ದಿನಕ್ಕೊಂದು ಕಥೆ 1090

*🌻ದಿನಕ್ಕೊಂದು ಕಥೆ🌻*
*ಚುಕ್ತಾ*

ಪಟ್ಟಣದ ಸರ್ಕಾರಿ ಶಾಲೆಯಲ್ಲಿ ಎಂಟನೇಯ ತರಗತಿ ಯಲ್ಲಿ ಓದುತ್ತಿದ್ದ ಶಾರದಾ,
ದಿನ ನಿತ್ಯ  ಸುಮಾರು ನಾಲ್ಕು ಕಿಮೀ ದೂರದ ತನ್ನ ಹಳ್ಳಿಯಿಂದ ನಡೆದು ಬರುತ್ತಿದ್ದಳು.ಆಕೆ ಆಟ-ಪಾಠ ಮತ್ತಿತರೇ ಶಾಲಾ ಚಟುವಟಿಕೆಗಳಲ್ಲಿ ಮಾಡಿದ ಅದ್ಭುತ  ಸಾಧನೆ ಪರಿಗಣಿಸಿದ ಪಟ್ಟಣದ ರೋಟರಿ ಸಂಸ್ಥೆ ಯವರು ಅಂದು ಶಾಲಾವರಣದಲ್ಲಿ ಇರಿಸಿಕೊಂಡಿದ್ದ ಸಮಾರಂಭದಲ್ಲಿ ಶಾರದಾಳಿಗೆ ಪ್ರತಿಭಾ ಪುರಸ್ಕಾರ ಪ್ರಶಸ್ತಿ ಪ್ರದಾನ ಮಾಡಿದ್ದರು.ಅಂದು ಅವಳಿಗೆ ಪ್ರಶಸ್ತಿ ಪತ್ರ ದೊಂದಿಗೆ
ನಗದು ಹಣ ಐನೂರು ರೂಪಾಯಿ  ಕೂಡ ಕೊಟ್ಟು ಪ್ರೋತ್ಸಾಹಿಸಿದ್ದರು.ತನ್ನ ಕಲ್ಪನೆಯಲ್ಲೂ, ಊಹಿಸದ ಶಾರದಾ,ಆ ಪ್ರಶಸ್ತಿ ಸ್ವೀಕರಿಸಿದಾಗ ಹರ್ಷಚಿತ್ತಳಾಗಿ ಅವಳಿಗೆ ಅರಿವಿಲ್ಲದೇ ಆನಂದ ಭಾಷ್ಪ ಸುರಿಸುತ್ತಿದ್ದಳು.ಅಧ್ಯಕ್ಷರ ಸೂಚನೆಯಂತೆ ಎರಡು ಮಾತು ಹೇಳು ಎಂದಾಗ ಮುಗ್ಧ ಮನಸ್ಸಿನ ಶಾರದಾ, ತನಗೆ ಕೊಟ್ಟ ಪ್ರಶಸ್ತಿಯನ್ನು ಎರಡೂ ಕೈಯಲ್ಲಿ ಹಿಡಿದು ನೆರೆದ ಜನಗಳಿಗೆ ತೋರಿಸುತ್ತ "ಇದೆಲ್ಲಾ.. ನನ್ನ ಅಮ್ಮನ ಪ್ರೇರಣೆ ಹಾಗೂ ಗುರುಗಳ ಪ್ರೋತ್ಸಾಹ ಮತ್ತು ಆಶೀರ್ವಾದದ ಫಲ "ಎಂದಷ್ಟೇ ಹೇಳಿ,ಹಸನ್ಮುಖಳಾಗಿ ತನ್ನ ಸೀಟಿನ ಮೇಲೆ ಹೋಗಿ ಕುಳಿತಳು.ಆ ಕಾರ್ಯಕ್ರಮ ಮುಗಿಯಲು ಇನ್ನೂ ಕನಿಷ್ಠ ಒಂದು ಗಂಟೆ ಬೇಕಿತ್ತು.ಇತ್ತ ಶಾರದಾ ಮನದಲ್ಲಿ", ಯಾವಾಗ ಕಾರ್ಯಕ್ರಮ ಮುಗಿಯತ್ತೋ... ಯಾವಾಗ ತಾನು ಅಮ್ಮನಿಗೆ ವಿಷಯ ತಿಳಿಸೇನು"ಎಂದು ಚಡಪಡಿಸತೊಡಗಿದ್ದಳು.
ಅಂತೂ ಆ ಕಾರ್ಯಕ್ರಮ ಮುಗಿದ ನಂತರ, ಶಾರದಾ ಎಂದಿಗಿಂತ ಬೇಗ ಬೇಗನೆ ಹೆಜ್ಜೆ ಹಾಕುತ್ತ ತನ್ನ ಹಳ್ಳಿ ಸೇರಿದಳು. ಅಷ್ಟರಲ್ಲಿ ಇವಳಿಗೆ ಶಾಲೆಯಲ್ಲಿ ಪ್ರಶಸ್ತಿ ನೀಡಿದ ವಿಚಾರ ಅಲ್ಲಿ ಕೆಲವರಿಗೆ ಗೊತ್ತಾಗಿತ್ತು.ಹೀಗಾಗಿ ಅವಳ ಎದುರಿಗೆ ಸಿಕ್ಕವರು
"ತುಂಬಾ ಸಂತೋಸಾ ಶಾರೀ..ಹಿಂಗೇ ಓದಿ ಮುಂದಕ್ ಬಾ.."ಎಂದು ಹಾರೈಸುತ್ತಿದ್ದರು.ಆದರೆ ಶಾರದಾಳಿಗ ತನ್ನ ಅಮ್ಮನನ್ನು ಕಂಡು ವಿಚಾರ ಹೇಳುವ ತವಕ ಇದ್ದುದರಿಂದ ಎಲ್ಲರಿಗೂ "ಹೂಂ..ಹೂಂ.."ಎನ್ನುತ್ತ ಮನೆ ಬಳಿ ಬಂದು ನೋಡಿದಾಗ ಬಾಗಿಲಿಗೆ ಬೀಗ! ಮನದಲ್ಲಿ"ಛೇ..ಎಲ್ಲಿ ಹೋದಳು ಅಮ್ಮ..?ಎಂದುಕೊಳ್ಳುತ್ತಲೇ ಪಕ್ಕದ ಮನೆಯ ಅಜ್ಜಿಯನ್ನು ಕೇಳೀದಾಗ ಅವರು "ಈಗ ಒಂದ ಅರ್ಧಾ ಗಂಟೆ ಹಿಂದೆ ಶೆಟ್ಟರ ಅಂಗಡಿ ಕಡೆ ಹೋಗಿ ಬರ್ತಿನಿ ಅಂತ ಹೇಳಿ 
ಹೋಗಿದ್ದಾಳೆ"ಎಂದು ಉತ್ತರಿಸಿದರು.ಬೆನ್ನಿನ ಮೇಲಿದ್ದ ಭಾರದ ಬ್ಯಾಗನ್ನೂ
ಹೊತ್ತು ಕೊಂಡ ಶಾರದಾ, ಲಗುಬಗೆಯಿಂದ ಎರಡನೇಯ ಬೀದಿಯಲ್ಲಿದ್ದ ರಂಗಾ ಶೆಟ್ಟ ಅಂಗಡಿ ಬಳಿ ಧಾವಿಸಿ ಬಂದಳು.ಅಲ್ಲಿ ಅಷ್ಟು ದೂರದಿಂದಲೇ ಆಕೆಯ ತಾಯಿ
ಕೈಯಲ್ಲಿ ಖಾಲಿ ಬ್ಯಾಗ್ ಹಿಡಿದು ನಿಂತಿದ್ದು,ಆ ಶೆಟ್ಟರ ಅಂಗಡಿಯಾತ ತನ್ನ ಒಡಕಲು ಧ್ವನಿ ಯಿಂದ ಜೋರಾಗಿ ಆಕೆಯ ತಾಯಿಗೆ ಹೀನಾಯವಾಗಿ ನಿಂದಿಸುತ್ತ-"ನೋಡು
