ದಿನಕ್ಕೊಂದು ಕಥೆ 1097

*🌻ದಿನಕ್ಕೊಂದು ಕಥೆ🌻*
*ಭಗವಂತನೇ ಕೊಟ್ಟ ಪಾಲು. ಸುಖ-ದುಃಖವೇಕೆ ?*

ಅಯ್ಯಂಗಾರ್  ಬೇಕರಿಯಲ್ಲಿ , ನಾಲ್ಕಾರು ವರ್ಷಗಳಿಂದ ‘ಸುಬ್ಬು’ ಎಂಬ ಹುಡುಗ ಕೆಲಸ ಮಾಡುತ್ತಿದ್ದ. ನಂಬಿ ಕಸ್ತನಾಗಿದ್ದ. ಮಾಲೀಕರು ಕೊಡುವ ರಜೆಯ ಹೊರತು ತನಗಾಗಿ ಒಂದು ದಿನವೂ  ರಜಾ ತಗೊಂಡಿಲ್ಲ. ಒಳ್ಳೆಯ ನಿಯತ್ತಿನ ಹುಡುಗ (ಯುವಕ), ಮಾತು ಕಡಿಮೆ, ಅಚ್ಚುಕಟ್ಟಾದ  ಕೆಲಸ. ಅದೊಂದು ದಿನ ಇದ್ದಕ್ಕಿದ್ದಂತೆ, ಹೇಳದೆ ಕೇಳದೆ ರಜಾ ಹಾಕಿ ಅಂಗಡಿ ಕೆಲಸಕ್ಕೆ ಬರಲಿಲ್ಲ. ಅಯ್ಯಂಗಾರ್ ಯೋಚಿಸಿದರು ಈ ಹುಡುಗ ಒಂದು ದಿನವೂ ರಜೆ ಹಾಕಿಲ್ಲ ಯಾರಾದರೂ ಜಾಸ್ತಿ ಸಂಬಳ ಕೊಡುತ್ತೇವೆ
ಎಂದು ಸೆಳೆದುಕೊಂಡರೋ ಏನೋ, ಅಥವಾ ಸಂಬಳ ಜಾಸ್ತಿ ಮಾಡಿಲ್ಲವೆಂಬ ಕೋಪವೋ ? ತರ್ಕಿಸಲಾಗದೆ, ಏನೇ ಆಗಲಿ ಬಹಳ ವರ್ಷಗಳಿಂದ ಕೆಲಸ ಮಾಡುತ್ತಿದ್ದಾನೆ. ಇಷ್ಟು ಒಳ್ಳೆಯವರು ನಮಗೆ ಸಿಗುವುದಿಲ್ಲ. ನಾನೇ ಅವನಿಗೆ ಸಂಬಳ ಹೆಚ್ಚಿಸಿ ನಾಳೆ ಬಂದಾಗ ಹೇಳುತ್ತೇನೆ. ಆಗ ಅವನು  ಖುಷಿಯಾಗಿ ಹೇಳದೆ
ಕೇಳದೆ ರಜಾ ತಗೊಳುವುದಿಲ್ಲ ಎಂದುಕೊಂಡರು. 

