ದಿನಕ್ಕೊಂದು ಕಥೆ 1110

*🌻ದಿನಕ್ಕೊಂದು ಕಥೆ🌻*
*" ಸಹಾಯ"*  

ನಿರ್ಮಲಾ , ಚಪಾತಿ ಹಿಟ್ಟು ಕಲೆಸಿ ಸಣ್ಣ ಪುಟ್ಟ ಕೆಲಸ ಪೂರೈಸಿದವಳು ಚಪಾತಿ ಮಾಡಲು ಗ್ಯಾಸ್ ಒಲೆ ಮೇಲೆ ತವಾ ಇಡಲು ಮುಂದಾದಾಗ, ಬಾಗಿಲಿನ ಬೆಲ್ ಶಬ್ದ ಆಗುತ್ತದೆ. ಗ್ಯಾಸ್ ಆಫ್ ಮಾಡಿ ಕೈ ಒರೆಸಿಕೊಳ್ಳುತ್ತ ಹೊರಗೆ ಬಂದು ಬಾಗಿಲು ತೆರೆದು ನೋಡಿದಾಗ ಮೆಟ್ಟಿಲಿನ ಕೆಳಗೆ ಸುಮಾರು ಐವತ್ತು ವರ್ಷ ವಯಸ್ಸಿನ ನೋಡಲು ಹಳ್ಳಿಯವನಂತಿದ್ದ ವ್ಯಕ್ತಿ ತನ್ನ ಹದಿನಾರು ವರ್ಷ ದ ಮಗಳೊಂದಿಗೆ
ನಿಂತಿರುತ್ತಾನೆ. ನಿರ್ಮಲಾ ಅವನನ್ನು ಭಿಕ್ಷುಕ ಎಂದು ತಿಳಿದವಳು " ಚಿಲ್ಲರೆ ಹಣ ಈಗ ಇಲ್ಲ ಮುಂದೆ ಹೋಗಪ್ಪಾ" ಎಂದಾಗ ಆತ ವ್ಯಕ್ತಿ " ಮೇಡಂ.. ನನಗೆ ಚಿಲ್ಲರೆ ಹಣ ಬೇಡಾ ಐವತ್ತು ಸಾವಿರ ರೂಪಾಯಿ ಬೇಕಾಗಿವೆ" ಎನ್ನುತ್ತಾನೆ.ಆಶ್ಚರ್ಯ ಮತ್ತು ವಿಚಿತ್ರ ದೃಷ್ಟಿಯಿಂದ ಆತನನ್ನು ನೋಡುತ್ತ -" ಎಲ್ಲಿಯವನಪ್ಪಾ ನೀನು..
ಏನು ಕೇಳ್ತಿದ್ದಿ ಅಂತ ಅದಾರೂ ಗೊತ್ತಾ? ಎಂದು ಪ್ರಶ್ನಿಸಿದಾಗ ಆತ ವಿನೀತನಾಗಿ
" ಮೇಡಂ.. ನಾನು ಹುಬ್ಬಳ್ಳಿಯ ಹತ್ತಿರ ಇರುವ ಒಂದು ಹಳ್ಳಿಯಲ್ಲಿ ಇರುವವ. ನನಗೆ ನೀವು ಯಾರೆಂದು ಗೊತ್ತಿಲ್ಲ, ಏಕೆಂದರೆ ನಾನು ಇದೇ ಮೊದಲನೇ ಬಾರಿ ಮೈಸೂರಿಗೆ ಬರ್ತಾ ಇದ್ದೇನೆ " ಎನ್ನುತ್ತಾನೆ. ಮುಂದುವರೆದ ನಿರ್ಮಲಾ" ಇಷ್ಟೊಂದು ಹಣ..! ನನ್ನ ಬಳಿ ಇಲ್ಲಾ.. ಮುಂದೆ ಎಲ್ಲಾದರೂ ಹೋಗಿ ಪ್ರಯತ್ನ ಮಾಡು " ಎನ್ನುತ್ತಾಳೆ. ಅಷ್ಟಕ್ಕೇ ಸುಮ್ಮನಿರದ ಆ ವ್ಯಕ್ತಿ -" ಮೇಡಂ.. ನಾನು ನಿಮಗೆ ಭಿಕ್ಷೆ ಕೇಳ್ತಿಲ್ಲ ಕಡ ಕೊಡಿ.. ಎರಡು ಮೂರು ತಿಂಗಳು ಬಳಿಕ ನಾನೇ ಖುದ್ದಾಗಿ ವಾಪಸ್ ತಂದು ಕೊಡ್ತೀನಿ " ಎಂದಾಗ ನಿರ್ಮಲಾ" ತುಸು ಬೇಸರದಿಂದಲೇ -"ಅಲ್ಲಯ್ಯಾ.. ನಿನ್ನ ಊರು ಇಲ್ಲಿಂದ ಏನಿಲ್ಲವೆಂದರೂ ಕನಿಷ್ಠ ನಾನೂರು ಕಿಮೀ
ದೂರ ಇದೆ.. ನಿನಗೆ ಹಣ ಕೊಟ್ಟು ನೀನು ವಾಪಸ್ ಕೊಡದೇ ಇದ್ದಾಗ ಅಷ್ಟು ದೂರ ಬಂದು ವಸೂಲು ಮಾಡೋಕೆ ಆಗುತ್ತಾ? ಈಗ ತಲೆ ತಿನ್ನಬೇಡಾ ಮುಂದೆ ಹೋಗು "
ಎನ್ನುತ್ತಾಳೆ. ಆಗ ಆ ವ್ಯಕ್ತಿ -"ಒಂದು ನಿಮಿಷ ಮೇಡಂ... ನನಗೆ ನಿಮ್ಮ ಪರಿಚಯ ಇಲ್ಲ.. ಆದರೆ ನಿಮ್ಮ ಯಜಮಾನರ ಪರಿಚಯ ಇದೆ... ಹತ್ತು ವರ್ಷಗಳ ಹಿಂದೆ
ನಿಮ್ಮ ಪತಿಯೇ ಖುದ್ದಾಗಿ ಅವರ ವಿಳಾಸ ಬರೆದು ಕೊಟ್ಟಿದ್ದರು ನೋಡಿ.."
ಎನ್ನುತ್ತ ಜೇಬಿನಿಂದ ಪುಟ್ಟ ಕಾಗದ ಆಕೆಗೆ ತೋರಿಸುತ್ತ" ಹತ್ತು ವರ್ಷಗಳ ಹಿಂದೆ ನಾವಿಬ್ಬರೂ ರೈಲಿನಲ್ಲಿ ಪ್ರಯಾಣಿಸುವಾಗ ಭೇಟಿ ಆಗಿದ್ದರು... ಈಗ ನಿಮ್ಮ ಯಜಮಾನರು ಮನೇಲಿ ಇದ್ದಾರಾ?"ಎಂದು ಪ್ರಶ್ನಿಸುತ್ತಾನೆ. ಅದಕ್ಕೆ ನಿರ್ಮಲಾ
" ಇಲ್ಲಾ.. ಈಗ ಅವರು ಡ್ಯೂಟಿ ಗೆ ಹೋಗಿದ್ದಾರೆ ಸಾಂಯಕಾಲ ಬರೋದು " ಎಂದು ಉತ್ತರಿಸುತ್ತಾಳೆ.ಪುನ: ಆ ವ್ಯಕ್ತಿ" ಮೇಡಂ... ಇನ್ನು ಒಂದೂವರೆ ಗಂಟೆ ಒಳಗೆ ನಮ್ಮೂರಿಗೆ ಹೋಗುವ ಟ್ರೈನ್ ಬರುತ್ತದೆ.. ನಾನು ಅದಕ್ಕೆ ಹೋಗಬೇಕು
ದಯವಿಟ್ಟು ನಿಮ್ಮ ಯಜಮಾನರಿಗೆ ಒಂದು ಮಾತು ಹೇಳಿ ಪ್ಲೀಸ್ " ಎನ್ನುತ್ತಾನೆ.
