ದಿನಕ್ಕೊಂದು ಕಥೆ 1114
*🌻ದಿನಕ್ಕೊಂದು ಕಥೆ🌻*
*ಅಪ್ಪ*
" ಅಣ್ಣಾ.... ಅಪ್ಪನಿಗೆ ತುಂಬಾ ಹುಷಾರಿಲ್ಲ ಅದಕ್ಕೇ ಅವರನ್ನು ಸಿಟಿ ಗೆ ಕರೆದುಕೊಂಡು ಬಂದು ಇಲ್ಲಿನ ಕಾವೇರಿ ಆಸ್ಪತ್ರೆಗೆ ಅಡ್ಮಿಟ್ ಮಾಡಿದ್ದೇನೆ ಬೇಗ ಬಾ...."ಎಂದು ಅವಿನಾಶ್ ನ ತಮ್ಮ ಕಿರಣ್ ಫೋನ್ ಮಾಡಿದ್ದ. ತಮ್ಮನೊಂದಿಗೆ ಫೂನ್ ನಲ್ಲಿ ಮಾತು ಮುಗಿಸುತ್ತಿದ್ದಂತೆ, ಅಡುಗೆ ಮನೆಯಲ್ಲಿ ಇದ್ದ ಆತನ ಪತ್ನಿ ಮಾನಸಿ ಈಚೆಗೆ ಬಂದು -" ಯಾರದು ಫೋನ್.. ಅಷ್ಟೊತ್ತಿಂದ ಮಾತಾಡ್ತಾ ಇದ್ರೀ"ಎಂದು ಕೇಳಿದಾಗ ಅವಿನಾಶ್ -" ಕಿರಣ್ ಮಾಡಿದ್ದಾ... ಅದರಲ್ಲಿ ಅಪ್ಪನಿಗೆ ತುಂಬಾ ಹುಷಾರಿರಲಿಲ್ಲವಂತೆ ಅದಕ್ಕೆ ಅವರನ್ನು ಕರೆದುಕೊಂಡು ಬಂದು ಇಲ್ಲಿನ ಕಾವೇರಿ ಆಸ್ಪತ್ರೆಗೆ ಅಡ್ಮಿಟ್ ಮಾಡಿದ್ದಾರಂತೆ.. ಬಂದು ಭೇಟಿ ಆಗು" ಎಂದು ಹೇಳಿದ್ದ "ಎಂದು ಆತ ಮಾತು ಮುಗಿಸಿ ರಲಿಲ್ಲ ಅಷ್ಟರಲ್ಲೇ ಮಾನಸಿ ತುಸು ಕೋಪದಿಂದ" ಹುಷಾರಿಲ್ಲ ಅಂದ ಮೇಲೆ ಯಾವುದಾದರೂ ಸರ್ಕಾರಿ ಆಸ್ಪತ್ರೆಗೆ ಅಡ್ಮಿಟ್ ಮಾಡಬೇಕಿತ್ತು ಈ ದುಬಾರಿ ಪ್ರೈವೇಟ್ ಆಸ್ಪತ್ರೆಗೆ ಹೋಗುವ ಅವಶ್ಯಕತೆ ಏನಿತ್ತು?"... ಅದೂ ಅಲ್ಲದೆ ಊರಲ್ಲಿ ಅಷ್ಟೊಂದು ಜನ ಆಯುರ್ವೇದ ಡಾಕ್ಟ್ರು
ಹಕೀಮ್ ರು ಇದ್ರಲ್ಲ ಅವರಿಗೇ ತೋರಿಸಬೇಕಾಗಿತ್ತು." ಎಂದಾಗ ಅವಿನಾಶ್ "ಏನೋ ಆರೋಗ್ಯ ತುಂಬಾ ಕೆಟ್ಟಿತ್ತು ಅನ್ಸತ್ತೆ ಅದಕ್ಕೆ ಈ ಆಸ್ಪತ್ರೆ ಗೆ ಅಡ್ಮಿಟ್ ಮಾಡಿದ್ದಾರೆ " ಎನ್ನುತ್ತಾನೆ. ಅದಕ್ಕೆ ಪ್ರತಿಯಾಗಿ ಮಾನಸಿ" ಎಲ್ಲೋ ಆ ಯಪ್ಪನಿಗೆ ದುಡ್ಡಿನ ಅವಶ್ಯಕತೆ ಇದೆ ಅಂತ ಕಾಣುತ್ತೆ... ಎಲ್ಲಿಂದ ತಂದು ಕೊಡ್ತೀರಿ?.. ಮೊದಲೇ ಒಂದೊಂದು ಪೈಸೆ ಗೂ ಒದ್ದಾಡ್ತಾ ಇದ್ದೀರಿ " ಎಂದಾಗ ಆತ " ನಿನ್ನೆ ನಾನು ಆ ಹತ್ತು ಸಾವಿರ ರೂಪಾಯಿ ಸಾಲಾ ಇಸ್ಕೊಂಡು ಬಂದೆನಲ್ಲ ಅದನ್ನೇ ತಗೊಂಡು ಹೋಗೋಣ ಬಾ "ಎನ್ನುತ್ತಾನೆ. ಆಗ ಮಾನಸಿ ಕೆಮ್ಮುತ್ತ" ರ್ರೀ... ಆ ಹತ್ತು ಸಾವಿರ ರೂಪಾಯಿ ಗಳಲ್ಲಿ ಐದು ಸಾವಿರ ಮನೆ ಮಾಲೀಕನಿಗೆ ಬಾಡಿಗೆ ಕೊಡಬೇಕು
ಇಲ್ಲಾಂದ್ರೆ ಆತ ಮನೆ ಖಾಲಿ ಮಾಡಿಸ್ತಾನೆ..... ಇನ್ನು ಉಳಿದ ಐದು ಸಾವಿರ ನನ್ನ ಚಿಕಿತ್ಸೆ ಗಂತಾ ಇಟ್ಟಿದ್ದೇನೆ "ಎಂದು ಹೇಳುತ್ತಾಳೆ.ಅದಕ್ಕೆ ಅವಿನಾಶ್ -" ಅದೆಲ್ಲಾ
ಆಮೇಲೆ ನೋಡಿದ್ರಾಯ್ತು... ಮತ್ತೆ ಯಾರಿಂದಲಾದ್ರೂ ಸಾಲಾ ಇಸ್ಕೊಂಡು ಬರ್ತೀನಿ... ಸಧ್ಯಕ್ಕೆ ಆ ದುಡ್ಡು ತಗೊಂಡು ಬಾ " ಎಂದಾಗ ಆಕೆ ಪುನಃ" ರ್ರೀ
ಎಷ್ಟೂಂತ ತರ್ತೀರಿ... ಮಕ್ಕಳಿಗೆ ಫೀಸು, ಬಟ್ಟೆ ತಗೋ ಬೇಕಾಗಿದೆ... ನೀವು
ಆಗಲ್ಲ ಅಂತ ಯಾಕೆ ಹೇಳಬಾರ್ದು?" ಎನ್ನುತ್ತಾಳೆ. ಈಗ ಸ್ವಲ್ಪ ಬೇಸರಗೊಂಡ ಅವಿನಾಶ್ -" ಏಯ್... ಅವರು ನನ್ನ ಅಪ್ಪ... ಸ್ವಲ್ಪ ಮರ್ಯಾದೆ ಯಿಂದ ಮಾತಾಡು " ಎಂದಾಗ ಆಕೆ -" ಹಾಗಾದ್ರೆ ನಾನು ನಿಮಗೇನೂ ಅಲ್ಲವಾ? ಅವರಿಗೇ ನೋ ವಯಸ್ಸು ಆಗ್ತಾ ಬಂತು... ನಾಳೆ ನನಗೇನಾದ್ರೂ ಹೆಚ್ಚು ಕಡಿಮೆ ಆದ್ರೆ
ಆವಾಗ ಏನು ಮಾಡ್ತಿರಾ?"ಎಂದು ಉತ್ತರಿಸಿದಾಗ ಆತ" ಸಾಕು ನಿಲ್ಸು ಪುರಾಣ..
