ದಿನಕ್ಕೊಂದು ಕಥೆ 1078
*🌻ದಿನಕ್ಕೊಂದು ಕಥೆ🌻*
*ಅವರವರು ಮಾಡಿದ ಕರ್ಮ ಅವರವರಿಗೆ*
ಇದೊಂದು ಮಹಾಭಾರತದ ಉಪಕಥೆ:- ಕುರುಕ್ಷೇತ್ರ ಯುದ್ಧ ಮುಗಿದಿದೆ. ಅರಮನೆಯಲ್ಲಿ ಕುಂತಿ ಹಾಗೂ ಅವಳ ಮಕ್ಕಳು ಒಂದು ಕಡೆ ಕುಳಿತು ಮಾತನಾಡುತ್ತಿದ್ದರು. ಅರ್ಜುನ ತನ್ನ ಸಾಹಸ ಶೌರ್ಯದ ಬಗ್ಗೆ ತಾನೇ ಹೊಗಳಿಕೊಳ್ಳುತ್ತಾ, ನೋಡು ಎಷ್ಟು ಚೆನ್ನಾಗಿ ಯುದ್ಧಮಾಡಿ ನಾನು ವಿಜಯ ಸಾಧಿಸಿದೆ ಎಂದು ಹೇಳಿಕೊಂಡ. ಅದಕ್ಕೆ ಭೀಮ "ಏನೋ, ಅರ್ಜುನ ನಿನ್ನ ಶಕ್ತಿಯಿಂದ ಆಯಿತು ಅಂತಲೋ, ಅಥವಾ ಕೃಷ್ಣನ ಕೃಪೆಯಿಂದ ಆಯಿತು ಅಂತ ಅಂದುಕೊಂಡಿದ್ದೀಯೋ"? ಅದಕ್ಕೆ ಅರ್ಜುನ "ಏ ಹೋಗೋ, ಕೃಷ್ಣ ಏನ್ ಮಾಡ್ತಾನೆ ಅವನಿಗೆ ಕುದುರೆ ಹಿಡುಕೊಂಡು ಬರುವುದೇ ಕಷ್ಟವಾಗಿತ್ತು. ಅಲ್ಲದೆ ಕೃಷ್ಣ ನಮ್ಮನ್ನೆಲ್ಲ ವನವಾಸಕ್ಕೆ ಕಳಿಸಿ ಕೌರವರಿಗೆ ರಾಜ್ಯ ಕೊಟ್ಟ, ಯಾವತ್ತಿದ್ರು ಕೌರವರ ಪಕ್ಷಪಾತಿನೆ ಕೃಷ್ಣ", ಹೀಗೆ ಮಾತಾಡುತ್ತಾ ಇರುವುದನ್ನು ಕೃಷ್ಣ ಹಿಂದೆಯೇ ನಿಂತು ಎಲ್ಲಾ ಕೇಳಿಸಿಕೊಂಡ.
ಓಹೋಹೋ ಅರ್ಜುನ, ನನ್ನ ಮೇಲೆ ದೊಡ್ಡ ಅಪವಾದ ಹೊರಿಸುತ್ತಾ ಇದ್ದೀಯಾ? ಹಾಗೇನಿಲ್ಲ ಕೃಷ್ಣ ಇದ್ದಿದ್ದು ಇದ್ದ ಹಾಗೆ ಹೇಳ್ತಾ ಇದೀನಿ, ನೋಡಪ್ಪ ನೀನು ಯಾವತ್ತಿದ್ದರೂ ಶ್ರೀಮಂತರ ಪರಾನೇ ಇರ್ತಿಯ, ನೀನು ಭಕ್ತರಿಗೆ, ಬಡವರಿಗೆ, ಸಾತ್ವಿಕರಿಗೆ ಕಣ್ಣಿಗೂ ಕಾಣಲ್ಲ ಎಂದು ಅರ್ಜುನ ಹೇಳಿದ. ಕುಂತಿ ಎಷ್ಟು ಬೇಡ ಎಂದು ತಡೆಯುತ್ತಿದ್ದರೂ, ಅರ್ಜುನ ಮಾತ್ರ ಸುಮ್ಮನಿರದೆ ಮಾತು ಮುಂದುವರೆಸುತ್ತಿದ್ದ.
