ದಿನಕ್ಕೊಂದು ಕಥೆ 1082
*🌻ದಿನಕ್ಕೊಂದು ಕಥೆ🌻*
*ತಿಮ್ಮಪ್ಪನ ದರ್ಶನ*
ಒಬ್ಬ ಅಜ್ಜಿ ಕೂಲಿ ಕೆಲಸ ಮಾಡಿ ಕಾಲಯಾಪನೆ ಮಾಡುತ್ತಿದ್ದಳು. ಅವಳ ಬಹಳ ಕಾಲದ ಬಯಕೆ ಸಾಯುವ ಮುನ್ನ ಒಮ್ಮೆ ತಿರುಪತಿಗೆ ಹೋಗಿ ತಿಮ್ಮಪ್ಪನ ದರ್ಶನ ಮಾಡಿ ಬರುವುದು. ಅದಕ್ಕಾಗಿ ಅವಳು ದಿನವೂ ಸಂಪಾದನೆಯ ಒಂದಷ್ಟು ಭಾಗವನ್ನು ಕೂಡಿಡುತ್ತಿದ್ದಳು. ಇನ್ನೇನು ತಿರುಪತಿಗೆ ಹೋಗಲು ಬೇಕಾದಷ್ಟು ಹಣ ಸಂಗ್ರಹವಾಯಿತು ಎನ್ನುವಾಗ, ಆ ಊರಿನಲ್ಲಿ ಹಿಂದೆಂದೂ ಕಂಡರಿಯದ ಕ್ಷಾಮ ಬಂತು. ಮಕ್ಕಳು ಮರಿಗಳು ಹೊಟ್ಟೆಗಿಲ್ಲದೆ ಕಂಗಾಲಾದುವು, ಜಾನುವಾರುಗಳು ಮೇವು ಇಲ್ಲದೆ ಹಸಿವೆಯಿಂದ ಬಳಲುತ್ತಿದ್ದವು.
ಅಜ್ಜಿಗೆ ಯಾಕೋ ತಿರುಪತಿಗೆ ಹೋಗೋದು ಬೇಡ ಅನಿಸಿತು. ಅವಳು ಕೂಡಿಟ್ಟ ಹಣವನ್ನೆಲ್ಲಾ ಖರ್ಚು ಮಾಡಿ ಊರಿಗೆಲ್ಲಾ ಉಣಬಡಿಸಿದಳು.
ಮತ್ತೆ ಕೆಲವು ವರ್ಷಗಳವರೆಗೆ ಹಣ ಸಂಗ್ರಹಿಸುತ್ತಾ ಇದ್ದಹಾಗೆ ಮತ್ತೊಮ್ಮೆ ಊರಿನಲ್ಲಿ ಕ್ಷಾಮ ಬಂತು. ಮತ್ತೆ ಅಜ್ಜಿ ತನ್ನ ದುಡ್ಡನ್ನೆಲ್ಲಾ ಖರ್ಚುಮಾಡಿ ಊರವರಿಗೆಲ್ಲಾ ಉಣಬಡಿಸಿದಳು. ಇದೇ ರೀತಿ ಮೂರನೆಯ ಬಾರಿಯೂ ಆಯಿತು. ಮತ್ತೆ ಅಜ್ಜಿ ಊರವರಿಗೆ ಉಣಬಡಿಸುತ್ತಿದ್ದಾಗ ಯಾರೋ ಅಜ್ಜಿಯನ್ನು ಉದ್ದೇಶಿಸಿ ಹೇಳಿದರು- ಅಜ್ಜಿ ನಿನಗೆ ವಯಸ್ಸಾಗುತ್ತಾ ಬಂತು, ಇನ್ನು ನೀನು ದುಡಿದು ಹಣ ಸಂಪಾದನೆ ಮಾಡಲಾರೆ, ಇನ್ನು ಹೇಗೆ ತಿಮ್ಮಪ್ಪನ ದರ್ಶನ ಮಾಡಬಲ್ಲೆ?
