ದಿನಕ್ಕೊಂದು ಕಥೆ 1077

*🌻ದಿನಕ್ಕೊಂದು ಕಥೆ🌻*
*ಯಾರನ್ನು ಮೆಚ್ಚಿಸಲು ಹೋಗಬಾರದು*

ಬಹಳ ಹಿಂದೆ ಒಬ್ಬ  ಚಿತ್ರಕಾರ ಇದ್ದ. ತುಂಬಾ ಒಳ್ಳೆಯ ಚಿತ್ರಕಾರ. ಅವನಿಗೆ ಚಿತ್ರಗಳನ್ನು ಬರೆಯುವುದು ಬಹಳ ಪ್ರೀತಿ, ಚಿತ್ರಗಳನ್ನು ಸುಂದರವಾಗಿ ಬರೆಯುತ್ತಿದ್ದ. ಅವನ ಆಯ್ಕೆಗಳು, ದೇವಾನುದೇವತೆಗಳು,ವಿವಾಹ ಮಹೋತ್ಸವ,  ಯುದ್ಧದ ಸನ್ನಿವೇಶಗಳು, ಅತಿರಥ- ಮಹಾರಥರು, ರಾಜ- ಮಹಾರಾಜರು, ಗುಡಿ ಗೋಪುರಗಳು, ಪ್ರಕೃತಿ ಸೌಂದರ್ಯ, ಹೀಗೆ ನಾನಾಥರದ ಚಿತ್ರಗಳನ್ನು ಬಿಡಿಸಿ, 
ಬಹಳ ನಾಜೂಕಾಗಿ ಬಣ್ಣಗಳನ್ನು ತುಂಬಿದಾಗ  ಎಲ್ಲರ ಗಮನ ಸೆಳೆಯುತ್ತಿತ್ತು. ಹಾಗೆ ಆತ ಅವನಿಗೆ ಇಷ್ಟವಾದ ಅಪರೂಪದ ಚಿತ್ರಗಳನ್ನು ಬರೆದು ಅವುಗಳನ್ನು ಪೇಟೆಯಲ್ಲಿ ಮಾರಿ ಬಂದ ಹಣದಿಂದ  ಜೀವನ ನಡೆಸುತ್ತಿದ್ದ. ಎಲ್ಲಾ ಕಡೆಯೂ ಅವನು ಒಳ್ಳೆಯ ಚಿತ್ರಕಾರ ಎಂದು ಹೆಸರನ್ನು ಪಡೆದಿದ್ದನು.

ಒಂದು ದಿನ ಒಂದು ಚಿತ್ರವನ್ನು ಎರಡು ದಿನಗಳು ಇಷ್ಟಪಟ್ಟು  ಬರೆದು ಬಣ್ಣ ತುಂಬಿದ. ಅದು ಎಷ್ಟು ಚೆನ್ನಾಗಿತ್ತು ಎಂದರೆ, ಬರೆದವನಿಗೆ ಖುಷಿಯಾಯಿತು. ನೋಡಿದವರಂತೂ ಇದು ಚಿತ್ರಪಟವೋ, ನಿಜವೋ ಎಂದು ಅನುಮಾನ ಬರುವಂತಿತ್ತು. ಅದನ್ನು ಪದೇ ಪದೇ ನೋಡಿದ ಚಿತ್ರದಲ್ಲಿ ಅವನಿಗೆ ಏನೋ ಒಂದು ತಪ್ಪಾಗಿದೆ ಎಂಬ ಅನುಮಾನ ಬರುತ್ತಿತ್ತು. ಏನೆಂದು ಅವನಿಗೆ ಕಂಡು ಹಿಡಿಯಲು ಆಗಲಿಲ್ಲ. ಹಾಗೆ ಬಿಡಲು ಮನಸ್ಸು ಒಪ್ಪಲಿಲ್ಲ ಅವನು ಆ ಚಿತ್ರವನ್ನು ತೆಗೆದು ಕೊಂಡು  ಆತ್ಮೀಯ ಸ್ನೇಹಿತನಿಗೆ ಹೇಳುತ್ತಾನೆ. ನೋಡು ಈ ಚಿತ್ರವನ್ನು  ಬಹಳ ಇಷ್ಟಪಟ್ಟು ತುಂಬಾ ಸಮಯ ತೆಗೆದು ಕೊಂಡು ಚಿತ್ರಿಸಿದ್ದೇನೆ. ಆದರೆ ಇದರಲ್ಲಿ  ಏನೋ ಒಂದು ಲೋಪವಿದೆ ನನಗೆ ಕಾಣಿಸುತ್ತಿಲ್ಲ ನಿನಗೆ ಏನಾದರೂ ಕಾಣಿಸಿದರೆ  ಹೇಳು ಎಂದನು.

