ದಿನಕ್ಕೊಂದು ಕಥೆ 1050
*🌞ದಿನಕ್ಕೊಂದು ಕಥೆ🌞*
*ಜಗದ್ರಕ್ಷಕ ಶ್ರೀಕೃಷ್ಣ*
ಮಹಾಭಾರತವೆಂಬ ಬಹುದೊಡ್ಡ ಗ್ರಂಥವನ್ನು ಬರೆದ ವೇದವ್ಯಾಸರು, ದೊಡ್ಡ ದೊಡ್ಡ ಘಟನೆಗಳ, ಸಂದರ್ಭಗಳಲ್ಲಿ ನಡೆದ ಲೆಕ್ಕಕ್ಕಿಲ್ಲ ಎನ್ನುವಂಥ ಸಣ್ಣಸಣ್ಣ ಘಟನೆಗಳನ್ನು ದಾಖಲಿಸಿದ್ದಾರೆ, ಅಂಥ ಘಟನೆಗಳು ಅನನ್ಯವಾದದ್ದು, ಅದ್ಭುತವಾದದ್ದು. ಅದು ಮಹಾಭಾರತದ ಕುರುಕ್ಷೇತ್ರ ಯುದ್ಧದಲ್ಲಿ, ದಾಯಾದಿಗಳು ಪಾಂಡವರು ಕೌರವರು ಯುದ್ಧಕ್ಕೆ ನಿಂತಿದ್ದಾರೆ.ಇನ್ನೇನು ಯುದ್ಧ ಆರಂಭವಾಗಬೇಕು. ಕೃಷ್ಣ ಅರ್ಜುನನಿಗೆ ಗೀತೋಪದೇಶ ಮಾಡಿದ್ದಾಗಿದೆ. ಯುದ್ಧ ಆರಂಭವಾಗುವ ಮೊದಲು ಶಂಖ, ಜಾಗಂಟೆ, ನಗಾರಿ ಡೋಲು, ಕುದುರೆಗಳ ಹೇಷಾವರ, ಆನೆಗಳಿಗೆ ಘೀಳಿಟ್ಟವು. ಸೈನಿಕರ ಕೂಗಾಟ, ಯುದ್ಧ ಭೂಮಿ ಆಗಲೇ ರಣರಂಗವಾಗಿ, ಇಡೀ ಜಗತ್ತನ್ನೇ ತುಂಬಿದಂತಾಗಿತ್ತು. ಈ ಸಮಯದಲ್ಲಿ ಕೃಷ್ಣಾ ನನ್ನ ರಥವನ್ನು ಎರಡೂ ಸೇನೆಗಳ ನಡುವೆ ನಿಲ್ಲಿಸು ನಾನು ಒಮ್ಮೆ ಎಲ್ಲರನ್ನೂ ನೋಡಬೇಕು ಎಂದು ಹೇಳಿದ ಅರ್ಜುನನಿಗಾಗಿ ರಥವನ್ನು ಎರಡೂ ಸೇನೆಗಳ ನಡುವೆ ನಿಲ್ಲಿಸಿದ.