ಅಜ್ಜಿ ಅವನನ್ನು ಹೊರಗೆ ಊಟ ಮಾಡುತ್ತಿದ್ದ ಬಡವರನ್ನು, ಮೇವು ತಿನ್ನುತ್ತಿದ್ದ ಜಾನುವಾರುಗಳನ್ನು ತೋರಿಸಿ ಹೇಳಿದಳು- ಹುಚ್ಚಪ್ಪಾ ತಿಮ್ಮಪ್ಪ ನೇ ಸಾಕ್ಷಾತ್ ನನ್ನ ಮನೆಯಲ್ಲಿ ಊಟ ಮಾಡುತ್ತಿರುವಾಗ, ನಾನು ಅವನನ್ನು ಕಾಣಲು ತಿರುಪತಿಗೆ ಯಾಕೆ ಹೋಗಬೇಕು?
ಕೃಪೆ:ದಾಮೋದರ ಶೆಟ್ಟಿ, ಇರುವೈಲು
ಸಂಗ್ರಹ: ವೀರೇಶ್ ಅರಸೀಕೆರೆ.
****************************************
*ಸೋಮನಗೌಡರ ನಾಯಿ*
ಸೋಮನಗೌಡರು ಊರಿಗೆಲ್ಲ ದೊಡ್ಡ ಶ್ರೀಮಂತರು. ಅವರು ಒಂದು ನಾಯಿಯನ್ನು ಸಾಕಿದ್ದರು. ಅದರ ಹೆಸರು ಮೋತಿ, ಮೋತಿ ಬಲು ನಂಬಿಗೆಯ ಪ್ರಾಣಿ. ಜಾಣತನಕ್ಕೆ ಅದು ಊರಿಗೆಲ್ಲ ಹೆಸರಾಗಿತ್ತು. ಗೌಡರ ಮನೆ ಊರ ಹೊರಗೆ ಇತ್ತು. ಪ್ರತಿ ರಾತ್ರಿಯೆಲ್ಲ ಎಚ್ಚರವಾಗಿದ್ದು ಮನೆ ಕಾಯುತ್ತಿತ್ತು.
ಒಂದು ದಿನ ಆಪ್ತರ ಮದುವೆಗೆ ಗೌಡರ ಮನೆಯವರೆಲ್ಲ ನೆರೆಯೂರಿಗೆ ಹೋದರು. ಮೋತಿಯನ್ನು ಮನೆ ಕಾಯಲು ಬಿಟ್ಟು ಹೋದರು. ಗೌಡರ ಮನೆಯಲ್ಲಿ ಬಹಳ ಬಂಗಾರವಿತ್ತು, ಕಳ್ಳರು ಸಮಯ ಸಾಧಿಸುತ್ತಿದ್ದರು. ಮನೆಯಲ್ಲಿ ಯಾರೂ ಇಲ್ಲದ ಈ ಸಮಯ ನೋಡಿ ಗೌಡರ ಮನೆಗೆ ಹಿಂಬದಿಯಿಂದ ಕನ್ನ ಹಾಕಿದರು. ಕಳ್ಳರ ಗುಂಪಿನಲ್ಲಿ ಮೂರು ನಾಲ್ಕು ಜನರಿದ್ದರು. ಮೋತಿ ಅವರನ್ನು ನೋಡಿತು. ಆದರೆ ಬೊಗಳಲಿಲ್ಲ. ಎಲ್ಲವನ್ನು ನೋಡುತ್ತ ಮರೆಯಲ್ಲಿ ನಿಂತಿತು.