ಆ ಸ್ನೇಹಿತ ಚಿತ್ರವನ್ನು ಸೂಕ್ಷ್ಮವಾಗಿ ನೋಡಿ ಹೇಳಿದ. ನಿನ್ನಂತ ಕಲಾವಿದರು ಇಲ್ಲಿ ಯಾರು ಇಲ್ಲ ನೀನು ಬರೆದಿರುವ ಚಿತ್ರ ತುಂಬಾ ಚೆನ್ನಾಗಿದೆ ಎಂದ. ಅದಕ್ಕೆ ಚಿತ್ರಕಾರ ಹೇಳಿದ ನನ್ನನ್ನು ಆತ್ಮೀಯ ಗೆಳೆಯ ಎಂಬುದನ್ನು ಮರೆತು ಇದರಲ್ಲಿರುವ ಲೋಪ ವನ್ನು ಹೇಳು ನಾನು ಬಹಳ ಇಷ್ಟಪಟ್ಟು ಬರೆದಿದ್ದೇನೆ. ಆದರೆ ಪೂರ್ಣ ತೃಪ್ತಿ ಸಿಕ್ಕಿಲ್ಲ  ಎಂದಾಗ,  ಸ್ನೇಹಿತ ಒಂದು ಮಾತು ಹೇಳಿದ ನೋಡು ಈ ಚಿತ್ರದಲ್ಲಿ ಯಾರು ತಪ್ಪು ಕಂಡು ಹಿಡಿಯಲು ಸಾಧ್ಯವಿಲ್ಲ ನನಗಂತೂ ಕಾಣಿಸುವುದೇ ಇಲ್ಲ. ಆದರೆ ನಮ್ಮ ಊರಿಗೆ ನಾಲ್ಕು ದಿನದ ಹಿಂದೆ ಒಬ್ಬ ಸನ್ಯಾಸಿಗಳು ಬಂದು ಊರ ಹೊರಗಿನ ಗುಡಿಯಲ್ಲಿದ್ದಾರೆ. ಅವರ ಬಳಿ ಈ ಚಿತ್ರವನ್ನು ತೆಗೆದುಕೊಂಡು ಹೋದರೆ ನಿನ್ನ ಅನುಮಾನ ಬಗೆಹರಿಯಬಹುದು ಎಂದನು.