ಈಗ ಎದ್ದು ಹೋಗಿ ಆ ದುಡ್ಡು ತಂಗೋಡು ಬಾ " ಎನ್ನುತ್ತಾನೆ. ಅಷ್ಟಕ್ಕೇ ಆಕೆ ತನ್ನಷ್ಟಕ್ಕೆ ತಾನು ವಟಗುಡುತ್ತ- ಈಗಲೇ ಹುಷಾರು ತಪ್ಪಬೇಕಾ ಆ ಮುದುಕನಿಗೆ ,
... ಹಣ ಮಾತ್ರ ನನ್ನ ಬಳಿ ಇಟ್ಕೋತೀನಿ ಎಷ್ಟು ಬೇಕೋ ಅಷ್ಟು ಕೊಡ್ತೇನೆ" ಎನ್ನುತ್ತ ಆ ಹಣ ತೆಗೆದುಕೊಂಡು ಪತುಯೊಂದಿಗೆ ಆಸ್ಪತ್ರೆ ಕಡೆಗೆ ಹೋಗುತ್ತಾಳೆ.ಜೊತೆಗೆ
ಅವರ ಇಬ್ಬರು ಮಕ್ಕಳನ್ನು ಕರೆದುಕೊಂಡು ಹೋಗಿರುತ್ತಾಳೆ.ಇವರು ಆಸ್ಪತ್ರೆ ತಲುಪುತ್ತಿದ್ದಂತೆ ಹೊರಗಡೆ ಅವಿನಾಶ್ ನ ತಮ್ಮ ಹಾಗೂ ಆತನ ಪತ್ನಿ ಸಿಗುತ್ತಾರೆ.
ಆಗ ಕಿರಣ್ ತನ್ನ ಅಣ್ಣನಿಗೆ -" ಅಣ್ಣಾ... ಅಪ್ಪಾ ವಾರ್ಡ ನಂಬರ್ ಎಂಟರಲ್ಲಿ ಇದ್ದಾರೆ... ನೀವು ಹೋಗ್ತಾ ಇರಿ, ಒಂದು ಅರ್ಧ ಗಂಟೆ ಒಳಗೆ ಇಬ್ರೂ ಬಂದು ಬಿಡ್ತೆವೆ" ಎನ್ನುತ್ತಾನೆ. " ಆಯ್ತು" ಎಂದ ಅವಿನಾಶ್ ವಾರ್ಡ್ ಗೆ ಹೋಗುತ್ತಾನೆ. ಅಲ್ಲಿ ಆತನ ತಂದೆ ಗಂಗಾಧರಯ್ಯ ನವರು ಕಾಟ್ ಮೇಲೆ ಕುಳಿತು ಏನೋ ಗಾಢವಾಗಿ ಯೋಚನೆ ಮಾಡುತ್ತಿರುತ್ತಾರೆ.ಅವಿನಾಶ್ ಹಾಗೂ ಆತನ ಪತ್ನಿ ಅವರ ಪಾದ ಮುಟ್ಟಿ ನಮಸ್ಕರಿಸಿದಾಗ " ಸುಖವಾಗಿರಿ"ಎಂದು ಆಶೀರ್ವಾದ ಮಾಡುತ್ತಾರೆ.