ಕೃಷ್ಣನದು ಯಾವಾಗಲೂ ಅವನ ಮುಗುಳ್ನಗೆನೆ ಉತ್ತರ. ಅರ್ಜುನನ ಮಾತುಗಳೆಲ್ಲ ಮುಗಿದ ಮೇಲೆ, ಬಾರೋ ನಾನು ನೀನು ಹೊರಗಡೆ ಒಂದು ಸುತ್ತು ಸುತ್ತಾಡಿಕೊಂಡು ಬರೋಣ ಎಂದು ಅರ್ಜುನನ ಜೊತೆ ಹೊರಗೆ ಹೊರಡುವಾಗ, ಕೃಷ್ಣ ನಾನು ನೀನು ಒಟ್ಟಿಗೆ ಹೊರಟರೆ ಇಡೀ ಜಗತ್ತೇ ನಮ್ಮನ್ನು ನೋಡ್ತಾರೆ ಆರಾಮಾಗಿ ಹೋದಹಾಗೆ ಆಗಲ್ಲ ಎಂದು ಅರ್ಜುನ ಹೇಳಿದಾಗ, ಅದಕ್ಕೆಲ್ಲ ಯೋಚನೆ ಮಾಡಬೇಡ ಬಾ,ಬಾ ನಾನು ಎಲ್ಲ ಸರಿ ಮಾಡುತ್ತೀನಿ ಎಂದ. ತನ್ನ ಮಾಯೆಯಿಂದ, ಕಣ್ಣು ರೆಪ್ಪೆ ಮುಚ್ಚಿ ತೆಗೆಯುವುದರೊಳಗಾಗಿ ತಮ್ಮಿಬ್ಬರನ್ನು ಹಣ್ಣು ಹಣ್ಣು ಮುದುಕರನ್ನಾಗಿ ಮಾಡಿಕೊಂಡ. ಇಬ್ಬರಿಗೂ ಕೈಕಾಲು ನಡುಗುತ್ತಾ ಇದೆ, ಬೆನ್ನು ಬಗ್ಗಿದೆ, ನಡೆಯಲು ಶಕ್ತಿ ಇಲ್ಲ, ಇಬ್ಬರು ಹಣ್ಣಣ್ಣು ಮುದುಕರಾಗಿದ್ದಾರೆ. ಮುದುಕರಾದ ಮೇಲೆ ವಿಪರೀತ ಹಸಿವು ಬೇರೆ, ಮೇಲೆ ಮೇಲೆ ಏನಾದರೂ ತಿನ್ನುತ್ತಲೇ ಇರಬೇಕು. ಇಬ್ಬರೂ ನಿಧಾನವಾಗಿ ನಡೆಯುತ್ತಾ ಹಾಗೂ, ಹೀಗೂ ಊರಿನ ಶ್ರೀಮಂತನ ಮನೆಯ ಮುಂದೆ ಬಂದರು. ಶ್ರೀಮಂತನ ಮನೆಯಲ್ಲಿ ಭಾರೀ ಸಂಭ್ರಮ. ಏಕೆಂದರೆ, ಶ್ರೀಮಂತನಿಗೆ 60 ವರ್ಷ ಆದಮೇಲೆ ಈಗ ಪುತ್ರಸಂತಾನವಾಗಿ ಅವನ ಪುತ್ರೋತ್ಸವದ ಸಂಭ್ರಮ ಹೇಳತೀರದಾಗಿತ್ತು. ಸಾವಿರಾರು ಜನ ಊಟಕ್ಕೆ ಬಂದಿದ್ದಾರೆ. ಒಂದಷ್ಟು ಜನ ಊಟಕ್ಕೆ ಕೂತಿದ್ದಾರೆ. ಅಡಿಗೆ, ಭಕ್ಷ ಭೋಜ್ಯಗಳ ಪರಿಮಳದ ಘಮ ಘಮ ಮೂಗಿಗೆ ಬರುತ್ತಿದ್ದು ಮನಸ್ಸಿನೊಳಗೆ ಆಹಾ ಎನ್ನುವಂತಾಗಿ ಬಾಯಲ್ಲಿ ನೀರೂರುತ್ತದೆ. ಇಬ್ಬರು ಹಸಿವು ತಡೆಯಲಾರದೆ ಊಟ ಮಾಡಲು ಒಳಗೆ ಹೋದರು. ಆದರೆ ಗೇಟಿನ ಹತ್ತಿರ ನಿಂತಿದ್ದ ಕಾವಲುಗಾರ, ಏಯ್ ನಡೆಯಿರಿ ಆಚೆ, ಭಿಕ್ಷುಕರೆಲ್ಲ ಇಲ್ಲಿಗೆ ಬರುವ ಹಾಗಿಲ್ಲ ಎಂದನು.
