ದಿನಕ್ಕೊಂದು ಕಥೆ 1106

*🌻ದಿನಕ್ಕೊಂದು ಕಥೆ🌻*
*ಸಮಸ್ತ ಸೃಷ್ಟಿಯ ಪಾಲಕ ಭಗವಂತ*

ಮಹಾರಾಷ್ಟ್ರದ ಸಮರ್ಥ ರಾಮದಾಸ ಸ್ವಾಮಿಗಳು ಒಬ್ಬ ಮಹಾನ ಸಂತರಾಗಿದ್ದರು. ಅವರು ಹದಿನೇಳನೇ ಶತಮಾನದಲ್ಲಿ ಮಹಾರಾಷ್ಟ್ರದ ಮಹಾನ ದೈವಭಕ್ತ ರಾಜನಾಗಿದ್ದ ಶಿವಾಜಿ ಮಹಾರಾಜರ ಗುರುಗಳಾಗಿದ್ದರು. ಒಂದು ದಿನ ಶಿವಾಜಿ ಮಹಾರಾಜರು ಮತ್ತು ಅವರ ಗುರುಗಳು ಅರಮನೆಯ ಒಳಗೆ ಕಟ್ಟಡ ಕಾಮಗಾರಿಯನ್ನು ವೀಕ್ಷಿಸುತ್ತಿದ್ದರು, ಆಗ ರಾಜನು ’ನಿಜವಾಗಿಯೂ ನಾನೊಬ್ಬ ಮಹಾನ ರಾಜನಾಗಿದ್ದೇನೆ, ನಾನು ನನ್ನ ಎಲ್ಲ ವಿಷಯಗಳಲ್ಲಿಯೂ ಎಷ್ಟೊಂದು ಕಾಳಜಿ ತೆಗೆದುಕೊಳ್ಳುತ್ತೇನೆ!’ ಎಂದು ವಿಚಾರ ಮಾಡುತ್ತಿದ್ದನು. ಗುರುಗಳು ತಮ್ಮ ದಿವ್ಯ ಜ್ಞಾನದಿಂದ ಶಿಷ್ಯನ ಮನಸ್ಸಿನಲ್ಲಿ ಬಂದ ವಿಚಾರವನ್ನು ತಿಳಿದುಕೊಂಡರು ಮತ್ತು ಕೂಡಲೇ ಅವನ ವಿಚಾರವನ್ನು ಸರಿಪಡಿಸಬೇಕೆಂದು ತೀರ್ಮಾನಿಸಿದರು.

ಸಮೀಪದಲ್ಲಿಯೇ ದೊಡ್ಡದಾದ ಬಂಡೆಯೊಂದು ಇತ್ತು. ರಾಮದಾಸ ಸ್ವಾಮಿಗಳು ಶಿವಾಜಿ ಮಹಾರಾಜರ ಕೆಲವು ಸೈನಿಕರನ್ನು ಕರೆದು ಆ ಬಂಡೆಯನ್ನು ಎರಡು ತುಂಡಾಗುವಂತೆ ಒಡೆಯಲು ಹೇಳಿದರು. ಅವರ ಮಾತಿನಂತೆ ಸೈನಿಕರು ಬಂಡೆ ಕಲ್ಲನ್ನು ಒಡೆದಾಗ, ಅಲ್ಲಿ ಉಪಸ್ಥಿತರಿದ್ದ ಎಲ್ಲರೂ, ನಂಬಲು ಅಸಾಧ್ಯವಾದ ದೃಷ್ಯವೊಂದನ್ನು ನೋಡಿದರು. ಆ ಕಲ್ಲುಬಂಡೆಯಲ್ಲಿ ಒಂದು ನೀರು ತುಂಬಿಕೊಂಡಿದ್ದ ಪೊಳ್ಳುಭಾಗವೊಂದಿತ್ತು, ಅದರಲ್ಲಿ ಒಂದು ಸಣ್ಣ ಕಪ್ಪೆಯಿತ್ತು. ಬಂಡೆಯು ಸೀಳಿ ಎರಡು ತುಂಡಾದ ಕೂಡಲೇ ಅದರಲ್ಲಿ ಬಂಧಿಸಲ್ಪಟ್ಟಿದ್ದ ಕಪ್ಪೆಯು ಸ್ವತಂತ್ರಗೊಂಡು ಹೊರಗೆ ಜಿಗಿಯಿತು.

ಈಗ ಸಮರ್ಥ ರಾಮದಾಸ ಸ್ವಾಮಿಗಳು ಶಿವಾಜಿ ಮಹಾರಾಜರತ್ತ ತಿರುಗಿ ಪ್ರಶ್ನೆ ಕೇಳಿದರು, ಒಂದು ವೇಳೆ ನೀನು ಈ ಸಾಮ್ರಾಜ್ಯದಲ್ಲಿರುವ ಎಲ್ಲರ ಯೋಗಕ್ಷೇಮವನ್ನು ನೋಡಿಕೊಳ್ಳುತ್ತಿದ್ದೀಯಾ ಎಂದು ಭಾವಿಸುವುದಾದರೆ, ಹೇಳು ಕಲ್ಲಿನಲ್ಲಿ ಬಂಧಿಯಾಗಿದ್ದ ಕಪ್ಪೆಯ ಯೋಗಕ್ಷೇಮವನ್ನು ಯಾರು ನೋಡಿಕೊಳ್ಳುತ್ತಿದ್ದರು? ಮಹಾರಾಜರು ತಮ್ಮ ತಪ್ಪನ್ನು ಅರಿತುಕೊಂಡರು ಮತ್ತು ತಮ್ಮ ಅಹಂಕಾರದಿಂದ ಕೂಡಿದ್ದ ಆಲೋಚನೆಗಾಗಿ ನಾಚಿಕೆಪಟ್ಟುಕೊಂಡರು. ಅವರಿಗೆ ಮನದಟ್ಟಾಯಿತು, ಭಗವಂತನೇ ಎಲ್ಲವನ್ನೂ ಸೃಷ್ಟಿಸಿದ್ದಾನೆ ಮತ್ತು ತನ್ನ ಸಮಸ್ತ ಸೃಷ್ಟಿಯ ಯೋಗಕ್ಷೇಮವನ್ನು ಅವನೇ ನೋಡಿಕೊಳ್ಳುತ್ತಿದ್ದಾನೆ.

ಸಾಧನೆಯನ್ನು ಸೇರಿಸಿಕೊಂಡು ಸಮಸ್ತ ಕಾರ್ಯಗಳನ್ನೂ ವಿನಮ್ರ ಭಾವದಿಂದ ಮಾಡಬೇಕು. ಶರಣಾಗತ ಭಾವದಿಂದ ಮಾಡಿದ ಸಾಧನೆಯು ಭಗವಂತನೊಬ್ಬನೇ ಸರ್ವಶಕ್ತ ಮತ್ತು ಎಲ್ಲವನ್ನೂ ಅವನೇ ಸೃಷ್ಟಿಸಿದ್ದಾನೆ ಎಂಬ ಸತ್ಯವನ್ನು ಅನುಭವಕ್ಕೆ ತರುತ್ತದೆ.

ಕೃಪೆ: ಅಧ್ಯಾತ್ಮಿಕ ಕಥೆಗಳು.
ಸಂಗ್ರಹ:ವೀರೇಶ್ ಅರಸೀಕೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1055

ದಿನಕ್ಕೊಂದು ಕಥೆ 1059