ದಿನಕ್ಕೊಂದು ಕಥೆ 1079

*🌻ದಿನಕ್ಕೊಂದು ಕಥೆ*🌻
         *ವಿಸ್ಮಯ*  

"ಅಪ್ಪಾ, ನಾನು ನಿಮ್ಮ ಹತ್ತಿರ ಒಂದು ವಿಷಯ ಕೇಳಬೇಕಿತ್ತು. ತುಂಬಾ ವರ್ಷಗಳಿಂದ ನನಗೊಂದು ಸಂದೇಹ ಮನದಲ್ಲಿ ಕೊರೆಯುತ್ತಾ ಇದೆ."

"ಅದೇನು ಎಂದು ಕೇಳು. ನಿನ್ನ ಅಪ್ಪನ ಹತ್ತಿರವೂ ಸಂಕೋಚವಾ?"

" ಅಪ್ಪಾ ನೀವು ನಿಮ್ಮ ಕೆಲಸದಿಂದ ಸಧ್ಯದಲ್ಲೇ ನಿವೃತ್ತರಾಗಲಿದ್ದೀರಿ. ನೀವು ಮಾಡುವ ಕೆಲಸದಲ್ಲಿ ಎಷ್ಟೊಂದು ಏಳು ಬೀಳುಗಳನ್ನು ಕಂಡಿದ್ದೀರಿ. ಹಾಗೆಯೇ ಬದುಕಿನಲ್ಲಿಯೂ ಸಹ! ಆದರೂ ಎಲ್ಲವನ್ನೂ ಎಷ್ಟು ಚೆನ್ನಾಗಿ ನಿಭಾಯಿಸಿಕೊಂಡು ಬಂದಿದ್ದೀರಿ!! ಅಕ್ಕನಿಗೆ ಆಗಲೇ ಮದುವೆ ಮಾಡಿದ್ದೀರಿ. ಸಾಕಷ್ಟು ವಿದ್ಯಾವಂತನನ್ನಾಗಿ ಮಾಡಿ ಒಳ್ಳೆಯ ಕೆಲಸ ಸಿಗುವಂತೆ ನನ್ನನ್ನು ರೂಪಿಸಿದ್ದೀರಿ. ಅಮ್ಮನೂ ಯಾವುದೇ ಕೊರಗಿಲ್ಲದೆ ಸಂತೋಷದಿಂದ ಹಾಯಾಗಿದ್ದಾಳೆ. ನಾನು ಸಹ ಇನ್ನುಮೇಲೆ ಮದುವೆಯಾಗಿ ಹೆಂಡತಿ, ಮಕ್ಕಳು, ಕೆಲಸ ಎಂದು ಎಲ್ಲವನ್ನು ನಿಭಾಯಿಸಬೇಕು. ನಿಮ್ಮಂತೆ ಬಾಳಬೇಕೆನ್ನುವ ಆಸೆ ನನ್ನದು. ನನಗೂ ಅವೆಲ್ಲವನ್ನು ಕಲಿಸಿಕೊಡಿ ಅಪ್ಪಾ"

ಮಗನ ಪ್ರಶ್ನೆಗೆ ಮುಗುಳ್ನಕ್ಕರು ಅಪ್ಪ. 

"ಮಗನೇ! ನಿನಗೆ ನಾನು ಮಾತಿನಲ್ಲಿ ಹೇಳಿದರೆ ಅರ್ಥವಾಗುವುದಿಲ್ಲ. ಹೇಗೂ ಇವತ್ತು ಭಾನುವಾರ. ಸಾಯಂಕಾಲ ನಿನ್ನನ್ನು ಒಂದು ಕಡೆಗೆ ಕರೆದುಕೊಂಡು ಹೋಗುತ್ತೇನೆ. ನಿನ್ನ ಪ್ರಶ್ನೆಗೆ ಉತ್ತರವನ್ನೂ ಕೊಡುತ್ತೇನೆ."

ಅಪ್ಪನ ಮಾತಿಗೆ ಮಗ ಒಪ್ಪಿಗೆ ನೀಡಿದ.

ಸಾಯಂಕಾಲ ಸುಮಾರು ಆರು ಗಂಟೆಯ ಸಮಯ. ಅಪ್ಪ ಮಗ ಇಬ್ಬರೂ ಸಮುದ್ರದ ದಡದಲ್ಲಿ ನಿಂತಿದ್ದಾರೆ. ಮಗ ಕುತೂಹಲದಿಂದ ಅಪ್ಪನ ಮುಖವನ್ನೇ ದಿಟ್ಟಿಸುತ್ತಿದ್ದಾನೆ. ಅಪ್ಪನ ಮುಖದಲ್ಲಿ ಮಂದಹಾಸ ಮಿನುಗುತ್ತಿದೆ. ನಿಧಾನವಾಗಿ ಮಾತು ಆರಂಭಿಸಿದರು ಅಪ್ಪ. 

