ದಿನಕ್ಕೊಂದು ಕಥೆ 1048

🌻  *ದಿನಕ್ಕೊಂದು ಕಥೆ* 🌻

 🪷🪴    *ಹಗಲು ಕನಸಿನ ಅಪಾಯ.* 🪷🪴

ಒಂದು ಹಳ್ಳಿಯಲ್ಲಿ ಒಬ್ಬ ಯುವಕನಿದ್ದ. ಹೆಸರು ರಮೇಶ್. ಗಟ್ಟಿಮುಟ್ಟಾದ ದೇಹವಿದ್ದರೂ ದುಡಿಯುವುದರಲ್ಲಿ ಅವನಿಗೆ ಆಸಕ್ತಿಯಿರಲಿಲ್ಲ. ತಾಯಿ ದುಡಿದು ತಂದುದನ್ನೇ ಹೊಟ್ಟೆ ತುಂಬ ಊಟ ಮಾಡಿ ಹಗಲಲ್ಲೇ ಚೆನ್ನಾಗಿ ನಿದ್ರೆ ಮಾಡುತ್ತಿದ್ದ. ನಿದ್ರೆಯಿಂದ ಎದ್ದ ಮೇಲೆ ತಾಯಿಯೊಂದಿಗೆ, 'ಅಮ್ಮ, ನಾನೊಂದು ಕನಸು ಕಂಡೆ. ಅದರಲ್ಲಿ ರಾಜಕುಮಾರಿ ನನ್ನ ಕೈ ಹಿಡಿದುಕೊಂಡಿದ್ದಳು" ಎನ್ನುತ್ತಿದ್ದ. ಇನ್ನೊಂದು ದಿನ ತಾನು ದೊಡ್ಡ ಅರಮನೆ ಕಟ್ಟಿಸಿದಂತೆ ಕನಸು ಕಂಡೆನೆಂದು ಹೇಳುತ್ತಿದ್ದ. ದಿನವೂ ಅವನ ಕನಸಿನ ಕಥೆ ಕೇಳಿ ಬೇಸತ್ತು ತಾಯಿ, ಮಗನೇ, ಕನಸಿನಲ್ಲಿ ಬರುವ ಸಿರಿವಂತಿಕೆ ಎಚ್ಚರವಾದಾಗ ಇರುವುದಿಲ್ಲ. ಹಗಲು ನಿದ್ರೆ ಮಾಡಿದರೆ ಇಂತಹ ಕನಸು ಬೀಳುವುದು ಸಹಜ. ಹಗಲು ದೇಹ ಶ್ರಮದಿಂದ ಸಂಪಾದಿಸಿ ಸಿರಿವಂತನಾಗಿ ಕನಸುಗಳನ್ನೆಲ್ಲ ನನಸು ಮಾಡಿಕೊಳ್ಳಬೇಕು ಎಂದು ಹೇಳಿದಳು. "ಸರಿ, ನಾಳೆಯಿಂದಲೇ ಕನಸು ಕಾಣುವುದನ್ನು ನಿಲ್ಲಿಸಿ ಕೆಲಸಕ್ಕೆ ಹೋಗಿ ನಿಜವಾಗಿಯೂ ಶ್ರೀಮಂತನಾಗಿ ಸುಖವಾಗಿರುತ್ತೇನೆ" ಎಂದು ಹೇಳಿದ

ಮರುದಿನ ರಮೇಶ್ ಕೆಲಸ ಹುಡುಕಿಕೊಂಡು ಹೊರಟ. ಒಬ್ಬ ರೈತ, "ನನ್ನಲ್ಲಿ ಐವತ್ತು ತೆಂಗಿನ ಮರಗಳಿವೆ. ಎಲ್ಲ ಮರಗಳನ್ನೇರಿ ತೆಂಗಿನಕಾಯಿ ತೆಗೆದುಕೊಟ್ಟರೆ ಮರಕ್ಕೊಂದು ಕಾಯಿಯಂತೆ ಐವತ್ತು ತೆಂಗಿನಕಾಯಿ ಕೂಲಿ ಕೊಡುತ್ತೇನೆ" ಎಂದು ಹೇಳಿದೆ. ಅವನು ಒಪ್ಪಿಕೊಂಡು ಕೆಲವು ಮರಗಳಿಂದ ತೆಂಗಿನಕಾಯಿ ತೆಗೆದು ಹಾಕಿದ. ತುಂಬ ಆಯಾಸವಾಯಿತು. ಒಂದು ಮರದ ಮೇಲೆ ಗರಿಯಲ್ಲಿ ಕುಳಿತುಕೊಂಡೇ ನಿದ್ರೆಗಾರಂಭಿಸಿದ.

