ದಿನಕ್ಕೊಂದು ಕಥೆ 1076

*🌻ದಿನಕ್ಕೊಂದು ಕಥೆ🌻*
            *ಧರ್ಮ- ಪತ್ನಿ*

ಬೆಂಗಳೂರಿನಿಂದ ರೈಲು ಹತ್ತಿದವನಿಗೆ ಏನೋ ನಿರಾಳ. ಇನ್ನು ಮನೆಯಲ್ಲಿ ನೆಮ್ಮದಿ ಸಿಗಬಹುದೆಂಬ ಆಸೆ. ಇನ್ನಾದರೂ ತನ್ನ ಧರ್ಮಪತ್ನಿ ಖುಷಿಯಾಗಿರ ಬಹುದು ಎಂಬ ಭಾವನೆ. ಮನೆಯಲ್ಲಿನ ದಿನ ನಿತ್ಯದ ಜಗಳ, ಗಲಾಟೆ, ಹೆಂಡತಿಯ ಕೂಗಾಟ, ಕುಹುಕು, ತಂದೆ ತಾಯಿಯ ಹತಾಶೆ, ಮೌನ ಎಲ್ಲದರಿಂದ ಮುಕ್ತಿ ಎಂಬ ನೆಮ್ಮದಿ. ತಮ್ಮೊಡನೆ ಇದ್ದು ತಂದೆ ತಾಯಿ ಅನುಭವಿಸುವ ನೋವು, ಹಿಂಸೆ, ಅವಮಾನ ಕ್ಕಿಂತ ಅವರು ವೃದ್ಧಾಶ್ರಮದಲ್ಲಿ ಆದರೂ ನೆಮ್ಮದಿಯಿಂದ ಇರಲಿ ಎಂಬ ಯೋಚನೆ ಇವನದ್ದು. 
ಗಂಡ ಹೆಂಡತಿ ಇಬ್ಬರೂ ಪ್ರತಿಷ್ಠಿತ ಹುದ್ದೆಯಲ್ಲಿ ಕೈ ತುಂಬಾ ಸಂಬಳ ಗಳಿಸುವವರೇ.  ಅತ್ತೆ ಮಾವರೊಂದಿಗೆ ಹೊಂದಿಕೊಳ್ಳಲಾಗದೆ ಹೆಂಡತಿ ಮನೆ ಬಿಟ್ಟು ತಾಯಿ ಮನೆ ಸೇರಿದಾಗ ಕೈ ಹಿಡಿದವಳ ಬಿಟ್ಟಿರುವುದು ಧರ್ಮವಲ್ಲ ಎಂದು ಹೆಂಡತಿಯ ಹಿಂದೆ ಬಂದು ಅತ್ತೆ ಮನೆಯಲೆ ಇದ್ದ ಇವನು ಅತ್ತೆ ತೀರಿದ ಬಳಿಕ ಆಗ ತಾನೇ ಹುಟ್ಟಿದ ಮಗುವನ್ನು ನೋಡಿಕೊಳ್ಳಲು ಯಾರು ಇಲ್ಲದಾಗ ಅಪ್ಪ ಅಮ್ಮನನ್ನು ಉಟ್ಟ ಬಟ್ಟೆಯಲ್ಲೇ ಕರೆ ತಂದಿದ್ದ. ಒಂದು ಮಾತೂ ಇಲ್ಲವೆನ್ನದೆ ಮೊಮ್ಮಗುವಿಗಾಗಿ ತಮ್ಮೆಲ್ಲಾ ನೋವು, ಅವಮಾನಗಳು ಮರೆತು ಮಗನೊಂದಿಗೆ ಬಂದು ಇದ್ದರು ಇವನ ಹೆತ್ತವರು. ಮನೆಯಲ್ಲಿ ದಿನ ನಿತ್ಯ ರಣರಂಗ. ಅತ್ತೆ ಮಾವ ಕೆಲಸದವರಿಗಿಂತ ಕೀಳು ಇವನ ಹೆಂಡತಿಗೆ. ಕಳ್ಳತನದ ಆರೋಪದಿಂದ ಹಿಡಿದು ಎಲ್ಲಾ ರೀತಿಯ ಅಪವಾದ ಅವಮಾನಗಳನ್ನು ಸಹಿಸಿ ಮೊಮ್ಮಗುವನ್ನು ಎತ್ತಿ ಆಡಿಸಿಕೊಂಡು ಮಗುವಿನ ನಗುವಿನಲ್ಲಿ ನೋವ ಮರೆಯುತ್ತಿದ್ದರು ಇವನ ಅಪ್ಪ ಅಮ್ಮ. ಮಗು ಬೆಳೆದು ಸ್ಕೂಲಿಗೆ ಹೋಗ ತೊಡಗಿದಾಗ ಮನೆ ನರಕ ಸದೃಶ. ಇನ್ನು ಅವರ ಅವಶ್ಯಕತೆ ಅನಿವಾರ್ಯ ಆಗಿರಲಿಲ್ಲ. ಪುಕ್ಕಟೆ ತಿಂದು ಬಿದ್ದಿದ್ದಾರೆ ಎಂಬ ಮಾತು ಗೋಡೆ ಗೋಡೆ ಯಲ್ಲಿ ಆವಾಗಾವಾಗ ಪ್ರತಿಧ್ವನಿಸಿತು. ಕೊನೆಗೊಂದು ದಿನ ಅಪ್ಪ ಅಮ್ಮನೂ ಮೌನ ಮುರಿದು, ನಾವಿಲ್ಲಿರುವುದಿಲ್ಲ, ನಮ್ಮನ್ನು ಒಂದು ವೃದ್ಧಾಶ್ರಮದಲ್ಲಿ ಬಿಟ್ಟುಬಿಡು ಎಂದು ಮಗನನ್ನ ಕಳಕಳಿಯಿಂದ ಬೇಡಿಕೊಂಡಾಗ ಇವನ ಪತ್ನಿಗೆ ಎಲ್ಲಿಲ್ಲದ ಆನಂದ. ಹಗಲು ರಾತ್ರಿ ಇವನನ್ನ ಕಾಡಿ, ಕಾದಾಡಿ, ಅವರನ್ನ ನೋಯಿಸಿ ತನ್ನ ಬೇಳೆ ಬೇಯಿಸಿ ಕೊಂಡಳು ಇವನ ಧರ್ಮಪತ್ನಿ. ಹತ್ತಿರದಲ್ಲೇ ಇದ್ದರೆ ಪದೇ ಪದೇ ಹೋಗಿ ನೋಡ ಬೇಕಾಗ ಬಹುದೆಂದು, ದೂರದ ಬೆಂಗಳೂರಿನಲ್ಲಿ ಒಂದು ವೃದ್ಧಾಶ್ರಮ ಅವಳೇ ಹುಡುಕಿ ಗಂಡನಿಗೆ ಮುದಿ ಜೀವಗಳನ್ನ ಬಿಟ್ಟು ಬರುವಂತೆ ಮಾಡುವುದರಲ್ಲಿ ಯಶಸ್ವಿಯಾಗಿದ್ದಳು. ಇವನೋ ಹೆಂಡತಿಯ ಕೋಪ, ಬಾಯಿಗೆ ಹೆದರಿ, ಅವಳನ್ನ ಖುಷಿಯಾಗಿ ಇಡುವುದೇ ತನ್ನ ಜನ್ಮದ ಗುರಿ ಎಂದುಕೊಂಡು ಅಪ್ಪ ಅಮ್ಮನ ಕರೆದು ಕೊಂಡು ಹೋಗಿ ವೃದ್ಧಾಶ್ರಮದಲ್ಲಿ ಬಿಟ್ಟು ಕೈ ತೊಳೆದು ಕೊಂಡು ಹೊರಟಿದ್ದ. ತಾನು ಮಾಡುತ್ತಿರುವುದು ಪಾಪ ಎಂದು ಕ್ಷಣ ಮಾತ್ರವೂ ಅನಿಸಲಿಲ್ಲ ಅವನಿಗೆ. ಏಕೆಂದರೆ ಇವನಿಗೆ ಹೆಂಡತಿಯ ತಾಳಕ್ಕೆ ತಕ್ಕಂತೆ ಕುಣಿಯುತ್ತಾ ಅವಳನ್ನ ಖುಷಿ ಯಾಗಿದುವುದೇ ಇವನ ಕರ್ತವ್ಯ ಆಗಿಬಿಟ್ಟಿತ್ತು. ತನ್ನನ್ನು ತಾನು ಹೆಂಡತಿಗೆ ತಕ್ಕ ಗಂಡ ಎಂದು ಸಾಧಿಸಿ ತೋರಿಸುವುದೇ ಜೀವನದ ಉದ್ದೇಶ ಎಂದು ಕೊಂಡು ಬಿಟ್ಟಿದ್ದ. 'ಅವರಿಗೆ ಇಲ್ಲಿ ನೆಮ್ಮದಿ ಇಲ್ಲ.. ಎಲ್ಲಿಯಾದರೂ ನೆಮ್ಮದಿಯಿಂದ ಇರಲಿ ' ಎಂದು ಆತ್ಮ ಸಾಕ್ಷಿ ಗೆ ಸಮಜಾಯಿಷಿ ಕೊಟ್ಟು ಹಗುರಾಗಿದ್ದ. ರೈಲು ಹತ್ತಿದ ತಕ್ಷಣ ಹೆಂಡತಿಗೆ ಫೋನು ಮಾಡಿ ಬಿಟ್ಟು ಬಂದೆ ಎಂದು ವರದಿ ಒಪ್ಪಿಸಿ ಶಹಬ್ಬಾಸ್ ಎನಿಸಿ ಕೊಂಡ. ಕಣ್ಣುಮುಚ್ಚಿ ಮಲಗಿದವನಿಗೆ ಎಚ್ಚರಾದದ್ದೇ ತನ್ನ ಊರು ಬಂದಾದ ಮೇಲೆ. ಬೆಳಗ್ಗಿನ ಜಾವ , ಕತ್ತಲಿನ್ನು ಸರಿದಿಲ್ಲ. ಆಟೋ ಹಿಡಿದು ಮನೆಗೆ ಹೊರಟ ನಿದ್ದೆಯ ಮಂಪರಿನಲ್ಲಿ. ಆಟೋ ಚಾಲಕ ಸುಮಾರು ಮೂವತ್ತರ ಆಸು ಪಾಸಿನ ವಯಸ್ಸಿನವನು.  ಆಟೋ ಸ್ಟಾರ್ಟ್ ಮಾಡಿದಾಗಿಂದ ಫೋನ್ ಅಲ್ಲಿ ಮಾತಾಡುತ್ತಲೇ ಇದ್ದ. ಇವನಿಗೆ ಕಿರಿ ಕಿರಿ ಎನಿಸಿ ಹೇಳಬೇಕೆಂದು ಕೊಳ್ಳುತ್ತಿರುವಾಗಲೆ ಅವನು ಜೋರಾಗಿ ಅಳ ತೊಡಗಿದ. ಫೋನಿನಲ್ಲಿ ಮಾತು ಮುoದುವರೆದೆ ಇತ್ತು. ' ಏನು ಮಾಡಲಿ ಅಕ್ಕ, ಎಲ್ಲಿಯೂ ದುಡ್ಡು ಹೊಂದಿಸೋಕ್ಕೆ ಆಗ್ತಾ ಇಲ್ಲ. ನಾಳೇನೇ ಆಪರೇಷನ್ ಮಾಡ್ಲೆ ಬೇಕಂತೆ. ಇಲ್ಲ ಜೀವಕ್ಕೆ ಅಪಾಯವಂತೆ..' ಎಂದು ಬಿಕ್ಕ ತೊಡಗಿದ. ಇವನಿಗೆ ತುಂಬಾ ಮರುಕ ಎನಿಸಿ ' ಯಾಕಪ್ಪಾ ಏನಾಯ್ತು? ' ಎಂದ. ಅದಕ್ಕವನು ' ಸರ್ ನಮ್ಮ ಅಮ್ಮಂಗೆ ಹುಷಾರಿಲ್ಲ ಸರ್. ಸೀರಿಯಸ್. ಕರುಳಲ್ಲೇನೋ ಗೆಡ್ಡೆ  ಆಗಿದೆ ಅಂತೆ. ತಕ್ಷಣ ಆಪರೇಶನ್ ಮಾಡ್ಬೇಕಂತೆ. ನಾಳೇನೇ ಮಾಡ್ಬೇಕಂತೆ. ಇಲ್ಲ ಅದು ಒಡೆದು ಜೀವಕ್ಕೆ ಅಪಾಯ ಅಂದ್ರು ಡಾಕ್ಟರ್. ಮೂರು ಲಕ್ಷ ನಾಳೇನೇ ಕಟ್ಟ ಬೇಕು ಸರ್. ದುಡ್ಡು ಕಟ್ಟದಿದ್ದರೆ ಆಪರೇಶನ್ ಮಾಡಕ್ಕಾಗಲ್ಲ ಅಂದಿದ್ದಾರೆ ಸರ್. ನಾನು ಬಡವ. ಎಲ್ಲಿಂದ ತರಲಿ ಅಷ್ಟು ಹಣ ಒಂದು ದಿನದಲ್ಲಿ?? ' ಎಂದು ಕಣ್ಣೀರಿಟ್ಟ.  ಇವನಿಗೆ ಯಾಕೋ ಕರುಳು ಕಿವುಚಿದ ಹಾಗಾಯಿತು. ಆಟೋ ಡ್ರೈವರ್ ಮುಂದೆ ತಾನು ಯಕಃಶ್ಚಿತ್ ಆಗಿ ಹೋದೆ ಅನಿಸಿತು. ಯಾರೋ ರಸ್ತೆ ಮಧ್ಯದಲ್ಲಿ ಕಪಾಳಕ್ಕೆ ಬಾರಿಸಿದ ಹಾಗಾಯಿತು. ಆಟೋ ಡ್ರೈವರ್ ಮುಂದು ವರೆಸಿದ. ' ಹೆತ್ತಮ್ಮ ಸರ್. ಪುಣ್ಯ ಮಾಡಿದ್ದೆ ಅಂತಾ ತಾಯಿನ ಪಡಯೋಕೆ. ನಮಗೋಸ್ಕರ ಎಷ್ಟು ಒದ್ದಾಡಿದಾಳೆ. ಇವತ್ತು ಅವ್ಳುನ್ನ ಉಳಿಸಿಕೊಳ್ಳೋ ಯೋಗ್ಯತೆ ಇಲ್ಲ ಆಗಿದೆ ನಂಗೆ.. ಎಂತ ಮಗ ನಾನು ಅಂತ ನಾಚಿಕೆ ಆಗ್ತಾ ಇದೆ. ನನ್ನ ಹೆಂಡತಿ ತನ್ನ ಹತ್ರ ಇದ್ದ ಚೂರು ಪಾರು ಬoಗಾರನೂ ಕೊಟ್ಟಿದ್ದಾಳೆ. ಅತ್ತೆ ಜೀವದ ಮುಂದೆ ಇದೇನು ಅಲ್ಲ ತಗೊಳಿ ಅಂತ. ಆದ್ರೂ ಸಾಕಗ್ತಿಲ್ಲ ಸರ್..' ಅಂತ ಗೋಳಾಡಿದ. ಇವನಿಗೆ ಅವನ ಒಂದೊಂದು ಮಾತು ಚಪ್ಪಲಿ ಏಟು ಬಿದ್ದ ಹಾಗಾಗುತ್ತಿತ್ತು. ಅಷ್ಟರಲ್ಲೇ ಮನೆ ಬಂದಿತು. ಯಾಕೋ ತಕ್ಷಣ ಜೇಬಿಗೆ ಕೈ ಹಾಕಿ ಪರ್ಸ್ ತೆಗೆದು ಪರ ಪರ ಅಂತ ಐನೂರರ ಇಪ್ಪತ್ತು ನೋಟುಗಳ ಎಣಿಸಿ ಆಟೋ ದವನ ಕೈಗೆ ತುರುಕಿದ. ನೂರು ರೂ ಬಾಡಿಗೆ ನಿರೀಕ್ಷಿಸುತ್ತಿದ್ದ ಡ್ರೈವರಿಗೆ ಇವನು ತುರುಕಿದ ನೋಟಿನ ಕಂತೆಯನ್ನು ನೋಡಿ ಗಾಬರಿಯಾಯಿತು. ಅವನು ಆಶ್ಚರ್ಯ ಭಯ ದಿಂದ 'ಇದೇನು ಸರ್ ಇಷ್ಟು ದುಡ್ಡು ನೂರು ರೂಪಾಯಿ ಸಾಕು. ಸ್ಟೇಷನ್ ನಿಂದ ಇಲ್ಲಿಗೆ ನೂರು ರೂಪಾಯಿಯಷ್ಟೇ ಬಾಡಿಗೆ ಸರ್' ಅಂದ. ಅದಕ್ಕಿವನು 'ಇರಲಿ. ಇಟ್ಟುಕೋ. ಅಮ್ಮನ ಆಪರೇಶನ್ ಗೆ ಉಪಯೋಗಿಸಿಕೋ ' ಎಂದು ಹೊರಟಾಗ ಡ್ರೈವರ್ ಆಟೋ ದಿಂದ ರಪ್ಪನೆ ಇಳಿದು ಇವನ ಕಾಲು ಹಿಡಿದುಕೊಂಡ. ' ಥ್ಯಾಂಕ್ಸ್ ಸರ್. ನಂಗೆ ನಂಬೋಕೆ ಆಗ್ತಾ ಇಲ್ಲ. ನಿಮ್ಮುನ್ನ ಯಾವತ್ತೂ ಮರೆಯಲ್ಲ ಸಾರ್ ನಾನು.. ತುಂಬಾ ಥ್ಯಾಂಕ್ಸ್. ನೀಮ್ಮುನ್ನ ಹೆತ್ತವರು ಎಷ್ಟು ಪುಣ್ಯವಂತರು ಸರ್. ನಿಮಗೆ ದೇವರು ಒಳ್ಳೇದು ಮಾಡಲಿ ಸರ್. ನಿಮ್ಮ ಹೆತ್ತವರು ನಿಜವಾಗಿ ಧನ್ಯರು..' ಎಂದು ಒಂದೇ ಸಮ ಕಣ್ಣೀರು ಸುರಿಸುತ್ತ ಹೇಳಿದಾಗ ಇವನಿಗೆ ಯಾಕೋ ಕಣ್ಣು ಒದ್ದೆ ಆಯಿತು. ಡ್ರೈವರ್ ಎದುರು ನಿಲ್ಲುವ ಯೋಗ್ಯತೆಯೂ ತನಗಿಲ್ಲ ಎನಿಸಿ, ಏನೂ ಮಾತಾಡದೇ ಅವನ ಕೈ ಯಿಂದ ಕಾಲು ಬಿಡಿಸಿಕೊಂಡು ಸರ ಸರ ನಡೆದು ಬಿಟ್ಟ ತಗ್ಗಿಸಿದ ತಲೆ ಎತ್ತದೆ..

 ಕೃಪೆ: ದಿವ್ಯಾ ರಾವ್
ಸಂಗ್ರಹ:ವೀರೇಶ್ ಅರಸೀಕೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1055

ದಿನಕ್ಕೊಂದು ಕಥೆ 1059