ಒಳಗಡೆ ಬಂದ ನಿರ್ಮಲಾ ತನ್ನ ಪತಿ ಗೆ ಫೋನ್ ಮಾಡುತ್ತ -" ರ್ರೀ.. ನಮ್ಮ ಮನೆ ಮುಂದೆ ಯಾವನೋ ಒಬ್ಬ ಹಳ್ಳಿಯವ ಒಂದು ಐವತ್ತು ಸಾವಿರ ರೂಪಾಯಿ ಇದ್ರೆ ಕೊಡಿ ಅಂತ ಕೇಳ್ಕೊಂಡು ಬಂದಿದಾದನೆ.. ಅವನ ಜೊತೆ ಹದಿನಾರು ವರ್ಷ ದ ಒಂದು ಹುಡುಗೀನೂ ಇದೆ... ಆತ ಅದೇನೋ ಹತ್ತು ವರ್ಷಗಳ ಹಿಂದೆ ನಿಮ್ಮನ್ನು ರೈಲ್ ನಲ್ಲಿ ಭೆಟಿ ಆಗಿದ್ನಂತೆ.. ನೀವೇ ನಮ್ಮ ಮನೆ ಅಡ್ರೆಸ್ ಬರೆದು ಕೊಟ್ಟಿದ್ದೀರಿ ಅಂತ ತೋರಿಸ್ದಾ..." ಎನ್ನುತ್ತಾಳೆ. ಪತ್ನಿಯ ಈ ಮಾತು ಕೇಳಿಸಿಕೊಂಡ ಆಕೆ ಪತಿ
ಸುರೇಶ್ -" ಹೌದಾ.... ಆತನನ್ನು ಮನೆ ಒಳಗೆ ಕರೆದು ಕೂರಿಸಿ ಕಾಫೀ ತಿಂಡಿ ಕೊಡ್ತಾ ಇರು ನಾನು ಇನ್ನು ಅರ್ಧ ಗಂಟೆ ಒಳಗೆ ಮನೇಲಿ ಇರ್ತೇನೆ "ಎಂದು ಹೇಳಿದಾಗ ನಿರ್ಮಲಾ ಕಾಲ್ ಕಟ್ ಮಾಡುತ್ತಾಳೆ. ನಂತರ ಮನೆಯ ಆಚೆ ನಿಂತಿದ್ದ ಆ ವ್ಯಕ್ತಿ ಹಾಗೂ ಆತನ ಮಗಳನ್ನು ಒಳಗೆ ಕರೆದು ಅವರಿಗೆ ಕಾಫೀ ಬ್ರೆಡ್ ಕೊಟ್ಟು
ಊಟದ ವ್ಯವಸ್ಥೆ ಮಾಡಲು ಮುಂದಾಗುತ್ತಿದ್ದಂತೆ ಆಕೆಯ ಪತಿ ಕಾರಿನಿಂದ ಇಳಿದು ಮನೆ ಒಳಗೆ ಬರುತ್ತಾನೆ. ಸುರೇಶ್ ನನ್ನು ಕಂಡ ಆ ವ್ಯಕ್ತಿ ಎದ್ದು ನಿಂತು ಕೈ ಜೋಡಿಸಿ
" ಸಾರ್ ನಾನು ಯಾರೂ ಅಂತ ಗೊತ್ತಾಯ್ತಾ?" ಎಂದಾಗ ಸುರೇಶ್ " ಮೊದಲು ಕೂತ್ಕೊಳ್ಳೀ.. ನಾನು ನಿಮ್ಮನ್ನು ಮರೆಯೋಕೆ ಆಗುತ್ತಾ... ಅಂದು ರೈಲಿನಲ್ಲಿ ಹೋಗುತ್ತಿದ್ದಾಗ ನನ್ನ ಜೇಬಿನಲ್ಲಿ ಇದ್ದ ಎರಡು ಸಾವಿರ ರೂಪಾಯಿ ಪಿಕ್ ಪಾಕೆಟ್ ಆದಾಗ ನಾನು ಹತಾಶನಾಗಿ ತಲೆ ಮೇಲೆ ಕೈ ಇಟ್ಟು ಕುಳತಿದ್ದಾಗ ನೀವೇ ಅಲ್ಲವೇ