ಮುಂದುವರೆದ ಅವಿನಾಶ್ -" ಅಪ್ಪಾ.. ಏನಾಗಿತ್ತು?"ಎಂದು ಪ್ರಶ್ನಿಸಿದಾಗ ಗಂಗಾಧರಯ್ಯ ನವರು -" ಏನೋಪಾ... ಇದ್ದಕ್ಕಿದ್ದಂತೆ ಎದೆ ನೋವು ಶುರು ಆಗಿತ್ತು... ನಾನು ವಾಯುಗೆ ಒಂದೊಂದು ಸಲ ಹಾಗೆ ಆಗುತ್ತೆ ಎಂದು ನಿನ್ನ ತಮ್ಮನಿಗೆ ಎಷ್ಟು ಹೇಳಿದ್ರೂ ಕೇಳಲಿಲ್ಲ... ಬೇಡಾ ನಿಮಗೆ ಗೊತ್ತಾಗಲ್ಲ ಸಿಟಿಯಲ್ಲಿ ಇರೊ ಆಸ್ಪತ್ರೆಗೆ ಹೋಗೋಣಾ ಅಂತ ನನ್ನನ್ನು ಇಲ್ಲಿ ಕರ್ಕೊಂಡು ಬಂದು ಅಡ್ಮಿಟ್ ಮಾಡಿಸಿದಾ .... ಡಾಕ್ಟರ್ ಬಂದು ಎಲ್ಲಾ ಚೆಕ್ಅಪ್ ಮಾಡಿ ಹೋಗಿದ್ದಾರೆ... ಸಂಜೆ ಹೊತ್ತಿಗೆ ರಿಪೋರ್ಟ್ ಕೊಡ್ತಾರೆ "ಎಂದು ಹೇಳುತ್ತಿದ್ದಾಗ ಅವರ ಚಿಕ್ಕ ಮಗ ಪತ್ನಿ ಯೊಂದಿಗೆ ಬಂದವ -" ಅಪ್ಪಾ...ಈಗ ಹೇಗೂ ಅಣ್ಣಾ ಅತ್ತಿಗೆ ಬಂದಿದ್ದಾರೆ... ನಾನು
ಇವಳನ್ನು ಊರಿಗೆ ಕರ್ಕೊಂಡು ಹೋಗಿ ಬಿಟ್ಟು ಬರ್ತೇನೆ.. ಅಲ್ಲಿ ಪಾಪ ಅಮ್ಮ ಒಬ್ಬಳೇ ಇದ್ದಾಳೆ "ಎಂದು ಹೇಳಿದಾಗ ಕಾಟ್ ನಿಂದ ಇಳಿದು ಬಂದ ಗಂಗಾಧರಯ್ಯ ನವರು ಚಿಕ್ಕ ಮಗನ ಕಿವಿ ಯಲ್ಲಿ ಏನೋ ಹೇಳಿದವರು ಪುನಃ ಕಾಟ್ ಮೇಲೆ ಬಂದು ಕೂರುತ್ತಾರೆ.ಆ ಬಳಿಕ ಅವಿನಾಶ್ ನ ತಮ್ಮ ಪತ್ನಿ ಯೊಂದಿಗೆ ಊರಿಗೆ
ಹೊರಟು ಹೋಗುತ್ತಾನೆ. ಗಂಗಾಧರಯ್ಯ ನವರು ಅವಿನಾಶ್ ನ ಏಳು ಮತ್ತು ಹತ್ತು ವರ್ಷದ ಮಕ್ಕಳನ್ನು ಹತ್ತಿರ ಕೂರಿಸಿಕೊಂಡು ಪ್ರೀತಿಯಿಂದ ಮುದ್ದಾಡತೊಡಗುತ್ತಾರೆ. ಇತ್ತ ಕೆಮ್ಮುತ್ತಲೇ ಮಾನಸಿ ಒಳ ಒಳಗೇ " ಒಳ್ಳೆ ಆಪತ್ತು ಬಂದೊದಗಿತಲ್ಲ.... ಒಂದು ವೇಳೆ ಮಾವನಿಗೆ ಆಪರೇಶನ್ ಅಂತ ಹೇಳಿದರೆ...