"ಮಗನೇ ! ಈ ಸಮುದ್ರದ ಅಲೆಗಳನ್ನು ನೋಡು. ಇವುಗಳಿಗೆ ಯಾರ ಹಂಗೂ ಇಲ್ಲ. ಯಾರ ಅಪ್ಪಣೆಯೂ ಬೇಕಿಲ್ಲ. ಹಗಲು, ರಾತ್ರಿ, ಬಿಸಿಲು , ಚಳಿ ಏನೇ ಇರಲಿ, ಅಲೆಯರಳಿಸುತ್ತ ತನ್ನ ಕಾಯಕ ನಡೆಸುತ್ತಿದೆ. ತನ್ನ ಒಡಲಲ್ಲಿ ಒಳ್ಳೆಯದು ಕೆಟ್ಟದ್ದು ಯಾವುದೇ ಇರಲಿ, ಅದನ್ನು ದಡಕ್ಕೆ ತಂದು ಬಿಸಾಕುತ್ತದೆ. ಯಾರ ಹತ್ತಿರವೂ ಕಲಿಯದೇ ಪ್ರಾಮಾಣಿಕವಾಗಿ ಮಾಡುವ ಕಾಯಕವಿದು!"
 
"ಈ ನೀಲಾಕಾಶವನ್ನು ಸರಿಯಾಗಿ ನೋಡು. ಬಿಳಿ ಮೋಡ ಇರಲಿ, ಕರಿಯ ಮೋಡವೇ ಆಗಿರಲಿ, ನಿರ್ಲಿಪ್ತವಾಗಿರುವಂತೆ ಅದಕ್ಕೆ ಯಾರೂ ಕಲಿಸಿಲ್ಲ. ಅದು ಅದರ ಕಾಯಕ. ದಡದಲ್ಲಿ ದೂರದಲ್ಲಿರುವ ಆ ಬಂಡೆಯ ಪಕ್ಕ ಇರುವ ಮರಗಳನ್ನು ಗಮನಿಸು. ಕೆಲವು ದಿವಸಗಳ ಹಿಂದೆ ಎಲೆ ಉದುರಿಸಿದ ಈ ಮರ ಯಾರ ಅಪ್ಪಣೆಯೂ ,ಸಹಾಯವೂ ಇಲ್ಲದೇ ಚಿಗುರುವ ಕಾಯಕ ನಡೆಸಿದೆ. ಆ ಇನ್ನೊಂದು ಮರದಲ್ಲಿ ಅರಳಿರುವ ಕೆಂಪು ಹೂವುಗಳನ್ನು ನೋಡು. ಆ ಹೂವುಗಳು ಅರಳಿ ಆಮೇಲೆ ಉದುರುತ್ತವೆಯೋ ಅಥವಾ ಯಾರದಾದರೂ ಉಪಯೋಗಕ್ಕೆ ಆಗುತ್ತವೆಯೋ ಎನ್ನುವ ನೀರೀಕ್ಷೆಯಿಲ್ಲದೆ ನಿರ್ಲಿಪ್ತವಾಗಿ ತನ್ನ ಕಾಯಕ ಮಾಡಿದೆ. ಆ ಮರಗಳಿಗೆ ಅವುಗಳನ್ನೆಲ್ಲ ಕಲಿಸಿದವರು ಯಾರು ?"

"ಈ ಪ್ರಕೃತಿಯೇ ದೇವರು! ದೇವರು ಅಂದರೆ ಒಂದು ಶಕ್ತಿ ; ನಮ್ಮ ಪರಿಸರದಲ್ಲಿ ಆ ಶಕ್ತಿ ಇದೆ; ನಮ್ಮ ಪ್ರಾಮಾಣಿಕತೆಯಲ್ಲಿ ಆ ಶಕ್ತಿ ಇದೆ; ನಮ್ಮ ನಡವಳಿಕೆಯಲ್ಲಿ ಆ ಶಕ್ತಿ ಇದೆ. ಒಟ್ಟಿನಲ್ಲಿ ಹೇಳುವುದಾದರೆ ಫಲಾಫಲಗಳ ಅಪೇಕ್ಷೆ ಇಲ್ಲದೆ ನಮ್ಮ ಕಾಯಕವನ್ನು ನಡೆಸಬೇಕು. ಈ ಪ್ರಕೃತಿಗೆ ಯಾರೂ ಏನೂ ಕಲಿಸಬೇಕಾಗಿಲ್ಲ ಅಲ್ಲವೇ. ಹಾಗೆಯೇ ನಮ್ಮ ಜೀವನವೂ ಕೂಡ. ಅದೊಂದು ವಿಸ್ಮಯ ಜಗತ್ತು. ಅರ್ಥವಾಯಿತಾ ಮಗನೆ?’ 

ಎಂದು ಮಗನ ತಲೆ ನೇವರಿಸಿದರು ಅಪ್ಪ.

"ಅಪ್ಪಾ ! ಸಾಕಷ್ಟು ಉದಾಹರಣೆಗಳನ್ನು ಪ್ರತ್ಯಕ್ಷವಾಗಿ ತೋರಿಸುವ ಮೂಲಕ ನನ್ನ ಸಂದೇಹ ನಿವಾರಣೆ ಮಾಡಿಬಿಟ್ಟಿರಿ. "

ಅಪ್ಪನ ಕೈಯನ್ನು ಮೃದುವಾಗಿ ನೇವರಿಸಿದ ಮಗ.   

ಲೇಖಕರು:ಗೀತಾ ಹೆಬ್ಬಾರ್
ಸಂಗ್ರಹ:ವೀರೇಶ್ ಅರಸೀಕೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1055

ದಿನಕ್ಕೊಂದು ಕಥೆ 1059