 ನನಗೆ ಸಹಾಯ ಮಾಡಿದ್ದು.. ಅಂದು ನೀವು ನನಗೆ ಸಹಾಯ ಮಾಡದೇ ಹೋಗಿದ್ದರೆ ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸುತ್ತಿದ್ದೆ... ಆಗ ನೀವು ನಿಮ್ಮ ಹೆಸರು, ವಿಳಾಸ ಏನೂ ಹೇಳಲಿಲ್ಲ.. ಆದರೆ ನನ್ನ ವಿಳಾಸ ಪಡೆದು ನಾನೇ ಖುದ್ದಾಗಿ ಬಂದು ಅದನ್ನು ಪಡೆದು ಹೋಗುವೆ ಎಂದು ಹೇಳಿದ್ದೀರಿ... ನನಗೆ ಕಷ್ಟ ಕಾಲದಲ್ಲಿ ಸಹಾಯ ಮಾಡಿದ್ದೀರಿ... ನಿಜಕ್ಕೂ ನಿಮ್ಮಂತಹವರು ಈ ಪ್ರಪಂಚದಲ್ಲಿ ಹುಡುಕಿದರೂ ಸಿಗುವುದು ಕಷ್ಟ ಎನ್ನುವಂತಿದ್ದೀರಿ. ಅಂದು ನೀವು ನನಗೆ ಕೊಟ್ಟ ಆ ಎರಡು ಸಾವಿರ ರೂಪಾಯಿ ತುಂಬಾನೇ ಉಪಕಾರವಾಗಿದೆ."ಎಂದು ಹೇಳಿದಾಗ ಆ ವ್ಯಕ್ತಿ -"ಸಾರ್ ಮುಂದಿನ ತಿಂಗಳು ನನ್ನ ಮಗಳ ಮದುವೆ ಫಿಕ್ಸ್ ಆಗಿದೆ.. ಸಧ್ಯ ನನಗೆ ಹಣದ ಅಡಚಣಿ ತುಂಬಾ ಆಗಿದೆ.. ಇದಕ್ಕಾಗಿ ನಮ್ಮೂರಲ್ಲಿ ಪರಿಚಯದವರ ಬಳಿ ಸಂಬಂಧಿಕರ ಬಳಿ ಪ್ರಯತ್ನ ಮಾಡಿದೆ ಆದರೆ ಎಲ್ಲರೂ ಕೈ ಎತ್ತಿಬಿಟ್ಟರು.. ಅದೊಂದು ದಿನ ಹೀಗೆ ಯಾವುದೋ ಕಾಗದ ಪತ್ರಗಳನ್ನು ನೋಡುತ್ತಿದ್ದಾಗ ನೀವು ಬರೆದು ಕೊಟ್ಟ ವಿಳಾಸ ಸಿಕ್ಕಿತು.. ನೋಡೋಣ ಇದೊಂದು ಪ್ರಯತ್ನ ಮಾಡೋಣ ಎಂದು ಆ ವಿಳಾಸ ತೆಗೆದುಕೊಂಡು ಇಲ್ಲಿಗೆ ಬಂದೆ... ದಯವಿಟ್ಟು ನನಗೆ ನಿರಾಶನನ್ನಾಗಿ ಮಾಡದೇ ಸಹಾಯ ಮಾಡಿ "ಎಂದು
