ದಿನಕ್ಕೊಂದು ಕಥೆ 1087

*🌻ದಿನಕ್ಕೊಂದು ಕಥೆ🌻*

ಶ್ರೀರಾಮ ವನವಾಸದ ಸಮಯದಲ್ಲಿ ಕಾಡಲ್ಲಿ ನಡೆದುಕೊಂಡು ಹೋಗುವಾಗ ಸಾಕ್ಷಾತ್ ವನದೇವಿ ಪ್ರತ್ಯಕ್ಷಳಾಗಿ 'ರಾಮ, ನಿನಗಾಗಿ ನಾನು ಏನು ಸೇವೆ ಮಾಡಬಹುದು' ಎಂದು ಕೇಳುತ್ತಾಳೆ.

ರಾಮ: ನಾನು ಇದುವರೆಗೂ ನಡೆದುಕೊಂಡು ಬರುವಾಗ ದಾರಿಯಲ್ಲಿ ತುಂಬಾ ಮುಳ್ಳುಗಳಿದ್ದವು ಅವುಗಳನ್ನು ತೆಗೆದುಹಾಕು.

ವನದೇವಿ: ನೀನು ಈಗಾಗಲೇ ನಡೆದುಕೊಂಡು ಬಂದ ಜಾಗದಲ್ಲಿ ಮುಳ್ಳು ತೆಗೆದು ಲಾಭವಿಲ್ಲ, ನೀನು ಮುಂದೆ ನಡೆಯುವ ದಾರಿಯಲ್ಲಿ ಮುಳ್ಳು ತೆಗೆಯುತ್ತೇನೆ

ರಾಮ: ಇಲ್ಲ, ಹಿಂದೆ ನನ್ನ ತಮ್ಮ ಭರತ ಬರುತ್ತಿದ್ದಾನೆ. ಅವನಿಗೆ ಮುಳ್ಳು ಚುಚ್ಚಬಾರದು.

ವನದೇವಿ: ಯಾಕೆ ನಿನ್ನ ತಮ್ಮ ಅಷ್ಟು ಬಲಹೀನನಾ?

ರಾಮ: ಇಲ್ಲ, ನನ್ನ ತಮ್ಮ ತುಂಬಾ ಶಕ್ತಿವಂತ. ಈ ಮುಳ್ಳುಗಳು ಅವನಿಗೆ ಚುಚ್ಚಿದರೆ 'ನಮ್ಮಣ್ಣ ಈ ಮುಳ್ಳಿನ ದಾರಿಯಲ್ಲಿ ಹೋದನಾ ಎಂದುಕೊಂಡು ದುಃಖ ಪಡ್ತಾನೆ. ನನ್ನ ತಮ್ಮ ದುಃಖಿತನಾದರೆ ನನಗೆ ನೋವಾಗತ್ತೆ. ಅದಕ್ಕಾಗಿ ಆ ಮುಳ್ಳುಗಳನ್ನು ತೆಗಿ ಎಂದು ಕೇಳಿದೆ.

ಒಂದೇ ತಾಯಿಯ ಹೊಟ್ಟೆಯಲ್ಲಿ ಹುಟ್ಟದಿದ್ದರೂ ರಾಮಾಯಣದಲ್ಲಿ ಅಣ್ಣ ತಮ್ಮಂದಿರು ಎಷ್ಟು ಆಪ್ತವಾಗಿದ್ದರು ಎಂದು ಇದರಿಂದ ತಿಳಿಯುತ್ತೆ.
**************************************
*ಹೆತ್ತವರ ಆಶೀರ್ವಾದ ಮಕ್ಕಳಿಗೆ ಶ್ರೀರಕ್ಷೆ*

