ದಿನಕ್ಕೊಂದು ಕಥೆ 1038
ದಿನಕ್ಕೊಂದು ಕಥೆ
ಬಿಡಿ ಅತ್ತೆ ಇಲ್ಲೇ ಚೆನ್ನಾಗಿದೆ
ಶಿವಪುರ ಎಂಬ ಊರಿನಲ್ಲಿ ಪಾರ್ವತಮ್ಮ ಎಂಬ ವಿಧವೆ ಇದ್ದಳು. ಅವಳಿಗೆ ಒಬ್ಬನೇ ಮಗ ರಮೇಶ, ರಮೇಶನಿಗೆ ತಾಯಿಯ ಮಾತು ವೇದವಾಕ್ಯ ಜೊತೆಗೆ ಸ್ವಲ್ಪ ಪೆದ್ದು ಕೂಡ. ಆತನು ಪ್ರಾಪ್ತವಯಸ್ಸಿಗೆ ಬಂದಾಗ ಪಾರ್ವತಮ್ಮ ಮಗನಿಗೆ ಮದುವೆ ಮಾಡಲು ಯೋಚಿಸುತ್ತಾಳೆ. ಆದರೆ ಅವಳ ಸಂಬಂಧಿಕರಾರು ಹೆಣ್ಣು ಕೊಡಲು ಮುಂದೆ ಬರುವುದಿಲ್ಲ. ಹಾಗೂ ಹೀಗೂ ಪಕ್ಕದ ಊರಿನಲ್ಲಿ ಒಂದು ಹೊಸ ಸಂಬಂಧ ನೋಡಿ ಮಗನಿಗೆ ಮದುವೆ ಮಾಡುತ್ತಾಳೆ.
ಮದುವೆ ಆದ ಸ್ವಲ್ಪ ದಿನದ ಮೇಲೆ ಮಗ ಅತ್ತೆ ಮನೆಗೆ ಮೊದಲನೆ ಸಾರಿ ಹೋಗಬೇಕಾಗುತ್ತೆ. ಅವನು ಸ್ವಲ್ಪ ದಡ್ಡ ಮತ್ತು ಮುಂಗೋಪಿಯಾದ್ದರಿಂದ ತಾಯಿ ಮಗನಿಗೆ ನೋಡು ರಮೇಶ ನೀನು ಮೊದಲನೆ ಸಾರಿ ಅತ್ತೆ ಮನೆಗೆ ಹೋಗುತ್ತಿರುವುದು. ಅಲ್ಲಿಗೆ ಹೋದ ಮೇಲೆ ಅದು ಚೆನ್ನಾಗಿಲ್ಲ ಇದು ಚೆನ್ನಾಗಿಲ್ಲ ಎಂದು ಹೇಳಬೇಡ. ಅದು ಏನೇ ಆಗಲಿ ಹೇಗೇ ಇರಲಿ ಮೊದಲನೆ ಸಾರಿ ಯಾದ್ದರಿಂದ ತಾಳ್ಮೆಯಿಂದ ಚೆನ್ನಾಗಿದೆ ಎಂದು ಹೇಳು. ಯಾವುದಕ್ಕೂ ಕೋಪಿಸಿಕೊಳ್ಳಬೇಡ ಎಂದು ಬುದ್ಧಿ ಹೇಳಿ ಕಳುಹಿಸಿಕೊಡುತ್ತಾಳೆ.
ಮಗ ಸಂಜೆ ಹೊತ್ತಿಗೆ ಅತ್ತೆಯ ಮನೆಗೆ ಹೋಗುತ್ತಾನೆ. ಮಬ್ಬು ಕತ್ತಲು. ಅತ್ತೆಯ ಮನೆಯಲ್ಲಿ ಕೈಕಾಲು ತೊಳೆಯಲು ಮನೆಯ ಹೊರಗಡೆ ಜಾಗ ಇರುತ್ತೆ. ಅದರ ಪಕ್ಕದಲ್ಲೇ ಬಚ್ಚಲು ನೀರು ತುಂಬಲು ಒಂದು ಗುಂಡಿಯನ್ನು ಮಾಡಿರುತ್ತಾರೆ, ಅಳಿಯನಿಗೆ ಕೈ ಕಾಲು ತೊಳೆಯಲು ಅತ್ತೆ ಕೂಗುತ್ತಾಳೆ. ಅಳಿಯ ಬಂದು ಕೈ ಕಾಲು ತೊಳೆಯಲು ಕಲ್ಲಿನ ಮೇಲೆ ನಿಲ್ಲುತ್ತಾನೆ ಕತ್ತಲೆ ಬೇರೆ, ಆ ಕಲ್ಲು ಪಾಚಿ ಕಟಿರುತ್ತೆ, ಇವನಿಗೆ ರೂಢಿಯಿರುವುದಿಲ್ಲ ಜಾರಿ ಪಕ್ಕದಲ್ಲಿದ್ದ ಗುಂಡಿಯ ಒಳಗೆ ಬೀಳುತ್ತಾನೆ. ಇದನ್ನು ನೋಡಿದ ಅತ್ತೆ ಅಯ್ಯೋ ಅಳಿಯ ಕೊಚ್ಚೆಗುಂಡಿಗೆ ಬಿದ್ದರಲ್ಲ ಎಂದು ಎತ್ತಲು ಬರುತ್ತಾಳೆ. ಆಗ ಅಳಿಯ ಪರವಾಗಿಲ್ಲ ಬಿಡಿ ಅತ್ತೆ ಇಲ್ಲೆ ಚೆನ್ನಾಗಿದೆ ಎನ್ನುತ್ತಾನೆ. ಅಮ್ಮ ಹೇಳಿ ಕೊಟ್ಟಿದ್ದನ್ನು ನೆನಪಿಸಿಕೊಂಡು.
ನೀತಿ :-- ತಾಯಿ ಮಾತು ಪಾಲಿಸಬೇಕು ಆದರೆ ಸ್ವಬುದ್ಧಿಯು ಅವಶ್ಯಕ. ಇಲ್ಲದಿದ್ದರೆ ಕೊಚ್ಚಗುಂಡಿಗೆ ಬಿಳುವುದು ಸಹಜ. ತಿಳುವಳಿಕೆಗೆ ಉತ್ತಮ ಉದಾಹರಣೆ ಇದು.
ಕೃಪೆ:ಡಾ.ಈಶ್ವರಾನಂದ ಸ್ವಾಮೀಜಿ.
ಸಂಗ್ರಹ:ವೀರೇಶ್ ಅರಸೀಕೆರೆ.
Comments
Post a Comment