ದಿನಕ್ಕೊಂದು ಕಥೆ 1093
*🌻ದಿನಕ್ಕೊಂದು ಕಥೆ🌻*
*ಬೇರೆಯವರ ಬಗ್ಗೆ ಹಬ್ಬಿಸುವ ಗಾಳಿಸುದ್ದಿಗಳು.*
ಒಬ್ಬ ವ್ಯಕ್ತಿ ಇದ್ದ. ಬೇರೆಯವರನ್ನು ಟೀಕಿಸುತ್ತಾ ದೂಷಿಸುತ್ತಾ ಇರದಿದ್ದರೆ ಅವನಿಗೆ ತಿಂದ ಅನ್ನವೇ ಜೀರ್ಣವಾಗುತ್ತಿರಲಿಲ್ಲ. ಯಾವಾಗಲೂ ಇದೇ ಅವನ ಕೆಲಸ.
ಒಂದು ಸಲ ಊರಲ್ಲಿ ಯಾವುದೋ ಕಳ್ಳತನವಾದಾಗ, ತಾನೇ ಸ್ವತಃ ನೋಡಿದವನ ಹಾಗೆ, ತಮ್ಮ ಪಕ್ಕದ ಮನೆಯ ಯುವಕನೇ ಕಳ್ಳ ಎಂದು ಸುದ್ದಿ ಹಬ್ಬಿಸಿದ. ಆ ಯುವಕನನ್ನು ಕಂಡರೆ ಇವನಿಗೆ ಅಷ್ಟಕಷ್ಟೆ.ಆ ತರುಣನನ್ನು ಪೊಲೀಸರು ಬಂಧಿಸಿದರು . ವಿಚಾರಣೆಯೆಲ್ಲಾ ನೆಡೆದು,ಕೆಲವು ದಿನಗಳ ನಂತರ ನಿಜವಾದ ಕಳ್ಳ ಸಿಕ್ಕಿದ ನಂತರ, ಈ ಯುವಕನನ್ನು ನಿರಪರಾಧಿ ಎಂದು ಬಿಡುಗಡೆ ಮಾಡಿದರು.
ಅವಮಾನಿತನಾದ ಈ ಯುವಕ ತನ್ನ ಮೇಲೆ ಸುಳ್ಳು ಆಪಾದನೆ ನೀಡಿದ, ತನ್ನ ಪಕ್ಕದ ಮನೆಯ ವ್ಯಕ್ತಿಯ ಮೇಲೆ ಮಾನನಷ್ಠ ಮೊಕದ್ದಮೆಯನ್ನು ಹೂಡಿದ.
ನ್ಯಾಯಾಲಯದಲ್ಲಿ ಈ ವ್ಯಕ್ತಿ, ನಾನು ಸುಮ್ಮನೆ ಅವನು ಇದ್ರೂ ಇರಬಹುದು ಎಂದು ಅನುಮಾನದಿಂದ ಹೇಳಿದ್ದು, ಅದರಿಂದ ಈಗ ಅವನಿಗೇನೂ ತೊಂದರೆಯಾಗಿಲ್ಲವಲ್ಲ, ಹೇಗೂ ಬಿಡುಗಡೆಯಾದನಲ್ಲ ಎಂದ.
ವಿಚಾರಣೆಯೆಲ್ಲಾ ಮುಗಿಯಿತು. ಎಲ್ಲರೂ ಎದ್ದು ಹೋಗುವ ಮುಂಚೆ ನ್ಯಾಯಾಧೀಶರು, ಈ ವ್ಯಕ್ತಿಯನ್ನು ಕರೆದು, ನೀನು ಆ ಯುವಕನ ಬಗ್ಗೆ ಕಳ್ಳ ಎಂದು ಹಬ್ಬಿಸಿದ ಸುಧ್ಧಿಯನ್ನು ಒಂದು ಕಾಗದದ ಮೇಲೆ ಬರೆದು, ಆ ಕಾಗದವನ್ನು ಚೂರು ಚೂರು ಮಾಡಿ ಮನೆಗೆ ಹೋಗುವಾಗ ರಸ್ತೆ ಯುದ್ಧಕ್ಕೂ ಚೆಲ್ಲುತ್ತಾ ಹೋಗು, ನಾಳೆ ತೀರ್ಪು ಕೇಳಲು ಬಾ ಎಂದರು.
ಮಾರನೇ ದಿನ ಆತ ತೀರ್ಪು ಕೇಳಲು ಬಂದಾಗ, ನ್ಯಾಯಾಧೀಶರು, ನಿನ್ನೆ ನೀನು ಚೆಲ್ಲಿದ ಕಾಗದದ ಚೂರುಗಳನ್ನು ವಾಪಸು ಆರಿಸಿಕೊಂಡು ಬಾ ಎಂದರು.
ಆಗ ಆ ವ್ಯಕ್ತಿ, ಅದು ಹೇಗೆ ಸಾಧ್ಯ? ಈಗ ಅವೆಲ್ಲ ಗಾಳಿಗೆ ಹಾರಿ ಹೋಗಿವೆ, ಆ ಚೂರುಗಳನ್ನು ಈಗ ಆರಿಸಿ ತರಲು ಅದ್ಹೇಗೆ ತಾನೇ ಸಾಧ್ಯ?ಎಂದ.