ಒಮ್ಮೆ ಅಪ್ಪ ಮಗ ಸಮುದ್ರಯಾನ ಮಾಡ್ತಾ ಇದ್ರು. ದೋಣಿ ಮುಳುಗೋ ಪರಿಸ್ಥಿತಿ ಬಂತು ಹಾಗೂ ಹೀಗೂ ಒಂದು ಸಣ್ಣ ದ್ವೀಪ ತಲುಪುತ್ತಾರೆ. ಈ ಪರಿಸ್ಥಿತಿಯಲ್ಲಿ ದೇವರೇ ನಮ್ಮನ್ನು ಕಾಪಾಡಬೇಕು ಎಂದು ತಂದೆ ಮಗನಿಗೆ ಹೇಳುತ್ತಾ, ನೀನು
ಇಲ್ಲೇ ಎಲ್ಲಾದರೂ ಕುಳಿತುಕೊಂಡು ದೇವರ ಪ್ರಾರ್ಥನೆ ಮಾಡು, ನಾನು ಕೂಡ ಪ್ರಾರ್ಥನೆ ಮಾಡ್ತೀನಿ ಅಂದರು. ಮಗ ದ್ವೀಪದ ಸುತ್ತ ನೋಡಿದ ಅಲ್ಲಿ ನರಪಿಳ್ಳೆ ಇರಲಿ, ಒಂದು ಪ್ರಾಣಿ, ಪಕ್ಷಿಗಳು ಕಾಣಲಿಲ್ಲ .ಅವನಿಗೆ ಹಸಿವಾಗುತ್ತಿತ್ತು . ಕಣ್ಣು ಮುಚ್ಚಿ ಕೈಮುಗಿದು ಆಕಾಶ ನೋಡುತ್ತಾ, ಭಗವಂತ ತಿನ್ನೋದಿಕ್ಕೆ ಒಂದೆರಡು ಹಣ್ಣುಗಳನ್ನಾದರೂ ಕೊಡು ಎಂದು ಪ್ರಾರ್ಥಿಸಿ ಕಣ್ಣು ಬಿಟ್ಟು ನೋಡುತ್ತಾನೆ.
ಏನಾಶ್ಚರ್ಯ ಅವನ ಮುಂದೆ ದೊಡ್ಡ ಹಣ್ಣಿನ ಮರ ಕಂಡಿತು. ಹಣ್ಣು ಕಿತ್ತುಕೊಂಡು ತಿಂದ ಸ್ವಲ್ಪ ಸಮಾಧಾನವಾಯಿತು. ಮತ್ತೆ ಕೈ ಮುಗಿದು ಆಕಾಶದತ್ತ ನೋಡಿ ದೇವಾ ಚಳಿ ಆಗ್ತಾ ಇದೆ ನನಗೊಂದು ಮಲಗೊದಕ್ಕೆ ಗುಡಿಸಲಾದರು ಕೊಡು ಎಂದ
ಕಣ್ಣು ಬಿಟ್ಟ ನೋಡಿದರೆ ಅಚ್ಚುಕಟ್ಟಾದ ಗುಡಿಸಲು ಕಂಡಿತು. ಅವನ ಆನಂದಕ್ಕೆ ಸಾಟಿಯೇ ಇಲ್ಲ. ಈಗ ಆ ಹುಡುಗನಿಗೆ ಅನ್ನಿಸಿತು. ನನ್ನ ಜೊತೆ ಒಬ್ಬ ಹುಡುಗಿ ಇದ್ದರೆ ಎಷ್ಟು ಚೆನ್ನಾಗಿರುತ್ತೆ ಅಂತ ಅಂದುಕೊಂಡು, ಮತ್ತೆ ಆಕಾಶದತ್ತ  ನೋಡಿ ಹೇ ಭಗವಂತ ಒಳಗಿರಲು ಗುಡಿಸಲು ಕೊಟ್ಟೆ ಒಂದು ಸುಂದರವಾದ ಗೆಳತಿಯನ್ನು ಕೊಡು ಎಂದ,  ಇದೇನು ಆಶ್ಚರ್ಯ ಎನ್ನುವಂತೆ, ಸುಂದರವಾದ ಹುಡುಗಿಯೂ ಬಂದಳು. 

