ದಿನಕ್ಕೊಂದು ಕಥೆ 1084

*🌻ದಿನಕ್ಕೊಂದು ಕಥೆ🌻*
        *ಸಂಸ್ಕಾರ*

"ಅರ್ರೇ..... ದೀಪಕ್, ಈ  ರೂಮಿನಲ್ಲಿ ಒಬ್ರು ಅಜ್ಜೀ ಇದ್ದಾರಲ್ಲಾ?" ದಿವ್ಯಾ, ದೀಪಕ್ ನಿಗೆ ಕೇಳುತ್ತಾಳೆ. ಈ ದಿವ್ಯಾ ದೀಪಕ್ ನ ಮದುವೆಯಾಗಿ ಎರಡು ಮೂರು ದಿನ ಆಗಿತ್ತಷ್ಟೆ. ಶ್ರೀಮಂತ ಕುಟುಂಬದಿಂದ ಬಂದ ದಿವ್ಯಾ, ಅಷ್ಟೇ ಶ್ರೀಮಂತ ಕುಟುಂಬದ ಸೊಸೆಯಾಗಿ ಬಂದಿದ್ದಳು. ಅಂದು ದೀಪಕ್ ತನ್ನ ಬಂಗ್ಲೆ ಯಂತಿದ್ದ ದೊಡ್ಡ ಮನೆಯನ್ನು  ಪತ್ನಿಗೆ ಒಂದೊಂದಾಗಿ ತೋರಿಸಲು ಬಂದಾಗ, ಮಹಡಿ ಮೇಲಿನ ಒಂದು ರೂಮಿಗೆ ಬರುತ್ತಾರೆ. ಆಗ ದಿವ್ಯಾ. ಆಗ ರೀತಿ ಪ್ರಶ್ನೆ ಮಾಡಿದಾಗ ಆಕೆಯ ಪ್ರಶ್ನೆ ಗೆ ದೀಪಕ್ " ಹಾಂ... ಹೌದು, ಇದ್ದರು" ಎನ್ನುತ್ತಾನೆ. ಆತನ ಮಾತಿಗೆ ಹೌಹಾರಿದ ದಿವ್ಯಾ "ಅಂದ್ರೆ.. ಅವರು...ಈಗ" ಎಂದು ಅನುಮಾನದಿಂದ ಕೇಳಿದಾಗ  ದೀಪಕ್ ಅದಕ್ಕೆ " ಇದ್ದಾರೆ.. ಅವರು ವೃದ್ಧಾಶ್ರಮ ದಲ್ಲಿ"ಎಂದು ಉತ್ತರಿಸುತ್ತಾನೆ. ಪುನಃ ದಿವ್ಯಾ -" ಮತ್ತೆ ಆವತ್ತು ನಿಶ್ಚಿತಾರ್ಥದ ದಿವಸ ಇಲ್ಲೇ ಇದ್ರಲ್ಲ... ಮದುವೆ ಮನೆಯಲ್ಲಿ ಕಾಣಲೇ ಇಲ್ವಲ್ಲ" ಎಂದಾಗ ದೀಪಕ್ " ಮದುವೆ ಮನೆ ಅಂದ್ರೆ ತುಂಬಾ ಗಲಾಟೆ .. ಗದ್ದಲ ಇರುತ್ತೆ, ಅದು ಅವರಿಗೆ ಆಗಿ ಬರಲ್ಲ ಅಂತ, ಡ್ಯಾಡಿ, ನಿಶ್ಚಿತಾರ್ಥ ಮುಗಿದ ದಿನವೇ ಅವರನ್ನು ಮತ್ತೆ ವೃದ್ಧಾಶ್ರಮ ಕ್ಕೆ ಬಿಟ್ಟು ಬಂದಿದ್ದಾರೆ " ಎನ್ನುತ್ತಾನೆ. ಅಷ್ಟಕ್ಕೇ ಸುಮ್ಮನಾಗದ  ದಿವ್ಯಾ" ಆ ಅಜ್ಜೀ ನಿಮಗೇನಾಗಬೇಕು?" ಎಂದು ಕೇಳಿದ ಪ್ರಶ್ನೆಗೆ ದೀಪಕ್" ಅವರು ನನ್ನ ತಂದೆಯ
ತಾಯಿ "ಎಂದು ಹೇಳಿದ್ದೇ ತಡ ದಿವ್ಯಾ"  you mean his own mother..?
ಛೇ ...ನಿಮಗ್ಯಾರಿಗೂ ಸಂಸ್ಕಾರ ಅನ್ನೋದು ಏನೆಂದು ಗೊತ್ತಿಲ್ಲ ಅಂತ ಕಾಣುತ್ತೆ... ನೋಡಿ ದೀಪಕ್,  ದೇವಸ್ಥಾನ ಎಷ್ಟೇ ವೈಭವವಾಗಿದ್ದರೂ  ಅದರಲ್ಲಿ ದೇವರ ಮೂರ್ತಿಯೇ ಇಲ್ಲವೆಂದಾಗ ಆ ವೈಭವಕ್ಕೆ ಬೆಲೆ ಯೇ ಇರಲ್ಲಾ, ನಾನಂತೂ ಹಿರಿಯರಿಗೆ  ಗೌರವ ಕೊಟ್ಟು ಅವರನ್ನು ಪ್ರೀತಿ ವಿಶ್ವಾಸ ದಿಂದ ಇರುವುದನ್ನು ಕಲಿತಿದ್ದೇನೆ. ದಯವಿಟ್ಟು ಡ್ಯಾಡಿ ಗೆ ಹೇಳಿ ನಾಳೆನೇ ಅವರನ್ನು ವೃದ್ಧಾಶ್ರಮದಿಂದ ಇಲ್ಲಿಗೆ ವಾಪಸ್ ಕರೆದುಕೊಂಡು ಬರಲು ಹೇಳಿ. ಅವರು ಇಲ್ಲಿ ಬಂದ ನಂತರ ನಿಮ್ಮ ಕೈಯಲ್ಲಿ ಆಗದಿದ್ದರೆ ಅವರು ಇರೋ ತನಕ ನಾನೇ ನೋಡಿಕೊಳ್ಳುವೆ ಅದಕ್ಕಿಂತ ಪುಣ್ಣದ ಕೆಲಸ ಬೇರೆ ಏನಿದೆ ಹೇಳಿ "ಎಂದು ಹೇಳಿದಾಗ ದೀಪಕ್ ತನ್ನ ತಂದೆಯೊಂದಿಗೆ ಮಾತನಾಡಿ ಮರುದಿನ ಅಜ್ಜಿಯನ್ನು ಮನೆಗೆ ಕರೆದು ತಂದಾಗ ದಿವ್ಯಾ "ಈಗ ನೋಡಿ.. ಈ ಮನೆಗೆ ಒಂದು ಕಳೆ ಬಂದಂತಾಯಿತು " ಎನ್ನುತ್ತಾಳೆ.