ಎಂದಿನಂತೆ ಮರುದಿನ ಸುಬ್ಬು ಕೆಲಸಕ್ಕೆ ಬಂದ, ಮಾಲೀಕರು ಕರೆದು ನೋಡು ನಿನ್ನ ಸಂಬಳ ಹೆಚ್ಚಿಗೆ ಮಾಡಿದ್ದೇನೆ ಎಂದರು.  ಅವನು ಯಾವ  ಪ್ರತಿಕ್ರಿಯೆ ನೀಡದೆ ಸುಮ್ಮನೆ ನಕ್ಕು, ತಲೆ ಅಲ್ಲಾಡಿಸಿ ತನ್ನ ಕೆಲಸದಲ್ಲಿ ತೊಡಗಿಕೊಂಡ. ಈ ಹುಡುಗ ಕೃತಜ್ಞತೆಯನ್ನು ಹೇಳಲಿಲ್ಲ ಎಂದು ಅಯ್ಯಂಗಾರ್ ಅಂದುಕೊಂಡರು.ನಾಲ್ಕರು ತಿಂಗಳ ಕಳೆಯಿತು. ಹಿಂದಿನಂತೆಯೇ ಆತ ಹೇಳದೆ ಕೇಳದೆ, ಮತ್ತೊಂದು ರಜಾ ಹಾಕಿದ. ಈ ಸಲ ಅಯ್ಯಂಗಾರ್ ಗೆ ಜಾಸ್ತಿ ಸಿಟ್ಟು ಬಂತು. ಅಲ್ಲ ಈ ಹುಡುಗ ಕೇಳದೆ ನಾನೇ  ಸಂಬಳ ಹೆಚ್ಚು ಮಾಡಿದೆ. ಆ ಕೃತಜ್ಞತೆಗಾದರು ಒಂದು ಮಾತು ಕೇಳಿ ರಜ ಪಡೆಯಬಹುದಿತ್ತು . ಆದರೆ ಮತ್ತೆ ಹೇಳದೆ ಕೇಳದೆ ರಜ ಹಾಕಿದ್ದಾನೆ, ಇವನಿಗೆ ಮಾಡ್ತೀನಿ ಜಾಸ್ತಿ ಮಾಡಿದ ಸಂಬಳವನ್ನು ಕಡಿಮೆ ಮಾಡುತ್ತೇನೆ ಎಂದುಕೊಂಡರು.

ಸುಬ್ಬು ಮಾರನೇ ದಿನ ಕೆಲಸಕ್ಕೆ ಬಂದ. ಅಯ್ಯಂಗಾರ್ ಅವನನ್ನು ಕರೆದು ನೋಡು ನಿನಗೆ ಈ ಸಾರಿಯಿಂದ ಸಂಬಳ ಕಡಿಮೆ ಮಾಡಿದ್ದೇನೆ  ಎಂದರು. ಆತ ಏನು? ಏಕೆ ಎಂದು ಕೇಳಲಿಲ್ಲ ಆಯಿತು ಎಂದು ತಲೆ ಅಲ್ಲಾಡಿಸಿ  ಕೆಲಸದಲ್ಲಿ  ತನ್ನನ್ನು ತೊಡಗಿ ಕೊಂಡ. ಅಯ್ಯಂಗಾರ್ಗೆ ಆಶ್ಚರ್ಯ ಆದರೂ, ತೋರಿಸಿಕೊಳ್ಳಲಿಲ್ಲ. ಒಂದನೇ ತಾರೀಖು ಬಂದಿತು. ಅವರು ಹೇಳಿದಂತೆ ಕಡಿಮೆ ಸಂಬಳವನ್ನು ಕೊಟ್ಟರು. ಆ ಹುಡುಗ ಏಕೆ ಕಡಿಮೆ ಕೊಟ್ಟಿರಿ ನನಗೆ ಕೊಡುವ ಸಂಬಳ ಸಾಕಾಗುವುದಿಲ್ಲ ಅಥವಾ ಅಂಗಡಿ ಬಿಟ್ಟು ಹೋಗುತ್ತೆನೆ, ಹೀಗೆ ಏನನ್ನು ಹೇಳಲಿಲ್ಲ. ಕುತೂಹಲವಾಯಿತು. ಅವನನ್ನು ಕರೆದು, ಅಲ್ವೋ ಸುಬ್ಬು ಏನಾಗಿದೆ ನಿನಗೆ ಸಂಬಳ ಜಾಸ್ತಿ ಮಾಡಿದಾಗ ಖುಷಿ ಪಡಲಿಲ್ಲ, ಸಂಬಳ ಕಡಿಮೆ ಮಾಡಿದಾಗ ಅದಕ್ಕೂ ಬೇಜಾರು ಮಾಡಿಕೊಳ್ಳ ಲಿಲ್ಲ  ಏನಾಗಿದೆ ನಿನಗೆ? ಯಾಕೆ? ಎಂದು ಕೇಳಿದ್ದಕ್ಕೆ, ಸುಬ್ಬು ಹೇಳಿದ ಇದರಲ್ಲಿ ಬೇಜಾರು ಅಥವಾ ಸಂತೋಷ ಪಡಲು ಏನಿದೆ? ಅವರವರ ಪಾಲನ್ನು  ಭಗವಂತ ಕೊಟ್ಟು ಕಳಿಸುತ್ತಾನೆ. ಹೋಗುವಾಗ ಅವರೇ ತೆಗೆದು ಕೊಂಡು ಹೋಗುತ್ತಾರೆ ಎಂದ ಅವನ ಒಗಟಿನ ಮಾತು ಅರ್ಥವಾಗದೆ ನೀನು ಏನು ಹೇಳುತ್ತಿರುವೆ ಎಂದರು. 

