ದಿನಕ್ಕೊಂದು ಕಥೆ 1111
*🌻ದಿನಕ್ಕೊಂದು ಕಥೆ🌻*
*ಕಲ್ಲುಕುಟಿಕ ನ ಕನಸು*
ಒಬ್ಬ ಕಲ್ಲು ಕುಟಿಕ ಕಲ್ಲುಬಂಡೆಗಳನ್ನು ಒಡೆಯುವ ಕೆಲಸ ಮಾಡಿ ಜೀವನ ನಡೆಸುತ್ತಿದ್ದ. ಈ ಜೀವನ ಎಷ್ಟು ಕಷ್ಟ. ನಾನು ರಾಜನಾಗಿದ್ದರೆ ಹೇಗೆ ಇರಬಹುದು ಎಂದು ಕಲ್ಪಿಸಿಕೊಂಡ ಅಷ್ಟೇ, ಹಾಗಂದಿದ್ದೆ ತಡ ರಾಜನಾಗಿಬಿಟ್ಟ. ಜರತಾರಿ ಪೋಷಾಕು, ಜರಿಯ ಪೇಟಾ, ಆಭರಣಗಳನ್ನು ಧರಿಸಿ ಅಂಗರಕ್ಷಕರ ಜೊತೆಯಲ್ಲಿ ಆನೆಯ ಅಂಬಾರಿ ಮೇಲೆ ಕುಳಿತು ಸವಾರಿ ಹೋಗುತ್ತಿದ್ದ. ಆಹಾ ಎಂಥಾ ಸುಖ ಜೀವನ ಎಂದುಕೊಂಡ. ಹೀಗೆ ಹೋಗುವಾಗ ಮಧ್ಯಾಹ್ನದ ಸೂರ್ಯ ನೆತ್ತಿಯ ಮೇಲೆ ಬಂದ. ರಾಜನಿಗೆ ವಿಪರೀತ ಸೆಕೆ, ಮೈಯೆಲ್ಲ ಬೆವರಿತು. ಆನೆ ಮೇಲೆ ಕುಳಿತಿದ್ದ ರಾಜನಿಗೆ ಅನಿಸಿತು ರಾಜನೇ ದೊಡ್ಡವನು ಎಂದುಕೊಂಡಿದ್ದ ಅವನಿಗೆ ರಾಜನಿಗಿಂತ ಸೂರ್ಯ ಶ್ರೇಷ್ಠ ಎನಿಸಿತು. ಅವನ ಬಯಕೆಯಂತೆ ಸೂರ್ಯನಾಗಿ ಇಡೀ ಜಗತ್ತಿಗೆ ಬೆಳಕು ಕೊಡಲು ಶುರು ಮಾಡಿದ. ಅವನ ಸಂಭ್ರಮ ಹೇಳತೀರದು
ವಾವ್ ಜೀವನ ಅಂದರೆ ಇದು ಎಂದುಕೊಂಡ.
ಆ ಹೊತ್ತಿಗೆ ಎಲ್ಲಿಂದಲೋ ಒಂದು ಮೋಡ ಬಂದು ಸೂರ್ಯನನ್ನು ಮುಚ್ಚಿ ಬಿಟ್ಟಿತು. ಅವನಿಗನ್ನಿಸಿತು ಓಹೋ ಸೂರ್ಯನಿಗಿಂತ ಮೋಡದ ಶಕ್ತಿ ಹೆಚ್ಚು. ನಾನು ಮೋಡ ಆಗಬೇಕು ಎಂದುಕೊಂಡ. ಅವನ ಅಪೇಕ್ಷೆಯಂತೆ ಮೋಡವಾದ. ಮೋಡ ಮುಂದೆ ಮುಂದೆ ಸಾಗುತ್ತಿತ್ತು. ಆದರೆ ಎಲ್ಲಿಂದಲೋ ಬೀಸಿ ಬಂದ ಗಾಳಿ ಮೋಡ ವನ್ನು ಹಾರಿಸಿಕೊಂಡು ಹೋಯಿತು. ಈಗ ಅವನಿಗೆ ಮತ್ತೆ ಸಿಟ್ಟು ಬಂತು. ಎಲ್ಲಕ್ಕಿಂತ ಗಾಳಿಯೇ ಹೆಚ್ಚು, ನಾನು ಗಾಳಿಯಾಗಬೇಕು ಎಂದುಕೊಂಡ, ಗಾಳಿಯಾಗಿ ಜೋರಾಗಿ ಬೀಸ ತೊಡಗಿದ ಗಾಳಿಯ ಹೊಡೆತಕ್ಕೆ ಗಿಡ, ಎಲೆ, ಮರ, ಸಮುದ್ರ, ಎಲ್ಲವೂ ಅಲ್ಲಾಡ ತೊಡಗಿತು. ಇವನಿಗೆ ಖುಷಿಯೋ ಖುಷಿ. ನಾನು ಎಷ್ಟುಶಕ್ತಿವಂತ ಎಂದುಕೊಂಡ. ಆದರೇನು