ನಿಂಗೀ ನಾನೇನು ಅಂಗಡಿ ಸಾಮಾನು ದಾನಾ ಮಾಡೊಕ್ಕೆ ಇಟ್ಕೊಂಡಿದಿನಿ ಅಂತ ತಿಳ್ಕೊಂಡಿದಿಯಾ?ಏನೋ ಕಷ್ಟ ಅಂತ ಬಂದು ಹೇಳ್ಕೊಂಡೀ.. ನೀನು ಕೇಳಿದ್ದು ಸಾಮಾನು ಸಾಲವಾಗಿ ಕೊಟ್ಟೇ.. ಆದರೆ ನೀ ಬಂದಾಗೆಲ್ಲ ಹಳೇ ಬಾಕಿ ಚುಕ್ತಾ ಮಾಡು ಅಂತ ಕೇಳಿದ್ರೆ ಬರೀ ನಾಳೆ.. ನಾಳೆ. ಅಂತಿದಿಯಲ್ಲಾ, ನಾನೇನು ಇರ್ಬೇಕೋ ಇಲ್ಲಾ ಅಂಗ್ಡಿ ಬಾಕ್ಲು ಹಾಕ್ಕೊಂಡು ದೇಶಾಂತರ ಹೋಗ್ಬೇಕೊ ಹೇಳು.
ನೋಡು ಈಗ ಹಿಂಗ್ ಇಲ್ಲಿ ನಿಂತ್ಕೋ ಬ್ಯಾಡಾ ಹೋಗು ಮೊದಲು ಬಾಕಿ ಹಣ ಮುನ್ನುರಾ ಎಂಬತ್ತು ತಕ್ಕೊಂಡ ಬಾ.."ಎನ್ನುವುದನ್ನು ಕೇಳಿಸಿಕೊಂಡ ಶಾರದಳ ಮನಸ್ಸು ತಡೆಯಲಾಗಲಿಲ್ಲ . ಸರಸರನೆ ಅಂಗಡಿ ಮುಂದೆ ಬಂದು ನಿಂತು ಶೆಟ್ಟರಿಗೆ"ಎಷ್ಟು ಬಾಕಿ ಕೊಡಬೇಕು ನನ್ನ ಅಮ್ಮ? ಎಂದಾಗ ಆತ "ಅದೇನು ನೀ  ಚುಕ್ತಾ ಮಾಡ್ತಿಯಾ?"ಎಂದು ವ್ಯಂಗ್ಯವಾಗಿ ಕೇಳಿದಾಗ ಶಾರದಾ ಕುದಿಯುತ್ತಿದ್ದ ಮನಸ್ಸಿನಿಂದ "ಹಾಂ ಹೌದು ನಾನೇ ಚುಕ್ತಾ ಮಾಡ್ತೇನೆ"ಎನ್ನುತ್ತ ಯೂನಿಫಾರ್ಮ್ ಜೇಬಿನಿಂದ ಐನೂರು ರೂಪಾಯಿ ಆತನಿಗೆ ಕೊಡುತ್ತ "ನಿಮ್ಮ ಬಾಕಿ ಚುಕ್ತಾ ಮಾಡ್ಕೊಂಡು ಉಳಿಕೆ ಹಣ ಅಮ್ಮನ ಕೈ ಗೆ ಕೊಡಿ" ಎಂದಳು.