ದಿನಕ್ಕೊಂದು ಕಥೆ 1107
*🌻ದಿನಕ್ಕೊಂದು ಕಥೆ🌻*
*ಹೂವು ಕಲಿಸಿದ ಪಾಠ*
ಒಬ್ಬ ಹುಡುಗನಿಗೆ ಸ್ವಲ್ಪ ದುಡುಕು ಸ್ವಭಾವ. ತನಗೆ ಯಾರಾದರೂ ತೊಂದರೆ ಕೊಟ್ಟರೆ ಅವರ ಮೇಲೆ ಸೇಡು ತೀರಿಸಿಕೊಳ್ಳದೇ ಬಿಡುವುದೇ ಇಲ್ಲ ಎಂಬ ಮನೋಭಾವದವನು. ಅವನಪ್ಪನಿಗೆ ಮಗನ ಈ ಸ್ವಭಾವ ಇಷ್ಟವಾಗುತ್ತಿರಲಿಲ್ಲ. ಮಗನಿಗೆ ತೊಂದರೆ ಆಗಿದ್ದು ನಿಜವೇ.ಅವನ ಮನಸ್ಸಿಗೆ ನೋವಾಗಿದ್ದು ನಿಜವೇ. ಹಾಗೆಂದ ಮಾತ್ರಕ್ಕೆ , ಹೋಗು ನೀನೂ ಅವರಿಗೆ ತೊಂದರೆ ಕೊಡು ಎಂದು ಹೇಳುವುದು, ಅಪ್ಪನ ಜವಾಬ್ದಾರಿಯಲ್ಲ. ಆದರೆ ಹೀಗೆ ಮಾಡಬೇಡ ಎಂದು ಮಗನಿಗೆ ಹೇಳಿದರೆ, ಅವನಿಗೆ ಇನ್ನಷ್ಟು ಕೋಪ ಜಾಸ್ತಿಯಾಗುತ್ತದೆ. ತನ್ನ ಅಪ್ಪ ಕೂಡ ತನ್ನನ್ನು ನಂಬುವುದಿಲ್ಲವೆಂದು ಅವನಿಗೆ ಬೇಸರವಾಗುತ್ತದೆ. ಆದರೆ ಪ್ರಪಂಚದಲ್ಲಿ, ನಾವು ಹೇಗೆ ಬದುಕಬೇಕು ಎಂಬುದನ್ನು ಮಗನಿಗೆ ತಿಳಿಸುವುದು ತಂದೆಯಾದವನ ಕರ್ತವ್ಯ, ಎಂದುಕೊಂಡಿದ್ದ ಆತ.
ಪ್ರತಿದಿನ ಮಗನಿಗೆ, ತನಗೆ ತೊಂದರೆ ಕೊಟ್ಟವರ ಮೇಲೆ ,ಹೇಗೆ ಸೇಡುತೀರಿಸಿಕೊಳ್ಳಬೇಕೆಂಬ ಯೋಚನೆ. ಅಪ್ಪನಿಗೆ ಮಗನನ್ನು ಇದರಿಂದ ಹೇಗೆ ಹೊರ ತರುವುದು, ಎಂಬ ಯೋಚನೆ.ಅವನ ದುಡುಕು ಸ್ವಭಾವದಿಂದ ಯಾರಿಗೂ ತೊಂದರೆಯಾಗದಂತೆ ಅವನನ್ನು ತಡೆಯುವುದು ಹೇಗೆ ಎಂಬ ಚಿಂತೆ ಅಪ್ಪನದು. ಇದು ಅಪ್ಪನ ಕರ್ತವ್ಯ ಕೂಡ ಎಂದುಕೊಂಡಿದ್ದ ಆತ . ಹೀಗೆ ಅಪ್ಪ ಮಗ ಇಬ್ಬರೂ ತಮ್ಮ ತಮ್ಮ ಯೋಚನೆಯಲ್ಲಿ ಇದ್ದರು.
ಒಂದು ದಿನ ದೇವರ ಪೂಜೆಗಾಗಿ ಬುಟ್ಟಿಯಲ್ಲಿ ಇಟ್ಟ ವಿವಿಧ ಬಣ್ಣ ಬಣ್ಣದ ಸುವಾಸನೆಯುಕ್ತ ಹೂಗಳು, ಮನೆಯ ತುಂಬೆಲ್ಲ ಸುವಾಸನೆ ಹರಡಿ ಒಳ್ಳೆಯ ವಾತಾವರಣವನ್ನು ಸೃಷ್ಟಿ ಮಾಡಿತ್ತು. ಮಗ ಅಲ್ಲಿ ಇರುವುದನ್ನು ನೋಡಿ, ಅಪ್ಪ ಇದ್ದಕ್ಕಿದ್ದಂತೆ ಹೂವಿನ ಬುಟ್ಟಿಯ ಮುಂದೆ ಕುಳಿತು, ಸುವಾಸನೆಯುಕ್ತ, ಹೂಗಳನ್ನು ಹೊಸಕತೊಡಗಿದ.
ಇದನ್ನು ನೋಡಿದ ಮಗ , ಅಪ್ಪ ಇದೇಕೆ ಹೀಗೆ ಮಾಡುತ್ತಿರುವೆ? ಎಂದು ಕೇಳಿದ.
ಆಗ ಅಪ್ಪ ನನಗೆ ಈ ಹೂಗಳಲ್ಲಿ ಒಂದೊಂದರಲ್ಲಿ ಒಂದೊಂದು ಗುಣ ಇಷ್ಟವಾಗುತ್ತಿಲ್ಲ, ಅದಕ್ಕೆ ಇವುಗಳನ್ನು ಇಲ್ಲವಾಗಿಸುತ್ತೇನೆ, ಎಂದು ಹೇಳಿದ.
ಆಗ ಮಗ, ಇದೇನಪ್ಪಾ ನಿನ್ನ ಹುಚ್ಚಾಟ, ಹೂವು ,ಅದು ಇರುವ ಹಾಗೆ ಇರುತ್ತದೆ, ಅದರ ಗುಣ ನಿನಗಿಷ್ಟವಾಗಲಿಲ್ಲವೆಂದು ಅವುಗಳನ್ನು ನಾಶ ಮಾಡಲಿಕ್ಕೆ ಹೊರಟಿರುವೆಯಾ, ಪಾಪ ಈ ಹೂವುಗಳು ನಿನಗೇನು ಮಾಡಿದ್ದವು? ನೀನು ಮಾಡುತ್ತಿರುವುದು ಸರಿಯೇ? ಹೂವು ಇಷ್ಟವಾಗುವುದು ಇಷ್ಟವಾಗದೇ ಇರುವುದು, ನಿನ್ನ ಸಮಸ್ಯೆ, ಮೊದಲು ಅದನ್ನು ನೀನು ಸರಿಪಡಿಸಿಕೊ, ಅದನ್ನು ಬಿಟ್ಟು, ಹೂಗಳನ್ನೇಕೆ ಹಾಳು ಮಾಡುವೆ, ಎಂದು ಹೇಳಿದ .
ನೋಡಿದಿಯಾ ಮಗನೇ, ಈ ಹೂಗಳ, ಬಣ್ಣ ,ಸುವಾಸನೆ ಅದರ ಆಕಾರ ನನಗಿಷ್ಟವಿಲ್ಲವೆಂದು, ಹೊಸಕಿ ಹಾಕುತ್ತಿದ್ದೇನೆ, ಆದರೂ ಅವು ನನಗೆ ಏನನ್ನೂ ಮಾಡುತ್ತಿಲ್ಲ, ನನ್ನ ಮೇಲೆ ಸೇಡು ತೀರಿಸಿಕೊಳ್ಳುತ್ತಿಲ್ಲ. ಬದಲಿಗೆ ಹಿಸುಕಿದ ಕೈಗೆ ಸುವಾಸನೆಯನ್ನೇ ನೀಡುತ್ತಿವೆ, ಎಂದು ಹೇಳಿದ.
