ದಿನಕ್ಕೊಂದು ಕಥೆ 1065
*🌻ದಿನಕ್ಕೊಂದು ಕಥೆ🌻*
*ಅಳಿಲಿನ ಜಾಣತನ*
ವಿಕ್ರಮ ಎಂಬ ವ್ಯಕ್ತಿ ಕಾಡಿನಲ್ಲಿ ಹೋಗುತ್ತಿದ್ದ. ಆಗ ಅವನಿಗೆ ಮರದ ಮೇಲಿಂದ ವಿಚಿತ್ರ ಶಬ್ಧವೊಂದು ಕೇಳಿಸಿತು. ಅದೇನೆಂದು ನೋಡಿದಾಗ, ಹಾವೊಂದು ಮರದ ರೆಂಬೆಯಲ್ಲಿ ತನ್ನ ಬಾಲ ಸಿಕ್ಕಿಸಿಕೊಂಡು ಒದ್ದಾಡುತ್ತಿತ್ತು. ಹಾವು ವಿಕ್ರಮನನ್ನು ಕಂಡು "ಅಯ್ಯಾ ನಿನ್ನ ಕತ್ತಿಯಿಂದ ಈ ರೆಂಬೆಯನ್ನು ಸೀಳು. ನನ್ನ ಬಾಲ ಬಿಡಿಸಿಕೊಳ್ತಿನಿ." ಎಂದು ಬೇಡಿಕೊಂಡಿತು. "ಅದು ಸರಿ, ಆದರೆ, ನೀನು ನನ್ನನ್ನು ಕಚ್ಚಿದರೆ?" ಎಂದು ಕೇಳಿದ ವಿಕ್ರಮ.
ಹಾವು "ಖಂಡಿತ ಕಚ್ಚೋದಿಲ್ಲ" ಎಂದು ಮಾತು ಕೊಟ್ಟಿತು. ಅವನು ತನ್ನ ಕತ್ತಿಯಿಂದ ರೆಂಬೆಯ ಸಂದಿಯನ್ನು ಅಗಲಗೊಳಿಸಿದಾಗ ಹಾವು ತನ್ನ ಬಾಲವನ್ನು ಬಿಡಿಸಿಕೊಂಡಿತು. ಬಳಿಕ ಹಾವು "ಅಯ್ಯಾ, ನಿನ್ನ ಕೋಲನ್ನು ಮರದ ರೆಂಬೆಗೆ ಹಿಡಿ. ನಾನು ಕೆಳಗಿಳಿದು ಬರುತ್ತೇನೆ."ಎಂದು ನುಡಿಯಿತು.
ಹಾವು ತನ್ನನ್ನು ಕಚ್ಚುವುದಿಲ್ಲ ಎಂದು ಮಾತು ಕೊಟ್ಟಿದ್ದುದರಿಂದ ವಿಕ್ರಮ ಧೈರ್ಯವಾಗಿ ಕೋಲನ್ನು ರೆಂಬೆಗೆ ಹಿಡಿದ. ಹಾವು ಕೆಳಗಿಳಿದು ಬಂದು ಅವನ ಮೈಸುತ್ತ ಬಲವಾಗಿ ಸುತ್ತಿಕೊಂಡಿತು. ಆಗ ಅವನು ಗಾಬರಿಯಿಂದ, "ಅಯ್ಯೋ ಇದೇನು ಮಾಡುತ್ತ ಇದ್ದೀಯಾ?" ಎಂದು ಕೇಳಿದ. "ನಿನ್ನನ್ನು ಸಾಯಿಸುತ್ತೇನೆ" ಎಂದಿತು ಹಾವು. "ನಿನ್ನ ಪ್ರಮಾಣ ಏನಾಯಿತು?" ಎಂದು ಸಂಕಟದಿಂದ ಕೇಳಿದ. "ನಾನು ಪ್ರಮಾಣ ಮಾಡಿದ್ದೇನೋ ನಿಜ. ಆದರೆ, ಅದು ಮರದ ಮೇಲೆ. ಈಗ ನಾನು ಭೂಮಿ ಮೇಲೆ ಇದ್ದೇನೆ. ಉಪಕಾರ ಮಾಡಿದೋರಿಗೆ ಅಪಕಾರ ಮಾಡೋದು ಇಲ್ಲಿನ ರೂಢಿ! ಎಂದು ಹೇಳಿತು ಹಾವು.
ವಿಕ್ರಮ ತನ್ನ ಕೊನೆಗಾಲ ಸಮೀಪಿಸಿತೆಂದು ಅವನಿಗೆ ತಿಳಿಯಿತು ಎಂದು ಯೋಚಿಸಿ, ಧೈರ್ಯಮಾಡಿ "ನೀನು ನನ್ನನ್ನು ಸಾಯಿಸುವುದೇನೋ ಸರಿ. ಅದಕ್ಕೂ ಮುನ್ನ ಮೂರು ಜನ ಬುದ್ಧಿವಂತರ ಅಭಿಪ್ರಾಯ ಕೇಳುವುದು ಒಳ್ಳೆಯದಲ್ಲವೆ?" ಎಂದು ಹೇಳಿದ. ಹಾವು ಈ ಸಲಹೆಗೆ ಒಪ್ಪಿತು.