ಅದಕ್ಕೆಷ್ಟು ಹಣ ಬೇಕಾಗತ್ತೋ...ಈ ಹತ್ತು ಸಾವಿರ ಹೋದಾಂಗೇ"ಎಂದು ಅಂದು ಕೊಳ್ಳುತ್ತಾಳೆ.ಸಂಜೆಯ ಹೊತ್ತಿಗೆ ಗಂಗಾಧರ ರವರ ರಿಪೋರ್ಟ್ ಬಂದಿರುತ್ತದೆ. ಅದನ್ನು ನೋಡಿದ ಡಾಕ್ಟರ್ ರು " ಏನೂ ಚಿಂತೆ ಮಾಡಬೇಡಿ... ಇದು ಹಾರ್ಟ್ ಗೆ ಸಂಬಂಧಿಸಿದ್ದಲ್ಲ... ಗ್ಯಾಸ್ಟ್ರಿಕ್ ಸಮಸ್ಯೆ.. ಒಂದೊಂದು ಬಾರಿ ಹೀಗಾಗುತ್ತೆ.. ನಾನು ಕೆಲವು ಮಾತ್ರೆ ಬರೆದು ಕೊಡುವೆ ಅದನ್ನು ಕೊಡಿ ಸಾಕು... ಈಗ ಇವರನ್ನು ಮನೆಗೆ ಕರೆದುಕೊಂಡು ಹೋಗಿ " ಎನ್ನುತ್ತಾರೆ. ಅದರ ಸಂಬಂಧ ಪಟ್ಟ ಬಿಲ್ ಮೂರು ಸಾವಿರ ಬಂದಾಗ ಮಾನಸಿ ಬಳಿ ಹಣ ಪಡೆದು ಅವಿನಾಶ್ ಪಾವತಿ ಮಾಡುತ್ತಾನೆ.
ಇದನ್ನು ಕಂಡ ಮಾನಸಿ ಮತ್ತೆ ಒಳ ಒಳಗೇ " ಬರೀ ಗ್ಯಾಸ್ಟ್ರಿಕ್ ಟ್ರಬಲ್ ಗೆ ಈ ಮುದುಕ ಮೂರು ಸಾವಿರ ಖರ್ಚು ಮಾಡಿಸಿಬಿಟ್ಟನಲ್ಲ... ಇನ್ನು ಊರಿಗೆ ಹೊರಟು ನಿಂತಾಗ ನಮ್ಮ ಹತ್ರ ಮತ್ತೆ ಹಣ ಕೇಳದಿದ್ದರೆ ಸಾಕು" ಎಂದುಕೊಳ್ಳುತ್ತಾಳೆ.
ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಸಿಕೊಂಡು ಅವಿನಾಶ್ ಅವರನ್ನು ತನ್ನ ಮನೆಗೆ ಕರೆದು ತರುತ್ತಾನೆ. ಕೆಲ ಗಂಟೆಗಳ ನಂತರ ಅವಿನಾಶ್ ನ ತಮ್ಮ ಕಿರಣ್ ಕೂಡ ಅಲ್ಲಿಗೆ ಬರುತ್ತಾನೆ.ಸಾಮಾನು ತುಂಬಿದ ಕೋಣೆ ಯನ್ನು ನೋಡಿದ ಗಂಗಾಧರಯ್ಯ ನವರು ಅವಿನಾಶ್ ನಿಗೆ..."ನನಗೆ ಇಲ್ಲಿ ನಿದ್ರೆ ಬರಲ್ಲ ಅದಕ್ಕಾಗಿ ಇಂದು ರಾತ್ರಿ ಯೇ