ಅಷ್ಟಕ್ಕೇ ಸುಮ್ಮನಿರದ ಆ ಶೆಟ್ಟಿ "ನಿನ್ನ ಹತ್ರ ಇಷ್ಟೊಂದು ದುಡ್ಡು ಹ್ಯಾಗ ಬಂತು?"ಎಂದು ಪ್ರಶ್ನಿಸಿದಾಗ ಆಕೆ " ಅದೆಲ್ಲಾ  ನಿಮಗ್ಯಾಕೆ? ನಿಮ್ಮ ಬಾಕಿ ಚುಕ್ತಾ ಆಯ್ತಲ್ಲ ಅಷ್ಟು ನೋಡ್ಕೊಳ್ಳಿ "ಎಂದು ಹೇಳುತ್ತಿದ್ದಂತೆ ಆಕೆ ಅಮ್ಮನೂ ಕುತೂಹಲದಿಂದ ಶೆಟ್ಟಿ ಕೇಳಿದ ಪ್ರಶ್ನೆ ಯನ್ನೇ ಮಗಳಿಗೆ  ಕೇಳಿದಾಗ, ಶಾರದಾ "ತಾಳು ಒಂದ್ನಿಮಿಷ "ಎನ್ನುತ್ತ ತನ್ನ ಬ್ಯಾಗಿನಿಂದ ಅಂದು ತನಗೆ ಬಂದ ಪ್ರಶಸ್ತಿ ಪತ್ರ ತೋರಿಸಿ ಅದರೊಂದಿಗೆ ಐನೂರು ರೂಪಾಯಿ ನಿಡಿರುವ ವಿಚಾರವನ್ನೂ ತಿಳಿಸಿದಾಗ,ಆಕೆಯ ತಾಯಿ  ಆನಂದ ಭಾಷ್ಪ ಸುರಿಸುತ್ತ ಆಶ್ಚರ್ಯ ದಿಂದ"ಹೌದಾ ಮಗಾ.. ನನ್ನಮ್ಮ ಎಷ್ಟು ಜಾಣೆ ಎಂದು ಬಿಗಿದಪ್ಪಿ ಮುದ್ದಾಡುತ್ತಿರುವುದನ್ನು ಕಂಡ ಆ ಶೆಟ್ಟಿ ತನ್ನ ಮಾತಿನ ವರಸೆ ಬದಲಾಯಿಸಿದವ"ಅವ್ವೋ ..ನಿಂಗವ್ವಾ.. ಬ್ಯಾಸ್ರಾ ಮಾಡ್ಕೊಬ್ಯಾಡಾ.. ನಿನಗೇನು ಸಾಮಾನು ಬೇಕೊ ಅದನ್ನ ತಕ್ಕೊಂಡು ಹೋಗು..ಬಾ."ಎಂದು ಕೂಗಲು ಆರಂಭಿಸಿದಾಗ ಶಾರದ"ಸಾಕು ಬಾಮ್ಮಾ.. ಬಾಕಿ ಎಲ್ಲಾ ಚುಕ್ತಾ ಆಯ್ತಲ್ಲ..ನಡೀ ಮನೆ ಕಡೆ ಹೋಗೋಣ" ಎನ್ನುತ್ತ ಸಂತೊಷದಿಂದ ತಾಯಿಯ ಜೊತೆ ಮನೆ ಕಡೆಗೆ ಹೆಜ್ಜೆ ಹಾಕಿದಳು.
                                        
ಲೇಖಕರು:ಅರವಿಂದ.ಜಿ.ಜೋಷಿ.
