ದಿನಕ್ಕೊಂದು ಕಥೆ 1071
*🌻ದಿನಕ್ಕೊಂದು ಕಥೆ🌻*
*ಆಸ್ತಿ*
ತಂದೆ ಸತ್ತು ಅವರ ಕ್ರಿಯಾಕರ್ಮಗಳೆಲ್ಲಾ ಮುಗಿದು ತನ್ನ ಬಾಡಿಗೆ ಮನೆಗೆ ಬಂದ ಸತೀಶನಿಗೆ ಪುನಃ ಅಣ್ಣನ ಕರೆ ನೋಡಿ ಆಶ್ಚರ್ಯ ಆದರೂ ಶಾಂತವಾಗಿಯೇ ಮಾತನಾಡಿದ. ಆಗ ತಿಳಿದುದು ಇಷ್ಟು ಅಪ್ಪ ಬಿಟ್ಟು ಹೋದ ಒಂದು ತುಂಡು ಜಮೀನನ್ನು ಮಾರುವುದು, ಬಂದ ಹಣವನ್ನು ಮಕ್ಕಳು ( ತಾವಿಬ್ಬರೂ) ಹಂಚಿಕೊಳ್ಳೋದು ಹಾಗೂ ಅಮ್ಮನ ಬಗ್ಗೆ ನಿರ್ಣಯ ತಗೊಳ್ಳೋದು.
ಸತೀಶನ ಕಣ್ಣ ಮುಂದೆ ತಾಯಿಯ ನಿಷ್ಕಳಂಕ ಮುಖ ಬಂದೊಡನೆ ಏನೋ ನಿರ್ಣಯವನ್ನು ಮಾಡಿ ಕೂಡಲೇ ಅದನ್ನು ತನ್ನ ಮಡದಿಯ ಬಳಿ ಹಂಚಿಕೊಂಡ. ಅವಳೂ ಸಮ್ಮತಿಸಿದಳು.
ಹೇಳಿದ ಸಮಯಕ್ಕೆ ಸರಿಯಾಗಿ ಬಂದ ತಮ್ಮನನ್ನು ಕಂಡು ಅಣ್ಣನಿಗೆ ಆಶ್ಚರ್ಯ ಸಂತೋಷ ಎರಡೂ ಆಗಿ ಬೇಗನೆ ತನ್ನ ಯೋಜನೆಯನ್ನು ತಮ್ಮನ ಮುಂದಿಟ್ಟ. ಜಮೀನಿನ ತುಂಡನ್ನು ಮಾರಿ ಹಣ ಮಾಡುವುದು,, ಅಮ್ಮನನ್ನು ಆರು ತಿಂಗಳು ತಾನು ಆರು ತಿಂಗಳು ತಮ್ಮ ನೋಡಿಕೊಳ್ಳೋದು, ಇದೇ ಮುಖ್ಯ ವಿಷಯವಾಗಿತ್ತು.
ಕೇಳಿದ ಸತೀಶ ಸುಮ್ಮನೆ ಅಮ್ಮನ ಮುಖವನ್ನು ನೋಡಿದ. ತಮಗಾಗಿ ರಕ್ತ, ಮಾಂಸವನ್ನು ಹಂಚಿ ನಮಗೊಂದು ಜೀವನವನ್ನು ಕಲ್ಪಿಸಕೊಟ್ಟ ಮಾತೃದೇವತೆಯನ್ನು ಇವತ್ತು ಪಾಲು ಮಾಡುವುದೇ ? ಸತೀಶ ಮನೆಯ ಸುತ್ತ ಕಣ್ಣು ಹಾಯಿಸಿದ ಬಾಗಿಲ ಸಂದಿಯಲ್ಲಿ ಮೈಯೆಲ್ಲ ಕಿವಿಯಾಗಿ ಕೇಳುವ ಅತ್ತಿಗೆಯನ್ನು ಕಂಡು,, ಹೆದರಿಕೆಯಿಂದ ದೀನನಾಗಿ ಕುಳಿತ ಅಣ್ಣನನ್ನು ಕಂಡು ಯಾಕೋ ಬೇಸರಗೊಂಡ.
ಕೂಡಲೇ ಎದ್ದು ನಿಂತು ದೀನಳಾಗಿ ನೋಡುತಿದ್ದ ತಾಯಿಯ ಕೈಯನ್ನು ಹಿಡಿದು ಎಬ್ಬಿಸಿ ' ಅಮ್ಮಾ ನಿನ್ನ ಬಟ್ಟೆಗಳನ್ನು ಒಂದು ಚೀಲಕ್ಕೆ ಹಾಕು' ಎಂದು ಹೇಳಿ ಅಣ್ಣನ ಮುಖವನ್ನು ನೋಡಿ " ಅಣ್ಣ, ನನ್ನ ಅಮೂಲ್ಯ ಆಸ್ತಿ ನನಗೆ ಸಿಕ್ಕಿತು. ಈಗ ಉಳಿದುದೆಲ್ಲವೂ ನಿನ್ನ ಬಳಿಯೇ ಇರಲಿ," ಎಂದು ಪ್ರೀತಿಯಿಂದ ತಾಯಿಯ ಕೈ ಹಿಡಿದು ಮನೆಯಿಂದ ಹೊರಗೆ ಬಂದ. ಆಗ ತಾಯಿ ಮುಖದ ಮೇಲಿನ ತೃಪ್ತಿ ಯನ್ನು ಕಂಡು ಮನದಲ್ಲೇ " ನಿನ್ನ ಆಶೀರ್ವಾದವೇ ನನ್ನ ಆಸ್ತಿ ಅಮ್ಮ__ ಅನ್ನುತ್ತಾ ನಿರಾಳನಾದ.
ಲೇಖಕರು:ವಸುಧಾ ಪ್ರಭು
ಮುಂಬೈ..
ಸಂಗ್ರಹ:ವೀರೇಶ್ ಅರಸೀಕೆರೆ.
Comments
Post a Comment