ಆಗ ನ್ಯಾಯಾಧೀಶರು, ಅದೇ ರೀತಿ ನೀನು , ಒಬ್ಬ ಒಳ್ಳೆಯ ವ್ಯಕ್ತಿಯ ಬಗ್ಗೆ, ಮಾಡಿದ ಗಾಸಿಪ್ ಎಲ್ಲೆಡೆಯೂ ಹರಿದು ಹೋಗಿದೆ . ಅವು ಆತನ ಘನತೆಗೆ ಧಕ್ಕೆ ತರಬಲ್ಲವು. ಆ ತಪ್ಪನ್ನು ಈಗ ನೀನು ಸರಿಪಡಿಸಲು ಸಾಧ್ಯವೇ , ಒಬ್ಬರ ಹಿಂದೆ ಇಂತಹ ನೀಚ ಕೆಲಸವನ್ನು ಮಾಡುವ ಮುನ್ನ ಆತ್ಮಸಾಕ್ಷಿ ಎಂಬುದು ಒಮ್ಮೆಯಾದರೂ, ನಿನ್ನನ್ನು ಎಚ್ಚರಿಸಲಿಲ್ಲವೇ? ಎಂದು ಕೇಳಿದರು.
ಆ ವ್ಯಕ್ತಿಗೆ, ಈಗ ತನ್ನ ತಪ್ಪಿನ ಅರಿವಾಗಿ, ಯುವಕನಲ್ಲಿ ಕ್ಷಮೆಯೇನೂ ಯಾಚಿಸಿ, ಸ್ವಲ್ಪ ದಂಡ ಕಟ್ಟಿದ,ಆದರೆ ಹೋದ ಮಾನವನ್ನು ಇವನು ತಂದುಕೊಡಲು ಸಾಧ್ಯವೇ.
ಸಾಮಾನ್ಯವಾಗಿ ನಾಲ್ಕು ಜನರ ಗುಂಪಿನಲ್ಲಿ ನಾವು ಕುಳಿತಿದ್ದು, ಏನೂ ಕಾರಣದಿಂದ ಒಬ್ಬ ಅಲ್ಲಿಂದ ಎದ್ದು ಹೋದರೆ ಸಾಕು, ಆಗ ನೋಡಿ ಅವನ ಹಿಂದಿನಿಂದ ಅವನ ಬಗ್ಗೆ ಹೇಗೆ ಚರ್ಚೆ ನಡೆಯುತ್ತಿರುತ್ತದೆ ಎಂದು.
ಯಾರೋ ಒಬ್ಬರು ನಮಗೆ ಸ್ವಲ್ಪ ಇಷ್ಟವಾಗುವುದಿಲ್ಲವೆಂದರೂ ಸರಿ , ಅವರ ಬಗ್ಗೆ ಇಲ್ಲ ಸಲ್ಲದ್ದನ್ನೆಲ್ಲ ಸೇರಿಸಿ ಅವನ ಬಗ್ಗೆ ತನಗೆ ಎಲ್ಲವೂ ತಿಳಿದಿದೆ ಎನ್ನುವ ಹಾಗೆ ಸತ್ಯದ ತಲೆಯಮೇಲೆ ಹೊಡೆದಂತೆ ಮಾತನಾಡುವುದು, ಕೆಲವು ಮನುಷ್ಯರ ಸ್ವಭಾವ. ಯಾರ ಬಗ್ಗೆ ಆದರೂ, ಪೂರ್ಣ ಸತ್ಯ ಗೊತ್ತಿಲ್ಲದೆ ಮಾತನಾಡುವುದು, ಮಹಾ ತಪ್ಪು, ಅಪರಾಧ ಕೂಡಾ.ಇದರಿಂದ ಅವರ ವ್ಯಕ್ತಿತ್ವಕ್ಕೆ ಧಕ್ಕೆಯಾಗಬಹುದು. ತಮ್ಮ ತಪ್ಪೇ ಇಲ್ಲದೆ ಅವರು, ಶಿಕ್ಷೆ ಕೂಡಾ ಅನುಭವಿಸುವಂತಾಗಬಹುದು. ನಮ್ಮ ಕೈಯಲ್ಲಿರುವ ಕೆಂಡ, ಇತರರನ್ನು ಸುಡುವ ಮುನ್ನ ನಮ್ಮನ್ನೇ ಸುಡುವಂತೆ, ಇತರರ ಬಗೆಗಿನ ಕೆಟ್ಟ ಮಾತುಗಳು ನಮ್ಮ ವ್ಯಕ್ತಿತ್ವದ ಕನ್ನಡಿಯಾಗುತ್ತವೆ . ಸದಾ ಬೇರೆಯವರ ಬಗ್ಗೆ ಕೆಟ್ಟದ್ದನ್ನೇ ಮಾತನಾಡುತ್ತಾ, ಕೆಟ್ಟದ್ದನ್ನೇ ಬಯಸುವ ವ್ಯಕ್ತಿಯನ್ನು ಯಾರೂ ಹೆಚ್ಚು ದಿನ ಗೌರವಿಸುವುದಿಲ್ಲ, ಅವನನ್ನು ಯಾರೂ ನಂಬುವುದೂ ಇಲ್ಲ.
ಸದಾ ಇನ್ನೊಬ್ಬರನ್ನು ದೂಷಣೆ ಮಾಡುತ್ತಾ ,ಅವರ ಬಗ್ಗೆ ಇಲ್ಲ ಸಲ್ಲದ ಸುದ್ಧಿ ಹಬ್ಬಿಸುತ್ತ ಸಂತೋಷಪಡುವುದು ಒಂದು ಮಹಾ ದೊಡ್ಡ ರೋಗ. ಅದರಿಂದ ದೂರವಿದ್ದರೆ ,ನಮಗೂ ಹಾಗೂ ,ಸಮಾಜಕ್ಕೂ ಒಳ್ಳೆಯದು.
ಕೃಪೆ : ಸುವರ್ಣಾ ಮೂರ್ತಿ.
ಸಂಗ್ರಹ: ವೀರೇಶ್ ಅರಸೀಕೆರೆ.
Comments
Post a Comment