ದಿನಕ್ಕೊಂದು ಕಥೆ 1089

*🌻ದಿನಕ್ಕೊಂದು ಕಥೆ🌻*
*ಕಲಿಕೆ  ಎಂಬುದು ಅವರವರ ಇಚ್ಛಾನುಸಾರ*

ಪ್ರತಿಯೊಬ್ಬ ತಂದೆ ತಾಯಿಯ ಆಸೆ, ತಮ್ಮ ಮಗ  ಚೆನ್ನಾಗಿ ಓದಿ ದೊಡ್ಡ ವ್ಯಕ್ತಿಯಾಗಬೇಕೆಂದು.
 ಹೀಗೆ ಒಬ್ಬ ತಂದೆ ತನ್ನ ಮಗ ಡಾಕ್ಟರ್ ಅಥವಾ ಇಂಜಿನಿಯರು ಆಗಬೇಕೆಂದು ಬಯಸಿದ್ದ. ಆದರೆ ಮಗನಿಗೆ  ಚಿತ್ರ ಕಲೆಯಲ್ಲಿ ಆಸಕ್ತಿ . ತಂದೆಗೆ, ಚಿತ್ರಕಲೆಯಿಂದ ಏನು ಸಾಧಿಸಲು ಸಾಧ್ಯ ? ಅದರಿಂದ  ಇವನು ಮುಂದಿನ ಜೀವನ ನಡೆಸಲು ಹೇಗೆ ಸಾಧ್ಯ, ಎಂದು ಅವನಿಗೆ ಅದರ ಬಗ್ಗೆ ಅಸಡ್ಡೆ. ಹಾಗಾಗಿ ಅವನು  ಮಗನಿಗೆ ಇಂಜಿನೀಯರ್ ಅಥವಾ ಡಾಕ್ಟರ್ ಆಗಬೇಕೆಂದು  ಬಲವಂತ ಮಾಡ ತೊಡಗಿದ.ತಂದೆಯ ಈ ವರ್ತನೆಯಿಂದ ಮಗ ಮಂಕಾಗುತ್ತಾ ಬಂದ.  ತನಗಿಷ್ಟವಿಲ್ಲದ ಓದು ಬರಹದಲ್ಲಿ  ಆಸಕ್ತಿ ಕಳೆದುಕೊಂಡ.  

   ಆ ವರ್ಷ ಫೇಲಾಗಿಯೂ ಬಿಟ್ಟ. ಇದನ್ನು ಸಹಿಸಿಕೊಳ್ಳಲು ‌ತಂದೆಯಿಂದ  ಸಾಧ್ಯವಾಗಲ್ಲಿಲ್ಲ. ನನ್ನ ಮರ್ಯಾದೆಯನ್ನು ಕಳೆದ ನೀನು, ಇನ್ನೆಂದಿಗೂ  ನನ್ನನ್ನು ಮಾತನಾಡಿಸಬೇಡ ಎಂದ. ದುಃಖ ಗೊಂಡ ಮಗ, ಇನ್ನಷ್ಟು ಖಿನ್ನತೆಗೆ ಒಳಗಾದ.

    ಒಮ್ಮೆ ಇವನ ಅಜ್ಜ ಇವನನ್ನು ನೋಡಿಕೊಂಡು ಹೋಗಲೆಂದು ಮನೆಗೆ ಬಂದ. ಅವನಿಗೆ  ಮನೆಯ ಪರಿಸ್ಥಿತಿ ಎಲ್ಲವೂ ಅರ್ಥವಾಯಿತು. ಹೇಗಾದರೂ ಮಾಡಿ ಮೊಮ್ಮಗನನ್ನು ಸರಿಪಡಿಸಬೇಕು  ಎನ್ನುವ ಉದ್ದೇಶದಿಂದ, ತನ್ನ ಮಗನನ್ನು ಕೂರಿಸಿಕೊಂಡು ಮಾತನಾಡತೊಡಗಿದ.

