ದಿನಕ್ಕೊಂದು ಕಥೆ 1091
*🌻ದಿನಕ್ಕೊಂದು ಕಥೆ🌻*
*ನಾನು ಎಂಬ ಅಹಂ ನ ನಾಶ*
ಅಣಶಿ ಅಭಯಾರಣ್ಯ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಬಳಿ ಇರುವ ಒಂದು ರಾಷ್ಟ್ರೀಯ ಉದ್ಯಾನವನ. ಈ ಅರಣ್ಯದಲ್ಲಿ ಕಪ್ಪು ಚಿರತೆ, ಹುಲಿ ಮತ್ತು ಆನೆ ಮುಖ್ಯ ಪ್ರಾಣಿಗಳಾಗಿವೆ. ಈ ಅಭಯಾರಣ್ಯದ ದಟ್ಟವಾದ ಶೋಲಾ ಕಾಡಿನ ನಡುವೆ ಪಾತಗುಡಿ ಎಂಬ ಪುಟ್ಟ ಹಳ್ಳಿ ಇದೆ. ಇಲ್ಲಿ ಕುಣಬಿ ಬುಡಕಟ್ಟು ಜನಾಂಗದ ಹದಿಮೂರು ಮನೆಗಳು ಇವೆ. ನಗರ ಪ್ರಪಂಚದ ಸೋಂಕು ಸ್ವಲ್ಪವೂ ಇಲ್ಲದ ಈ ಪುಟ್ಟ ಹಳ್ಳಿಯಲ್ಲಿ ಒಂದು ಪುಟ್ಟ ಪಾಠಶಾಲೆ ಇದೆ. ಈ ಶಾಲೆಗೆ ತಗಡಿನ ಶೀಟಿನ ಚಾವಣಿ. ಪ್ರಶಾಂತ ಎಂಬ ಸ್ಥಳೀಯ ತರುಣನೊಬ್ಬ ಇಲ್ಲಿಯ ಅಧ್ಯಾಪಕ.
ಪುನೀತ್ ರಾಜಕುಮಾರ್ ರವರು ತಮ್ಮ ಚಿತ್ರ ಗಂಧದಗುಡಿ ಚಿತ್ರಿಕರಣಕ್ಕೆ ಈ ಪಾತಗುಡಿ ಎಂಬ ಸ್ಥಳಕ್ಕೆ ಬಂದಿದ್ದರು. ಹಾಗೆಯೇ ಇಲ್ಲಿಯ ಶಾಲೆಗೆ ಭೇಟಿ ಕೊಟ್ಟು ಅಲ್ಲಿನ ಮಕ್ಕಳಿಗೆ "ನಾನು ಯಾರು ನಿಮಗೆ ಗೊತ್ತಾ"? ಎಂದು ಕೇಳಿದಾಗ ಆ ಮಕ್ಕಳು ಗೊತ್ತಿಲ್ಲವೆಂದು ತಲೆಯಾಡಿಸಿದರು. ಹೋಗಲಿ ನಮ್ಮ ತಂದೆ ಯಾರೆಂದು ಗೊತ್ತಾ? ಎಂದು ಕೇಳಿದಾಗ, ಅದಕ್ಕೂ ಇಲ್ಲವೆಂದು ಉತ್ತರಿಸಿದವು ಮಕ್ಕಳು. ಸಿನಿಮಾ ಟಿವಿಗಳ ಸಂಪರ್ಕವೇ ಇಲ್ಲದ ಈ ನಿಸರ್ಗ ಪ್ರದೇಶದಲ್ಲಿ ಸಿಕ್ಕ ಉತ್ತರದಿಂದ ಪುನೀತ್ ಒಮ್ಮೆ ನಕ್ಕರಂತೆ.
