ದಿನಕ್ಕೊಂದು ಕಥೆ 1073
*🌻ದಿನಕ್ಕೊಂದು ಕಥೆ🌻*
*ವೈರತ್ವ*
ಇಬ್ಬರು ವ್ಯಾಪಾರಿಗಳ ನಡುವೆ ಯಾವಾಗಲೂ ಪೈಪೋಟಿ ನಡೆಯುತ್ತಿತ್ತು. ಒಬ್ಬನಿಗೆ ವ್ಯಾಪಾರ ಚೆನ್ನಾಗಿ ಆದರೆ , ಇನ್ನೊಬ್ಬನಿಗೆ ಹೊಟ್ಟೆ ಉರಿ,ಇಬ್ಬರೂ ಒಬ್ಬರನ್ನೊಬ್ಬರು ಕೆಳಕ್ಕೆ ಹಾಕಲು ಸದಾ ಪ್ರಯತ್ನಿಸುತ್ತಿದ್ದರು. ಇದು ಅವರಿಬ್ಬರಲ್ಲಿ ದ್ವೇಷಕ್ಕೆ ಎಡೆ ಮಾಡಿ, ತಮ್ಮ ವ್ಯಾಪಾರವನ್ನು ಅಭಿವೃದ್ಧಿ ಪಡಿಸುವುದರ ಬದಲು, ಒಬ್ಬರ ಕಾಲೆಳೆಯಲು ಇನ್ನೊಬ್ಬರು ಸದಾ ಕಾಯುತ್ತಿದ್ದರು.
ಒಂದು ಸಲ ಒಬ್ಬ ವ್ಯಾಪಾರಿ, ತನ್ನ ಸ್ನೇಹಿತರೊಂದಿಗೆ, ಮತ್ತೊಂದು ಊರಿಗೆ ಹೊರಟಿದ್ದ. ಊರು ಸೇರುವ ಮೊದಲು ಅವರು ಒಂದು ದಟ್ಟವಾದ ಕಾಡನ್ನು ಹಾದು ಹೋಗಬೇಕಿತ್ತು. ಹೊರಡುವಾಗಲೇ ಸ್ವಲ್ಪ ತಡವಾದದ್ದರಿಂದ, ಕಾಡು ದಾಟುವಾಗ ಕತ್ತಲಾಗ ತೊಡಗಿತು. ಎಲ್ಲರಿಗೂ ಕಾಡುಪ್ರಾಣಿಗಳ ಭಯವಿದ್ದಿದ್ದರಿಂದ ಬಹಳ ಹುಷಾರಾಗಿ ನಡೆಯುತ್ತಿದ್ದರು.
ಇದ್ದಕ್ಕಿದ್ದಂತೆ ಭೀಕರವಾದ ಸಿಂಹದ ಘರ್ಜನೆ ಕೇಳತೊಡಗಿತು. ಅದು ಹತ್ತಿರದಲ್ಲೇ ಎಲ್ಲೋ ಕೂಗುತ್ತಿರುವಂತೆ ಭಾಸವಾಯಿತು. ಜೊತೆಯಾಗಿ ಹೊರಟ ಸ್ನೇಹಿತರೆಲ್ಲಾ ಗಾಬರಿಯಾಗಿ ತಮಗೆ ತೋಚಿದ ಕಡೆ ಓಡತೊಡಗಿದರು. ಸಿಕ್ಕ ಸಿಕ್ಕ ಮರಗಳನ್ನೇರಿ ಕುಳಿತರು. ಈ ವ್ಯಾಪಾರಿ ಕೂಡಾ ಒಂದು ಮರವನ್ನೇರಿ ಕುಳಿತುಕೊಂಡ.