******************************************
*ಅಹಮಿಕೆ*

ಅಂದು ಆಕಾಶ್ ಇದ್ದಕ್ಕಿದ್ದಂತೆ ಕಚೇರಿಯಿಂದ ಮಧ್ಯಾಹ್ನ ವೇ ಬಂದಿದ್ದ. ಆ ರೀತಿ ಬಂದವನನ್ನು ಕಂಡ ಆತನ ಪತ್ನಿ ನಳಿನಿ ಗೆ -ಅದೇಕೋ ಆತ ತುಂಬ ಚಿಂತಿತನಾಗಿರುವಂತೆ  ಏನಿಸತೊಡಗಿತ್ತು .ತುಸು ಗಾಬರಿ ಸ್ವರದಲ್ಲಿ " ಯಾಕೆ.. ಏನಾಯ್ತು? ಮೈ ಗೆ ಹುಷಾರಿಲ್ವಾ?"ಎಂದು ಕೇಳಿದಾಗ ಆತ " ನನಗೇನಾಗಿಲ್ಲ ಸರಿಯಾಗೇ ಇದ್ದೀನಿ, ಆದರೆ...."ಎಂದು ಹೆಳ ಹೊರಟವನನ್ನು ಅರ್ಧಕ್ಕೆ ತಡೆದ ನಳಿನಿ " ಆದರೆ ಅಂದ್ರೆ ಏನು?"ಎಂದು ಪ್ರಶ್ನಿಸುತ್ತಾಳೆ. ಆಕಾಶ್ ನ ಹಣೆಯ ಮೇಲೆ ಸಾಲುಗಟ್ಟಿ ಬರುತ್ತಿದ್ದ ಬೆವರು ಹನಿಗಳು ಮುಂದೆ ಯಾವುದೋ ತೊಂದರೆ ಇದೆ ಎಂದು ಸೂಚಿಸುವಂತೆ ಇದ್ದವು." ಯಾಕೆ... ಏನೂ ಮಾತಾಡ್ತಾ ಇಲ್ಲಾ?"  ಎಂದು ನಳಿನಿ ಎರಡು ಮೂರು ಬಾರಿ ಕೇಳಿದಾಗಲೂ ಆಕೆಗೆ ಉತ್ತರಿಸುವ ಸ್ಥಿತಿ ಕಂಡು ಬರಲಿಲ್ಲ.ಕೆಲ ನಿಮಿಷಗಳ ನಂತರ ಸುಧಾರಿಸಿಕೊಂಡವ ತನ್ನಲ್ಲಿದ್ದ ಧೈರ್ಯ ಒಗ್ಗೂಡಿಸಿ " ನಿನ್ನ ತಂದೆ ಕಡೆಯಿಂದ ಫೋನ್ ಕಾಲ್ ಬಂದಿತ್ತು...." ಎಂದಾಗ ಇನ್ನಷ್ಟು ಗಾಬರಿಗೊಂಡ ನಳಿನೀ" ಎಲ್ಲಾ ಸರಿ ಇದೆ ತಾನೆ..?"ಎಂದು ದಿಗಿಲಿನಿಂದ ಪ್ರಶ್ನೆ ಮಾಡಿದಾಗ ಆತ ಮ್ಲಾನ ಮನಸ್ಸಿನಿಂದಲೇ " ಏನಿಲ್ಲಾ... ಎಲ್ಲಾ ಸರಿ ಇದೆ.. ಆದರೆ, ಅವರು ಕಿಶನ್ ನೊಂದಿಗೆ ಜಗಳವಾಯ್ತು.. ಆತ ಬೇರೆ ಹೋಗಲು ಬಯಸುತ್ತಿದ್ದಾನೆ ಎಂದು  ಹೇಳಿದ್ದರು" ಅಂತ ಹೇಳಿ ಮುಗಿಸಿದ್ದೇ ತಡ,-"ಆ ಕಿಶನ್ನ ನನಿಗೆ ತಲೆ ಗಿಲೆ ಕೆಟ್ಟಿದೆಯಾ ಅಲ್ಲಾ.. ಮದುವೆ ಆಗಿ ನೆಟ್ಟಗೆ ಮೂರು ತಿಂಗಳೂ ಆಗಿಲ್ಲಾ... ಆಗಲೇ ಅಪ್ಪ ಅಮ್ಮ ನಿಂದ ಬೇರೆ ಹೋಗೋ ಬಗ್ಗೆ ಮಾತಾಡ್ತಿದ್ದಾನಾ" ಎಂದು ಕೋಪದಿಂದ ನುಡಿಯುತ್ತಾಳೆ. ಆಗ ಆಕಾಶ್ " ನನಗೇನೋ ಕಿಶನ್ ಯೋಚಿಸಿದ್ದು ಸರಿ ಅನಿಸ್ತಾ ಇದೆ... ನಿಮ್ಮ ಅಪ್ಪ ಅಮ್ಮ ನೇ ಏನಾದರು ತಪ್ಪು ಮಾಡಿರಬಹುದು "ಎಂದು ಹೇಳಿದಾಗ ನಳಿನಿ ಸ್ವಲ್ಪ ಏರು ಸ್ವರದಲ್ಲಿ" ಏನ್ರೀ... ನೀವು ಈ ಥರಾ ಮಾತಾಡ್ತಿರೋದು?, ನಾನು ಹುಟ್ಟಿದಾಗಿನಿಂದ ಅಪ್ಪ ಅಮ್ಮ ನ ನೋಡ್ತಾನೇ ಬಂದಿದೀನಿ.. ಅವರು ಏನು ಅಂತ ನನಗೆ ತುಂಬಾ ಚೆನ್ನಾಗಿ ಗೊತ್ತು, ಅವರು ಇಂಥಾ ತಪ್ಪು ಮಾಡಲು ಸಾಧ್ಯನೇ ಇಲ್ಲಾ... ನನನ್ನು ಇಷ್ಟು ದೊಡ್ಡವಳನ್ನಾಗಿ ಬೆಳೆಸಿರೋದು ನೋಡಿದ್ರೆ ಅವರು ತಪ್ಪು ಮಾಡಿದ್ದಾರೆ ಅಂತ ಅನ್ಸತ್ತಾ?" ಎಂದಾಗ ಆಕಾಶ್ ಕೂಲಾಗಿ" ನೋಡು... ಈ ವಿಷಯದಲ್ಲಿ ನಾವೇನು ಮಾಡೊಕ್ಕಾಗತ್ತೆ ಹೇಳು ನೋಡೋಣಾ "ಎಂದು ಉತ್ತರಿಸಿದ ಬಳಿಕ ಆಕೆ"ಅದೇ ಸ್ವರದಲ್ಲಿ " ನಾನು ಈಗಲೇ ಅವನ ಹತ್ರ ಹೋಗಿ ಈ ಥರಾ ಯೋಚನೆ ಮಾಡೋಕೆ ಧೈರ್ಯ ಎಲ್ಲಿಂದ ಬಂತು ಅಂತ ಕೇಳ್ತೀನಿ" ಎಂದು ಎನ್ನುತ್ತಾಳೆ. ಪುನಃ ಆಕಾಶ್ - "ನಳಿನಿ.. ಈ ಒಂದು ಸಂದರ್ಭದಲ್ಲಿ ನೀ ಅಲ್ಲಿಗೆ ಹೋಗೋದು ಸರೀನಾ,? ಯೋಚನೆ ಮಾಡು" ಎಂದಾಗ ಆಕೆ " ರ್ರೀ... ನನಗದೆಲ್ಲಾ ಗೊತ್ತಿಲ್ಲ ನಾನು ಅಲ್ಲಿಗೆ ಹೋಗಬೇಕು ಅಷ್ಟೇ. ಹೋಗ್ತೀನಿ ಗೊತ್ತಾಯ್ತಾ... " ಎನ್ನುತ್ತಾಳೆ.
    ಈ ಒಂದು ಪರಿಸ್ಥಿತಿ ಯಲ್ಲಿ ಆಕಾಶ್ ಆಕೆಯನ್ನು ಯಾವ ರೀತಿ ತಡೆದರೂ ಪ್ರಯೋಜನ ಆಗಲ್ಲ ಎಂದು ಅರಿತವ ಆಕೆಯನ್ನು ತನ್ನ ಕಾರಿನಲ್ಲಿ ಕರೆದುಕೊಂಡು 
ಆಕೆ ತವರು ಮನೆಗೆ ಹೊರಡುತ್ತಾನೆ.