ಅವನಿಗೆ ಖುಷಿಯಾಯಿತು ಮತ್ತೆ ಕಣ್ಣು ಮುಚ್ಚಿ ಭಗವಂತ ಇಷ್ಟೆಲ್ಲ ಕೊಟ್ಟಿರುವೆ ಒಂದು ಪುಟ್ಟ ದೋಣಿಯನ್ನು ಕೊಟ್ಟುಬಿಡು, ನನ್ನ ಹೆಂಡತಿ ಜೊತೆ ನಮ್ಮ ಊರು ಸೇರಿಕೊಳ್ಳುತ್ತೇನೆ ಎಂದ. ಹೀಗಂದಿದ್ದೆ ತಡ ನೋಡುತ್ತಾನೆ ಗಟ್ಟಿಮುಟ್ಟಾದ ಪುಟ್ಟ ದೋಣಿ ಕಂಡೀತು. ಸರಿ, ಹೆಂಡತಿಯನ್ನು ಕರೆದುಕೊಂಡು ದೋಣಿಯಲ್ಲಿ ಹೊರಡಲು ತಯಾರಾದ ಆಗ ಒಂದು ಧ್ವನಿ ಕೇಳಿಸಿತು. ಏನಪ್ಪಾ ಎಲ್ಲಾ ನಿನಗೆ ಸಿಕ್ಕಿತು. ನಿನ್ನ ತಂದೆಯನ್ನೇ ಬಿಟ್ಟು ಹೊರಟೆಯಾ?ಎಂದು. ಮಗ ಹೇಳ್ದ ನಮ್ಮಪ್ಪ ಪ್ರಾರ್ಥನೆ ಮಾಡೋಕೆ ನನಗೆ ಹೇಳಿದ ಅವನೇನು ಮಾಡ್ಲೇ ಇಲ್ಲ ಇವೆಲ್ಲಾ ನನ್ನ ಪ್ರಾರ್ಥನೆಯ ಪುಣ್ಯದಿಂದ ಬಂದಿದ್ದು. ಇದರಲ್ಲಿ ನಮ್ಮ ಅಪ್ಪನ ಪುಣ್ಯ ಏನು ಇಲ್ಲ ದೇವರು ನನ್ನ ಪ್ರಾರ್ಥನೆಯನ್ನು ಮಾತ್ರ ಕೇಳಿದ್ದು ಎಂದನು.

ಅಶರೀರವಾಣಿ ನುಡಿಯಿತು. ನಿನ್ನ ತಂದೆ ಪ್ರಾರ್ಥನೆ ಮಾಡಿ, ದೇವರನ್ನು ಕೇಳಿದ್ದು ಏನೆಂದು ನಿನಗೆ ಗೊತ್ತಾ? ಅವರು ಕೇಳಿದ್ದು ಭಗವಂತ, ನನ್ನ ಮಗ ಕೇಳಿದ್ದೆಲ್ಲವನ್ನು ಕೊಡು ಎಂದು ಪ್ರಾರ್ಥನೆ ಮಾಡಿದ್ದರು. ಇದರ ತಾತ್ಪರ್ಯ ಇಷ್ಟೇ ಪ್ರತಿಯೊಬ್ಬ ತಂದೆ ತಾಯಿ  ತಮಗಿಲ್ಲದಿದ್ದರೂ ಪರವಾಗಿಲ್ಲ, ನಮ್ಮ ಮಕ್ಕಳು ಚೆನ್ನಾಗಿರಲಿ ಎಂದು ಆಸೆ ಪಡುವುದು ತಂದೆ ತಾಯಿ ಮಾತ್ರ. 

ಮಾತಾ ಚ ಪಾರ್ವತಿದೇವೀ ಪಿತಾ ದೇವು ಮಹೇಶ್ವರ :
ಭಾಂದವಾ: ಶಿವಭಕ್ತಾಶ್ಚ ಸ್ವದೇಶೋ ಭುವನತ್ರಯಮ್!!

ನಮಗೆ ತಾಯಿ ಪಾರ್ವತಿ ದೇವಿ ತಂದೆ ದೇವನಾದ ಮಹೇಶ್ವರ ಶಿವಭಕ್ತರು ನಮಗೆ ಬಾಂಧವರು, ಮೂರು ಲೋಕಗಳೂ ನಮ್ಮ ಸ್ವದೇಶ.

ಬರಹ:-ಆಶಾ ನಾಗಭೂಷಣ.
ಸಂಗ್ರಹ:ವೀರೇಶ್ ಅರಸೀಕೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1055

ದಿನಕ್ಕೊಂದು ಕಥೆ 1059