ನಿದ್ರೆಯಲ್ಲಿ ರಮೇಶ್ ಒಂದು ಕನಸು ಕಂಡ. ರೈತನು ಕೊಟ್ಟ ತೆಂಗಿನಕಾಯಿಗಳನ್ನು ಮಾರಾಟ ಮಾಡಿ ಬಂದ ಹಣದಲ್ಲಿ ಹಾಲು ಕೊಡುವ ಹಸುಗಳನ್ನು ತೆಗೆದುಕೊಂಡು ಹಾಲಿನ ಮಾರಾಟದಲ್ಲಿ ಬಂದ ಹಣ ಮನೆಯೊಳಗೆ ತುಂಬಿ ಹೊರಗೆ ಬಂದಿತು. ಹೀಗೆ ಹೊರಗೆ ಬಂದ ಹಣವನ್ನು ಮಾತ್ರ ಕೊಟ್ಟು ಆಡುಗಳನ್ನು ಖರೀದಿಸಿದ, ಆಡಿನ ಮರಿಗಳ ಮಾರಾಟದಿಂದ ಬಂದ ಲಾಭದ ಹಣ ಆಕಾಶದ ತನಕ ರಾಶಿ ಬಿದ್ದು ಇನ್ನೂ ಉಳಿಯಿತು. ಉಳಿಕೆಯ ಹಣದಿಂದ ಕೋಳಿಗಳನ್ನು ತಂದ, ಈ ಕೋಳಿಗಳು ಬಂಗಾರದ ಮೊಟ್ಟೆಯನ್ನಿಟ್ಟವು, ಬಂಗಾರದ ಮೊಟ್ಟೆ ಮಾರಲು ಪೇಟೆಗೆ ಹೋದಾಗ ಒಬ್ಬ ವ್ಯಾಪಾರಿ ಒಂದು ವಿಚಿತ್ರ ಕುದುರೆಯನ್ನು ಮಾರುವುದರಲ್ಲಿದ್ದ. ರೆಕ್ಕೆಗಳಿದ್ದ ಈ ಕುದುರೆಯ ಬೆನ್ನೇರಿ ಕುಳಿತರೆ ಆಕಾಶಮಾರ್ಗದಲ್ಲಿ ಹಾರಿಕೊಂಡು ಹೋಗುತ್ತಿತ್ತು.

ರಮೇಶ್ ವ್ಯಾಪಾರಿ ಹೇಳಿದ ಬೆಲೆ ಕೊಟ್ಟು ಕುದುರೆಯನ್ನು ಕೊಂಡುಕೊಂಡ. ಅದರ ಮೇಲೆ ಕುಳಿತು ಗಗನ ಮಾರ್ಗದಲ್ಲಿ ಹಾರುತ್ತ ಬರುವಾಗ ದೇಶದ ರಾಜಕುಮಾರಿ ಉದ್ಯಾನದಲ್ಲಿ ನಿಂತುಕೊಂಡಿದ್ದಳು. ಹಾರುವ ಕುದುರೆಯ ಮೇಲೆ ಕುಳಿತಿರುವ ಯುವಕನನ್ನು ನೋಡಿ ಕುತೂಹಲದಿಂದ ಕೈ ಬೀಸಿ ಬಳಿಗೆ ಕರೆದಳು. ಕೆಳಗಿಳಿದು ಬಂದ ರಮೇಶನೊಂದಿಗೆ, "ನಿನ್ನಂತಹ ಸಾಹಸಿ ನನಗೆ ಗಂಡನಾಗಬೇಕು. ನನ್ನನ್ನು ವಿವಾಹವಾಗು" ಎಂದು ಕೋರಿದಳು. ಅವಳನ್ನು ಕುದುರೆಯ ಮೇಲೆ ಕೂಡಿಸಿಕೊಂಡು ಹಾರುತ್ತಿದ್ದಾಗ ಅದೇಕೋ ಕುದುರೆ ಮುಗ್ಗರಿಸಿತು. ಕೆಳಗೆ ಬೀಳುತ್ತಿರುವ ರಾಜಕುಮಾರಿಯನ್ನು ಎತ್ತಿಕೊಳ್ಳಲು ರಮೇಶ್ ಕುದುರೆಯಿಂದ ಕೆಳಗೆ ಬಾಗಿದೆ. ಅಷ್ಟರಲ್ಲಿ ಅವನಿಗೆ ಎಚ್ಚರವಾಯಿತು. ಕುದುರೆಯೂ ಇಲ್ಲ, ರಾಜಕುಮಾರಿಯೂ ಇರಲಿಲ್ಲ. ತೆಂಗಿನ ಗರಿಯಿಂದ ಕೆಳಗೆ ಬಿದ್ದು ತನ್ನ ಕಾಲೊಂದು ಮುರಿದಿರುವುದನ್ನು ಅವನು ಗಮನಿಸಿದ.

*ಅಯ್ಯೋ ದೇವರೇ, ದುಡಿಮೆಯಲ್ಲಿ ದೊಡ್ಡವನಾಗುವ ವಿಶ್ವಾಸವಿಲ್ಲದೆ ಅಮ್ಮ ಬೇಡವೆಂದರೂ ಹಗಲು ನಿದ್ರೆ ಮಾಡಿ ಕನಸು ಕಂಡೆ. ಇದರಿಂದ ದುಡಿದು ತಿನ್ನಲಾಗದ ಸ್ಥಿತಿಗೆ ತಲಪಿದೆನಲ್ಲ ಎಂದು ರಮೇಶ್ ದುಖದಿಂದ ಹೇಳಿಕೊಂಡ.*

*ಕೃಪೆ: ಈಶ್ವರಾನಂದ ಸ್ವಾಮೀಜಿ*
*ಸಂಗ್ರಹ : ಮಲ್ಲಿಕಾರ್ಜುನ ಬಿರಾದಾರ*

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1055

ದಿನಕ್ಕೊಂದು ಕಥೆ 1059