ಅಷ್ಟರಲ್ಲೇ, ದೊಡ್ಡ ಸಿಂಹವೊಂದು, ಇವನು ಕುಳಿತಿದ್ದ ಮರದ ಕೆಳಗೆ ಬಂದು ಕುಳಿತುಕೊಂಡಿತು. ಅದರ ಕಿಡಿ ಕಾರುವ ಕಣ್ಣುಗಳು, ಅದರ ಕೂದಲು, ನಡು ನಡುವೆ ಅದರ ಘರ್ಜನೆ , ಇವೆಲ್ಲದರಿಂದ, ಅವನಿಗೆ ಮೈಯಲ್ಲಿ ನಡುಕ ಉಂಟಾಯಿತು.
ವ್ಯಾಪಾರಿ ತಾನು ಕುಳಿತಿದ್ದ ಮರವನ್ನು ಒಮ್ಮೆ ತಲೆ ಎತ್ತಿ ನೋಡಿದ. ಅವನ ತಲೆಯ ಮೇಲ್ಗಡೆ ಎರಡು ಕೊಂಬೆಗಳು. ಕೊಂಬೆಯ ಮೇಲೆ ಏನು ಸರಿದಾಡಿದಂತೆ ಶಬ್ದವಾಯಿತು. ನೋಡಿದರೆ, ಅದೊಂದು ದೊಡ್ಡ ಕಾಳಿಂಗ ಸರ್ಪ. ಕೊಂಬೆಯನ್ನು ಸುತ್ತಿಕೊಂಡು, ತನ್ನ ದೊಡ್ಡ ಹೆಡಿಯೆತ್ತಿ, ಇವನನ್ನೇ ನೋಡುತ್ತಿತ್ತು. ಕೆಳಗೆ ನೋಡಿದರೆ, ಸಿಂಹ ಇವನನ್ನೇ ನೋಡುತ್ತಿದೆ. ತನಗೆ ಈ ಎರಡರಲ್ಲಿ ಯಾವುದಾದರೂ ಒಂದರಿಂದ ಸಾವು ಖಚಿತ ಎಂದು ಕೊಂಡ.
ಆಶ್ಚರ್ಯವೆನ್ನುವಂತೆ, ಸಿಂಹ ಮಾತನಾಡಿತು,"ಹೇ ಮನುಷ್ಯ, ಕೆಳಗಿಳಿದು ಬಾ, ನೀನು ನನ್ನ ಆಹಾರ, ನಾನು ಅದಕ್ಕಾಗಿಯೇ ಕಾಯುತ್ತಿದ್ದೇನೆ ಎಂದಿತು.
ಸಿಂಹದ ಮಾತು ಕೇಳಿದ ತಕ್ಷಣ, ಸರ್ಪ ಬಸುಗುಟ್ಟುತ್ತಾ, ಈ ಮನುಷ್ಯ ನಾನಿರುವ ಜಾಗಕ್ಕೆ ಬಂದಿದ್ದಾನೆ, ಅವನನ್ನು ನಾನು ಬಿಡುವುದಿಲ್ಲ, ಎಂದಿತ್ತು.
ಆಗ ಸಿಂಹ, ಏ, ಸರ್ಪ, ನೀನೊಂದು ಹರಿದಾಡುವ ಹುಳ, ಧೈರ್ಯವಿದ್ದರೆ ಕೆಳಗಿಳಿದು ಬಂದು ಮಾತನಾಡು, ನಾನು ಕಾಡಿನ ರಾಜ ಎಂದು ನಿನಗೆ ಗೊತ್ತಿಲ್ಲವೇ? ಎಂದು ಘರ್ಜಿಸಿತು.
