ದಿನಕ್ಕೊಂದು ಕಥೆ 1074

*🌻ದಿನಕ್ಕೊಂದು ಕಥೆ*🌻
*ಸಂಗೀತ ತಪಸ್ವಿ ಹರಿದಾಸರು*

ತಾನ್ಸೇನ್ ಅಕ್ಬರನ ಆಸ್ಥಾನದಲ್ಲಿದ್ದ ಪ್ರಮುಖ ಗಾಯಕ. ಒಂದು ದಿನ ಅಕ್ಬರ್,  ತಾನ್ಸೇನನಿಗೆ  ನಿನ್ನಂತ ಗಾಯಕ ಈ ಜಗತ್ತಿನಲ್ಲೇ ಯಾರು ಇಲ್ಲ, ನೀನು  ಸಿಕ್ಕಿದ್ದು, ನನ್ನ ಅದೃಷ್ಟವೇ ಸರಿ, ನೀನು  ನನ್ನ ಆಸ್ಥಾನದ ಅಮೂಲ್ಯವಾದ ರತ್ನ  ಎಂದು ಅವನನ್ನು ಹೊಗಳುತ್ತಿದ್ದ. ಆಗ ತಾನ್ಸೇನ್, ಇಲ್ಲಾ ಪ್ರಭೂ, ನೀವು ನನ್ನ ಗುರುಗಳಾದ ಹರಿದಾಸರ ಗಾಯನವನ್ನು ಕೇಳಿಲ್ಲ, ಅದಕ್ಕೆ ಹೀಗೆ ಹೇಳುತ್ತಿರುವಿರಿ, ಅವರ ಗಾಯನವನ್ನು ನೀವೇನಾದರೂ ಒಂದು ಸಲ ಕೇಳಿದರೆ ,ಇಡೀ ಜಗತ್ತನ್ನೇ ಮರೆಯುವಿರಿ, ಅಂತಹ  ಶಕ್ತಿ ಅವರ‌ ಗಾಯನದಲ್ಲಿ ಎಂದು ಹೇಳಿದ.

   ಅಕ್ಬರನಿಗೆ ಆಶ್ಚರ್ಯವಾಯಿತು, ತಾನು ಕೇಳಿದ, ಅತ್ಯಂತ ಮಧುರವಾದ ಕಂಠದ ಗಾಯಕ ತಾನ್ಸೇನ್,  ಬಹುಶಃ ಇವನಿಗೆ ತನ್ನ ಗುರುಗಳ ಬಗ್ಗೆ ಅಪಾರವಾದ ಗೌರವ ಅಭಿಮಾನವಿರುವುದಕ್ಕೆ, ಇವನು  ಹೀಗೆ ಹೊಗಳುತ್ತಿರಬಹುದು, ಎಂದುಕೊಂಡು, ಸರಿ ಹಾಗಿದ್ದರೆ ನಿಮ್ಮ ಗುರುಗಳ ಗಾಯನವನ್ನೂ ಒಮ್ಮೆ ಕೇಳಿಯೇ ಬಿಡೋಣ,  ಅವರನ್ನು ಆಸ್ಥಾನಕ್ಕೆ ಕರೆಸಿಬಿಡು ಎಂದು ಹೇಳಿದ ಅಕ್ಬರ್.

   ಕ್ಷಮಿಸಿ ಮಹಾಪ್ರಭೂ, ನನ್ನ ಗುರುಗಳು ಎಲ್ಲೆಂದರಲ್ಲಿ ಹಾಗೆಲ್ಲ ಬರುವವರಲ್ಲ, ಎಂದ ತಾನ್ಸೇನ್,
ಅಕ್ಬರನಿಗೆ ಈಗ ರೇಗಿ ಹೋಯಿತು. ಅಲ್ಲಪ್ಪಾ, ಅವರು ಬರಲಾರರು, ನನ್ನೆದಿರು ಹಾಡಲಾರರು ಎಂದರೆ ನಾನು ಅವರ ಗಾಯನವನ್ನು ಕೇಳುವುದಾದರೂ ಹೇಗೆ? ಎಂದ.

ಮಹಾಪ್ರಭೂ, ಅವರು ಯಮುನಾ ನದಿಯ ತೀರದಲ್ಲಿ,  ಇದ್ದಾರೆ.ಪ್ರತಿ ದಿನ ಬೆಳಗಿನ ಜಾವ ಸುಮಾರು ‌ಮೂರುಗಂಟೆಯ ಸಮಯದಲ್ಲಿ ಹಾಡುತ್ತಿರುತ್ತಾರೆ, ಅವರ ಗಾಯನ ಕೇಳಬೇಕೆಂದರೆ, ನಾವು ಅಲ್ಲಿಗೇ ಆ  ಸಮಯದಲ್ಲಿ ಹೋಗಬೇಕು ಎಂದ ತಾನ್ಸೇನ್.