ಕಿಶನ್, ನಳಿನಿಯ ಒಬ್ಬನೇ ತಮ್ಮನಾಗಿದ್ದು ಆತನ ಮದುವೆ ಕಳೆದ ಎರಡೂವರೆ ತಿಂಗಳ ಹಿಂದೆ ನಡೆದಿರುತ್ತದೆ. ಆಕಾಶ್ ಮತ್ತು ನಳಿನಿ ಮದುವೆ ಆಗಿ ಎರಡು ವರ್ಷ ಆಗಿರುತ್ತದೆ.
 ಆಕಾಶ್ ನ ಕಾರು ನಳಿನಿಯ ತವರು ಮನೆ ಮುಂದೆ ಬಂದು ನಿಲ್ಲುತ್ತಿದ್ದಂತೆ ಆಕೆ ಲಗುಬಗೆಯಿಂದ ಕಾರಿನಿಂದ ಇಳಿದು ಮನೆ ಒಳಗೆ ಕಾಲಿಡುತ್ತಾಳೆ .ಹಜಾರದ ಸೋಫಾ ಮೇಲೆ ಆಕೆಯ ತಂದೆ ಕುಳಿತಿರುತ್ತಾರೆ.ಮುನಿಸಿಕೊಂಡೇ ಒಳಗೆ ಬಂದ ನಳಿನಿ " ಅಪ್ಪಾ... ಕಿಶನ್ ಎಲ್ಲಿ..? ಅವನಿಗೇನು ತಲೆ ಸರಿ ಇಲ್ವಾ..? ಎಷ್ಟು ಧೈರ್ಯ ಬಂತು ಅವನಿಗೆ ನಿಮ್ಮಿಂದ ಬೇರೆ ಹೋಗ್ತೀನಿ ಅನ್ನೋಕೆ? ಯಾಕೆ ಅಂಥಾ ಯೋಚನೆ ಬಂತು ಅವನಿಗೆ?"ಎಂದು ಒಂದೇ ಉಸಿರಿನಲ್ಲಿ ಗುಡುಗಿದಾಗ ಆಕೆಯ ತಂದೆ ಶಾಂತಚಿತ್ತದಿಂದ ಅವಳ ಮುಖ ನೋಡುತ್ತ ನಿಧಾನವಾಗಿ "ಇದೇನು ನಳಿನಿ
ಏನು ಹೇಳ್ತಿದ್ದೀ ನೀನು... ಯಾರು ನಿನಗೆ ಹೇಳಿದ್ರು ಕಿಶನ್ ನಮ್ಮಿಂದ ಬೇರೆ ಹೋಗ್ತಾನೆ ಅಂತ?"ಎಂದು ಹೇಳುತ್ತಿದ್ದಾಗ ಅಡುಗೆ ಮನೆಯಲ್ಲಿ ಇದ್ದ ಕಿಶನ್ ನ
ಹೆಂಡತಿ ಈಚೆಗೆ ಬಂದವಳು ಪ್ರಿತ್ಯಾದರದಿಂದ " ಬನ್ನಿ ಅಕ್ಕಾ.. ಯಾವಾಗ ಬಂದ್ರಿ
ಕೂತ್ಕೊಳ್ಳೀ.. "ಎಂದು ಹೇಳಿದಾಗ ಅವಳನ್ನು ದುರುಗುಟ್ಟಿ ನೋಡಿದ ನಳಿನಿ ಗೆ
 ಮನದಲ್ಲಿ "ಇಲ್ಲಿ ಎಲ್ಲಾ ಸರಿಯಾಗೇ ಇದೆಯಲ್ಲ..."ಎಂದು ಅಂದು ಕೊಳ್ಳುತ್ತ ಒಮ್ಮೆ ಮುಂಬಾಗಿಲಿನತ್ತ ನೋಡುತ್ತಾಳೆ. ಅಲ್ಲಿ ಆಕೆಯ ಪತಿ ಆಕಾಶ್ ಬಂದು ನಿಂತಿರುತ್ತಾನೆ. ಆತನನ್ನು ಕಂಡವಳು ಆತನಿಗೆ ಪ್ರಶ್ನೆ ಕೇಳುವ ಮೊದಲೇ ಆಕಾಶ್