    ಮಗನೇ ,ನಿನ್ನ ಕಾಳಜಿ ನನಗೆ ಅರ್ಥವಾಗುತ್ತದೆ. ನನ್ನ ಮಗ ಹೇಗೆ ದೊಡ್ಡ ಮನುಷ್ಯನಾಗಬೇಕೆಂದು ನಾನು  ಆಸೆ ಪಟ್ಟೆನೊ, ಹಾಗೆಯೇ ,ನೀನೂ ಕೂಡ ನಿನ್ನ ಮಗನ ಬಗೆ ಆಸೆ ಪಡುತ್ತಿದ್ದೀಯ, ಅದೇನು ತಪ್ಪಲ್ಲಾ. ಆದರೆ ನಿನಗೊಂದು ಪ್ರಶ್ನೆ ಕೇಳುತ್ತೇನೆ. ನೀನು ಬುದ್ಧಿವಂತ, ಅದಕ್ಕೆ ನೀನು ಉತ್ತರ ನೀಡಬಲ್ಲೆ, ಎನ್ನುತ್ತಾನೆ ಅಪ್ಪ.
  ಅಪ್ಪ ತನಗೆ ಏನು ಪ್ರಶ್ನೆ ಕೇಳಬಹುದು ಎಂಬ ಕುತೂಹಲ ಮಗನದಾದರೆ, ಮೊಮ್ಮಗನಿಗೆ, ಅಜ್ಜನ ಪ್ರಶೆಗೆ, ಅಪ್ಪನ ಉತ್ತರ ಏನಿರಬಹುದು ಎನ್ನುವ ಕುತೂಹಲ.
  ಕಾಡಿನಲ್ಲಿ ಎಲ್ಲಾ ಗಿಡಗಳು ಒಂದೇ ಬಗೆಯಲ್ಲಿರುತ್ತವೆಯೇ? ಎನ್ನುತ್ತಾನೆ ಅಜ್ಜ.
ಆಗ ಅವನ ಮಗ, ಅದು ಹೇಗೆ ಸಾಧ್ಯ?ಪ್ರಕೃತಿಯಲ್ಲಿ ಎಲ್ಲಾ ಬಗೆಯದು ಇರುತ್ತದೆ, ಕೆಲವು ಎತ್ತರಕ್ಕೆ ಬೆಳೆಯುವ ಗುಣವಿದ್ದು, ಕೆಲವಕ್ಕೆ ಅಗಲಕ್ಕೆ ಹರಡುವ ಗುಣವಿರುತ್ತದೆ,  ಕೆಲವಕ್ಕೆ ಹಬ್ಬುವ ಗುಣವಿರುತ್ತದೆ. ಎಲ್ಲವನ್ನೂ ಎತ್ತರಕ್ಕೇ ಇಟ್ಟರೆ, ಹಸು ,ಎಮ್ಮೆ ಜಿಂಕೆ,ಮೊಲಗಳಂತ ಹುಲ್ಲು ‌ಮೇಯುವ ಪ್ರಾಣಿಗಳು ಎಲ್ಲಿ ಹೋಗಬೇಕು? ಎನ್ನುತ್ತಾನೆ .
   ಅಲ್ಲವೇ ಮತ್ತೆ ,ಇಷ್ಟೆಲ್ಲ ಅರ್ಥ ಮಾಡಿಕೊಂಡ ನೀನು ಯಾಕೆ ನಿನ್ನ ಮಗನ ವಿಷಯಕ್ಕೆ ರಂಪಾಟ ಮಾಡುತ್ತಿದ್ದೀಯಾ? ಎಂದ ಅಜ್ಜ.
ಅದು ಹೇಗೆ ಸಾಧ್ಯ? ಮನುಷ್ಯನೇ ಬೇರೆ, ಪ್ರಕೃತಿಯೇ ಬೇರೆ, ಎನ್ನುತ್ತಾನೆ ಮಗ.
  ಇವನ ಮಾತನ್ನು ಕೇಳಿ, ನಗುತ್ತಾ ಅಜ್ಜ, ಅಲ್ಲಪ್ಪಾ ,ಎಲ್ಲರೂ ಇಂಜಿನಿಯರ್, ಡಾಕ್ಟರ್ ಆಗಬೇಕೆಂದರೆ ಹೇಗೆ? ಚಿಂತನೆ ಮಾಡುವವರು, ಮಕ್ಕಳಿಗೆ ವಿಧ್ಯೆಕಲಿಸುವವರು, ಸಮಾಜ ಸುಧಾರಕರು, ಕಲಾವಿದರು, ಶ್ರಮಜೀವಿಗಳು, ರೈತರು ಇಲ್ಲದಿದ್ದರೆ, ನಮ್ಮ ಸಮಾಜ ಇದೆಯೇ? ಓದು ಅವರವರಿಗೆ ಬಿಟ್ಟಿದ್ದು, ಅವರವರಿಗೆ ಆಸಕ್ತಿ ಇರುವ ವಿಷಯವನ್ನು ಆಯ್ಕೆ ಮಾಡಿ ಓದಬೇಕಲ್ಲವೇ? ನಿನ್ನ ಮಗ ದೊಡ್ಡ ಮರ ಆಗಿ ಎತ್ತರಕ್ಕೆ ಬೆಳೆಯಬೇಕು ಎನ್ನುವುದು ನಿನ್ನ ಆಸೆ, ಆದರೆ ಅವನಿಗೆ ಬಳ್ಳಿಯಂತೆ ಹಬ್ಬುವ ಆಸೆಯಿದೆ, ಅವನು ಸಮಾಜದ ಸ್ಥಿತಿಗತಿಗಳನ್ನು ತಿಳಿಸಿಕೊಡಬಲ್ಲ ಕಲಾವಿದ ನಾಗ ಬಯಸಿದ್ದಾನೆ. ಇದು ದೊಡ್ಡದೇ ಅಲ್ಲವೇ? ಇವತ್ತಿಗೂ ಚಿತ್ರ ಕಲಾವಿದ ರವಿವರ್ಮ, ಲಿಯೋನಾರ್ಡ್ ಡಾವಿಂಚಿಯಂಥ ಕಲಾವಿದರನ್ನು ಜಗತ್ತು ನೆನಪಿಸಿಕೊಳ್ಳದೆ? ನಿನ್ನ ಮಗನದ್ದೂ ಬೆಳವಣಿಗೆಯೇ  ಅಲ್ಲವೇ, ಮಕ್ಕಳ ಮೇಲೆ ನಮ್ಮ ಮನಸ್ಸಿನಲ್ಲಿದ್ದುದ್ದನ್ನು ಹೇರಬಾರದು. ಅವರನ್ನು ಸ್ವತಂತ್ರವಾಗಿ ಬಿಡಬೇಕು ಎಂದು ಹೇಳಿದ.

