ದಿನಕ್ಕೊಂದು ಕಥೆ 1055
*🌻ದಿನಕ್ಕೊಂದು ಕಥೆ 🌻*
*ಮಿಡಿತ*
"ಅವ್ವಾ..ss, ಬಾಕ್ಲು ಹಾಕ್ಕೋ..,ನಾ ಬತ್ತೀನೀ.."ಎಂದು ತನ್ನ ತಾಯಿಗೆ ಕೂಗಿ ಹೇಳಿದ ನಿಂಗಿಯ ಗಂಡ ಪರಶು,ಅವರ ಉತ್ತರಕ್ಕಾಗಿ ಕಾಯದೇ, ಎಂದಿನಂತೆ ಗಾರೆ ಕೆಲಸಕ್ಕೆಂದು ಮೊಪೆಡ್ ಸ್ಟಾರ್ ಮಾಡಿ, ಇನ್ನೇನು ಹೊರಡಬೆಕೆನ್ನುವಷ್ಟರಲ್ಲಿ ಎದುರಿನಿಂದ ನಿಧಾನವಾಗಿ ಬರುತ್ತಿದ್ದ ಆಟೋ ಆತನ ಪಕ್ಕಕ್ಕೆ ಬಂದು ನಿಂತಿತು.ಪರಶು ಇಣುಕಿ ನೋಡಿದ.ಅದರೊಳಗೆ ತನ್ನ ಪತ್ನಿ ಇರುವುದನ್ನು ಕಂಡು
ಮನದಲ್ಲಿ"ಅರ್ರೇ.. ಇದೇನು ಇವಳು ಭಾಗಕ್ಕನ ಮನೆ ಕೆಲಸಕ್ಕೆ ಹೋಗಿ ಇನ್ನೂ ಒಂದು ಗಂಟೆ ಕೂಡಾ ಆಗಿಲ್ಲ.. ಇದ್ಯಾಕೆ ರಿಕ್ಷಾ ದಲ್ಲಿ ಬಂದ್ಲು"ಎಂದು ಯೋಚಿಸುತ್ತಿದ್ದವ ಅರ್ಧಕ್ಕೆ ನಿಲ್ಲಿಸಿ ಕುತೂಹಲದಿಂದ"ಇದ್ಯಾಕೆ ನಿಂಗೀ.."ಎಂದು ಕೇಳುತ್ತಿದ್ದಂತೆ , ಆಕೆ ಕುಳಿತಲ್ಲಿಂದಲೇ "ಮತ್ತೆ..ಭಾಗಕ್ಕಾವ್ರು ಇಂದ ನಸಕ್ ನ್ಯಾಗೆ
ಹೂ ಕಿತ್ತಾಕೆ ಹೋಗಿ ತಲೆತಿರುಗಿ ಮೆಟ್ಲಮ್ಯಾಲಿಂದ ಬಿದ್ದು ತಲೆಗೆ ಏಟು ಮಾಡ್ಕೊಂಡಾವ್ರೆ.. ತಲೆಯಿಂದ ಸಾನೆ ರಕ್ತ ಹೋಗಿ ಪ್ರಜ್ಞೆ ತಪ್ಪಿತ್ತಂತೆ, ಹಿಂಗಾಗಿ ಅಪ್ಪಾರು ಮತ್ತೆ ಅವರ ಮಗ ಎಲ್ಲಾ ಸೇರಿ ಅವರನ್ನ ಆಸ್ಪತ್ರೆಗೆ ಸೇರ್ಸಿದ್ದಾರಂತೆ... ಅಲ್ಲಿ ಅವ್ರ ರಕ್ತದ ಗುಂಪಿನ ರಕ್ತ ಸಿಗ್ತಿಲ್ಲಂತ ಎಲ್ಲಾ ಕಡೆ ಹುಡುಕ್ತಾವ್ರೆ... ಹಿಂಗಾಗಿ ಭಾಗಕ್ಕಾರ ಮಗಳು. ನನಗೆ ಪಾತ್ರೆ ತೊಳ್ದು ಬಿಟ್ಟು, ನೀ ಆಸ್ಪತ್ರೆಗೆ ಹೋಗೀರು ಎಂದು ಆಟೋ ಮಾಡಿ ಕಳ್ಸಕೊಟ್ಟವ್ರೆ.. ಅದ್ಕೆ ಅತ್ತೆಗೆ ಒಂದು ಮಾತು ಹೇಳಿ ಹೋಗೋಣಾ ಅಂತ ಇಲ್ಲಿಗೆ ಬಂದೆ"ಎಂದು ಒಂದೇ ಉಸಿರಿನಲ್ಲಿ ಹೇಳಿ ಆಟೋದವನಿಗೆ "ನಡೀಯಪ್ಪಾ"ಎಂದು ಹೇಳಿ ಹೊರಟು ನಿಂತಾಗ ಪುನಃ ಪರಶು"ಏಯ್..ನಿಂಗೀ.ಯಾವ ಆಸ್ಪತ್ರೆಗೆ..?