ಹೀಗೆ ಕೃಷ್ಣ ರಥ ನಿಲ್ಲಿಸಿದ ಸಮಯದಲ್ಲಿ ಎಲ್ಲೆಲ್ಲೂ ಧೂಳು, ಗಲಾಟೆ, ಕೂಗು,ಘೋಷಣೆ, ಈ ಬಾರಿ ಗದ್ದಲದಲ್ಲಿ ಒಂದು ಟಿಟ್ಟಿಬ ಎಂಬ ಪುಟ್ಟಹಕ್ಕಿ ಆಕಾಶದಲ್ಲಿ ಹಾರುತ್ತಾ, ಅಯ್ಯಯ್ಯೋ ಈ ಗಲಾಟೆ ಏನು ಇದು, ಪ್ರಪಂಚದ
ಕಥೆಯೇ ಮುಗಿದು ಹೋಗುತ್ತಾ, ಈ ಗಲಾಟೆ ನಿಲ್ಲುವಂತೆ ಕಾಣುತ್ತಿಲ್ಲ. ನಾನು ಏನು ಮಾಡಲಿ, ನನ್ನ ಪುಟ್ಟ ಮೂರು ಮರಿಗಳು ಮರದ ಗೂಡಿನಲ್ಲಿವೆ. ಅವುಗಳನ್ನು ಕಾಪಾಡಲು ಯಾರೂ ಇಲ್ಲವೇ? ಯಾರು ಕಾಪಾಡುತ್ತಾರೆ?ಆ
ಪುಟ್ಟ ಪಕ್ಷಿಯ ಕೂಗು ಯಾರಿ ಕಿವಿಗಾದರೂ ಬೀಳುತ್ತದೆಯೇ? ದೊಡ್ಡ ಆನೆ ಘೀಳಿಟ್ಟರೆ ಅದನ್ನು ನೋಡುವವರು ಕೇಳುವವರು ಇಲ್ಲದೆ ಇರುವಾಗ, ಯಕ್ಷಿತ್ ಈ ಪುಟ್ಟ ಟಿಟ್ಟಿಭ ಹಕ್ಕಿ ಕೂಗು ಯಾರಗೆ ಕೇಳುತ್ತೆ ಅಂದುಕೊಂಡರೆ ಅದು ಕೃಷ್ಣನಿಗೆ ಮಾತ್ರ. ಹಕ್ಕಿಯ ಕೂಗು ಜಗದ್ರಕ್ಷಕನಾದ ಕೃಷ್ಣನಿಗೆ ಕೇಳಿತು. ತಕ್ಷಣ ಭೀಮನನ್ನು ಕರೆದು, ಹಕ್ಕಿಯ ಮರಿಗಳ ರಕ್ಷಣೆಗೆ ವ್ಯವಸ್ಥೆ ಮಾಡು ಎಂದ.
ಭೀಮನು, ಭೀಮ ಗಾತ್ರದಲ್ಲೆ ನಗುತ್ತಾ, ಏ ಕೃಷ್ಣ ಏನು ಹೇಳ್ತಾ ಇದಿಯಾ? ಇನ್ನು ಕೆಲವೇ ದಿನಗಳಲ್ಲಿ ಇದು ರಕ್ತ ಹೊಳೆ ಹರಿಯುವ ಭೂಮಿ ಆಗುತ್ತೆ, ಅದೆಷ್ಟು ಪ್ರಾಣಗಳು ಹೋಗಿರುತ್ತೊ ಗೊತ್ತಿಲ್ಲ. ಯುದ್ಧದ ಸೂತ್ರದಾರ ನೀನೆ, ನಿನಗೆ ಎಲ್ಲ ಗೊತ್ತಿದೆ. ಉಳಿಯುವವರು ಯಾರು ಎನ್ನುವ ಅನುಮಾನ ಇರುವಾಗ, ಈ ಪುಟ್ಟ ಟಿಟ್ಟಿಭ ಪಕ್ಷಿ ಅದರ ಮೂರು ಮರಿಗಳ ಕುರಿತು ಯೋಚನೆ ಮಾಡ್ತಾ ಇದಿಯಲ್ಲ,? ಅದಕ್ಕೆ ಕೃಷ್ಣ ಹೇಳುತ್ತಾನೆ. ಭೀಮ ಯುದ್ಧ ಮಾಡ್ತಾ ಇರೋದು ನೀವು, ದುಷ್ಟ ಕೌರವರು, ನಿಮ್ಮ ನಿಮ್ಮ ಹೊಡೆದಾಟ ದ್ವೇಷ, ಸೇಡು, ಅಧಿಕಾರಕ್ಕಾಗಿ ನಡೆಯುತ್ತಿದೆ. ನಿಮ್ಮ ನಿಮ್ಮ ರಕ್ತತರ್ಪಣ ಕೊಡುವುದಕ್ಕಾಗಿ ಕಾಯುತ್ತಾ ಕುಳಿತಿದ್ದೀರಿ, ನಿಮ್ಮಿಬ್ಬರ ಕಾಳಗದಲ್ಲಿ ಪಾಪ ಆ ಪುಟ್ಟ ಪಕ್ಷಿ ಮತ್ತು ಮರಿಗಳು ಏಕೆ ಪ್ರಾಣ ಕೊಡಬೇಕು. ಇದನ್ನು ಕೇಳಿದ ಭೀಮನಿಗೆ ಅರ್ಥವಾಯಿತು. ತಕ್ಷಣ ಭಾರಿ ಗಾತ್ರದ ದೊಡ್ಡ ದೊಡ್ಡ ಮೂರ್ನಾಲ್ಕು ಬಂಡೆಗಳ ಮೇಲೆ ಎತ್ತಿ ತಂದು ಪುಟ್ಟ ಮರಿಗಳಿದ್ದ ಗೂಡಿದ್ದ ಮರದ ಸುತ್ತ ಇಟ್ಟು ಮುಚ್ಚಿಬಿಟ್ಟನು. ಕೃಷ್ಣ ಇನ್ನೇನು ಭಯವಿಲ್ಲ. ಬಿರುಗಾಳಿ ಬಂದು ಪ್ರಳಯವೇ ಆದರೂ ಪಕ್ಷಿ ಮತ್ತು ಮೂರು ಮರಿಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಹೇಳಿದ. ಕೃಷ್ಣನಿಗೆ ಸಮಾಧಾನವಾಯಿತು.
ಇದಾಗಿ ಕೆಲವೇ ಹೊತ್ತಿನಲ್ಲಿ ಯುದ್ಧ ಆರಂಭವಾಯಿತು. ಹಿಂದೆ ಕಂಡಿರಲಿಲ್ಲ, ಮುಂದೆಂದೂ ಕಂಡರಿಯದಂತಹ ಭಯಾನಕ ಕುರುಕ್ಷೇತ್ರ ಯುದ್ಧ ನಡೆಯಿತು. ಇಡೀ ಜಗತ್ತನ್ನೆ ಕೊಚ್ಚಿಕೊಂಡು ಹೋಗುತ್ತದೆ ಎನ್ನುವಂಥ ರಣರಂಗ ಕಾಳಗ ಆಯಿತು. ಇವುಗಳೆಲ್ಲದರ ಮಧ್ಯೆ ಪಕ್ಷಿ ಹಾಗೂ ಅದರ ಮೂರು ಮರಿಗಳಿದ್ದ ಗೂಡಿಗೆ ಮಾತ್ರ ಸಣ್ಣ ಹುಲ್ಲುಕಡ್ಡಿಯಷ್ಟು ಹಾನಿ ಆಗಲಿಲ್ಲ. ಈ ಯುದ್ಧದಿಂದ ಪಶು- ಪಕ್ಷಿಗಳೂ ತೊಂದರೆಗೆ ಸಿಲುಕಿದ ಇಂಥ ಸಣ್ಣ ಸಣ್ಣ ಘಟನೆಗಳನ್ನು ಕಣ್ಣಿಗೆ ಕಟ್ಟಿದಂತೆ ದಾಖಲಿಸಿದ್ದಾರೆ. ಇವುಗಳು ಇಂದಿಗೂ, ಮುಂದೆಂದಿಗೂ ಪ್ರೇರಕ ಶಕ್ತಿಯಾಗಿ ಚಕಿತಗೊಳಿಸುತ್ತದೆ..
ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಂ ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ.
ಕೃಪೆ,ಬರಹ:- ಆಶಾ ನಾಗಭೂಷಣ.
ಸಂಗ್ರಹ: ವೀರೇಶ್ ಅರಸೀಕೆರೆ.
Comments
Post a Comment