ಆ ಸಮಯಕ್ಕೆ ಮನೆಯಜಮಾನ ಮಾಳಿಗೆ ಮೇಲೆ ನಿಂತುಕೊಂಡು ಇದನ್ನು ನೋಡುತ್ತಿದ್ದ ,ಅವನನ್ನು ನೋಡಿದ ಕೃಷ್ಣನು ನಾವು ತುಂಬಾ ಹಸಿದವರು, ನಿಮಗೆ ಪುತ್ರೋತ್ಸವದ ಸಂಭ್ರಮ, ವಯಸ್ಸಾದ ನಮ್ಮಂಥ ಹಿರಿಯರಿಗೆ ಊಟ ಹಾಕಿದರೆ ಒಳ್ಳೆಯದು, ಬಂದಿದ್ದೇವೆ ಊಟ ಕೊಡುತ್ತೀರಾ? ಎಂದು ಕೇಳಿದ. ಅಂದು ಶ್ರೀಮಂತ ಸಂತೋಷದಲ್ಲಿ ತೇಲಾಡುತ್ತಿದ್ದ. ಕಾವಲುಗಾರನನ್ನು ಕರೆದು ಬಿಕ್ಷುಕರನ್ನು ದಬ್ಬಿರಿ ಎಂದ. ಕಾವಲುಗಾರ ಅವರಿಬ್ಬರನ್ನು ಎಳೆದು, "ನೋಡಿ ಒಳಗೆ ಇರುವ ಊಟ ನಿಮಗಲ್ಲ, ಆಮೇಲೆ ಎಂಜಲು ಬಿಸಾಕುತ್ತಾರೆ ಅದನ್ನು ಆರಿಸಿ ತಿನ್ನಿರಿ ಅದೇ ನಿಮಗೆ ಸರಿ ಎಂದು ಇಬ್ಬರನ್ನು ಜೋರಾಗಿ ತಳ್ಳಿದ. ಕಾವಲುಗಾರ ತಳ್ಳಿದ ರಭಸಕ್ಕೆ ಇಬ್ಬರು ಜೋರಾಗಿ ಮಣ್ಣಿನ ಮೇಲೆ ಬಿದ್ದರು. ನೋವಾಯಿತು. ಅವರಿಗೆ ತರಚುಗಾಯವಾಗಿ ಮೊಣಕೈಗೆ ರಕ್ತ ಬಂದಿತು.ಕೃಷ್ಣನು ನಿಧಾನಕ್ಕೆ ಎದ್ದು ಸುಧಾರಿಸಿಕೊಂಡು, ಶ್ರೀಮಂತನಿಗೆ "ಶ್ರೀಮಂತ ನಿನಗೆ ಈ ಸೌಭಾಗ್ಯ ಮೂರು ಜನ್ಮಕ್ಕೂ ಸಿಗಲಿ" ಎಂದು ಹರಸಿದ.
ಅರ್ಜುನ ಅಂದುಕೊಂಡ ಅವನು ನಮ್ಮಿಬ್ಬರನ್ನು ತಳ್ಳಿಸಿ ಬೀಳಿಸಿದ್ದಾನೆ. ಆದರೂ ಅವನಿಗೆ ಮೂರು ಜನ್ಮಕ್ಕಾಗುವಷ್ಟು ಭಾಗ್ಯ ಇರಲಿ ಎಂದು ಹರಸಿದ್ದಾನೆ ಯಾಕೆ ಹೀಗೆ? ಎಂದು ತನ್ನನ್ನೇ ಕೇಳಿಕೊಂಡ. ಮತ್ತೆ ಕೃಷ್ಣಾರ್ಜುನರು ಮುಂದೆ ನಡೆದರು.