ಎಂದು ಕೇಳಿದ್ದಕ್ಕೆ ಆತುರಾತುರದಲ್ಲಿದ್ದ ಆಕೆ" ಇಲ್ಲೇ ಅಶ್ವಿನಿ ಆಸ್ಪತ್ರೆಗೆ"ಎಂದು ಉತ್ತರಿಸಿ ಹೊರಟು ಹೋದಳು.ವಿಷಯ ಕೇಳಿದ ಪರಶುವಿನ ಮನಸ್ಸಿಗೆ ತುಂಬಾ ಪಿಚ್ಚೆನಿಸಿತು. ಕಳೆದ ಹತ್ತಾರು ವರ್ಷಗಳಿಂದಲೂ ಭಾಗಕ್ಕನವರ ಹೃದಯ ವೈಶಾಲ್ಯತೆ ಹಾಗೂ ಅವರು ತನ್ನ ಮನೆಯವರಿಗೆ ಮಾಡುತ್ತಿದ್ದ ಸಹಾಯ ನೋಡುತ್ತ ಬಂದಿದ್ದವನಿಗೆ ಅದೇಕೋ ಅಂದು ಕೆಲಸಕ್ಕೆ ಹೋಗಲು ಮನಸ್ಸಾಗಲಿಲ್ಲ.ಹೀಗಾಗಿ ತಕ್ಷಣ ಆತ ತನ್ನ ಮೇಸ್ತ್ರಿ ಗೆ ಫೋನ್ ಮೂಲಕ ವಿಷಯ ತಿಳಿಸಿದವ ನೇರವಾಗಿ ಅಶ್ವಿನಿ ಆಸ್ಪತ್ರೆಗೆ ಹೊರಟು ಬರುತ್ತಾನೆ.
ಅಲ್ಲಿ ಭಾಗಕ್ಕನ ಮನೆಯವರು -ಬಂಧು ಬಳಗದವರು ನಗರದಲ್ಲಿನ ರಕ್ತದ ಬ್ಯಾಂಕ್ ಗೆ ಅಲೆಯುತ್ತಿರುವುದು.. ಆಗಾಗ ನರ್ಸ್, ವೈದ್ಯರು ಆ ರಕ್ತ ಮ್ಯಾಚ್ ಆಗಲ್ಲ ಅಂತ
ಮಾತನಾಡಿಕೊಳ್ಳುವುದನ್ನು ಆಲಿಸಿದ ಪರಶುಗೆ ತಾನೇಕೆ ತನ್ನ ರಕ್ತ ಪರೀಕ್ಷೆ ಮಾಡಿಸಿ ಕೊಂಡು, ಅವರಿಗೆ ಕೊಡಬಾರದು..?ಎಂಬ ಯೋಚನೆ ಹೊಳೆದಿದ್ದೇ ತಡ
ಅಲ್ಲಿದ್ದ ನರ್ಸ್ ಮೂಲಕ ವೈದ್ಯರನ್ನು ಕಂಡು ತನ್ನ ಮನದ ಇಂಗಿತ ವ್ಯಕ್ತಪಡಿಸಿದ.
ಗಟ್ಟಿಮುಟ್ಟಾದ ಪರಶುನನ್ನು ಒಂದು ಬಾರಿ ನೋಡಿದ ವೈದ್ಯರು ನರ್ಸಗೆ ಈತನ ಬ್ಲಡ್ ಸ್ಯಾಂಪಲ್ ನೋಡುವಂತೆ ಸೂಚಿಸಿದರು.ಅದರಂತೆ ಆ ನರ್ಸ್ ಎಲ್ಲ ವ್ಯವಸ್ಥೆ ಮಾಡಿ ಕಾಲು ಗಂಟೆಯ ನಂತರ ವೈದ್ಯರ ಬಳಿ ಬಂದು "ಸಾರ್ ಇವರ ಬ್ಲಡ್ ಪರಫ್ಯಾಕ್ಟಾಗಿ ಮ್ಯಾಚ್ ಆಗುತ್ತೆ"ಎಂದು ತಿಳಿಸಿದಾಗ ಸಂತಸ ಗೊಂಡ ವೈದ್ಯರು
ನರ್ಸ ಗೆ "ಗೋ ಅಹೆಡ್"ಎಂದು ತಿಳಿಸಿದರು.ಈ ಮಧ್ಯೆ ವಿಷಯ ಭಾಗಕ್ಕನ ಮನೆಯವರಿಗೆ ಗೊತ್ತಾದಾಗ ಅವರೂ ನಿಟ್ಟುಸಿರು ಬಿಟ್ಟು ಸಂತಸಗೊಂಡರು.
ಮುಂದಿ ಎರಡು ತಾಸಿನ ಅವಧಿ ಯೊಳಗೆ ಪರಶುವಿನ ರಕ್ತ,ಭಾಗಕ್ಕನವರಿಗೆ ವರ್ಗಾಯಿಸಿದಾಗ ಅವರಿಗೆ ಪ್ರಜ್ಞೆ ಬಂದು ಮೆಲ್ಲಗೆ ಕಣ್ಣು ಬಿಟ್ಟ ನಂತರ ಭಾಗಕ್ಕನ ಪತಿ, ಹಾಗೂ ಮಗ ಇಬ್ಬರೂ ಪರಶು ಬಳಿ ಬಂದು ಆತನ ಕೈ ,ಭುಜ ಸವರುತ್ತ
ತುಂಬು ಹೃದಯದಿಂದ ಕೃತಜ್ಞತೆ ಅರ್ಪಿಸುತ್ತ ಆತನಿಗೆ ಜೇಬಿನಿಂದ ಐದು ಸಾವಿರ ರೂಪಾಯಿ ತೆಗೆದು ಕೊಡಲು ಮುಂದಾದಾಗ, ಪರಶು ವಿನೀತನಾಗಿ "ಅಪ್ಪಾರೇ
ಇದೆಲ್ಲಾ ಬ್ಯಾಡೀ..ಅಮ್ಮಾವ್ರು ಹುಷಾರಾದ್ರಲ್ಲಾ ಸಾಕು, ಅಷ್ಟಕ್ಕೂ ಅವರು ನಮಗೆ ಮಾಡಿರೋ ಉಪಕಾರಕ್ಕೆ ನಾನು ಮಾಡಿದ್ದು ಏನೂ ಅಲ್ಲ "ಎಂದು ಹೃದಯಾಂತರಾಳದ ಮಾತುಗಳನ್ನು ಹೇಳಿದಾಗ ಆತನ ಮಿಡಿತಕ್ಕೆ ಎಲ್ಲ ತಲೆಬಾಗಿ ನಿಂತರು.
ಕೃಪೆ:ಅರವಿಂದ.ಜಿ.ಜೋಷಿ.ಮೈಸೂರು.
ಸಂಗ್ರಹ:ವೀರೇಶ್ ಅರಸೀಕೆರೆ.
Comments
Post a Comment