ಸ್ವಾಮಿ, ನಾನು  ಮೊದಲು ರಜ ಹಾಕಿದಾಗ, ನನಗೊಬ್ಬ ಮಗಳು ಹುಟ್ಟಿದಳು. ನೀವು ಸಂಬಳ ಹೆಚ್ಚು ಮಾಡಿ ನನಗೆ ಕೊಟ್ಟಿರಿ. ನನ್ನ ಮಗಳು ಅವಳ ಪಾಲನ್ನು
ತಂದಳು. ಎರಡನೇ ಸಾರಿ ನನ್ನ ತಾಯಿ ಮರಣ ಹೊಂದಿದಳು ಕಾರಣ ರಜೆ ಹಾಕಿದೆ, ನೀವು ನನಗೆ ಸಂಬಳ ಕಡಿಮೆ ಮಾಡಿದಿರಿ. ನನ್ನ ತಾಯಿ ಅವಳ ಪಾಲನ್ನು ತೆಗೆದುಕೊಂಡು ಹೋದಳು. ಅಂದು ಕೊಂಡೆ.  ಅಷ್ಟೇ ಇದರಲ್ಲಿ  ಸುಖ ಅಥವಾ ದುಃಖ ಪಡೆಯುವುದಕ್ಕೆ ಏನಿದೆ? ಭಗವಂತನೇ ಅವರವರ ಪಾಲನ್ನು ಕೊಟ್ಟು ಭೂಮಿಗೆ ಕಳಿಸಿರುತ್ತಾನೆ. ಆ ಪಾಲು ನಮ್ಮದಲ್ಲ. 

ಆದರೆ, ಭಗವಂತನಿಗೂ ಇದು ತಪ್ಪಿದ್ದಲ್ಲ, ರಾಮನ ಪಟ್ಟಾಭಿಷೇಕದ ತಯಾರಿ ನಡೆಯಿತು. ಸಿಂಹಾಸನದ ಮೇಲೆ ಕೂರಬೇಕು ಎನ್ನುವಾಗ, ಸಂಭ್ರಮ ನಿಂತು ಹೋಗಿ ರಾಜನಾಗ ಬೇಕಾದವನು ಪಿತೃವಾಕ್ಯ ಪರಿಪಾಲನೆಗಾಗಿ 14 ವರ್ಷ ವನವಾಸಕ್ಕೆ ತೆರಳಿದ. ಮುಂದೆಲ್ಲಾ ಕಷ್ಟದ ಬದುಕು, ರಾಮನು. ಅವನ ಕುರಿತು ರಾಜನಾಗಬೇಕಾದವನು ವನವಾಸಕ್ಕೆ ಬರಬೇಕಾಯಿತು ಎಂದು ವಿಚಲಿತ ನಾಗಲಿಲ್ಲ, ಕಾಡಿನಲ್ಲಿದ್ದಾಗಲೂ, ಶಾಂತತೆಯನ್ನು ಕಳೆದುಕೊಳ್ಳಲಿಲ್ಲ, ಕರ್ತವ್ಯ ಮರೆಯಲಿಲ್ಲ, ಮುಗುಳ್ನಗು ಆಭರಣವಾಗಿತ್ತು. ಇಷ್ಟು ಸಾಲದೆಂಬಂತೆ ಸೀತೆಯ ಅಪಹರಣ ವಾಯಿತು ಮತ್ತೆ ರಾಮ ರಾವಣರ ಯುದ್ಧ. ಎಲ್ಲಾ ಮುಗಿಯಿತು ಎಂದುಕೊಂಡು ರಾಜ್ಯಕ್ಕೆ ಬಂದು ಪಟ್ಟಾಭಿಷಿಕ್ತನಾಗಿ  ನ್ಯಾಯವಾಗಿ ರಾಜ್ಯಭಾರ ನಡೆಸುತ್ತಿದ್ದ. ಕೆಲವೇ ತಿಂಗಳಗಳಲ್ಲಿ ಪ್ರಜೆಗಳು ಸೀತೆಯನ್ನು ಅವಮಾನಿಸಿ ನಿಂದಿಸಿತು. ಮತ್ತೆ ಸೀತೆಯನ್ನು ಕಾಡಿಗೆ ಕಳಿಸಿದ. ಆಶ್ರಮದಲ್ಲಿ ಲವ- ಕುಶರ ಜನನ. ಮುಂದೆ ತಂದೆ ಮಕ್ಕಳ ಯುದ್ಧ. ರಾಮನ ಜೀವನದಲ್ಲಿ ಮತ್ತೆಂದೂ ಸೀತೆ ಬರಲಿಲ್ಲ. 

