ದಿನಕ್ಕೊಂದು ಕಥೆ 1070
*🌻ದಿನಕ್ಕೊಂದು ಕಥೆ🌻*
*ಕೃತಜ್ಞತೆ*
ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದ ಬಸ್, ನಿಲ್ದಾಣದಿಂದ ನಿಧಾನವಾಗಿ ಹೊರಟು ನಿಂತಾಗ ಕಂಡಕ್ಟರ್ ಮಾದೇಶಿ ಹರ ಸಾಹಸ ಪಡುತ್ತ ಜನರ ಮಧ್ಯೆ ನುಗ್ಗಿ
" ಟಿಕೇಟ್... ಟಿಕೇಟ್.."ಎಂದು ಬೆವರು ಸುರಿಸುತ್ತಲೇ ಕೇಳಿ ಕೊಡುತ್ತಿದ್ದ. ಇಪ್ಪತ್ತು ನಿಮಿಷಗಳ ಅವಧಿಯಲ್ಲಿ ಎಲ್ಲರಿಗೂ ಟಿಕೆಟ್ ಕೊಟ್ಟು ಕೊನೆಯದಾಗಿ ಆ ಬಸ್ಸಿನ ಚಾಲಕನ ಹಿಂಬದಿ ಸೀಟಿನಲ್ಲಿ ಮುದುರಿ ,ಕುಳಿತಿದ್ದ ವೃದ್ಧನ ಬಳಿ ಬಂದು " ಎಲ್ಲಿಗೆ
ಹೋಗಬೇಕು ಅಜ್ಜಾ..."ಎಂದು ಕೇಳಿದಾಗ ಆ ವೃದ್ಧ ತಾನು ಇಳಿಯಬೇಕಾದ ಸ್ಥಳ ತಿಳಿಸುತ್ತಾನೆ. ಅದರಂತೆ ಕಂಡಕ್ಟರ್ ಟಿಕೇಟ್ ಕಟ್ ಮಾಡಿ ಆತನಿಗೆ ಕೊಡುತ್ತ "ಎಂಬತ್ತು ರೂಪಾಯಿ ಕೊಡು" ಎಂದಾಗ ಆ ವೃದ್ಧ ನಿಧಾನವಾಗಿ ತಾನು ಧರಿಸಿದ ಜುಬ್ಬಾದ ಜೇಬಿಗೆ ಕೈ ಇಳಿಬಿಡುತ್ತಾನೆ. ಅಲ್ಲಿ ಹಣ ಕಾಣದಾದಾಗ ಮತ್ತೊಂದು ಜೇಬಿಗೆ ಕೈ ಹಾಕಿ ನೋಡುತ್ತಾನೆ.. ಊಹೂಂ, ಅಲ್ಲೂ ಹಣ ಕಾಣದಾದಾಗ ಗಾಬರಿಗೊಂಡು ಎದ್ದು ನಿಂತು ಅಲ್ಲೆಲ್ಲಾ ತಡಕಾಡಿದವ ಬೆವರಲಾರಂಭಿಸುತ್ತಾನೆ.
ಇತ್ತ ಕಂಡಕ್ಟರ್ " ಏಯ್.. ಬೇಗ ಕೊಡೋ ಮಾರಾಯಾ"ಎಂದು ತನ್ನ ಗೊಗ್ಗರು ಧ್ವನಿ ಯಿಂದ ಕೇಳಿದಾಗ ಆ ವೃದ್ಧನ ಕಣ್ಣಲಿ ಅಕ್ಷರಶಃ ನೀರು ತುಂಬಿ ಬಂದು
ದೈನ್ಯದಿಂದ ಕೈ ಮುಗಿಯುತ್ತ " ಅಪ್ಪಾ... ನನ್ನ ದುಡ್ಡನ್ನು ಯಾರೋ ಹೋಡ್ದಾರಾ
ಐವತ್ತು ರೂಪಾಯಿ ಯು ಮೂರು ನೋಟು ಇದ್ದು..."ಎಂದು ತಡವರಿಸುತ್ತ ಹೇಳುತ್ತಾನೆ. ಮೊದಲೇ ಬೆವೆತು ಬೆಂಡಾಗಿದ್ದ ಕಂಡಕ್ಟರ್ ಮಾದೇಶಿ ಗೆ ಇನ್ನಷ್ಟು
ರೋಸಿ ಹೋಗಿ ತನ್ನ ಕೋಪವನ್ನೆಲ್ಲ ಆ ಅಜ್ಜನ ಮೇಲೆ ಹಾಕುತ್ತ " ಏಯ್...