ಅವರಿಬ್ಬರೂ ಮುನ್ನಡೆದಾಗ ಎದುರಿಗೆ ತೆಂಗಿನ ಮರವೊಂದು ಸಿಕ್ಕಿತು. ಹಾವು ಮರಕ್ಕೆ ನಡೆದದ್ದನ್ನೆಲ್ಲಾ ಹೇಳಿ, "ಮರ ಮರ, ಯಾರು ಸರಿ ನೀನೇ ಹೇಳು?! ಎಂದಿತು. ತೆಂಗಿನ ಮರ "ಈ ಭೂಮಿ ಮೇಲಿನ ಮನುಷ್ಯರಿಗೆ ನಾನು ತೆಂಗಿನಕಾಯಿ, ಎಲೆ ಕೊಡುತ್ತೇನೆ. ಆದರೆ, ಅವರಿಗೆ ಕೃತಜ್ಞತೆಯೇ ಇಲ್ಲ. ಒಂದು ದಿನ ನನ್ನ ಕಾಂಡವನ್ನು ಕತ್ತರಿಸಿ ಹಾಕ್ತಾರೆ. ಆದ್ದರಿಂದ ಹಾವೇ, ಈ ಮನುಷ್ಯನನ್ನು ನೀನು ಸಾಯಿಸುವುದೇ ಸರಿ!" ಎಂದಿತು.
ಹಾವು ವಿಕ್ರಮನಿಗೆ ಇನ್ನುಷ್ಟು ಬಿಗಿದುಕೊಂಡಿತು. ಅವರು ಮತ್ತೆ ಸ್ವಲ್ಪ ದೂರ ಹೋದಾಗ ಹರಿಯುವ ತೊರೆ ಸಿಕ್ಕಿತು. ವಿಕ್ರಮ ಅದಕ್ಕೆ ತನ್ನ ಕತೆಯನ್ನೆಲ್ಲಾ ಹೇಳಿಕೊಂಡ. ತೊರೆ "ಮನುಷ್ಯರು ನನ್ನ ಹತ್ತಿರ ಬಂದು ನೀರು ಕುಡೀತಾರೆ. ಆದರೆ, ಕಸವನ್ನೆಲ್ಲಾ ಎಸೆದು ನನ್ನ ನೀರನ್ನು ಹಾಳು ಮಾಡಲು ಹೇಸುವುದಿಲ್ಲ. ಆದ್ದರಿಂದ ಹಾವಿನ ನಿರ್ಧಾರವೇ ಸರಿ." ಎಂದಿತು
ಹಾವು ವಿಕ್ರಮನನ್ನು ಇನ್ನಷ್ಟು ಬಿಗಿಯಿತು. ಅವರು ಮತ್ತೂ ಸ್ವಲ್ಪ ದೂರ ಹೋದಾಗ ಮರದ ಮೇಲೆ ಕುಳಿತಿದ್ದ ಆಳಿಲೊಂದು ಕಾಣಿಸಿತು. ಹಾವು ತಮ್ಮ ಕತೆಯನ್ನೆಲ್ಲಾ ಅಳಿಲಿಗೆ ಹೇಳಿ, "ಹೊ೦, ಬೇಗ ಹೇಳು, ಯಾರು ಸರಿ ಎಂಬುದನ್ನು!" ಎಂದು ಬುಸುಗುಟ್ಟಿತು.
ಅಳಿಲು ಸ್ವಲ್ಪ ಹೊತ್ತು ಯೋಚಿಸಿ "ನೀವು ಯಾವ ಯಾವ ಜಾಗದಲ್ಲಿ ಹೇಗೆ ಇದ್ದೀರಿ ಆನೋದನ್ನ ನೋಡಿದ್ರೆ ತಕ್ಷಣ ಹೇಳೋಕಾಗುತ್ತಪ್ಪ..." ಎಂದು ನುಡಿಯಿತು. "ಅದೇನು ಮಹಾ ಕಷ್ಟದ ಕೆಲಸ?" ಎನ್ನುತ್ತಾ ಹಾವು ಹರಿದು ಹೋಗಿ ಮರ ಹತ್ತಿ ಕುಳಿತುಕೊಂಡು, "ಇಗೋ, ನಾನು ಹೀಗೆ ಕುಳಿತಿದ್ದೆ..." ಎಂದಿತು. ಆಗ ಅಳಿಲು ವಿಕ್ರಮನತ್ತ ಕಣ್ಣು ಮಿಟುಕಿಸಿತು. ಅವನು ತಕ್ಷಣ ತನ್ನ ಕತ್ತಿಯನ್ನೆತ್ತಿ ಹೊಡೆದು ಹಾವನ್ನು ತುಂಡರಿಸಿದ..
*ನೀತಿ :-- ಈ ಜಗತ್ತಿನಲ್ಲಿ ಉಪಕಾರ ಮಾಡುವವರು ವಿರಳ. ಉಪಕಾರ ಮಾಡಿದವರಿಗೆ ದ್ರೋಹ ಮಾಡಬೇಡಿ. ಅಪಕಾರ ಮಾಡಲೇ ಮಾಡಬೇಡಿ.
ಕೃಪೆ:ಡಾ.ಈಶ್ವರಾನಂದ ಸ್ವಾಮೀಜಿ.
ಸಂಗ್ರಹ:ವೀರೇಶ್ ಅರಸೀಕೆರೆ.
Comments
Post a Comment