ಇಬ್ಬರಿಗೂ ಈಗ ನಿಜವಾಗಿ ಹಸಿವಾಗಿದೆ. ಹಸಿವಿನಿಂದ ಕಂಗಾಲಾಗಿದ್ದಾರೆ.ಊರು ದಾಟಿ ಹೊರಗೆ ಬಂದರು. ರಸ್ತೆಯ ಕೊನೆಯಲ್ಲಿ ಒಂದು ಹೊಲ ಕಂಡಿತು ಅಲ್ಲಿಗೆ ಬಂದರು. ಅಲ್ಲಿ ರೈತನ ಗುಡಿಸಲು ಇತ್ತು. ರೈತ ಅವನ ಹೆಂಡತಿ ಪುಟ್ಟ ಮಗ ಅಲ್ಲಿ ಕೂತಿದ್ದರು. ಕೊಟ್ಟಿಗೆ ಅಂತಹ ಜಾಗದಲ್ಲಿ ಒಂದು ಹಸು ಕಟ್ಟಿದ್ದರು. ಗುಡಿಸಲ ಹತ್ತಿರ ಬಂದ ಇಬ್ಬರು, ನೋಡಪ್ಪ ನಮಗೆ ತುಂಬಾ ಹಸಿವಾಗಿದೆ ಏನಾದರೂ ಸ್ವಲ್ಪ ಅನ್ನ ಉಳಿದಿದ್ದರೆ ತಿನ್ನಲು ಕೊಡುತ್ತೀರಾ? ಎಂದು ಕೇಳಿದರು. ರೈತ ಹೇಳಿದ. ಸ್ವಾಮಿ ನಾನಿಲ್ಲಿಂದ ನಿಮಗೆ ಅನ್ನ ಕೊಡಲಿ ನಾವೇ ಅಕ್ಕಿಕಾಳು ನೋಡದೆ ಮೂರು ದಿನಗಳು ಕಳೆದಿದೆ. ನನ್ನ ಮಗನಿಗೆ ಬರೀ ನೀರು ಕುಡಿಸಿ ಬದುಕಿಸಿ ಕೊಂಡಿದ್ದೇನೆ ಎಂದನು. ತಕ್ಷಣ ಕೃಷ್ಣನು ಹೋಗ್ಲಿ, ಅನ್ನ ಬೇಡ ಹಸು ಇದೆಯಲ್ಲ ಸ್ವಲ್ಪ ಹಾಲಾದರೂ ಕೊಡು ಎಂದ. ಸ್ವಾಮಿ ಅದೆಲ್ಲಿ ಹಾಲು ಕೊಡುತ್ತದೆ ಬರಡಾಗಿ ಆಗಲೇ ಎರಡು ವರ್ಷ ಆಯಿತು ಎಂದು ರೈತ ಹೇಳಿದ. ಕೃಷ್ಣನ ನಾನು ಹಾಲು ಕರೆದು ನೋಡಲೆ ಎಂದನು. ಅದಕ್ಕೇನು ಕಷ್ಟ ಹಾಲು ಕೊಟ್ಟರೆ ಸರಿ ಎಂದನು.
ಕೃಷ್ಣನು ಅಲ್ಲಿದ್ದ ಒಂದು ತಂಬಿಗೆ ತೆಗೆದುಕೊಂಡು ಹಸುವಿನ ಬೆನ್ನು ಸವರಿ ಅದರ ಕೆಚ್ಚಲಿಗೆ ಕೈ ಹಾಕಿ ಹಾಲು ಕರೆಯಲು ಶುರು ಮಾಡಿದ. ಕ್ಷಣದಲ್ಲಿ ತಂಬಿಗೆ ತುಂಬಾ ಹಾಲು ಕರೆದ. ಭಗವಂತನ ಸ್ಪರ್ಶ ಆದಮೇಲೆ ಹಸು ಹಾಲು ಕೊಡದೆ ಇರಲು ಸಾಧ್ಯವೇ? ಮನೆಮುಂದಿನ ಜಗಲಿ ಮೇಲೆ ಕುಳಿತು ತಂಬಿಗೆಯ ತುಂಬಾ ಕರೆದ ನೊರೆ ಹಾಲನ್ನು ತಂಬಿಗೆ ಎತ್ತಿ ತಾನೊಬ್ಬನೇ ಗಟಗಟ ಅಷ್ಟೂ ಕುಡಿದ. ಅರ್ಜುನನಿಗೂ ಕೊಡಲಿಲ್ಲ. ರೈತನ ಮನೆಗೂ ಕೊಡಲಿಲ್ಲ, ಹಾಲು ಕುಡಿದ ಮೇಲೆ ಇನ್ನು ಹೊರಡೋಣ ಅರ್ಜುನ ಎಂದ. ಕೃಷ್ಣ, ಆ ಶ್ರೀಮಂತನ ಮನೆಯಲ್ಲಿ ತಳ್ಳಿ ಬೀಳಿಸಿದರು ಆದರೆ ಅವರಿಗೆ ಭಾಗ್ಯ ಮೂರು ಜನ್ಮ ಸಿಗಲಿ ಎಂದೆ ,ಇಲ್ಲಿ ರೈತನ ಮನೆಯಲ್ಲಿ ಹಾಲು ಕುಡಿದು ಅವನಿಗೆ ಏನು ವರವನ್ನು ಕೊಡಲಿಲ್ಲ. ಇದಕ್ಕೆ ನೀನು ಶ್ರೀಮಂತರ ಪರ ಇರುತ್ತಿ ಎಂದು ಹೇಳಿದ್ದು, ಎಂದಾಗ ನಗುತ್ತಾ ಕೃಷ್ಣ ಹೌದಲ್ವಾ ಬಡವನಿಗೆ ನಾನೇನು ವರ ಕೊಟ್ಟಿಲ್ಲ ಎಂದು ತಿರುಗಿ "ರೈತ, ನೀನು ನಿನ್ನ ಪತ್ನಿ ಹಾಗೂ ಪುತ್ರ, ನಿನ್ನ ಹಸು ಎಲ್ಲರಿಗೂ ಭೂಮಿಯ ಋಣ ತೀರಲಿ"ಎಂದನು.
ಇದೇನು ಕೃಷ್ಣ ಹಾಲು ಕೊಟ್ಟ ರೈತನ ಕುಟುಂಬ ಸಾಯಬೇಕೇ? ಆಗ ಕೃಷ್ಣನು ಅವಸರ ಪಡಬೇಡ ನೋಡುತ್ತಿರು ಎಂದನು. ಸ್ವಲ್ಪ ಹೊತ್ತಿಗೆ ದೇವಲೋಕದಿಂದ ಪುಷ್ಪಕ ವಿಮಾನ ಬಂದು ರೈತ ಕುಟುಂಬವನ್ನೆಲ್ಲ ಕರೆದುಕೊಂಡು ಹೋಯಿತು. ಇದೇನು ಕೃಷ್ಣ ಅವರು ಎಲ್ಲಿ ಹೋದರು. ಅವರೆಲ್ಲ ಸ್ವರ್ಗಕ್ಕೆ ಹೋದರು ಎಂದು ಕೃಷ್ಣ ಹೇಳಿದ. ಯಾಕೆ ಹಾಗೆ?ಅರ್ಜುನಾ ನನ್ನನ್ನು ಮುಟ್ಟಿ ಆದರಿಸಿ ಹಾಲು ಕೊಟ್ಟವರು , ಈ ಭೂಮಿ ಮೇಲೆ ಕಷ್ಟಪಡಲು ನಾನು ಬಿಡುವುದಿಲ್ಲ. ಆದುದರಿಂದ ಅವರನ್ನು ಸ್ವರ್ಗಕ್ಕೆ ಕಳಿಸಿದೆ. ಇನ್ನು ಶ್ರೀಮಂತನ ವಿಚಾರದಲ್ಲಿ , ಆತ ನಮ್ಮನ್ನು ಹೊರಗೆ ದಬ್ಬಿ ಕೆಡವಿದ
ಅವನಿಗೆ ಇಂತಹದೇ ಜನ್ಮ ಅಂದರೆ ಬಿಕ್ಷುಕನಾಗಿ ಮೂರು ಜನ್ಮ ಬರಲಿ ಎಂದು ಹೇಳಿದೆ. ಕೃಷ್ಣ ಈ ಜನ್ಮದಲ್ಲಿ ಆತ ಇಷ್ಟೊಂದು ಶ್ರೀಮಂತ ಹೇಗಾದ ಎಂದಾಗ, ಅದು ಹಿಂದಿನ ಜನ್ಮದಲ್ಲಿ ಮಾಡಿದ ಪುಣ್ಯ ಎಂದನು.
