ದಿನಕ್ಕೊಂದು ಕಥೆ 1057

*🌻ದಿನಕ್ಕೊಂದು ಕಥೆ🌻*
*ಸಮುದ್ರದ ಚಿಪ್ಪು ಹಣವಾದರೆ?*

ಒಬ್ಬ ಪುಟ್ಟ ಬಾಲಕ ತನ್ನ ತಂಗಿಯೊಂದಿಗೆ ಮಾರುಕಟ್ಟೆಯಲ್ಲಿ ನಡೆಯುತ್ತಿದ್ದ. ಹಿಂತಿರುಗಿ ನೋಡಿದರೆ ತಂಗಿ ಕಾಣುತ್ತಿಲ್ಲ. ಅವಳು ಒಂದು ಆಟಿಕೆಯ ಅಂಗಡಿಯ ಮುಂದೆ ನಿಂತು ಸುಂದರವಾದ ಗೊಂಬೆಯೊಂದನ್ನು  ನೋಡುತ್ತಿದ್ದಾಳೆ. ತಂಗಿಯ ಆಸೆಯನ್ನು ಅರಿತು  ಒಬ್ಬ ಜವಾಬ್ದಾರಿಯುತ ಅಣ್ಣನಾಗಿ ಆ ಗೊಂಬೆಯನ್ನು ತಂಗಿಗೆ ತೆಗೆದುಕೊಡುತ್ತಾನೆ.  ತಂಗಿಗೆ ಬಹಳ ಖುಷಿಯಾಗುತ್ತದೆ. 

 ಬಾಲಕನ ವಯಸ್ಸಿಗೂ ಮೀರಿದ ವರ್ತನೆಯನ್ನು ಅಂಗಡಿ ಮಾಲಕ ಬಹಳ ಕುತೂಹಲದಿಂದ ಗಮನಿಸುತ್ತಿದ್ದ. ಬಾಲಕ ತಂಗಿಯ ಕೈಹಿಡಿದುಕೊಂಡು  ಕ್ಯಾಶ್ ಕೌಂಟರ್ ಬಂದು ಗೊಂಬೆಯ ಕ್ರಯ ಕೇಳುತ್ತಾನೆ.. ಬದುಕಿನಲ್ಲಿ ಬಹಳಷ್ಟು ಸಮಸ್ಯೆಗಳನ್ನು ಎದುರಿಸಿದ್ದ ಆ ಶಾಂತ ಸ್ವಭಾವದ ಅಂಗಡಿ ಮಾಲಕ ಬಾಲಕನಲ್ಲಿ ಕೇಳುತ್ತಾನೆ.  "ನಿನಗೆ ಏನು ಕೊಡಬಹುದು?".ಆಗ ಆ ಬಾಲಕ ಸಮುದ್ರದ ಬದಿಯಲ್ಲಿ ತಾನು ಸಂಗ್ರಹಿಸಿದ್ದ ಚಿಪ್ಪನ್ನು  ತನ್ನ ಕಿಸೆಯಿಂದ  ತೆಗೆದು   ಕೊಡುತ್ತಾನೆ. ಅಂಗಡಿ ಮಾಲಿಕ ನೋಟುಗಳನ್ನು ಎಣಿಸಿದಂತೆ ಎಲ್ಲಾ ಚಿಪ್ಪುಗಳನ್ನು ಎಣಿಸುತ್ತಾನೆ. ನಂತರ ಅದರಲ್ಲಿ 4 ಚಿಪ್ಪುಗಳನ್ನು ಮಾತ್ರ ತಗೊಂಡು ಉಳಿದ ಎಲ್ಲಾ ಚಿಪ್ಪುಗಳನ್ನು ಬಾಲಕನಿಗೆ ವಾಪಾಸು ಕೊಡುತ್ತಾನೆ. ಬಾಲಕ ಉಳಿದ ಚಿಪ್ಪುಗಳನ್ನು ತನ್ನ ಕಿಸೆಗೆ ತುಂಬಿಸಿಕೊಂಡು ತಂಗಿಯೊಂದಿಗೆ ತುಂಬಾ ಸಂತೋಷದಿಂದ ಅಂಗಡಿಯಿಂದ ಹೊರ ನಡೆಯುತ್ತಾನೆ. 