ಆಗ ಸರ್ಪವೂ ಸುಮ್ಮನಿರದೇ, ನೀನೆಂಥ ಕಾಡಿನ ರಾಜ, ಮರದ ಮೇಲೆ ಕುಳಿತ ಮನುಷ್ಯನನ್ನು ಕೆಳಗಿಳಿಸಲು ನಿನಗೆ ಆದೀತೇ? ನಾನು ನೆಲದಲ್ಲಿ, ನೀರಿನಲ್ಲಿ, ಮರದಲ್ಲಿ, ಎಲ್ಲಿ ಬೇಕೆಂದರಲ್ಲಿ, ಬೆನ್ನಟ್ಟಿ ಬೇಟೆಯಾಡಬಲ್ಲೆ, ಆ ಕೆಲಸ ನಿನ್ನಿಂದ ಮಾಡಲಾದೀತೇ? ನಾನು ಸರ್ಪಗಳ ರಾಜ ,ಎಂದು ಬುಸುಗುಟ್ಟುತ್ತಾ ಹೇಳಿತು.
ಇವೆರಡರ ಮಾತುಗಳನ್ನು ಕೇಳಿ ವ್ಯಾಪಾರಿ ಮತ್ತಷ್ಟು ಗಾಬರಿಯಾದ. ಅವುಗಳ ಜಗಳ ಇನ್ನೂ ಜಾಸ್ತಿ ಆಯಿತು. ಸರ್ಪ ಸರಸರನೆ ಮರದಿಂದ ಹರಿದು ನೆಲದ ಮೇಲೆ ಧುಮುಕಿತು. ತನ್ನ ಹೆಡೆಯನ್ನು ಅಷ್ಟೆತ್ತರಕ್ಕೆ ಎತ್ತಿ ಸಿಂಹಕ್ಕೆ ತನ್ನ ಹೆಡೆಯಿಂದ ಅಪ್ಪಳಿಸಿ ,ಅದರ ದೇಹವನ್ನು, ಕಚ್ಚಿ ,ವಿಷ ಇಳಿಸಿ ಬಿಟ್ಟಿತು. ಮತ್ತೆ ,ಮತ್ತೆ ತನ್ನ ಹೆಡೆಯಿಂದ ಸಿಂಹಕ್ಕೆ ಅಪ್ಪಳಿಸುತ್ತಾ ಕಚ್ಚತೊಡಗಿತು.
ಆಗ ಸಿಂಹ ಸುಮ್ಮನಿದ್ದೀತೇ? ಅದು ಕೂಡ ಸರ್ಪದ ಹೆಡೆಯನ್ನು, ತನ್ನ ಬಾಯಿಂದ ಕಚ್ಚಿ, ಸೀಳಿ ಹಾಕಿಬಿಟ್ಟಿತ್ತು. ಸರ್ಪ ಅಲ್ಲೇ ಸತ್ತು ಬಿದ್ದಿತ್ತು, ಅಲ್ಲೇ ಇನ್ನೊಂದು ಪಕ್ಕದಲ್ಲಿ ಸಿಂಹವೂ ವಿಷವೇರಿ ಒದ್ದಾಡಿ ಸತ್ತು ಬಿದ್ದಿತು.
ಸಧ್ಯ ಇವೆರಡರ ಜಗಳದಿಂದ ನಾನು ಬದುಕುಳಿದೆ ಎಂದು ನೆಮ್ಮದಿಯ ಉಸಿರು ಬಿಟ್ಟ.ಆದರೆ , ಒಂದು ಕ್ಷಣ ಅವನಿಗೆ ತನ್ನ ಪರಿಸ್ಥಿತಿಯೂ ಒಂದು ದಿನ ಹೀಗೇ ಆಗಬಹುದು ಎನಿಸಿ, ಅಲ್ಲೇ ನಡುಗ ತೊಡಗಿದ.ಇದನ್ನು ಈ ಕ್ಷಣವೇ ಸರಿಪಡಿಸಿಕೊಳ್ಳಬೇಕೆಂದು ತೀರ್ಮಾನಿಸಿದ.
ವ್ಯಾಪಾರಿ ನಿಧಾನವಾಗಿ ಮರದಿಂದ ಕೆಳಗಿಳಿದು ತನ್ನ ಊರಿಗೆ ಬಂದು, ಸೀದಾ ತನ್ನ ಪ್ರತಿಸ್ಪರ್ಧಿಯಾಗಿದ್ದ, ವ್ಯಾಪಾರಿಯ ಮನೆಗೆ ಹೋಗಿ, ತನಗಾದ ಅನುಭವವನ್ನು ಹೇಳಿದ.
