ದಿನಕ್ಕೊಂದು ಕಥೆ 1081
*🌻ದಿನಕ್ಕೊಂದು ಕಥೆ🌻*
*ಹಣದ ಬೆಲೆ*
ಆ ಊರಿನಲ್ಲಿ ಎಲ್ಲ ಅನುಕೂಲ ಇರುವ ತಂದೆಯ ಮಗನೊಬ್ಬ ಒಂದು ದಿನ
ತನ್ನ ತಂದೆಯ ಬಳಿ ಬಂದು -" ಅಪ್ಪಾಜೀ.. ನನಗೆ ತುರ್ತಾಗಿ ಹತ್ತು ಸಾವಿರ ರೂಪಾಯಿ ಬೇಕು ಕೊಡಿ"ಎಂದು ಕೇಳಿದ. ಆತನ ತಂದೆಯ ಹತ್ತಿರ ಹಣಕ್ಕೇನು
ಕಡಿಮೆ ಇರಲಿಲ್ಲ.ಆದರೆ ತನ್ನ ಮಗ ಅನಾವಶ್ಯಕವಾಗಿ ಹಣ ಪೋಲು ಮಾಡುತ್ತಿದ್ದಾನಲ್ಲ.... ಅವನಿಗೆ ಹಣದ ಮಹತ್ವ ಏನೆಂಬುದನ್ನು ಕಲಿಸಿಕೊಡಬೇಕೆಂದು ಇಚ್ಥಿಸಿದವ ಇದೇ ಸೂಕ್ತ ಸಮಯ ಎಂದರಿತು ಮಗನಿಗೆ
ಕೂಗಿ ಕರೆದು " ನೋಡು.. ನಿನಗೆ ನಾನು ಹತ್ತು ಸಾವಿರ ರೂಪಾಯಿ ಗಳಲ್ಲ, ಇಪ್ಪತ್ತು ಸಾವಿರ ರೂಪಾಯಿ ಕೊಡುವೆ ಎಂದಾಗ ಮಗನಿಗೆ ಹಿಡಿಸಲಾಗದಷ್ಟು ಸಂತಸವಾಯಿತು. ಮುಂದುವರೆದ ಆತನ ತಂದೆ -" ಆದರೆ ನನ್ನದೊಂದು ಕಂಡೀಷನ್ ಇದೆ.. ಅದೇನೆಂದರೆ, ನಿನಗೆ ನಾನು ನೂರರ ಐದು ನೋಟುಗಳನ್ನು ಕೊಡುತ್ತಾ ಹೋಗುವೆ, ನೀನು ಅದನ್ನು ಪಡೆದು ಹರಿದು ಹಾಕ ಬೇಕು "ಎಂದು ಹೇಳುತ್ತಾನೆ.ತಂದೆಯ ಈ ಮಾತು ಆಲಿಸಿದ ಮಗ-" ಇಷ್ಟೇನಾ.. ಡ್ಯಾಡ್, ಇದೇನು ದೊಡ್ಡ ಕೆಲಸ ವಲ್ಲ ಕೊಡಿ " ಎಂದ ನಂತರ ಆತನ ತಂದೆ ತಮ್ಮ ಜೇಬಿನಿಂದ ಒಂದಿಷ್ಟು ಹಣ ತೆಗೆದು ಅದರೊಳಗಿದ್ದ ಒಂದು ನೂರರ ನೋಟನ್ನು ಆತನ ಕೈ ಗೆ
ಕೊಡುತ್ತಾರೆ. ಅದನ್ನು ಪಡೆದ ಮಗ ತಕ್ಷಣ ಅದನ್ನು ಹರಿದು ಎರಡು ತುಂಡು ಮಾಡುತ್ತಾನೆ.ಈಗ ಆತನ ಅಪ್ಪ ಎರಡನೇಯ ನೂರರ ನೋಟು ಕೊಡುತ್ತಾನೆ
ಮಗ ಅದನ್ನೂ ಎರಡು ತುಂಡು ಮಾಡುತ್ತಾನೆ. ಇದೇ ರೀತಿ ಮೂರನೆಯ, ನಾಲ್ಕನೇಯ ನೋಟುಗಳನ್ನು ಆತ ಕ್ಷಣಾರ್ಧದಲ್ಲಿ ತುಂಡು ಮಾಡಿ , ಐದನೇ ನೋಟು ಕೊಡು ಎಂದು ಅಪ್ಪನಿಗೆ ಕೇಳಿದಾಗ ಅವರು " ನಿನಗೆ ನಾ ಐದನೇ ನೋಟು ಕೊಡಲ್ಲ.. ಅದನ್ನು ನೀನೇ ಸ್ವಯಂ ಸಂಪಾದಿಸಿಕೊಂಡು ಬಾ.. ಅದೂ ಸಹ ಒಂದೇ ದಿನದಲ್ಲಿ"ಎಂದು ಹೇಳುತ್ತಾರೆ.ಅದಕ್ಕೆ ಪ್ರತಿಯಾಗಿ ಮಗ, ವ್ಯಂಗ
ನಗೆ ನಗುತ್ತ " ಇಷ್ಟೇನಾ.. ಡ್ಯಾಡ್, ನಾನು ಹೀಗೆ ಹೋಗಿ ಹಾಗೆ ಸಂಪಾದಿಸಿ ಕೊಂಡು ಬರುವೆ, ನಾನು ಬರುವಷ್ಟರಲ್ಲಿ ನೀವು ಇಪ್ಪತ್ತು ಸಾವಿರ ರೂಪಾಯಿ ಸಿದ್ಧವಾಗಿಟ್ಟು ಕೊಳ್ಳಿ"ಎಂದು ಹೇಳುತ್ತಾನೆ. ಆಗ ಆತನ ತಂದೆ -" ನೋಡು ಈ ನೂರು ರೂಪಾಯಿ ಗಳನ್ನು ನೀನು ಯಾರಿಂದಲೂ ಪಡೆಯದೇ ಸ್ವಯಂ ಸಂಪಾದಿಸಿ ಕೊಂಡು ತರಬೇಕು" ಎಂದಾಗ ಮಗ " ಆಯ್ತು" ಎನ್ನುತ್ತಾನೆ.
ಮರುದಿನ ಮಾತಿನಂತೆ ಮಗ ನೂರು ರೂಪಾಯಿ ಸಂಪಾದಿಸಲು ಮನೆಯಿಂದ ಹೊರಗಡೆ ಹೋಗುತ್ತಾನೆ.ಸುಮಾರು ಹೊತ್ತು ರಣಗುಡುವ ಬಿಸಿಲಲ್ಲಿ ಅಲ್ಲಿ ಇಲ್ಲಿ ಸುತ್ತಾಡಿದ ನಂತರ ಆತನ ಕಣ್ಣಿಗೆ ಬೀದಿ ಬದಿಯ ಒಂದು ಚಹಾ -ಕಾಫೀ ಮಾರುವ ಗೂಡಂಗಡಿ ಕಾಣುತ್ತದೆ.ಆತ ಅಲ್ಲಿಗೆ ಹೋಗಿ ಅದರ ಮಾಲೀಕನನ್ನು ಕಂಡು "ಅಂಕಲ್.... ನೀವು ನನಗೆ ನೂರು ರೂಪಾಯಿ ಕೊಟ್ಟರೆ ಇಲ್ಲಿ ನೀವು ಎರಡು ಡಬರಿ ತುಂಬಾ ತುಂಬಿಟ್ಟಿರುವ ಎಂಜಲು ಲೋಟಾ, ಪಾತ್ರೆ ಗಳನ್ನು ನೀಟಾಗಿ ತೊಳೆದು ಕೊಡುವೆ"ಎಂದು ಕೇಳುತ್ತಾನೆ. ಆ ಹುಡುಗನ ಮಾತು ಆಲಿಸಿದ ಮಾಲೀಕ ಒಮ್ಮೆ ಆತನನ್ನು ಮೇಲಿನಿಂದ ಕೆಳಗಿನವರೆಗೂ ನೋಡಿದವ " ನಿನ್ನನು ನೋಡಿದರೆ