ಅಂಗಲಾಚಿದ. ಆಗ ಸುರೇಶ್ -" ಅದ್ಸರಿ ನೀವು ಐವತ್ತು ಸಾವಿರ ರೂಪಾಯಿ ಕೇಳಿದ್ರಿ... ಅಷ್ಟರಲ್ಲಿ ಮದುವೆ ಕಾರ್ಯ ನಡೆಯುತ್ತಾ?"ಎಂದು ಸುರೇಶ್ ಪ್ರಶ್ನಿಸಿದಾಗ ಆ ವ್ಯಕ್ತಿ -" ಹೂಂ.. ಸಾರ್ ಹೇಗೋ ನಡೆದು ಹೋಗತ್ತೆ "ಎಂದು ಸಪ್ಪನೆ ಮುಖ ಮಾಡಿ ಉತ್ತರಿಸುತ್ತಾನೆ. ಆಗ ಸುರೇಶ್ -" ಒಂದ್ನಿಮಿಷ .. ಬಂದೇ ಇರಿ "ಎಂದು ಎದ್ದು ತನ್ನ ರೂಮಿನತ್ತ ಬಂದಾಗ ಆತನ ಹಿಂದೆಯೇ ನಿರ್ಮಲಾ ಕೂಡ ಬಂದವಳು ಪತಿ ಯ ಭುಜ ತಟ್ಟಿ" ರ್ರೀ... ಐವತ್ತು ಸಾವಿರ ರೂಪಾಯಿ ಕೊಡೋ ಅವಶ್ಯಕತೆ ಏನಿಲ್ಲ ಆತ ನಿಮಗೆ ಆವಾಗ ಕೊಟ್ಟಿದ್ದು ಬರೀ ಎರಡು ಸಾವಿರ ರೂಪಾಯಿ ಅಲ್ವಾ? ಅದಕ್ಕೆ ಬೇಕಿದ್ರೆ ಇನ್ನೂ ಮೂರು ಸಾವಿರ ಸೇರಿಸಿ ಒಟ್ಟು ಐದು ಸಾವಿರ ರೂಪಾಯಿ ಕೊಟ್ಟು ಸಾಗ ಹಾಕಿ " ಎಂದಾಗ ಆಕೆಯ ಮುಖ ಒಂದು ಬಾರಿ ನೋಡಿದ ಸುರೇಶ್, ನೋಡು.. ನಿರ್ಮಲಾ.. ನನಗೆ ಸ್ವಲ್ಪ ಮನುಷ್ಯನನ್ನಾಗಲು ಬಿಡು " ಎನ್ನುತ್ತ ಬೀರುವಿನಲ್ಲಿ ಇದ್ದ ಐನೂರು ರೂಪಾಯಿ ನೋಟುಗಳ ಐವತ್ತು ಸಾವಿರ ಎರಡು ಕಟ್ಟುಗಳನ್ನು ಹಿಡಿದು ಕೊಂಡು ಆಚೆಗೆ ಬಂದವ ಆ ವ್ಯಕ್ತಿ ಗೆ ಮೊದಲು ಐವತ್ತು ಸಾವಿರ ಒಂದು ಕಟ್ಟು ಕೊಡುತ್ತ" ನೀವು ನನಗೆ ಐವತ್ತು ಸಾವಿರ ಕೇಳಿದಿರಲ್ವಾ ತಗೊಳ್ಳಿ "ಎಂದು ಹೇಳಿ ಅದರ ಬೆನ್ನಲ್ಲೇ ಮತ್ತೊಂದು ಐವತ್ತು ಸಾವಿರ ರೂಪಾಯಿ ಕಟ್ಟನ್ನು ಕೊಟ್ಟವ - ಇದು ನಾನು ಸಂತೋಷದಿಂದ ನಿಮ್ಮ ಮಗಳ ಮದುವೆ ಗೆ ಕೊಡುತ್ತಿರುವ ಕಾಣಿಕೆ"ಎಂದು ಹೇಳಿದವ ಪುನಃ -" ನೋಡಿ... ಯಾವುದೇ ಕಾರಣಕ್ಕೂ ಈ ಹಣ ನನಗೆ ವಾಪಸ್ ಮಾಡಲು ಬರಬೇಡಿ " ಎಂದು ಹೇಳಿದಾಗ ಆ ವ್ಯಕ್ತಿ ಯ ಕಣ್ಣಂಚಿನಲ್ಲಿ ನೀರು ಬಂದು ನಿಂತಿರುತ್ತವೆ.ಆಗ ಆತ - " ಸಾರ್.. ತಾವು ಇಷ್ಟೊಂದು ಉದಾರಿಗಳು, ಸಹೃದಯಿಗಳು ಅಂತ ಗೊತ್ತೇ ಇರ್ಲಿಲ್ಲ ಎಂದು ಹೇಳಿದಾಗ ಸುರೇಶ್ ಮುಗುಳು ನಗೆ ಬೀರುತ್ತ" ಇಲ್ಲ... ನಾನು ನಿಮ್ಮಷ್ಟು ಉದಾರಿ, ಹೃದಯವಂತನಲ್ಲ... ಅಂದು ನನಗೆ ನೀವು ಸಹಾಯ ಮಾಡಲು ಮುಂದಾದಾಗ ನಿಮ್ಮ ಬಳಿ ಎರಡು ಸಾವಿರ ನೂರು ರೂಪಾಯಿ ಇತ್ತು ಅದರಲ್ಲಿ ನೂರು ರೂಪಾಯಿ ಇಟ್ಟುಕೊಂಡು ನನಗೆ ಎರಡು ಸಾವಿರ ರೂಪಾಯಿಗಳನ್ನು ಓರ್ವ ಅಪರಿಚಿತನಿಗೆ ಕೊಟ್ಟು ಹತ್ತು ವರ್ಷ ಕಳೆದರೂ ಅದನ್ನು ವಾಪಸ್ ಪಡೆಯಲು ಬಂದಿಲ್ಲ.. ನನ್ನಂತಹವರು ಲಕ್ಷಾಂತರ ರೂಪಾಯಿ ಇಟ್ಟುಕೊಂಡು ಅದರಲ್ಲಿ ಒಂದು ಲಕ್ಷ ರೂಪಾಯಿ ಕೊಡುವವರು ಸಿಗಬಹುದು ಆದರೆ... ನಿಮ್ಮಂತಹವರು ಈಗಿನ ಕಾಲದಲ್ಲಿ ಹುಡುಕಿದರೂ ಸಿಗೋದು ಕಷ್ಟ "ಎಂದು ಹೇಳಿ ಈ ಹಣ ನಿಮ್ಮದೇ ಹತ್ತು ವರ್ಷಗಳ ಹಿಂದೆ ಆಗ ಎರಡು ಸಾವಿರ ರೂಪಾಯಿ ಎಫ್.ಡಿ. ನಲ್ಲಿ ಇಟ್ಟಿದ್ದೆ ಅಂತ ತಿಳಿದು ಈ ಒಂದು ಲಕ್ಷ ರೂಪಾಯಿ ಗಳನ್ನು ಯಾವ ಚಿಂತೆ ಇಲ್ಲದೇ ತೆಗೆದುಕೊಂಡು ಹೋಗಿ ಶುಭವಾಗಲಿ"ಎಂದು ಹೃತ್ಪೂರ್ವಕವಾಗಿ ಹಾರೈಸಿ ಬೀಳ್ಕೋಡುತ್ತಾನೆ. ಸುರೇಶ್ ನಿಂದ ಹಣ ಪಡೆದ ವ್ಯಕ್ತಿ ಕೂಡ ಅಷ್ಟೇ ತುಂಬು ಹೃದಯದಿಂದ ಧನ್ಯವಾದಗಳನ್ನು ಹೇಳಿ ನಿರ್ಗಮಿಸುತ್ತಾನೆ.

ಲೇಖಕರು:ಅರವಿಂದ.ಜಿ.ಜೋಷಿ.
ಸಂಗ್ರಹ:ವೀರೇಶ್ ಅರಸೀಕೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1092

ದಿನಕ್ಕೊಂದು ಕಥೆ 1097