ಅಲ್ಲಿದ್ದ ಒಂದು ಬಂಡೆ ಮಾತ್ರ ಅಲುಗಾಡದೆ ಹಾಗೆ ನಿಂತಿತ್ತು. ಅವನಿಗನ್ನಿಸಿತು, ಓಹೋ ಗಾಳಿಗಿಂತ ಕಲ್ಲಿನ ಬಂಡೆ ಗಟ್ಟಿ ಎಂದುಕೊಂಡ ತಕ್ಷಣ ಬಂಡೆಯಾದ. ಬಂಡೆಯಾದ ಸ್ವಲ್ಪ ಹೊತ್ತಿಗೆ ಒಬ್ಬ ಮನುಷ್ಯ ಬಂದು ಉಳಿ ಯಿಂದ ಬಂಡೆ ಮೇಲೆ ಬಲವಾಗಿ ನಾಲ್ಕಾರು ಪೆಟ್ಟು ಕುಟ್ಟಿದನು. ಕುಟ್ಟಿದ ರಭಸಕ್ಕೆ ಬಂಡೆ ಸೀಳಾಯಿತು. ಬಂಡೆಯಾಗಿದ್ದ ಅವನಿಗನಿಸಿತು ಛೇ ಬಂಡೇಗಿಂತ ಬಂಡೆ ಕುಟ್ಟಿ ಒಡೆಯುವವನೇ ದೊಡ್ಡವನು. ಅವನೇ ಹೆಚ್ಚು ಬುದ್ದಿವಂತ- ಶಕ್ತಿವಂತ. ಇವು ಯಾವುದು ಬೇಡ. ನಾನೀಗ ಅವನಾಗಬೇಕು ಎಂದು ಕೊಂಡ ಮತ್ತೆ ಹಿಂದಿನಂತೆ ಕಲ್ಲು ಕುಟಿಕನಾದ.
ಬಹಳಷ್ಟು ಮನಸ್ಸುಗಳು ಬೇರೆಯವರ ಕಲೆ, ಸಿರಿವಂತಿಕೆ, ಉದ್ಯೋಗ, ಗೌರವ, ಮಾತುಗಾರಿಕೆ, ಸೌಂದರ್ಯ, ವಿಶೇಷ ಪ್ರತಿಭೆ, ಇವು ತಮಗಿಲ್ಲವೆಂದು, ಇದ್ದಿದ್ದರೆ,
ಹೀಗಂದು ಕೊಂಡು, ಇರುವುದನ್ನು ಮರೆತು ಇಲ್ಲದಿರುವ ದೇವರು ಎಲ್ಲರಿಗೂ ಸಮನಾಗಿ ಕೊಟ್ಟಿರುವ ಅವಕಾಶವನ್ನು ಅರಿಯದೆ, ನಮಗಿಲ್ಲ ಎಂಬ ಯೋಚನೆ ಯಲ್ಲಿ ತಮ್ಮಲ್ಲಿರುವ ಸಂತೋಷವನ್ನು ಮರೆತುಬಿಡುತ್ತಾರೆ. ಬೇರೆಯವರಲ್ಲಿ ಏನೇ ಇರಲಿ, ಅದು ಇಲ್ಲ ಎಂದು ಹೋಲಿಕೆ ಮಾಡಿಕೊಳ್ಳದೆ, ಎಲ್ಲರಿಗೂ ಭಗವಂತ ಒಂದೊಂದು ಸ್ಥಾನವನ್ನು ಕೊಟ್ಟು ನೆಲೆಸುವಂತೆ ಸೂಚಿಸಿರುತ್ತಾನೆ. ಆ ಜಾಗದಲ್ಲೇ ನಿಂತು ಶ್ರಮಪಟ್ಟು ಕೆಲಸ ಮಾಡಿ, ಅವರನ್ನವರೇ ಬೆಳೆಸಿಕೊಳ್ಳಬೇಕು. ಇನ್ನೊಬ್ಬ ರಲ್ಲಿರುವುದು ನಮ್ಮದಾಗುವುದಿಲ್ಲ, ನಮ್ಮಲ್ಲಿರುವುದನ್ನು ಬೇರೆಯವರು ಕಿತ್ತು ಕೊಳ್ಳಲು ಆಗುವುದಿಲ್ಲ. ನಾವು ನಿಂತ ಸ್ಥಾನದ ಜಾಗದಲ್ಲೇ ನಿಂತು ಆ ಸ್ಥಾನವನ್ನೆ ಎಲ್ಲರೂ ತಿರುಗಿ ನೋಡುವಂತೆ ಮಾಡಬೇಕು.
ಕೃಪೆ:- ಆಶಾ ನಾಗಭೂಷಣ.
ಸಂಗ್ರಹ:ವೀರೇಶ್ ಅರಸೀಕೆರೆ.
Comments
Post a Comment