ಗೌಡರ ಬಂಗಾರ ಮತ್ತು ಹಣ ತುಂಬಿದ ಪೆಟ್ಟಿಗೆ ಭಾರವಾಗಿತ್ತು. ಕಳ್ಳರಿಗೆ ಅವಸರದಲ್ಲಿ ದೂರ ಒಯ್ಯಲು ಸಾಧ್ಯವಾಗಲಿಲ್ಲ. ಅವರಿಗೆ ಏನು ಮಾಡಬೇಕೆಂದು ತಿಳಿಯದಾಯಿತು. ಅಷ್ಟರಲ್ಲಿ ಬೆಳಗಾಗುತ್ತ ಬಂತು. ಬಹಳ ಯೋಚನೆ ಮಾಡಿದರು. ಕೊನೆಗೆ ಊರ ಹೊರಗಿನ ಗುಡ್ಡದ ಸಮೀಪ ಅದನ್ನು ಒಯ್ದರು. ಅಲ್ಲಿ ಅದನ್ನು ಹೂಳಿಟ್ಟರು. ಮೋತಿ ಗೊತ್ತಾಗದಂತೆ ಅವರನ್ನು ಹಿಂಬಾಲಿಸಿತು. ಹೂಳಿಟ್ಟ ಸ್ಥಳವನ್ನು ನೋಡಿತು. ಮರುದಿನ ಪೆಟ್ಟಿಗೆಯನ್ನು ಒಡೆದು ಕಳ್ಳರು ಅದನ್ನು ಹಂಚಿಕೊಳ್ಳುವವರಿದ್ದರು.
ಮದುವೆ ಮುಗಿಸಿ ಗೌಡರು ಮನೆಗೆ ಬಂದರು. ಮೋತಿ ಎಂದಿನಂತೆ ಒಡೆಯನನ್ನು ಸ್ವಾಗತಿಸಲಿಲ್ಲ. ಮೋತಿಯ ಜೋಲುಮೋರೆ ನೋಡಿ ಗೌಡರಿಗೆ ಗಾಬರಿಯಾಯಿತು, ಬಾಗಿಲು ತೆಗೆದು ಒಳಗೆ ಬಂದರು. ಹಿಂಬದಿಯ ಗೋಡೆ ಒಡೆದಿತ್ತು. ಪೆಟ್ಟಿಗೆ ಮಾಯವಾಗಿತ್ತು.
ಮೋತಿ ದೀನ ಸ್ವರದಿಂದ ಕೂಗಿತು. ಗೌಡರು ಹೊರಗೆ ಬಂದರು. ಮೋತಿ ಗೌಡರ ಧೋತರವನ್ನು ಹಿಡಿದೆಳೆಯಿತು. ಗೌಡರು ಮೋತಿಯ ಹಿಂದೆ ಹೋದರು. ಮೋತಿ ಪೆಟ್ಟಿಗೆ ಹುಗಿದ ಸ್ಥಳವನ್ನು ಕಾಲಿನಿಂದ ಕೆದರಿತು. ಗೌಡರಿಗೆ ಅನುಮಾನ ಬಂದಿತು. ತಮ್ಮ ಆಳುಗಳನ್ನು
ಕರೆಯಿಸಿದರು. ಆ ಸ್ಥಳದಲ್ಲಿ ಅಗೆಯಿಸಿದರು. ಅಲ್ಲಿ ಅವರಿಗೆ ತಮ್ಮ ಪೆಟ್ಟಿಗೆಯು ಕಾಣಿಸಿತು. ಆಳುಗಳು ಪೆಟ್ಟಿಗೆಯನ್ನು ಹೊತ್ತುಕೊಂಡು ಗೌಡರ ಮನೆಗೆ ತಂದರು. ಗೌಡರು ಮೋತಿಯ ಜಾಣತನಕ್ಕೆ ಮೆಚ್ಚಿದರು. ಪ್ರೀತಿಯಿಂದ ಮೈಮೇಲೆ ಕೈಯಾಡಿಸಿದರು. ಮೋತಿಗೆ ಸಂತೋಷವಾಯಿತು.
Comments
Post a Comment