ಸ್ನೇಹಿತನ ಮಾತಿನಂತೆ ಆ ಚಿತ್ರಕಾರ ಸನ್ಯಾಸಿ ಬಳಿ ಬಂದನು. ಅವರ ಮುಂದೆ ಚಿತ್ರ ಇಟ್ಟು ಸ್ವಾಮಿ ನನಗೆ ಚಿತ್ರಗಳನ್ನು ಬರೆಯುವುದು ಬಹಳ ಇಷ್ಟ ಈ ಚಿತ್ರ ಮನಸಾರೆ ಬರೆದಿದ್ದೇನೆ.  ಇದರಲ್ಲಿ ಒಂದು ಲೋಪವಿದೆ ಎಂದು ನನಗೆ ಅನಿಸಿದೆ. ಆ ತಪ್ಪು ಏನೆಂದು ಹೇಳುವಿರಾ ಎಂದನು. ಚಿತ್ರವನ್ನು ನೋಡಿದ ಸನ್ಯಾಸಿಗಳು ಇದರೊಳಗೆ ಯಾವ ಲೋಪವು ಕಾಣುತ್ತಿಲ್ಲ ಬಹಳ ಸುಂದರವಾಗಿದೆ ನಿನ್ನಂತ ಚಿತ್ರಕಾರ ನನ್ನು ಇದುವರೆಗೂ ನೋಡಿಲ್ಲ ಎಂದರು. ಏನೇ ಹೇಳಿದರೂ, ಚಿತ್ರಕಾರನಿಗೆ ತೃಪ್ತಿಯಾ ಗಲಿಲ್ಲ.  ಸನ್ಯಾಸಿಗಳು ಹೇಳಿದರು ನಿನಗೆ ಸಮಾಧಾನವಾಗಿಲ್ಲ ಅದು ನನಗೆ ತಿಳಿದಿದೆ. ನೀನು ಒಂದು ಕೆಲಸ ಮಾಡು ಈ ದಿನ ರಾಜನ ಅರಮನೆಗೆ ಹೋಗಿ ಅಲ್ಲಿ ಈ ಚಿತ್ರವನ್ನು ಹಾಕಿ ಪಕ್ಕದಲ್ಲಿ ಹೀಗೆ ಬರೆಯಬೇಕು . ಯಾರಿಗಾದರೂ ಚಿತ್ರದಲ್ಲಿ ಚಿಕ್ಕ ಲೋಪವೇ ನಾದರೂ ಕಂಡು ಬಂದರೆ  ಆ ಜಾಗದಲ್ಲಿ  ಒಂದು ಕಪ್ಪು ಚುಕ್ಕೆ ಇಡಿ ಎಂದು ಬರೆದು ಹಾಕಿಬಿಡು ಎಂದರು. ಚಿತ್ರಕಾರ ಹೊರಗೆ ಕೆಲಸಕ್ಕೆ ಹೋಗುವ ಮುನ್ನ ಆಸ್ಥಾನಕ್ಕೆ ಬಂದು ತಾನು ಬರೆದ ಚಿತ್ರವನ್ನು ಹಾಕಿ ಪಕ್ಕದಲ್ಲಿ ಸನ್ಯಾಸಿಗಳು ಹೇಳಿದಂತೆ ಬರೆದು ಹೊರಟು, ಸಂಜೆ ಕೆಲಸ ಮುಗಿಸಿಕೊಂಡು  ಆಸ್ಥಾನಕ್ಕೆ ಬಂದು ನೋಡುತ್ತಾನೆ ಸುಂದರವಾದ ಚಿತ್ರಪಟದ ತುಂಬಾ ಕಪ್ಪು ಚುಕ್ಕೆಗಳೆ ತುಂಬಿ ಚಿತ್ರ ಪಟ ವಿಕಾರವಾಗಿತ್ತು. ತಾನು ಇಷ್ಟಪಟ್ಟು ಸುಂದರವಾಗಿ ಚಿತ್ರ ಬರೆದರೆ ಚಿತ್ರದ ತುಂಬೆಲ್ಲ ಕಪ್ಪು ಚುಕ್ಕೆ ತುಂಬಿ ಅದರ ಆಕಾರವೇ ಹೋಗಿತ್ತು. ಸಣ್ಣ ದೋಷ ಇದೆ ಕಂಡು ಚುಕ್ಕಿ ಇಡಿ ಎಂದರೆ ಎಲ್ಲಾ ಕಡೆ ಕಪ್ಪು ಮಾಡಿದ್ದಾರೆ ಅವನಿಗೆ ಆಶ್ಚರ್ಯ ವಾಯಿತು. ಕಲಾವಿದ ಯೋಚಿಸಿದ ತಾನು ಬರೆದ ಚಿತ್ರ ಇಷ್ಟು ಕೆಟ್ಟದಾಗಿದೆಯೇ? 
ಮನಸ್ಸಿಗೆ ನೋವಾಯಿತು. ಯೋಚಿಸಿ ಸನ್ಯಾಸಿ ಬಳಿ ಬಂದು ಚಿತ್ರಪಟ ತೋರಿಸಿ, ಜನರು ಸುಂದರವಾದ ಚಿತ್ರವನ್ನು ಹೇಗೆ ಹಾಳು ಮಾಡಿದ್ದಾರೆ ಎಂದನು.

ಸನ್ಯಾಸಿಯು ಆ ಹುಡುಗನ ನೋವನ್ನು ಗಮನಿಸಿ,  ಚಿಂತಿಸಬೇಡ ನಾಳೆ ನೀನು ಇದೇ ತರದ ಇನ್ನೊಂದು ಚಿತ್ರವನ್ನು ಬರೆದು ಅದೇ ಜಾಗದಲ್ಲಿ ಹಾಕಿ, ಈ ಚಿತ್ರದಲ್ಲಿ ಸಣ್ಣ ತಪ್ಪಿದೆ ಅದನ್ನು ಕಂಡುಹಿಡಿದು ಸರಿ ಮಾಡಬೇಕು ಎಂದು ಬರೆದಿಡು ಎಂದ ರು. ಅದರಂತೆ ಕಲಾಕಾರ ಒಳ್ಳೆಯ ಚಿತ್ರ ಬರೆದು, ಮರುದಿನ ಆಸ್ಥಾನಕ್ಕೆ ಹೋಗಿ ಚಿತ್ರ ಹಾಕಿ, ಸಾಧುಗಳು ಹೇಳಿದಂತೆ  ಬರೆದು ಕೆಲಸಕ್ಕೆ ಹೋದನು. ಅವನು ಸಂಜೆ ಬಂದು ನೋಡುತ್ತಾನೆ. ಚಿತ್ರಪಟ ಇದ್ದ ಹಾಗೆಯೇ ಇತ್ತು ಏನು ಆಗಿರಲಿಲ್ಲ.‌ ಕಲಾಕಾ ರನಿಗೆ ಆಶ್ಚರ್ಯವಾಯಿತು ಸನ್ಯಾಸಿಗಳಿಗೆ ಬಂದು ತೋರಿಸಿ ಎಲ್ಲಾ ಹೇಳಿದನು.