ಇದನೆಲ್ಲ ಗಮನಿಸುತ್ತಿದ್ದ ಅಂಗಡಿ ಕೆಲಸದವ ಮಾಲಕನಲ್ಲಿ ಕೇಳುತ್ತಾನೆ. "ಕೇವಲ 4 ಚಿಪ್ಪಿಗೆ ಅಷ್ಟೊಂದು ಬೆಲೆ ಬಾಳುವ ಗೊಂಬೆಯನ್ನು ಯಾಕೆ ಕೊಟ್ಟಿರಿ?" ಆಗ ಅಂಗಡಿ ಮಾಲಿಕ ನಗುತ್ತಾ  ಹೇಳ್ತಾನೆ. "ನಮಗೆ ಅದು ಸಮುದ್ರದ ಚಿಪ್ಪುಗಳು. ಆದರೆ ಆ ಬಾಲಕನಿಗೆ ಅದು ಅತಿ ಅಮೂಲ್ಯವಾದ ವಸ್ತುಗಳು".  ಈಗ ಅವನಿಗೆ ಹಣ ಅಂದರೆ ಏನು ಅಂತ ಗೊತ್ತಿರಲಿಕ್ಕಿಲ್ಲ. ಆದ್ರೆ ಬೆಳೆಯುತ್ತಾ ಅವನಿಗೆ ಹಣ ಅಂದರೆ ಏನು ಅಂತ ಗೊತ್ತಾಗುತ್ತೆ.  ಆಗ ಅವನು ಹಣ ಕೊಡದೆ ಕೇವಲ ಚಿಪ್ಪು ಕೊಟ್ಟು ಗೊಂಬೆ ಖರೀದಿ ಮಾಡಿದ್ದನ್ನು ಹಾಗು ಆ ಗೊಂಬೆ ಕೊಟ್ಟ ನನ್ನನ್ನು ನೆನಪಿಸಿಕೊಳ್ತಾನೆ. ಮತ್ತು ಈ ಜಗತ್ತು ತುಂಬಾ ಎಷ್ಟು  ಒಳ್ಳೆಯವರಿಂದ ಕೂಡಿದೆ ಎಂದು ಆಲೋಚಿಸುತ್ತಾನೆ.

 ಅದು ಅವನಲ್ಲಿ ಉತ್ತಮ ಮನೋಭಾವವನ್ನು ಬೆಳೆಸುತ್ತದೆ    ಹಾಗೂ ಪ್ರತಿಯಾಗಿ ತಾನೂ ಕೂಡ ಇದೇ ರೀತಿ ಉತ್ತಮನಾಗಬೇಕೆಂಬ ಪ್ರೇರಣೆಯನ್ನು ನೀಡುತ್ತದೆ. 

ನಾವು ಈ ಜಗತ್ತಿಗೆ ಯಾವ ಭಾವನೆಗಳನ್ನು ಸುರಿಯುತ್ತೇವೆಯೋ ಅದು ಇನ್ನಷ್ಟು ಹರಡುತ್ತದೆ. ನಾವು ಒಳ್ಳೆಯದು ಮಾಡಿದರೆ ಜಗತ್ತಿನಾದ್ಯಂತ ಒಳ್ಳೆಯದೇ ಹರಡುತ್ತದೆ. ಕೆಟ್ಟದು ಮಾಡಿದರೆ ಕೆಟ್ಟದ್ದೇ ಹರಿಯುತ್ತದೆ.

ಕೃಪೆ:ರಮ್ಯ ಪುರಾಣ ಕಥೆಗಳು.
ಸಂಗ್ರಹ: ವೀರೇಶ್ ಅರಸೀಕೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1055

ದಿನಕ್ಕೊಂದು ಕಥೆ 1059