ನಾನು ನಿನಗೆ ಅದನ್ನೇ ಹೇಳುತ್ತಿರುವುದು, ಅವುಗಳ ಈ ಒಳ್ಳೆಯ ಗುಣಕ್ಕಾದರೂ ಅವುಗಳನ್ನು ಹಿಸುಕುವುದನ್ನು ಬಿಡು ಎನ್ನುತ್ತಾನೆ ಮಗ.
ಆಗ ಅಪ್ಪ ನಗುತ್ತಾ ,ಹೂವು ಎಂತ ದೊಡ್ಡ ಪಾಠವನ್ನು ಹೇಳುತ್ತಿದೆಯಲ್ಲವೇ? ನಾವು ಅಷ್ಟೇ ನಮಗೆ ತೊಂದರೆ ಕೊಡುವವರಿಗೆ ಪ್ರೀತಿಯನ್ನು ಹಂಚಿದರೆ ದ್ವೇಷಕ್ಕೆ ಜಾಗವಿರುವುದಿಲ್ಲ. ಈ ಹೂವುಗಳನ್ನು ನೋಡಿ ಕಲಿಯಬೇಕಾದದ್ದು ಬಹಳಷ್ಟು ಇದೆ, ಎಂದು ಹೇಳುತ್ತಾನೆ .
ತನಗೆ ಬುದ್ಧಿ ಕಲಿಸಲೆಂದು ಅಪ್ಪ ಈ ರೀತಿ ಮಾಡಿದ್ದೆಂದು ಮಗನಿಗೆ ಗೊತ್ತಾಯ್ತು. ತನಗೆ ತೊಂದರೆ ಕೊಟ್ಟವರನ್ನು ತಾನು ಸುಮ್ಮನೆ ಬಿಡುವುದಿಲ್ಲ , ಎಂದು ತಾನು ಹಟ ತೊಟ್ಟಿದ್ದಕ್ಕೆ, ಅಪ್ಪ ಈ ರೀತಿಯಾಗಿ ಹೂವನ್ನು ಹಿಸುಕುವುದರ ಮೂಲಕ ತನಗೆ ಪಾಠ ಕಲಿಸಿದ ಎಂದೂ ಮಗನಿಗೆ ಗೊತ್ತಾಯ್ತು.
ತನ್ನ ಸೇಡು ತೀರಿಸಿಕೊಳ್ಳುವ, ಹಠದ ನಿರ್ಧಾರವನ್ನು ಕೈ ಬಿಡುತ್ತಾನೆ.
ಇದನ್ನೇ ಧರ್ಮ ಗುರು,ಗುರು ಗೋವಿಂದ ಸಿಂಗರು, ಹೂವು, ತನ್ನನ್ನು ಹೊಸಕಿದ ಕೈಗಳನ್ನು ಕೂಡಾ ಸುಗಂಧ ಭರಿತಗೊಳಿಸುತ್ತದೆ ಎಂದು ಹೇಳಿರುವುದು. ಅದೇ ಹೂವಿನ ಗುಣ.
ಯಾರೋ , ನಮಗೆ ಕೇಡು ಬಯಸುತ್ತಾರೆಂದು , ನಾವು ಅದನ್ನೇ ಮಾಡಿದರೆ, ಅವರಿಗೂ ನಮಗೂ ಏನೂ ವ್ಯತ್ಯಾಸವಿರುವುದಿಲ್ಲ.
ಅದಕ್ಕೆ ದಾಸರು ಹೇಳಿರುವುದು.
ವಿಷವಿಕ್ಕಿದವಗೆ, ಷಡ್ರಸವ ನುಣಿಸಲು ಬೇಕು.
ದ್ವೇಷಿಸಿದವರನ್ನು, ಪ್ರೀತಿಸಬೇಕು.ಎಂದು.
ಕೃಪೆ:ಸುವರ್ಣಾ ಮೂರ್ತಿ.
ಸಂಗ್ರಹ: ವೀರೇಶ್ ಅರಸೀಕೆರೆ.
Comments
Post a Comment