ಆಗ ಸಾಧುಗಳು, ಚಿತ್ರಕಾರನಿಗೆ  ನೋಡು ಮಗು, ಈ ಜಗತ್ತೇ ಹಾಗೆ ಸಣ್ಣ ಲೋಪವಿದೆ ಗುರುತಿಸಿ ಎಂದರೆ ಚಿತ್ರಪಟವನ್ನು ಹಾಳು ಮಾಡಿದರು. ಸಣ್ಣ ದೋಷವಿದೆ ಸರಿ ಮಾಡಿ ಎಂದರೆ ಏನು ಮಾಡಲಿಲ್ಲ. ಸಣ್ಣ ತಪ್ಪಾದರೆ ಜನರು ಕಂಡುಹಿಡಿಯುತ್ತಾರೆ. ಆದರೆ ಸರಿ ಮಾಡುವುದಿಲ್ಲ ಇದೇ ಜೀವನ. ನಮ್ಮಿಂದ ಲಾಭ ಇದೆ ಅಂದರೆ ಶತ್ರುಗಳು ಮಿತ್ರ ರಾಗುತ್ತಾರೆ, ಅದೇ ನಷ್ಟವಾಗುತ್ತಿದೆ ಎಂದರೆ ಮಿತ್ರರು ಶತ್ರುವಾಗುತ್ತಾರೆ.‌ ಜನಗಳಿಗೆ ಬೇರೆಯವರು ಬದಲಾಗಿದ್ದು ಬೇಗ ಕಾಣುತ್ತದೆ. ಆದರೆ  ಅವರ ಯಾರ, ಯಾವ ಮಾತಿನಿಂದ ಬದಲಾಗ ಬೇಕಾಯಿತು ಎಂದು ತಿಳಿಯುವುದಿಲ್ಲ. ಅದರ ಬಗ್ಗೆ ಯೋಚಿಸುವುದು ಇಲ್ಲ ಜೀವನದಲ್ಲಿ ತಪ್ಪು ಗಳು ಆಗುತ್ತದೆ. ನೀನು ಉಪಯೋಗಕ್ಕೆ ಬರುತ್ತಿ ಎಂದರೆ ನಿನ್ನ ಬೆಲೆ ಇರುತ್ತದೆ. ಕೆಲವೇ ದಿನಗಳಲ್ಲಿ ಬೆಲೆ ಕಡಿಮೆಯಾಗುತ್ತಾ ಬಂದಂತೆ ಎಲ್ಲರೂ ನಿನ್ನಿಂದ ದೂರ ಸರಿಯುತ್ತಾರೆ. ಸರಿದಾರಿಯಲ್ಲಿ ನಡೆಯುವಾಗ  ಹೇಳುವುದಿಲ್ಲ, ಹೇಳಲು ಮುಂದೆ ಬರುವುದಿಲ್ಲ ತಪ್ಪು ಮಾಡಿದಾಗ  ಬೇಗ ಕಂಡುಹಿಡಿಯುತ್ತಾರೆ. ಸಾಧುಗಳ ಮಾತು  ಕಾರ್ಯ ವೈಖರಿ ನೋಡಿ,  ಜನಗಳನ್ನು ಮೆಚ್ಚಿಸಲು ಸಾಧ್ಯವಿಲ್ಲ ಎಂಬುದು ಸ್ಪಷ್ಟ ವಾಯಿತು. ಜೀವನ ಹಾಗೂ ಸಮಾಜದಲ್ಲಿ ಹೇಗೆ ಬದುಕಬೇಕು ಎಂಬುದು  ಚಿತ್ರಕಾರನಿಗೆ  ಚೆನ್ನಾಗಿ ಅರ್ಥವಾಯಿತು.

ಅವಮಾನಿತ ಮಿತ್ರರನ್ನು ಸ್ನೇಹದ ಮಾತುಗಳಿಂದ 
ದಾನದಿಂದ ಸಮ್ಮಾನದಿಂದ ಸಂತೈಸಬೇಕು.
ಇತರರನ್ನು ಭೇದದಿಂದ- ದಂಡದಿಂದ ಅಥವಾ 
ಯೋಗ್ಯವಾದ ಉಡುಗೊರೆಯಿಂದ ಸಾಧಿಸಬೇಕು.

ಕೃಪೆ,ಬರಹ:- ಆಶಾ ನಾಗಭೂಷಣ.
ಸಂಗ್ರಹ: ವೀರೇಶ್ ಅರಸೀಕೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1055

ದಿನಕ್ಕೊಂದು ಕಥೆ 1059