. 

ಮಂತ್ರಿಯು ಆ ಸಂದೇಶವನ್ನು ರಾಜನಿಗೆ ತಿಳಿಸಿದರು. ರಾಜನು ಆಧ್ಯಾತ್ಮ ಕಲಿಯಲೇಬೇಕೆಂಬ ಇಚ್ಛೆಯಿಂದ ಸುಗುಣಾನಂದ ಗುರುಗಳ ಗುಡಿಸಲಿಗೆ ಬಂದನು. ಆ ಸಮಯದಲ್ಲಿ ಗುರುಗಳು ಗುಡಿಸಲ ಒಂದು ಕೋಣೆಯಲ್ಲಿ 
ಅಧ್ಯಯನ ಮಾಡುತ್ತಾ ಕುಳಿತ್ತಿದ್ದರು. ಒಂದು ನಿಮಿಷ ನೋಡಿದ ರಾಜನು, ಮಂತ್ರಿಗಳೇ ನಾನು ಬಂದಿರುವ ವಿಚಾರವನ್ನು ಗುರುಗಳಿಗೆ ತಿಳಿಸಿ ಎನ್ನಲು, ಮಂತ್ರಿಯು ಗುಡಿಸಲೊಳಗೆ ಹೋಗಿ ಗುರುಗಳಿಗೆ ನಮಸ್ಕರಿಸಿ, ಸ್ವಾಮಿ ಮಹಾರಾಜರು ಬಂದು ಹೊರಗಡೆ ನಿಂತಿದ್ದಾರೆ ಎಂದು ತಿಳಿಸಿದನು. ರಾಜನು ಗುರುಗಳೇ ಬಂದು ತನ್ನನ್ನು ಸ್ವಾಗತಿಸುತ್ತಾರೆ ಎಂದು ತಿಳಿದುಕೊಂಡು ಕಾಯುತ್ತಿದ್ದನು. ಆದರೆ ಗುರುಗಳು ರಾಜನನ್ನೇ ಗುಡಿಸಲ ಒಳಗೆ ಬರಲು ಹೇಳಿಕಳಿಸಿದರು. ಮಂತ್ರಿ ವಿಷಯ ತಿಳಿಸಲು ರಾಜನು ರಥದಿಂದ ಇಳಿದು ಗುಡಿಸಲೊಳಗೆ ಹೋಗಿ, ನಾಲ್ಕು ಅಡಿ ಎತ್ತರದ ಬಾಗಿಲೊಳಗೆ ತಲೆ ಬಗ್ಗಿಸಿ ಕೊಠಡಿಯೊಳಗೆ ಹೋಗಿ ಕುಳಿತು ಗುರುಗಳಿಗೆ ಸಾಷ್ಟಾಂಗ ನಮಸ್ಕಾರ ಮಾಡಿದನು. ನಂತರ ವಿನಯದಿಂದ ಗುರುಗಳೇ ನಿಮ್ಮ ಅಗಾಧವಾದ ಆಧ್ಯಾತ್ಮ ಪಾಂಡಿತ್ಯದ ಕುರಿತು ಸಾಕಷ್ಟು ಕೇಳಿದ್ದೇನೆ. ನಿಮ್ಮ ಬಗ್ಗೆ ನನಗೆ ಅಪಾರ ಗೌರವ, ಪೂಜ್ಯ ಭಾವನೆ ಇದೆ. ನಾನು ಆಧ್ಯಾತ್ಮ ಜ್ಞಾನವನ್ನು ಕಲಿಯುವ ಇಚ್ಛೆಯಿದೆ, ಆದರೆ ರಾಜ್ಯಾಡಳಿತದ ಕೆಲಸದಲ್ಲಿ ಯಾವಾಗಲೂ ನಿರತನಾಗಿರುತ್ತೇನೆ. ಆದಕಾರಣ ನೀವು ಅರಮನೆಗೆ ಬರುವ ಕುರಿತು ಗೌರವಾದರಗಳಿಂದ ಕರೆತರಲು ಮಂತ್ರಿಗಳಿಗೆ ಹೇಳಿ ವ್ಯವಸ್ಥೆಯನ್ನು ಮಾಡಿಸಿದ್ದೆ. ಹೀಗಿದ್ದು ನೀವು ಅರಮನೆಗೆ ಬರದೆ ನನ್ನನ್ನು ಇಲ್ಲಿಗೆ ಬರಹೇಳಿದಿರಿ ಪ್ರಶ್ನಾರ್ಥಕವಾಗಿ ಗುರುಗಳ ಮುಖ ನೋಡಿದನು. 

ಸಮಾಧಾನದಿಂದ ಗುರುಗಳು, ಆಧ್ಯಾತ್ಮದ ಪಾಠ ಕಲಿಯುವುದು ತುಂಬಾ ಕ್ಲಿಷ್ಟಕರವಾದದು. ಅದು ನಿನ್ನ ಕೈಯಲ್ಲಿ ಆಗುತ್ತದೆಯೋ ಇಲ್ಲವೋ ಎಂದು ತಿಳಿಯುವ ಸಲುವಾಗಿ ನಿನಗೆ ಆಶ್ರಮಕ್ಕೆ ಬರಲು ತಿಳಿಸಿದೆ. ನೀನೂಬ್ಬ ರಾಜ ಎಂಬ ಅಹಂಕಾರ ಬಿಟ್ಟು ನನ್ನ ಗುಡಿಸಲಿಗೆ ಬಂದೆ. ಅದು ನಾಲ್ಕು ಅಡಿ ಎತ್ತರ ಇರುವ ಬಾಗಿಲಿನಲ್ಲಿ ತಲೆಬಗ್ಗಿಸಿ ಸೌಜನ್ಯದಿಂದ ನನ್ನ ಬಳಿ ಬಂದೆ. ಇದೇ ನಿನ್ನ ಆಧ್ಯಾತ್ಮದ ಮೊದಲ ಪರೀಕ್ಷೆ ಹಾಗೂ ಪಾಠ ಆಗಿತ್ತು. ಇದರಲ್ಲಿ ನೀನು ಉತ್ತೀರ್ಣನಾಗಿರುವೆ ನಾಳೆಯಿಂದ ನಿನ್ನ ಸಮಯಕ್ಕನುಸಾರವಾಗಿ ನಾವೇ ಅರಮನೆಗೆ ಬರುತ್ತೇವೆ ಎಂದರು. 

"ಶರಣಾಗತ ದೀನಾರ್ತ ಪರಿತ್ರಾಣ ಪರಾಯಣಂ
ನಾರಾಯಣಂ ವಿಭುಂ ವಂದೇ ಸ್ಮರ್ತೃಗಾಮಿ ಸನೋವತು!" 

ಕೃಪೆ,ಬರಹ:- ಆಶಾ ನಾಗಭೂಷಣ.
ಸಂಗ್ರಹ:ವೀರೇಶ್ ಅರಸಿಕೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1055

ದಿನಕ್ಕೊಂದು ಕಥೆ 1059