ನೋಡು, ಇಬ್ಬರು ಬಲಿಷ್ಠರಾದವರು ಹೋರಾಡಿದಾಗ ,ಇಬ್ಬರೂ ನಾಶವಾಗಿ ಮೂರನೆಯವನಿಗೆ ಅನುಕೂಲವಾಗುತ್ತದೆ. ನಮಗೂ ಹಾಗಾಗುವುದು ಬೇಡ, ನಾವಿಬ್ಬರು ಇನ್ನು ಮುಂದೆ, ಗೆಳೆತನದಿಂದಿದ್ದು, ಒಬ್ಬರಿಂದ ಮತ್ತೊಬ್ಬರಿಗೆ ಅನ್ಯಾಯವಾಗದಂತೆ ನೋಡಿಕೊಂಡು ವ್ಯಾಪಾರ ನಡೆಸಿ ಬದುಕಿ ಬಾಳೋಣ ಎಂದು ಹೇಳಿದ.
ಅವನ ಮಾತಿಗೆ ಇನ್ನೊಬ್ಬ ವ್ಯಾಪಾರಿಯೂ ಸಮ್ಮತಿ ಸೂಚಿಸಿದ, ಇಬ್ಬರೂ ಸ್ನೇಹಿತರಾಗಿ, ಹೊಂದಿಕೊಂಡು ವ್ಯಾಪಾರ ನಡೆಸುತ್ತಾ ,ಬಹಳ ಕಾಲ ಸುಖದಿಂದ ಬಾಳಿದರು.
ನಮಗೆಲ್ಲರಿಗೂ ಇದೊಂದು ಜೀವನದ ಪಾಠ. ನಾವು ಮತ್ತೊಬ್ಬರೊಡನೆ ಸದಾ ಸ್ಪರ್ಧೆಯಲ್ಲಿ ತೊಡಗಿದರೆ, ಇಬ್ಬರೊ ಹಾಳಾಗಿ ಹೋಗುತ್ತೇವೆ. ಇದರಿಂದ ಮೂರನೇಯವರು ಲಾಭ ಪಡೆದುಕೊಳ್ಳುತ್ತಾರೆ. ಸಮಾಧಾನವಾಗಿ ಹೊಂದಿಕೊಂಡು ಹೋದರೆ ,ಎಲ್ಲರ ಜೀವನವೂ ಸುಗಮವಾಗುತ್ತದೆ.
ಸುಮ್ಮನೆ, ಮತ್ತೊಬ್ಬರೊಡನೆ,ಸ್ಪರ್ಧಿಸುತ್ತ, ಜಗಳವಾಡುತ್ತಾ, ಹೊಟ್ಟೆ ಕಿಚ್ಚು, ಅಸೂಯೆ ಪಡುತ್ತಾ ನಮ್ಮ ಜೀವನವನ್ನೂ ,ನರಕ ಮಾಡಿಕೊಂಡು, ಇನ್ನೊಬ್ಬರ ಜೀವನವನ್ನೂ ನರಕಮಾಡುವುದರ ಬದಲು ಸಮಾಧಾನದಿಂದ ,ತಿಳುವಳಿಕೆಯಿಂದ, ಹೊಂದಿಕೊಂಡು ಸಹಬಾಳ್ವೆಯ ಜೀವನ ನಡೆಸಿದರೆ, ಎಲ್ಲರ ಜೀವನ ಸುಗಮವಾಗಿ ನಡೆಯುತ್ತದೆ.
ಕೃಪೆ : ಸುವರ್ಣಾ ಮೂರ್ತಿ.
ಸಂಗ್ರಹ:ವೀರೇಶ್ ಅರಸೀಕೆರೆ.
Comments
Post a Comment