ಲೇಖಕರು:ಅರವಿಂದ.ಜಿ.ಜೋಷಿ.
      ಮೈಸೂರು
________________________________________
*🌻ದಿನಕ್ಕೊಂದು ಕಥೆ🌻*

"ಯು ಆರ್ ಗ್ರೇಟ್ ಅತ್ತೆ.." (ಮಿನಿ ಕಥೆ)

  ಸಂಜೆ ಕಚೇರಿಯಿಂದ ಬಂದು, ಮನೆಯೊಳಗೆ ಕಾಲಿಡುತ್ತಿದ್ದಂತೆ ಸರಳಾ ಳ ಮೂಗಿಗೆ"ಘಂ"ಎನ್ನುವ ಉಪ್ಪಿಟ್ಟಿನ ಪರಿಮಳ ತಾಕಿದಾಗ "ಆಹ್ಹಾ...! ಇದೇನತ್ತೇ.?."ಎಂದು ಹುಬ್ಬೇರಿಸುತ್ತ ಅಲ್ಲೇ ವರಾಂಡದ ಕುರ್ಚಿ ಮೇಲೆ ಕುಳಿತ ಅತ್ತೆಗೆ ಪ್ರಶ್ನಿಸಿದಳು.ಅದಕ್ಕವರು, "ಹೂಂ.. ತರಕಾರಿ ಹಾಕಿ ಉಪ್ಪಿಟ್ಟು ಮಾಡಿದ್ದೇನೆ"ಎಂದರು."ಹೌದಾ..ನನ್ನ ಫೇವರಿಟ್ ತಿಂಡಿ"ಎನ್ನುತ್ತ ಬೇಗ ಫ್ರೆಶಪ್ಪಾಗಿ ಅಡುಗೆ ಮನೆಗೆ ಬಂದಳು.ಅಷ್ಟರಲ್ಲಿ ಅವಳ ಅತ್ತೆ ಕೂಡ ಅಲ್ಲಿಗೆ ಬಂದಿದ್ದರು.ಅಡುಗೆ ಕಟ್ಟೆ ಮೇಲೆ ದೊಡ್ಡ ಪಾತ್ರೆ ಭರ್ತಿ ಘಮ ಘಮಿಸುವ ಉಪ್ಪಿಟ್ಟು ಕಂಡು,"ಇದೇನತ್ತೇ ಮನೆಲಿ ನೋಡಿದ್ರೆ ಇರೊವ್ರು ಮೂರು ಮತ್ತೊಂದು ಜನ.ಇದನ್ನ ನೋಡಿದ್ರೆ ಏನಿಲ್ಲಾ ಅಂದ್ರೂ ಹದಿನೈದು ಇಪ್ಪತ್ತು ಜನ ತಿನ್ನ ಬಹುದು,ಅಲ್ಲಾ..."ಎಂದು ಮತ್ತಿನ್ನೇನೋ ಹೇಳ ಹೊರಟವಳನ್ನು ಅರ್ಧಕ್ಕೆ ತಡೆದ ಸರಳಾ ಳ ಅತ್ತೆ"ಗೊತ್ತು ಕಣಮ್ಮಾ... ಇಂದು ಏಕಾದಶಿ ನೋಡು, ದೇವಸ್ಥಾನದಲ್ಲಿ ನೇವೇದ್ಯ ಇರಲ್ಲ,ಪಾಪ ಅಲ್ಲಿರೊ ಆಸುಪಾಸಿನ ಬಡವರು ನಿತ್ಯ, ದೇವಸ್ಥಾನದ ಪ್ರಸಾದ ಬಾಯಿ ಚಪ್ಪರಿಸಿಕೊಂಡು ತಿಂತಿದ್ರು,ಈ ದಿನ ಅವ್ರೂ ಯಾಕೆ ಉಪವಾಸ ಇರ್ಬೇಕು ಅಂತ ಅನಿಸ್ತು,ಮನೇಲಿ ಹೇಗೂ ಸಾಕಷ್ಟು ತರಕಾರಿ ಇತ್ತಲ್ಲ,ಅದನ್ನೇ ಹಾಕಿ ಮಾಡಿದೆ.ನೋಡು ಟೇಸ್ಟ ಹೇಗಿದೆ ಅಂತ" ಎನ್ನುತ್ತ ಪ್ಲೆಟಿಗೆ ಹಾಕಿ ಕೊಟ್ಟರು.ಬಿಸಿಯಾದ,ರುಚಿಯಾದ ಉಪ್ಪಿಟ್ಟನ್ನು ತೃಪ್ತಿಯಾಗುವಷ್ಟು ತಿಂದ ಸರಳ" ವೇರಿ ಫೈನ್ ಅತ್ತೆ"ಎಂದು ಹೇಳಿ ಎರಡು ಕ್ಯಾರಿಯರ್ ತುಂಬ ಅದನ್ನು ತುಂಬಿಕೊಂಡು ,ಅತ್ತೆಯ ಜೊತೆಗೆ ಹತ್ತಿರದ ದೇವಸ್ಥಾನದ ಆಸುಪಾಸಿನಲ್ಲಿ ವಾಸವಾಗಿದ್ದ ಬಡಬಗ್ಗರಿಗೆ ತಾನೇ ಖುದ್ದಾಗಿ ಕೊಡುತ್ತ ಬಂದಳು.ಹಸಿದ ಹೊಟ್ಟೆಗಳು ಅದನ್ನು ಸ್ವೀಕರಿಸಿ,ಮೊಗದ ತುಂಬ ನಗೆ ಸೂಸಿದಾಗ,ಸರಳ ಳ ಒಳ ಮನಸ್ಸು"ಅತ್ತೇ..ಯು ಆರ್ ರಿಯಲೀ ಗ್ರೇಟ್.."ಎಂದು ಎನ್ನದೇ ಇರಲಿಲ್ಲ.
                                                   
ಲೇಖಕರು:ಅರವಿಂದ.ಜಿ.ಜೋಷಿ.
                   ಮೈಸೂರು
ಸಂಗ್ರಹ :ವೀರೇಶ್ ಅರಸೀಕೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1055

ದಿನಕ್ಕೊಂದು ಕಥೆ 1059