ಯಾಕ್ ನಮ್ಮ ಜೀವಾ ತಗ್ಯಾಕ ಬರ್ತೀರೀ.. ಬಾ ಇಕಡೇ" ಎಂದು ಆತನ ತೆಳುವಾದ ರಟ್ಟೆ ಹಿಡಿದು ಜೋರಾಗಿ " ಹೋಲ್ಡಾನ್"ಎಂದು ಬಸ್ ನಿಲ್ಲಿಸಲು ಸೂಚಿಸುತ್ತಾನೆ.
ಕಂಡಕ್ಟರ್ ಸೂಚನೆ ಪ್ರಕಾರ ಬಸ್ ಚಾಲಕ ಬಸ್ ನ್ನು ರಸ್ತೆ ಒಂದು ಬದಿಗೆ ನಿಲ್ಲಿಸುತ್ತಾನೆ.ಇತ್ತ ಕಂಡಕ್ಟರ್ ಆ ವೃದ್ಧನಿಗೆ ಬಾಯಿಗೆ ಬಂದಂತೆ ಬೈಯುತ್ತ ರಟ್ಟೆ ಎಳೆದು ಕೆಳಗೆ ಇಳಿಸಲು ಮುಂದಾದಾಗ, ಏನಿದು ಗಲಾಟೆ ಎನ್ನುತ್ತ ಬಸ್ ನ ಚಾಲಕ ಅದರ ಇಂಜೀನ್ ಆಫ್ ಮಾಡಿ , ತನ್ನ ಸೀಟಿನಿಂದ ಎದ್ದು ಬಂದವ ಆ ವೃದ್ಧನನ್ನು ಕಾಣುತ್ತಿದ್ದಂತೆ ಅವರ ಪಾದ ಮುಟ್ಟಿ ನಮಸ್ಕರಿಸುತ್ತಾನೆ. ಆನಂತರ ಎದ್ದು ನಿಂತವ ಕಂಡಕ್ಟರ್ ಮಾದೇಶಿ ಯತ್ತ ತಿರುಗಿ "ಎಷ್ಟು ಕೊಡಬೇಕು ಇವ್ರು
ಎನ್ನುತ್ತ ಜೇಬಿನಿಂದ ಇನ್ನೂರು ರೂಪಾಯಿ ನೋಟು ಕೊಟ್ಟು ಉಳಿಕೆ ಹಣ ಅವರಿಗೇ ಕೊಡು " ಎಂದು ಹೇಳಿ ಮುಗಿಸುವಷ್ಟರಲ್ಲಿ ಆ ವೃದ್ಧರು ಚಾಲಕ ನ ಕೈ ಹಿಡಿದು" ಯಾರಪ್ಪಾ.. ನೀನು?, ನನ್ನ ಕಾಲಿಗ್ಯಾಕೆ ಬಿದ್ದೀ.. ದುಡ್ಡು ಯಾಕೆ ಕೊಟ್ಟೀ "
ಎಂದು ನಡುಗುವ ಧ್ವನಿಯಲ್ಲಿ ಕೇಳುತ್ತಾನೆ. ಆಗ ಬಸ್ ಚಾಲಕ ಅವರನ್ನು" ನೀವು
ಶಾಂತಪ್ಪಜ್ಜ ಅಲ್ವಾ.."ಎಂದು ಕೇಳಿದಾಗ ಆ ವೃದ್ಧರು"ಹಾಂ.. ಹೌದು.. ಆದ್ರೆ ನೀ ಯಾರು ಗೊತ್ತಾಗ್ಲಿಲ್ಲ " ಎನ್ನುತ್ತಾರೆ. ಮುಂದುವರೆದ ಬಸ್ ಚಾಲಕ"ಅಜ್ಜಾ.. ನಾನು