     ಸರಿ, ಹಾಗಾದರೆ ಅಲ್ಲಿಗೆ ಹೋಗೋಣ ಎಂದ ಅಕ್ಬರ್.  ಇಬ್ಬರೂ  ಯಮುನಾ ನದಿ ತೀರಕ್ಕೆ ಬಂದು, ಅಲ್ಲಿರುವ ಹಳ್ಳಿಗಳಲ್ಲಿ, ಹರಿದಾಸರನ್ನು ಹುಡುಕುತ್ತಾರೆ. ಬಹಳಷ್ಟು ಕಡೆ ಹುಡುಕಿದ ನಂತರ, ಅವರಿಗೆ ಒಂದು ಹಳ್ಳಿಯಲ್ಲಿ, ಹರಿದಾಸರಿರುವುದು ಗೊತ್ತಾಗುತ್ತದೆ. 

     ಅವರಿರುವ ಗುಡಿಸಲಿಗೆ ಹೋದಾಗ ಹರಿದಾಸರು, ತಮ್ಮ ನಿತ್ಯದ ಕೆಲಸದಲ್ಲಿ ತೊಡಗಿರುತ್ತಾರೆ. 
ಅವರನ್ನು ಮಾತನಾಡಿಸಿ, ಹಾಡು ಹಾಡಿರಿ ಎಂದು, ಕೇಳೋಣವೇ  ಎಂದು, ಅಕ್ಬರ್‌  ತಾನ್ಸೇನನನ್ನು ಕೇಳುತ್ತಾನೆ.

ನೀವಿಲ್ಲಿಗೆ ಬಂದಿರುವುದು ಗೊತ್ತಾದರೆ ಅವರು ಹಾಡುವುದೇ ಇಲ್ಲ, ಎಂದ ತಾನ್ಸೇನ್.
ಹಾಗಾದರೆ ಈಗ ಏನು ಮಾಡುವುದು ಎಂದ ಅಕ್ಬರ್.

  ಒಂದು ಕೆಲಸ ಮಾಡೋಣ ನಾವು ಯಾರಿಗೆ ಕಾಣದ ಹಾಗೆ ಸ್ವಲ್ಪ ಹೊತ್ತು ಇಲ್ಲೇ ಅವಿತು, ಕೂತಿದ್ದು ಅವರು ಗಾಯನ ಶುರು ಮಾಡಿದ ತಕ್ಷಣ ,ಅವರ ಗಾಯನ ಕೇಳಿಸಿಕೊಂಡು  ಹೊರಟು ಬಿಡೋಣ, ಎಂದ ತಾನ್ಸೇನ್.
ಅಕ್ಬರನಿಗೆ ಸ್ವಲ್ಪ ಕಿರಿಕಿರಿ ಆಯ್ತು, ಇವನ್ಯಾಕೋ ಅತಿಯಾಗಿ ಆಡುತ್ತಿದ್ದಾನೆ ಎನಿಸಿತು. ಆದರೂ ಅವರು ಹೇಗೆ ಹಾಡುತ್ತಾರೆ ನೋಡೇ ಬಿಡೋಣ ಎಂದು ಸುಮ್ಮನಾದ.