ಊರಿಗೆ ವಾಪಸ್ ಹೋಗುವೆ" ಎನ್ನುತ್ತ ಆತನಿಗೆ " ಬಾ ಇಲ್ಲಿ ಕೂತ್ಕೋ.. ಎಷ್ಟೊತ್ತು ಅಂತ ನಿಂತಿರ್ತಿಯಾ" ಎಂದಾಗ ಅವಿನಾಶ್ ಕೊಂಚ ಹೆದರುತ್ತಲೇ ಅವರ ಪಕ್ಕ ಹೋಗಿ ಕುಳಿತುಕೊಳ್ಳುತ್ತಾನೆ. ಎರಡು ನಿಮಿಷದ ನಂತರ ಆತನ ತಮ್ಮ ಕಿರಣ್ ಕೂಡ ಅವನ ಪಕ್ಕ ಬಂದು ಕೂರುತ್ತಾನೆ.ಅವಿನಾಶ್ ನ ಮನದೊಳಗೆ " ಎಲ್ಲಿ ತನ್ನ ಅಪ್ಪ ಹಣ ಕೇಳುತ್ತಾನೋ" ಎಂಬ ಚಿಂತೆ ಶುರು ಆಗುತ್ತದೆ.ಅತ್ತ ಅವನ ಹೆಂಡತಿ ಮಾನಸಿ ಆ ಕೋಣೆಯ ಹೊರಗಡೆ ಬಾಗಿಲು ಬಳಿ ಯಾರಿಗೂ ಕಾಣದಂತೆ ನಿಲ್ಲುತ್ತಾಳೆ, ಏಕೆಂದರೆ ಒಳಗೆ ಮಾವ ಏನು ಮಾತನಾಡುವರು ಎಂದು ಕೇಳಿಸಿಕೊಳ್ಳಲು ಹಾಗೂ ಒಂದು ವೇಳೆ ಮಾವನವರು ಹಣ ಕೇಳಿದರೆ ಒಳಗೆ ಹೋಗಿ ಖಡಾ ಖಂಡಿತ ಆಗಲ್ಲ ಎಂದು ಹೇಳಲು ರೆಡಿ ಆಗಿರುತ್ತಾಳೆ. ಒಳಗಡೆ ಮಾತು ಶುರುಮಾಡಿದ ಗಂಗಾಧರಯ್ಯ ನವರು ಅವಿನಾಶ್ ನ ಹೆಗಲು ಸವರುತ್ತಾ
"ಇದ್ಯಾಕೋ ನೀ ಇಷ್ಟೊಂದು ವೀಕ್ ಆಗಿದ್ದೀ.. ಮುಖದಲ್ಲಿ ಮೊದಲಿನ ಕಳೆ ಕಡಿಮೆ ಆಗಿದೆ ಯಲ್ಲ ಯಾಕೆ ಏನಾದ್ರೂ ಸಮಸ್ಯೆ ಇದೆಯಾ?"ಎಂದು ಪ್ರಶ್ನಿಸಿದಾಗ ಅವಿನಾಶ್ -" ಹಾಗೇನಿಲ್ಲ ಅಪ್ಪಾಜಿ... ನಾನು ಮೊದಲು ಕೆಲಸ ಮಾಡುತ್ತಿದ್ದ ಕಂಪನಿ ಮುಚ್ಚಿ ಹೋಗಿದೆ ಬೇರೆ ಕೆಲಸ ಹುಡುಕ್ತಾ ಇದ್ದೇನೆ ಇನ್ನು ಸಿಕ್ಕಿಲ್ಲ" ಎಂದು ಉತ್ತರಿಸುತ್ತಾನೆ. ಅದಕ್ಕೆ ಆತನ ತಂದೆ -ಏ ಹುಚ್ಚಪ್ಪಾ ಈ ಸಿಟಿ ಯಲ್ಲಿ ಏನಿದೆ? ಬಾ ನನ್ನ ಜೊತೆಗೆ ಊರಿಗೆ ಹೋಗೋಣ ಅಲ್ಲಿ ನಿನ್ನ ಅಮ್ಮ ಪದೇ ಪದೇ ನೆನಪಿಸಿಕೊಳ್ಳುತ್ತಿರುತ್ತಾಳೆ .. ಇಲ್ಲಿಗಿಂತ ಆರಾಮಾಗಿ ಇರಬಹುದು " ಎನ್ನುತ್ತಾರೆ. ಅದನ್ನು ಆಲಿಸಿದ ಅವಿನಾಶ್ ಏನೊಂದು ಮಾತನಾಡದೇ ಸುಮ್ಮನೆ ಕುಳಿತಿರುತ್ತಾನೆ. ಆಗ ಗಂಗಾಧರಯ್ಯ ನವರು ತಮ್ಮ ಚಿಕ್ಕ ಮಗನಿಗೆ ಸಂಜ್ಞೆ ಮಾಡಿ ಆತನ ಕೈಯಲ್ಲಿ ಇದ್ದ ಪುಟ್ಟ ಚೀಲದಿಂದ ಐನೂರು ರೂಪಾಯಿ ಗಳ ಕಂತೆ ಎಂದರೆ ಸುಮಾರು ಎರಡು ಲಕ್ಷ ರೂಪಾಯಿ ತೆಗೆದು ಅವಿನಾಶ್ ನಿಗೆ " ತಗೋ ಇದನ್ನು ಇಟ್ಕೋ" ಎಂದಾಗ ಆತನಿಗೆ ಧೈರ್ಯ ಸಾಕಾಗಲಿಲ್ಲ. ಆಗ ಆತನ ತಂದೆ "ಚಿಕ್ಕಂದಿನಿಂದಲೂ ನಾ ನೋಡ್ತಾ ಬಂದೀದಿನಿ ನೀನು ಯಾವುದನ್ನು ಬಾಯಿ ಬಿಟ್ಟು ಹೇಳಲ್ಲ. ನಿಮ್ಮೆಲ್ಲರನ್ನು ಹಾಗೂ ಮನೆ ನೋಡಿದಾಗ ನಿನಗೆ ಸಮಸ್ಯೆ ಇದೆ ಎಂದು ಗೊತ್ತಾಗಲಿಲ್ಲ ಟೈಂ ಹಿಡಿಯಲಿಲ್ಲ... ನೀನು ಅಶಕ್ತ ನಾಗಿದ್ದೀ ನಿನ್ನವಳಿಗೂ ಹುಷಾರಿಲ್ಲ ಇದನ್ನು ಇಟ್ಕೋ.. ಇದು ಸಾಲದೇ ಬಂದರೆ ಮತ್ತೆ ನನಗೆ ತಿಳಿಸು ನಾನು ಕೊಡುವೆ ಯಾಕೆಂದರೆ ಈ ಸಲ ನಮ್ಮ ಹೊಲದಲ್ಲಿ ಉತ್ತಮ ಬೆಳೆ ಬಂದಿತ್ತು"ಎಂದು ಬಲವಂತವಾಗಿ ಆತನ ಕೈಗೆ ಕೊಟ್ಟಾಗ ಅವಿನಾಶ್ ಅಪ್ಪನ ಬಗ್ಗೆ ಕೀಳಾಗಿ ಚಿಂತಿಸಿದ್ದಕ್ಕೆ ತನ್ನ ಮೇಲೆ ತಾನೇ ಬೇಸರ ಮಾಡಿಕೊಳ್ಳುತ್ತಾನೆ. ಅತ್ತ ಹೊರಗಡೆ ಬಾಗಿಲು ಹಿಂದೆ ನಿಂತಿದ್ದ ಅವಿನಾಶ್ ನ ಪತ್ನಿ ಗೂ ಅರಿವಾಗಿ ಕಣ್ಣೀರು ತಡಯಲಾರದೇ ಸೀರೆಯ ಸೆರಗನ್ನು ಬಾಯಿಯಲ್ಲಿ ಅದುಮಿಕೊಂಡು ಅಡುಗೆ ಮನೆ ಕಡೆಗೆ ಹೋಗುತ್ತಾಳೆ.
ಲೇಖಕರು:ಅರವಿಂದ.ಜಿ.ಜೋಷಿ.
ಸಂಗ್ರಹ: ವೀರೇಶ್ ಅರಸೀಕೆರೆ.
Comments
Post a Comment