ಒಳ್ಳೆಯ ಕುಟುಂಬದಿಂದ ಬಂದವನಂತೆ ಕಾಣುತ್ತೀ... ಸರಿ ಅದಿರಲಿ, ನೀನು ಎರಡೂ ಡಬರಿ ಯೊಳಗಿನ ಪಾತ್ರೆ, ಲೋಟಾ ತೊಳೆದರೆ ನಾನು ಹತ್ತು ರೂಪಾಯಿ ಗಿಂತ ಹೆಚ್ಚು ಕೊಡಲ್ಲ... ಇಷ್ಟ ಇದ್ದರೆ ಮಾಡು.. ಇಲ್ಲವಾದರೆ ಬಿಡು"ಎಂದು ಹೇಳುತ್ತಾನೆ.ಮಾಲೀಕನ ಮಾತು ಕೇಳಿಸಿಕೊಂಡ ಹುಡುಗ ಮನಸ್ಸಿನಲ್ಲಿ " ಶುರುವಿನಲ್ಲಿ ಹೀಗೆ ಆಗಬಹುದೇನೋ"ಎಂದು ಯೋಚಿಸಿ" ಆಯ್ತು, ಕೊಡಿ ಅಂಕಲ್"ಎಂದು ಒಂದು ಗಂಟೆ ಒಳಗೆಲ್ಲ ಅಲ್ಲಿದ್ದ ಎಲ್ಲಾ ಪಾತ್ರೆ, ಲೋಟಾ ಗಳನ್ನು
ತೊಳೆದು ಹಾಕುತ್ತಾನೆ. ಮತ್ತೆ ಮನದಲ್ಲಿ " ನಾನು ಇದುವರೆಗೂ ಬರೀ ಹತ್ತು ರುಪಾಯಿ ಬೆಲೆ ಇಷ್ಟಿದೆ ಅಂತ ಅರಿತಿರಲಿಲ್ಲ.. ಇದಕ್ಕಾಗಿ ಎಷ್ಟು ಶ್ರಮ ಪಡಬೇಕಾಯ್ತಲ್ಲ" ಎಂದುಕೊಂಡವ ಪುನಃ ನಾನ್ಯಾಕೆ ನನ್ನ ಮಿತ್ರ ನ ಬಳಿ ನೂರು ರೂಪಾಯಿ ಕೇಳಿ ಪಡೆಯಬಾರದು?"ಎಂದು ಯೋಚಿಸುತ್ತಿರುವಾಗ ಆತನ ತಂದೆ ಮನೆಯಿಂದ ಬರುವಾಗ ಯಾರ ಬಳಿಯೂ ಹಣ ಕೇಳಿ ಪಡೆಯದೇ ಅದು ಸ್ಯಯಂ ಸಂಪಾದಿಸಿದ್ದಾರೆ ಬೇಕು "ಎಂದು ಹೇಳಿದ ಮಾತು ತಲೆತುಂಬ ಸುತ್ತ ತೊಡಗುತ್ತದೆ."ಇಲ್ಲಾ.. ಹೇಗಾದರೂ ಮಾಡಿ ನಾನು ಸಂಪಾದನೆ ಮಾಡಿದರೆ ನನಗೆ ಇಪ್ಪತ್ತು ಸಾವಿರ ರೂಪಾಯಿ ಸಿಗುವುದು "ಎಂದು ಅಂದು ಕೊಳ್ಳುತ್ತ ಬಿಸಿಲು, ಧೂಳು ಬೆವರು ಲೆಕ್ಕಿಸದೇ ಅವರಿವರಿಂದ ಕೈ ಯಲಿ ಅನಿಸಿಕೊಂಡು ಕೂಲಿ ಕೆಲಸ, ಕಸ ಗುಡಿಸುವ ಕೆಲಸ ಮಾಡಿ ಹೀಗೆ ಹತ್ತತ್ತು ರೂಪಾಯಿ ಗಳಂತೆ ಸಂಜೆ ಒಳಗೆ ಅಂತೂ ನೂರು ರೂಪಾಯಿ ಸಂಪಾದನೆ ಮಾಡಿ ಮನೆಗೆ ಬರುವಷ್ಟರಲ್ಲಿ ಆತ ಧರಿಸಿದ್ದ ಬಟ್ಟೆಗಳೆಲ್ಲ ಮಲೀನ ವಾಗಿರುತ್ತದೆ. ಬೆಳಿಗ್ಗೆ ಯಿಂದ ಸುತ್ತಿ ದೈಹಿಕವಾಗಿ ಶ್ರಮ ಪಟ್ಟಿದ್ದರಿಂದ ಸಾಕಷ್ಟು ಸುಸ್ತಾಗಿರುತ್ತಾನೆ.