ನಿಮ್ಮೂರಿನ ಗಾಣಿಗರ ಬೀದಿ ಕೆಂಚಪ್ಪನ ಮಗಾ ಪಾಂಡು..., ನೆನಪಾಯ್ತಾ, ಎರಡು ವರ್ಷದ ಹಿಂದೆ ನಾ ಎಸ್ ಎಸ್ ಎಲ್ ಸಿ ಪಾಸಾಗಿ ಕೆಲ್ಸಾ ಇಲ್ದೆ ಊರಾಗ ಓಡಾಡ್ಕೊಂಡು ಇದ್ದೆ... ಆಗ ನೀವು ನನ್ನ ಅಪ್ಪನ ಹತ್ರ ಬಂದು ಅವರಿಗೆ ಹೇಳಿ ಡ್ರೈವಿಂಗ್ ತರಬೇತಿ ಶಾಲೆಗೆ ಸೇರಿಸಿದ್ರೀ.. ಅದು ಮುಗ್ದ ಮ್ಯಾಲೆ ಹಂಗೇ ಕೆಲಸಕ್ಕೆ ಟ್ರೈ ಮಾಡ್ಕೋತಾ ಈ ಸಾರಿಗೆ ಇಲಾಖೆ ಸೇರಿ ಆಗ್ಲೇ ವರ್ಸಾತು,.. ಅಂದು ನೀವು ನಮ್ಮ ಮನೀಗೆ ಬಂದು ಹೆಳಿದ್ದಕ್ಕ ಇಂದ ನಾ ಈ ಡಿಪಾರ್ಟ್ಮೆಂಟ್ ಸೇರಿ ತಿಂಗಳ ತಿಂಗಳೂ ಸಂಬಳ ಪಡೆಯೊ ಹಂಗ ಆತು. ಅಂದು ನೀವು ಮಾಡಿದ ಉಪಕಾರ ದಿನಾನೂ ನೆನ್ಸಕೋತೀನಿ..." ಎನ್ನುತ್ತ ತನ್ನ ಜೇಬಿನಿಂದ ಮತ್ತೆ ಐನೂರು ರೂಪಾಯಿ ನೋಟು ಅವರ ಕೈ ಗೆ ಕೊಟ್ಟು ಸೀಟಿನ ಮೇಲೆ ಕೂರಿಸುತ್ತ... ಏನೂ ಚಿಂತೆ ಮಾಡ್ಬೇಡಿ.. ನಿಮ್ಮುರು ಬಂದಾಗ ನಾನೇ ಇಳಸ್ತೀನಿ " ಎಂದು ಪುನಃ ತನ್ನ ಸೀಟಿನ ಮೇಲೆ ಕುಳಿತು ಇಂಜಿನ್ ಸ್ಮಾರ್ಟ್ ಮಾಡುತ್ತಿದ್ದಂತೆ ಒಳಗೆ ಕುಳಿತ ಕೆಲ ಪ್ರಯಾಣಿಕರು ತಮ್ಮ ತಮ್ಮಲ್ಲೇ "ಇದಲ್ವಾ.. ಕೃತಜ್ಞತೆ ಅಂದ್ರೆ.. "ಎಂದು ಮಾತನಾಡಿಕೊಳ್ಳುತ್ತಿದ್ದರು.
ಕೃಪೆ:ಅರವಿಂದ.ಜಿ.ಜೋಷಿ.
ಮೈಸೂರು.
ಸಂಗ್ರಹ:ವೀರೇಶ್ ಅರಸೀಕೆರೆ.
Comments
Post a Comment