ಅವಳಿಗೆ -" ನಳಿನಿ... ನಾನು ನಿನ್ನ ಹತ್ರ ಸುಳ್ಳು ಹೇಳಿದ್ದೆ" ಎಂದು ಹೇಳ ಹೊರಟವರನನ್ನು ಆಕೆ " ಅದೇ ಯಾಕೆ? ಎಂದು ಕೇಳುವ ಹೊತ್ತಲ್ಲಿ ಇತ್ತ
ಆಕೆಯ ತಂದೆ, ಕಿಶನ್ ನ ಹೆಂಡತಿ ಇಬ್ಬರೂ ಏನಾಗಿದೆ ಅಂತ ಹೇಳಹೊರಟಾಗ
 ಪೂಜಾ ಕೋಣೆಯಲ್ಲಿ ಇದ್ದ ನಳಿನಿ ತಾಯಿ ಕೂಡ ಹಜಾರದಲ್ಲಿ ಬಂದು ಪತಿ ಯ
ಪಕ್ಟ ಕೂರುತ್ತಾರೆ.ಆಗ ಆಕಾಶ್ -" ನೋಡು ನಳಿನಿ... ನನ್ನ ತಂದೆ ತಾಯಿ ಕೂಡ ಯಾವ ತಪ್ಪೂ ಮಾಡಿಲ್ಲ ನಾನೂ ಸಹಾ ಅವರೊಂದಿಗೆ ಜನ್ಮ ದಿಂದಲೂ ಇದ್ದೇನೆ
ಇಂದು ನಿನ್ನಿಂದಾಗಿ ಯೇ ನಾನು ಅವರಿಂದ ದೂರ ಆಗಬೇಕಾಗಿ ಬಂದಿದ್ದು " ಎಂದು ಹೇಳುತ್ತಿದ್ದಂತೆ ನಳಿನಿ ಗೆ ಎಲ್ಲವೂ ಅರ್ಥ ವಾಗಿ ಕಣ್ಣಂಚಿನಲ್ಲಿ ನೀರು ತುಂಬಿ ಬಂದು" ಸ್ಸಾರಿ.. ಕಣ್ರೀ, ಈಗಲೇ ಅಪ್ಪ ಅಮ್ಮ ನ ಬಳಿ ಹೋಗಿ ಅವರ ಮನಸ್ಸು ಒಲಿಸಿ ಮತ್ತೆ ನಮ್ಮ ಮನೆಗೆ ಕರೆದು ತರೋಣ ಬನ್ನೀ " ಎಂದು ಹೇಳಿದಾಗ
ಆಕಾಶ್" ನನಗೆ ಚೆನ್ನಾಗಿ ಗೊತ್ತಿತ್ತು ನೀನು ಒಂದಲ್ಲ ಒಂದು ದಿನ ನಿನ್ನ ಅಹಮಿಕೆಯಿಂದ ಈಚೆ ಬಂದು  ವಾಸ್ತವ ಅರ್ಥ ಮಾಡಿಕೊಳ್ಳುವಿ " ಎನ್ನುತ್ತ
ಮನೆಯಲ್ಲಿ ಅತ್ತೆ ಮಾವ ಎಲ್ಲರಿಗೂ ಕಣ್ಣಲ್ಲೇ ಧನ್ಯವಾದಗಳನ್ನು ತಿಳಿಸಿ ಪತ್ನಿಯೊಂದಿಗೆ ದೊಡ್ಡಮ್ಮ ಮನೆಯಲ್ಲಿದ್ದ ಅಪ್ಪ ಅಮ್ಮ ನನ್ನು ಕರೆತರಲು ಹೋಗುತ್ತಾನೆ.
                                
ಲೇಖಕರು:ಅರವಿಂದ.ಜಿ.ಜೋಷಿ.
       ಮೈಸೂರು.
ಸಂಗ್ರಹ:ವೀರೇಶ್ ಅರಸೀಕೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1092

ದಿನಕ್ಕೊಂದು ಕಥೆ 1097