ಮನೆಯಲ್ಲಿ ಈತನನ್ನೇ ಕಾಯುತ್ತಿದ್ದ ಆತನ ತಂದೆ ಮಗನನ್ನು ಕಂಡವ " ನಾ ಹೇಳಿದಂತೆ ಸಂಪಾದನೆ ಮಾಡಿ ತಂದೆಯಾ?" ಕೇಳಿದಾಗ ಆತ ಜೇಬಿನಿಂದ ತಾನು ಸಂಪಾದಿಸಿ ತಂದಿದ್ದ ಹತ್ತರ ಹತ್ತು ನೋಟು ಗಳನ್ನು ತೋರಿಸುತ್ತಾನೆ. ಅದನ್ನು ಕಂಡ ಆತನ ಅಪ್ಪ " " ವೆರಿ ಗುಡ್...ಈಗ ಈ ನೋಟುಗಳನ್ನು ಹರಿದು ಹಾಕಿದಲ್ಲಿ ನನ್ನ ಕಂಡೀಷನ್ ಪೂರ್ತಿ ಆದಂತಾಗುತ್ತದೆ ಆಗ ನಾನು ನಿನಗೆ ಮಾತಿನಂತೆ ಇಪ್ಪತ್ತು ಸಾವಿರ ಕೊಡುವೆ "ಎಂದು ಹೇಳಿದಾಗ ಮಗ ತನ್ನ ಕೈ ಯಲ್ಲಿದ್ದ ನೋಟುಗಳನ್ನು ಹರಿಯಲು ಮುಂದಾಗುತ್ತಾನೆ . ಆಗ ಆತನ ಕಣ್ಣೆದುರಿಗೆ ತಾನು ಈ ನೂರು ರೂಪಾಯಿ ಸಂಪಾದನೆ ಮಾಡಲು ಬೆಳಿಗ್ಗೆ ಯಿಂದ ಬಿಸಿಲು ಧೂಳು ಎನ್ನದೇ ಅವರಿವರು ಆಡಿದ ಮಾತುಗಳು ಚಿತ್ರದಂತೆ ಒಂದೊಂದೇ ಬಂದಾಗ ಆತನ ಕೈ ಮುಂದೆ ಓಡದೇ ಕಣ್ಣಿನಿಂದ ದಳದಳನೇ ನೀರು ಸುರಿಯಲಾರಂಭಿಸುತ್ತದೆ. ಆಗ ತನ್ನ ತಂದೆಗೆ -" ಅಪ್ಪಾಜಿ.. ನೀವು ಹಣದ ಬೆಲೆ ಏನೆಂದು ತಿಳಿಸಿ ಹೇಳಬೇಕೆಂದಿದ್ದಿರೋ ನನಗೆ ಪೂರ್ತಿ ಅರ್ಥ ವಾಯಿತು " ಎನ್ನುತ್ತಾನೆ.
ಲೇಖಕರು:ಅರವಿಂದ.ಜಿ.ಜೋಷಿ.
ಮೈಸೂರು.
ಸಂಗ್ರಹ:ವೀರೇಶ್ ಅರಸೀಕೆರೆ.
Comments
Post a Comment