   ಅಪ್ಪನ ಮಾತುಗಳನ್ನು ಕೇಳಿದ ಮಗನಿಗೆ, ತನ್ನಪ್ಪನ ಮಾತು  ಸರಿ ಎನಿಸಿತು.ಇನ್ನೆಂದಿಗೂ ಮಗನ ಆಸೆಗೆ ಅಡ್ಡಗಾಲು ಹಾಕಬಾರದೆಂದು ತೀರ್ಮಾನಿಸಿದ. ಹಾಗೇನಾದರೂ ತಾನು ಒತ್ತಾಯ ಮಾಡಿದರೆ ,ಮಗ ತನ್ನ ಕೈ ಬಿಟ್ಟು  ಹೋಗಬಹುದೆಂದೆನಿಸಿತು ಅವನಿಗೆ.

   ಪ್ರತಿಯೊಬ್ಬ ತಂದೆ ತಾಯಿಗೂ ತಮ್ಮ ಮಕ್ಕಳು, ಹೀಗೇ ಆಗಬೇಕೆಂಬ  ಕನಸು ಇದ್ದೇ ಇರುತ್ತದೆ. ಮಕ್ಕಳಿಗೂ ಕೂಡಾ ಅವರ ಇಚ್ಛೆಯಂತೆ ನೆಡೆದುಕೊಳ್ಳುವ‌  ಮನಸ್ಸಿದ್ದರೆ  ತೊಂದರೆಯೇನೂ ಇಲ್ಲ, ಆದರೆ ಮಕ್ಕಳ ಇಚ್ಛೆ ಬೇರೆಯಾಗಿದ್ದಾಗ ಅವರನ್ನು ತಮ್ಮಿಷ್ಟದಂತೆ   ಒತ್ತಾಯಿಸುವುದು ಅಷ್ಟು ಸಮಂಜಸವಲ್ಲ.

ಕೃಪೆ:ಸುವರ್ಣಾ ಮೂರ್ತಿ.
ಸಂಗ್ರಹ:ವೀರೇಶ್ ಅರಸೀಕೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1092

ದಿನಕ್ಕೊಂದು ಕಥೆ 1097