ಸುಮಾರು  ರಾತ್ರಿ  ಮೂರು ಗಂಟೆಯ ಸಮಯದಲ್ಲಿ, ಹರಿದಾಸರು ಹಾಡಲು ಶುರುಮಾಡಿದರು.  ಇಡೀ ರಾತ್ರಿ   ಕಾಯುತ್ತ ಕುಳಿತ ಅಕ್ಬರ್ ಹಾಗೂ ತಾನ್ಸೇನ್, ಇವರ ಹಾಡನ್ನು ಕೇಳಿಸಿಕೊಳ್ಳುತ್ತಾರೆ.
ಇವರ ಹಾಡು ಮುಗಿಯುವ ಸಮಯಕ್ಕೆ ಅಕ್ಬರ್ ಭಾವವಶನಾಗಿ ತಾನ್ಸೇನ್,  ನಿಜವಾಗಿಯೂ ನಿನ್ನ ಗುರು ಮಹಾನ್ ಗಾಯಕ, ಅವರ ಶಿಷ್ಯನಾಗಿದ್ದೂ  ,ನೀನು ಅವರ ಮುಂದೆ  ಏನೂ ಅಲ್ಲಾ. ಅವರು ಮಟ್ಟಕ್ಕೆ ಬೆಳೆಯಲು  ನೀನಿನ್ನೂ ಬಹಳ ಸಾಧನೆ ಮಾಡಬೇಕು,ಒಮ್ಮೆ ಅವರನ್ನು ಹೇಗಾದರೂ ನನ್ನ ಆಸ್ಥಾನಕ್ಕೆ ಕರೆಸಿಬಿಡು , ಅವರನ್ನು ಸನ್ಮಾನಿಸೋಣ ಎಂದ.
   ಆಗ ತಾನ್ಸೇನ್ ಕ್ಷಮಿಸಿ  ಮಹಾಪ್ರಭೂ, ಅವರು   ನನ್ನ ಹಾಗಲ್ಲಾ . ಅವರು ಹಾಗೆಲ್ಲಾ ಎಲ್ಲಿಗೂ ಬರುವುದಿಲ್ಲ. ನಾನಾದರೊ, ನಿಮ್ಮ ಎದುರು  ನನ್ನ ಹೊಟ್ಟೆಪಾಡಿಗಾಗಿ ಹಾಡುವುದು, ಎಂದು  ನಗುತ್ತಾ ಹೇಳಿದ.ಆದರೆ ನನ್ನ ಗುರುಗಳಿಗೆ ಯಾರ ಹಂಗಿಲ್ಲ. ಅವರು ಹಾಡುವುದು ಕೇವಲ ಭಗವಂತನಿಗಾಗಿ ಮಾತ್ರ. ಅದಕ್ಕೆ ಅವರ ಧ್ವನಿಯಲ್ಲಿ ದೈವಿಕತೆ ಇದೆ. ನಮ್ಮ ಸೇವೆ ನಿಸ್ವಾರ್ಥವಾದಷ್ಟು ಅದರ ಬೆಲೆ ಹೆಚ್ಚುತ್ತಾ ಹೋಗುತ್ತದೆ ಎಂದ.

ತಾನ್ಸೇನನ ಮಾತಿಗೆ ಅಕ್ಬರ್ ಏನೂ‌ ಮಾತನಾಡದೆ ತಲೆದೂಗಿ ಸುಮ್ಮನಾದ.

   ಹರಿದಾಸರು ಕಡು ಬಡತನದಲ್ಲಿದ್ದು, ಯಮುನಾ ತೀರದ ಗುಡಿಸಲಿನಲ್ಲಿ ‌ವಾಸಿಸುತ್ತಿದ್ದರೂ,ಸಂಗೀತವನ್ನೇ‌ ಜೀವನವೆಂದು‌‌ ಭಾವಿಸಿದವರು.ಅವರು‌ ಬಡತನವನ್ನು  ಎಂದೂ ‌ಶಾಪವೆಂದು‌ ಕೊರಗಲ್ಲಿಲ್ಲ. ಜೀವನವನ್ನು ‌ಹೇಗೊ ‌ನೆಡೆಸುತ್ತಿದ್ದರು. ಅದರ‌ ಬಗ್ಗೆ  ತಲೆ ಕೆಡಿಸಿಕೊಂಡವರೇ ಅಲ್ಲ.ಶಿಷ್ಯರು ಕೊಡುತ್ತಿದ್ದ ನಾಲ್ಕು ಕಾಸಿನಿಂದ‌ ಅವರ ಜೀವನ ಸಾಗುತ್ತಿತ್ತು.ಅವರ ಸಾಧನೆಗೆ ಬಡತನ‌ ಎಂದೂ ಅಡ್ಡಿಯಾಗಲಿಲ್ಲ.ಅದನ್ನು‌ ವ್ರತದಂತೆ‌ ಆಚರಿಸಿ, ಸಾಧನೆಯ ‌ಉತ್ತುಂಗಕ್ಕೆ ಏರಿದರು. ಉತ್ತಮ ಶಿಷ್ಯರನ್ನು ಸೃಷ್ಟಿಸುವುದರೊಂದಿಗೆ, ಸಂಗೀತ ಕ್ಷೇತ್ರಕ್ಕೆ‌,ಎಂದಿಗೂ ಮರೆಯಲಾರದ‌‌ ಕೊಡುಗೆಯನ್ನು‌ನೀಡಿದರು. ಇದೇ ಅವರು ಮಾಡಿಟ್ಟ ಆಸ್ತಿ.

ಕೃಪೆ :ಸುವರ್ಣಾ ಮೂರ್ತಿ.
ಸಂಗ್ರಹ:ವೀರೇಶ್ ಅರಸೀಕೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1092

ದಿನಕ್ಕೊಂದು ಕಥೆ 1097