ನಾವು ಮಹಾನ್ ಪ್ರಸಿದ್ದರು ಎಂಬ ಭ್ರಮೆಯಲ್ಲಿ ಬದುಕುತ್ತಿರುತ್ತೇವೆ. ಈ ಮಕ್ಕಳ ಉತ್ತರ ನಾನು ಎಂಬ ಸಣ್ಣ ಅಹಂಕಾರವನ್ನು ಕರಗಿಸಿ ಬಿಟ್ಟಿತು ಎಂದುಕೊಂಡರಂತೆ.
ಎರಡು ದಿನಗಳ ಕಾಲ,ಈ ಮಕ್ಕಳ ಜೊತೆ ಹಾಡಿಯಲ್ಲಿ ಸಾಮಾನ್ಯ ಮನುಷ್ಯನಾಗಿ ಕಾಲ ಕಳೆದರಂತೆ ಪುನೀತ್ ರವರು. ಈ ಹಾಡಿಯಲ್ಲಿ ಅವರು ಆ ದಿನ ಪಡೆದ ದಿವ್ಯ ಜ್ಞಾನ ಎಂದರೆ ನಾನೆಂಬ ಅಹಂಮಿಕೆಯ ನಾಶ. ನಿರ್ಮಲ ಶುದ್ಧ ಮನಸ್ಸಿದ್ದವರಿಗೆ ಮಾತ್ರ ಈ ಹೊಳಹು ಸಿಗುವುದು. ಮಾನವೀಯತೆಯ ಖನಿಯಾಗಿದ್ದ ಪುನೀತ್ ಈ ಸಣ್ಣ ಘಟನೆಯಿಂದ ಒಂದು ಸತ್ಯದ ಸಾಕ್ಷಾತ್ಕಾರವನ್ನೇ ಕಂಡುಕೊಂಡರು."ನಾನು ಯಾರು" ಎಂಬ ಆತ್ಮದ ಪ್ರಶ್ನೆಗೆ ಪ್ರಕೃತಿ ಒಮ್ಮೆ ಮಾತ್ರ ,ಕೊಡಬಲ್ಲ ಮೌನದ ಉತ್ತರವಿದು.
ಹೆಸರು ಹಣ ವಿದ್ಯೆ, ಪ್ರಸಿದ್ಧಿ ಎಲ್ಲವನ್ನೂ ಪಡೆದವರು, ಮತ್ತೆ ,ಮತ್ತೆ ಅದನ್ನೇ ಪಡೆಯಲು ಹಂಬಲಿಸುತ್ತಾರೆ. ಹೆಚ್ಚು ಹೆಚ್ಚು ಉನ್ನತಸ್ಥಾನ ಗಳಿಸಿದಷ್ಟು ನಡೆನುಡಿಯಲ್ಲಿ ಅಹಂಕಾರ ನುಸುಳುತ್ತದೆ. ತಮ್ಮನ್ನು ತಾವೇ ವೈಭವೀಕರಿಸಿಕೊಂಡು ಬದುಕುವ ಜನರಿಗೆ, ಮಾನವೀಯ ಮೌಲ್ಯಗಳನ್ನು ಗುರುತಿಸಲು ಸಾಧ್ಯವೇ ಇಲ್ಲ. ಅದು ಅವರಿಗೆ ಕಾಣುವುದೇ ಇಲ್ಲ. ಶುದ್ಧ ಪವಿತ್ರ ಮನಸ್ಸಿದ್ದವರಿಗೆ ಮಾತ್ರ ಮಾನವೀಯ ಮೌಲ್ಯಗಳ ಅರಿವಾಗುವುದು.
ಪುನೀತ್ ರಾಜಕುಮಾರ್ ರಂಥ ನಿರ್ಮಲ ಮನಸ್ಸಿನ ಎಲ್ಲೋ ಬೆರಳೆಣಿಕೆಯಷ್ಟು ಜನರಿಗೆ ಮಾತ್ರ ಇದರ ಸುಳಿವು ಸಿಗುವುದು.
ಕೃಪೆ:ಸುವರ್ಣಾ ಮೂರ್ತಿ.
ಸಂಗ್ರಹ:ವೀರೇಶ್ ಅರಸೀಕೆರೆ.
Comments
Post a Comment