ಅರ್ಜುನನಿಗೆ ಈಗ ಅರ್ಥವಾಯಿತು:- ಸಾಕ್ಷಾತ್ ಭಗವಂತನೇ ನಮ್ಮ ಜೊತೆ ಇರುವಾಗ, ಯಾವ ರಾಜ್ಯ ,ವೈಭೋಗಗಳು ಬೇಡ ಅಶಾಶ್ವತವಾದ ಸಂಪತ್ತಿಗೆ ಆಸೆ ಪಡುವುದಕ್ಕಿಂತ ಸದಾಕಾಲ ಭಗವಂತನ ಸಮೀಪದಲ್ಲಿ ಸ್ವರ್ಗಸುಖವನ್ನು ಅನುಭವಿಸುವ ಯೋಗ ಯಾರಿಗೆ ಇರುತ್ತದೆ. ಅಂತಹ ಸುಯೋಗವನ್ನು ನಮ್ಮ ಜೊತೆಯಲ್ಲಿದ್ದು ನಮಗೆ ಕಲ್ಪಿಸಿರುವ ಕೃಷ್ಣನನ್ನೆ ಏನು ಮಾಡಿದ ಎಂದು ಹೇಳುವುದು ಮಹಾ ತಪ್ಪು. ನಮಗೆ ಸಿಕ್ಕಿರುವ ಜಯ ಸಂಪತ್ತು ಎಲ್ಲದಕ್ಕೂ ಕೃಷ್ಣನೇ ಒಡೆಯನೆಂದು ಕೃಷ್ಣನಿಗೆ ಮನಸಾರೆ ವಂದಿಸಿದನು.
*ನೀತಿ:- ಹಾರೈಕೆಗಳು ಕೇಳಲು ಅಹಿತವಾಗಿದ್ದರೂ ಅದರೊಳಗೊಂದು ಒಳಾರ್ಥ ಅಡಗಿದ್ದು, 'ಆಳಾದವನು ಅರಸನಾಗಬಲ್ಲ, ಅರಸನಾಗಿದ್ದವನು ಆಳಾಗುವನು' ಭಗವಂತನ ಲೀಲೆ ಬಲ್ಲವರ್ಯಾರು.*
" ಆದೌ ದೇವಕೀ ದೇವಿ ಗರ್ಭ ಜನನಂ ಗೋಪೀಗೃಹೇ ವರ್ಧನಂ
ಮಾಯಾ ಪೂತನಿ ಜೀವಿತಾಪಹರಣಂ ಗೋವರ್ಧನೋದ್ಧಾರಣಂ!
ಕಂಸಛೇದನ ಕೌರವಾದಿ ಹನನಂ ಕುಂತೀ ಸುತಾಪಾಲನಂ
ಏತದ್ ಭಾಗವತಂ ಪುರಾಣಕಥಿತಂ ಶ್ರೀಕೃಷ್ಣ ಲೀಲಮೃತಂ!
ಶ್ರೀಕೃಷ್ಣನು ದೇವಕಿ ಗರ್ಭದಲ್ಲಿ ಜನಿಸಿ, ಗೋಕುಲದಲ್ಲಿ ಬೆಳೆದು, ಪೂತನಿಯ ಸಂಹಾರ, ಗೋವರ್ಧನ ಗಿರಿಯನ್ನು ಎತ್ತಿ ಗೋ ಹಾಗೂ ಗೋಪಾಲಕರನ್ನು ಕಾಪಾಡಿದ್ದು, ಕಂಸ, ಕೌರವಗಳನ್ನು ಕೊಂದು ಪಾಂಡವರಿಗೆ ರಕ್ಷಣೆ ನೀಡಿದ, ಶ್ರೀಕೃಷ್ಣನ ಲೀಲೆಯಿಂದ ಕೂಡಿದ್ದೇ ಭಾಗವತ.
*ಶ್ರೀಕೃಷ್ಣಾರ್ಪಣಮಸ್ತು.*
ಕೃಪೆ,ಬರಹ:- ಆಶಾ ನಾಗಭೂಷಣ.
ಸಂಗ್ರಹ: ವೀರೇಶ್ ಅರಸೀಕೆರೆ.
Comments
Post a Comment