ತನ್ನ ಕಷ್ಟಗಳಿಗಾಗಿ  ರಾಮ ಯಾರ ಮೇಲೂ ಕೋಪಿಸಿಕೊಳ್ಳಲಿಲ್ಲ, ಯಾರನ್ನು ದೂರಲಿಲ್ಲ. ಸುಖದ ಸುಪ್ಪತ್ತಿಗೆ ಯಲ್ಲಿ ಇರಬೇಕಾದವನು ಎದುರಾಗುವ ಕಷ್ಟಗಳನ್ನು ಸಹನೆಯಿಂದ ಸಹಿಸಿ, ಮಂದಹಾಸದಿಂದಲೇ  ಪ್ರಜೆಗಳ ಕಷ್ಟಕ್ಕೆ ಹೆಗಲುಕೊಟ್ಟ, ನೊಂದವರಿಗೆ ಸಾಂತ್ವಾನ ನೀಡಿದ,‌ ಕಷ್ಟದಲ್ಲಿ ರುವವರ ಕಷ್ಟಗಳನ್ನು ಪರಿಹರಿಸಿದ. ಇಂಥ ರಾಮ ನಮ್ಮೆಲ್ಲರ ಜೀವನಕ್ಕೆ ಆದರ್ಶ ಪ್ರಾಯವಾಗಿದ್ದಾನೆ. ಆದ್ದಕ್ಕಾಗಿ ಅವನನ್ನು ದೇವರು- ಭಗವಂತ ಎಂದು ಆರಾಧಿಸುತ್ತೇವೆ. ರಾಮನೇ ನಮ್ಮ ಬದುಕು, ಉಸಿರು. ಅವರವರಿಗೆ ಸಲ್ಲಬೇಕಾದ ಪಾಲನ್ನು ಭಗವಂತನೇ ಕೊಟ್ಟಿರುತ್ತಾನೆ. ನಾವು ಕೊಡಬೇಕು, ನಮ್ಮಿಂದ ಅವನ ಬದುಕು,ಇದು ಭ್ರಮೆ, ಎಲ್ಲಾ ಜೀವಿಗಳ  ನಿರ್ವಹಣೆಯು ಭಗವಂತನದು.

ಸೌಮ್ಯವಾಗಿ ಮಾತನಾಡುವವನು, ಶುದ್ಧ ಮನಸ್ಸಿನವನು,
ಇಂದ್ರಿಯ ನಿಗ್ರಹ ಇರುವವನು ಮತ್ತು ಎಲ್ಲಾ ಜೀವಿಗಳಲ್ಲೂ ದಯಾವಂತನಾದವನು ಇವನೇ- ಪರಮಾರ್ಥವನ್ನು 
ಪಡೆಯಲು ಯೋಗ್ಯನು.

ಬರಹ:- ಆಶಾ ನಾಗಭೂಷಣ.
ಕೃಪೆ:ವೀರೇಶ್ ಅರಸೀಕೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1092